ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ನಡೆಯುತ್ತಿರುವ ಬಾಡ೯ರ್ – ಗವಾಸ್ಕರ್ ಟ್ರೋಫಿಯ ಮೊದಲೆರಡು ಪಂದ್ಯಗಳಲ್ಲಿ ಜಯಗಳಿಸಿ ಆತ್ಮವಿಶ್ವಾಸದಲ್ಲಿದ್ದ ಭಾರತ ತಂಡಕ್ಕೆ ಪ್ರವಾಸಿ ಆಸ್ಟ್ರೇಲಿಯ ಮೂರನೇ ಪಂದ್ಯದಲ್ಲಿ ತಿರುಗೇಟು ನೀಡುವ ಮೂಲಕ ಒಂಬತ್ತು ವಿಕೆಟ್‌ಗಳ ಗೆಲುವು ಸಾಧಿಸಿದೆ, ಆ ಮೂಲಕ ಸರಣಿಯನ್ನು 2-1 ಅಂತರದಲ್ಲಿ ಜೀವಂತವಾಗಿರಿಸಿಕೊಂಡಿದೆ.
ಮೊದಲೆರಡು ಪಂದ್ಯಗಳಲ್ಲಿ ಟಾಸ್ ಸೋತಿದ್ದ ನಾಯಕ ರೋಹಿತ್ ಶರ್ಮಾ ಮದ್ಯಪ್ರದೇಶದ ಇಂದೋರ್ ನಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಟಾಸ್ ಗೆದ್ದರೂ ಸಹ ಮ್ಯಾಚ್ ಗೆಲ್ಲುವಲ್ಲಿ ವಿಫಲರಾದರು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡ ಮೊದಲ ಇನಿಂಗ್ಸ್ ನಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 109 ರನ್ ಗಳಿಸಿತು, ಆರಂಭಿಕ ಆಟಗಾರರು ಸೇರಿದಂತೆ ಯಾವೊಬ್ಬ ಆಟಗಾರರು ನಿಂತು ಆಟವಾಡದೇ ಆಸೀಸ್ ಬೌಲರ್‌ಗಳಿಗೆ ವಿಕೆಟ್ ಒಪ್ಪಿಸಿದರು.
ಭಾರತದ ಪರವಾಗಿ ವಿರಾಟ್ ಕೊಹ್ಲಿ ಅವರ 22 ರನ್ ಬ್ಯಾಟ್ಸ್‌ಮನ್ ಒಬ್ಬರ ಗರಿಷ್ಠ ಮೊತ್ತವಾಗಿತ್ತು, ಆಸ್ಟ್ರೇಲಿಯಾ ಸ್ಪಿನ್ನರ್ ಕುಹೆಮನ್ 5 ವಿಕೆಟ್ ಹಾಗೂ ನಾಥನ್ ಲಯಾನ್ 3 ವಿಕೆಟ್ ಪಡೆದರು, ಮೊದಲ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯ ತಂಡ ಆರಂಭಿಕ ಬ್ಯಾಟ್ಸ್‌ಮನ್ ಉಸ್ಮಾನ್ ಕ್ವಾಜಾ (60), ಬ್ಯಾಟ್ಸ್‌ಮನ್ ಲಬುಷನ್ಗೆ (31), ನಾಯಕ ಸ್ಟೀವನ್ ಸ್ಮಿತ್ (26) ಅವರ ಸಂಘಟಿತ ಹೋರಾಟದ ಫಲವಾಗಿ 197 ರನ್ ಪೇರಿಸುವ ಮೂಲಕ 87 ರನ್ ಗಳ ಮುನ್ನಡೆ ಸಾಧಿಸಿದರು.
ಭಾರತದ ಪರವಾಗಿ ಆಲ್ ರೌಂಡರ್ ರವೀಂದ್ರ ಜಡೇಜಾ 4 ವಿಕೆಟ್, ಆಪ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 3 ವಿಕೆಟ್ ಹಾಗೂ ಉಮೇಶ್ ಯಾದವ್ 3 ವಿಕೆಟ್ ಕಬಳಿಸಿದರು, ಎರಡನೇ ಇನಿಂಗ್ಸ್ ಆರಂಭಿಸಿದ ಭಾರತ ಆತ್ಮವಿಶ್ವಾಸದಿಂದ ಹೆಜ್ಜೆ ಹಾಕಿದರೂ ಪ್ರಯೋಜನವಾಗಲಿಲ್ಲ.
ಅನುಭವಿ ಆಟಗಾರ ಚತೇಶ್ವರ ಪೂಜಾರ (61), ಮದ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ (26) ಸ್ವಲ್ಪ ಪ್ರತಿರೋಧ ತೋರಿದರೂ ಸಹ ಪ್ರವಾಸಿ ಬೌಲಿಂಗ್ ವಿಭಾಗದ ಉತ್ತಮ ಪ್ರದರ್ಶನದ ಎದುರು ಭಾರತೀಯ ಬ್ಯಾಟಿಂಗ್ ಪಡೆ ಉತ್ತರ ನೀಡುವಲ್ಲಿ ವಿಫಲರಾದರು.
ಎರಡನೇ ಇನ್ನಿಂಗ್ಸ್ ನಲ್ಲಿ ಸ್ಪಿನ್ನರ್ ನಾಥನ್ ಲಯಾನ್ 8 ವಿಕೆಟ್ ಪಡೆದು ಮಿಂಚಿದರು, 75 ರನ್‌ಗಳ ಗುರಿ ಬೆನ್ನಟ್ಟಿದ ಪ್ರವಾಸಿ ಆಸ್ಟ್ರೇಲಿಯ ತಂಡ ಒಂದು ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು, ಸ್ಪಿನ್ನರ್ ನಾಥನ್ ಲಯಾನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು, ಆ ಮೂಲಕ ಪ್ರವಾಸಿ ತಂಡ ಸರಣಿಯಲ್ಲಿ ಮೊದಲ ಗೆಲುವಿನ ನಗೆ ಬೀರಿತು.