ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿ ಮಾರಾಟ ಮಾಡುತ್ತಿದ್ದ ದಂಪತಿಗೆ ಮರಣದಂಡನೆ ವಿಧಿಸಿದ ನ್ಯಾಯಾಲಯ.!

ಉತ್ತರಪ್ರದೇಶ : ಸುಮಾರು 10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ದಂಪತಿಗೆ ಮರಣದಂಡನೆ ವಿಧಿಸಿ ಉತ್ತರ ಪ್ರದೇಶದ ಬಂಡಾ ವಿಶೇಷ ಪೋಕ್ಸೋ ನ್ಯಾಯಾಲಯ ಆದೇಶಿಸಿದೆ.

ಉತ್ತರ ಪ್ರದೇಶದ ಜಲ ಮಂಡಳಿಯ ಮಾಜಿ ಜೂನಿಯರ್ ಇಂಜಿನಿಯರ್ ರಾಮ್ ಭವನ್ (50) ಮತ್ತು ಆತನ ಪತ್ನಿ ದುರ್ಗಾವತಿ (47) ಶಿಕ್ಷೆಗೆ ಒಳಗಾದ ಅಪರಾಧಿಗಳು.

ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ದಂಪತಿ ಅಪರಾಧಿಗಳೆಂದು ನ್ಯಾಯಾಲಯವು ತೀರ್ಪು ನೀಡಿದೆ.

ಅಪರಾಧದ ಪ್ರಮಾಣ, ಅವಧಿ ಮತ್ತು ವ್ಯವಸ್ಥಿತ ಸ್ವರೂಪವನ್ನು ಉಲ್ಲೇಖಿಸಿದ ನ್ಯಾಯಾಧೀಶರು, ಈ ಪ್ರಕರಣವು ‘ಅಪರೂಪದಲ್ಲಿ ಅಪರೂಪ’ ಎಂದು ಆದೇಶದಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೆ, ಅಪರಾಧಿಗಳಲ್ಲಿ ಸುಧಾರಣೆಗೆ ಯಾವುದೇ ಅವಕಾಶವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಪ್ರಾಸಿಕ್ಯೂಷನ್ ಪ್ರಕಾರ, 2010 ರಿಂದ 2020ರ ನಡುವೆ ಬಾಲಕರ ಮೇಲೆ ದೌರ್ಜನ್ಯಗಳು ನಡೆದಿವೆ. ಸಂತ್ರಸ್ತರ ಪೈಕಿ ಕೇವಲ ಮೂರು ವರ್ಷದ ಚಿಕ್ಕ ಬಾಲಕರು ಕೂಡ ಸೇರಿದ್ದಾರೆ ಎಂಬುವುದು ಅತ್ಯಂತ ಆಘಾತಕಾರಿ ವಿಷಯವಾಗಿದೆ.

ದಂಪತಿ ತಮ್ಮ ನೆರೆಹೊರೆಯಲ್ಲಿ ವಾಸಿಸುತ್ತಿದ್ದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಅಪ್ರಾಪ್ತ ಬಾಲಕರನ್ನೇ ಗುರಿಯಾಗಿಸಿಕೊಂಡಿದ್ದರು. ಮಕ್ಕಳಿಗೆ ಹಣ, ಆಹಾರ, ಮೊಬೈಲ್ ಫೋನ್‌ಗಳು, ಇಂಟರ್ನೆಟ್ ಸೌಲಭ್ಯ ಮತ್ತು ಆನ್‌ಲೈನ್ ವಿಡಿಯೋ ಗೇಮ್‌ಗಳ ಆಮಿಷವೊಡ್ಡುತ್ತಿದ್ದರು.

ಒಮ್ಮೆ ಮಕ್ಕಳ ವಿಶ್ವಾಸ ಗಳಿಸಿದ ನಂತರ, ದಂಪತಿ ತಮ್ಮ ಮನೆಯಲ್ಲೇ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು. ಈ ಘೋರ ಕೃತ್ಯಗಳನ್ನು ಡಿಜಿಟಲ್ ಸಾಧನಗಳ ಮೂಲಕ ರೆಕಾರ್ಡ್ ಮಾಡಿಕೊಳ್ಳುತ್ತಿದ್ದರು.

ವಿಡಿಯೋಗಳನ್ನು ಎನ್‌ಕ್ರಿಪ್ಟ್ ಮಾಡಿದ ಪ್ಲಾಟ್‌ಫಾರ್ಮ್‌ಗಳು ಮತ್ತು ಡಾರ್ಕ್ ವೆಬ್ ಸೇರಿದಂತೆ ವಿವಿಧ ಆನ್‌ಲೈನ್ ಮಾಧ್ಯಮಗಳಲ್ಲಿ ಹಂಚಿಕೆ ಮತ್ತು ಮಾರಾಟ ಮಾಡುತ್ತಿದ್ದರು. ಈ ವಿಡಿಯೋಗಳನ್ನು ಸುಮಾರು 47 ದೇಶಗಳ ಗ್ರಾಹಕರು ವೀಕ್ಷಿಸುತ್ತಿದ್ದರು ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ.

ಪ್ರಕರಣ ಬಯಲಾದದ್ದು ಹೇಗೆ?

2020ರಲ್ಲಿ ಇಂಟರ್‌ಪೋಲ್ ನೀಡಿದ ಮಾಹಿತಿಯ ಆಧಾರದ ಮೇಲೆ ಕೇಂದ್ರೀಯ ತನಿಖಾ ದಳ (ಸಿಬಿಐ) ಈ ಪ್ರಕರಣದ ತನಿಖೆಯನ್ನು ಆರಂಭಿಸಿತ್ತು. ಸಿಬಿಐ ಅಂತರ್ಜಾಲದಲ್ಲಿ ಮಕ್ಕಳ ಲೈಂಗಿಕ ದೌರ್ಜನ್ಯದ ವಿಷಯಗಳನ್ನು (ಸಿಎಸ್‌ಎಎಂ) ಮೇಲ್ವಿಚಾರಣೆ ಮಾಡುವಾಗ ಆರೋಪಿ ರಾಮ್ ಭವನ್ ಸಿಕ್ಕಿ ಬಿದ್ದಿದ್ದ.

ಈತ ಮತ್ತು ಈತನ ಪತ್ನಿ ದುರ್ಗಾವತಿ ಸೇರಿ ಬಾಲಕರ ಮೇಲಿನ ದೌರ್ಜನ್ಯದ ವಿಡಿಯೋಗಳನ್ನು ಚಿತ್ರೀಕರಿಸಿ, ಅವುಗಳನ್ನು ಡಾರ್ಕ್ ವೆಬ್ ಮೂಲಕ ಸುಮಾರು 47 ದೇಶಗಳಿಗೆ ಮಾರಾಟ ಮಾಡುತ್ತಿದ್ದರು ಎಂಬುದು ತನಿಖೆಯಲ್ಲಿ ಬಹಿರಂಗಗೊಂಡಿತ್ತು.

ತನಿಖೆ ವೇಳೆ ಅಪರಾಧಿಗಳ ಮನೆಯಿಂದ ₹8 ಲಕ್ಷ ನಗದು, 12 ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಪೆನ್ ಡ್ರೈವ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇವುಗಳಲ್ಲಿ ಸಾವಿರಾರು ಅಶ್ಲೀಲ ವಿಡಿಯೋಗಳು ಮತ್ತು ಫೋಟೋಗಳು ಪತ್ತೆಯಾಗಿದ್ದವು. ತನಿಖಾಧಿಕಾರಿಗಳು ಸಂತ್ರಸ್ತ ಬಾಲಕರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು ಮತ್ತು ಹೇಳಿಕೆಗಳನ್ನು ದಾಖಲಿಸಿದ್ದರು.

ತನಿಖೆ ಪೂರ್ಣಗೊಳಿಸಿ ಫೆಬ್ರವರಿ 10, 2021ರಂದು ಸಿಬಿಐ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿತ್ತು.

ವಿಚಾರಣೆಯ ಸಮಯದಲ್ಲಿ, ಪ್ರಾಸಿಕ್ಯೂಷನ್ ಸಂತ್ರಸ್ತರ ಸಾಕ್ಷ್ಯಗಳು, ವೈದ್ಯಕೀಯ ವರದಿಗಳು ಮತ್ತು ಮೊಬೈಲ್ ಫೋನ್‌ ಹಾಗೂ ಪೆನ್‌ಡ್ರೈವ್‌ಗಳಿಂದ ವಶಪಡಿಸಿಕೊಂಡ ಡಿಜಿಟಲ್ ಪುರಾವೆಗಳು ಸೇರಿದಂತೆ ಅನೇಕ ಸಾಕ್ಷ್ಯಗಳನ್ನು ನ್ಯಾಯಾಲಯದ ಮುಂದಿಟ್ಟಿತ್ತು.

ದೌರ್ಜನ್ಯದಿಂದ ಬಾಲಕರಿಗೆ ತೀವ್ರ ದೈಹಿಕ ಮತ್ತು ಮಾನಸಿಕ ಹಾನಿಯಾಗಿದೆ. ಕೆಲವು ಸಂತ್ರಸ್ತರ ಗಾಯಗಳಿಗೆ ಆಸ್ಪತ್ರೆಯ ಚಿಕಿತ್ಸೆ ಅಗತ್ಯವಿದೆ. ಇನ್ನು ಕೆಲವರಿಗೆ ಕಣ್ಣುಗಳು ಕೆಂಪಾಗುವುದು ಸೇರಿದಂತೆ ತೊಂದರೆಗಳು ಉಂಟಾಗಿವೆ ಎಂಬುವುದನ್ನು ನ್ಯಾಯಾಲಯ ಗಮನಿಸಿತ್ತು.

ಸುಮಾರು 10 ವರ್ಷಗಳ ಕಾಲ ದೌರ್ಜನ್ಯ ಮುಂದುವರೆದಿತ್ತು. ಹೆಚ್ಚಿನ ಸಂಖ್ಯೆಯ ಮಕ್ಕಳು ಇದಕ್ಕೆ ಬಲಿಯಾಗಿದ್ದಾರೆ ಎಂಬುದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಧೀಶರು, “ಇದು ವ್ಯವಸ್ಥಿತ ಮತ್ತು ಶೋಷಣೆಯ ಕೃತ್ಯ” ಎಂದು ಹೇಳಿದ್ದಾರೆ.

2026ರ ಫೆ. 20ರಂದು ನ್ಯಾಯಾಲಯವು ದಂಪತಿಯು ಬಹು ಅಪರಾಧಗಳಲ್ಲಿ ದೋಷಿಗಳು ಎಂದು ಘೋಷಿಸಿ ಮರಣದಂಡನೆ ಶಿಕ್ಷೆ ವಿಧಿಸಿದೆ. ಇದೇ ವೇಳೆ 33 ಸಂತ್ರಸ್ತರಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

Leave a Reply

Your email address will not be published. Required fields are marked *

error: Content is protected !!