ಬಾಕಿ ಬಿಲ್ ಬಿಡುಗಡೆಗೆ ಆಗ್ರಹಿಸಿ ರಾಜ್ಯ ಗುತ್ತಿಗೆದಾರರ ಸಂಘ ಪ್ರತಿಭಟನೆ: ಆದಷ್ಟು ಬೇಗ ನ್ಯಾಯಯುತ ಪರಿಹಾರ ಒದಗಿಸಲಾಗುವುದು- ಡಿಸಿಎಂ ಡಿಕೆಶಿ

“ಸಮಸ್ಯೆ ಬಗೆಹರಿಸಲು ಎಲ್ಲರೂ ಸೇರಿ ಪರಿಹಾರ ಕಂಡುಕೊಳ್ಳಬೇಕಾಗಿದ್ದು, ನಾನು ಹಾಗೂ ಸಚಿವರಾದ ಸತೀಶ್ ಜಾರಕಿಹೊಳಿ ಸೇರಿ ಈ ಅಧಿವೇಶನದ ವೇಳೆ ಮುಖ್ಯಮಂತ್ರಿಗಳ ಜತೆ ಗುತ್ತಿಗೆದಾರರ ಸಭೆ ಆಯೋಜಿಸುತ್ತೇವೆ,” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.

ಬಾಕಿ ಬಿಲ್ ಬಿಡುಗಡೆಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳನ್ನು ಭೇಟಿ ಮಾಡಿ, ಅವರ ಅಹವಾಲುಗಳನ್ನು ಸ್ವೀಕರಿಸಿ, ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ನಿಮ್ಮ ನೋವು ನನಗೆ ಅರ್ಥವಾಗುತ್ತದೆ.. ಗುತ್ತಿಗೆದಾರರ ಸಮಸ್ಯೆಗಳಿಗೆ ನಮ್ಮ ಸರ್ಕಾರದಿಂದ ಆದಷ್ಟು ಬೇಗ ನ್ಯಾಯಯುತ ಪರಿಹಾರ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.

‘ಗುತ್ತಿಗೆದಾರರಿಗೆ ಹಣ ಪಾವತಿ ಮಾಡಬಾರದು ಎಂಬುದು ನಮ್ಮ ಉದ್ದೇಶವಲ್ಲ, ವಿಧಾನ ಪರಿಷತ್ತಿನಲ್ಲಿ ಶಿಕ್ಷಕರ ಕ್ಷೇತ್ರ, ಪದವೀಧರ ಕ್ಷೇತ್ರ, ಸಿನಿಮಾ, ಕಲೆ ಸೇರಿದಂತೆ ಇತರೆ ವಲಯದವರಿಗೆ ಒಂದು ಪ್ರಾತಿನಿಧ್ಯ ನೀಡಿದಂತೆ ಗುತ್ತಿಗೆದಾರರಿಗೆ ಒಂದು ಜಾಗ ಕೊಡಿಸಬೇಕಿದೆ. ಆಗ ನಿಮ್ಮ ಸಮಸ್ಯೆ ಬಗೆಹರಿಯಬಹುದು. ಇದಕ್ಕೆ ಒಂದು ದಾರಿ ಹುಡುಕಬೇಕಿದೆ,” ಎಂದರು.

 “ನನ್ನ ಇಲಾಖೆಯಲ್ಲಿ 13 ಸಾವಿರ ಕೋಟಿ,‌‌ ಬೋಸರಾಜು ಇಲಾಖೆಯಲ್ಲಿ 3 ಸಾವಿರ ಕೋಟಿ ರೂ. ಸೇರಿದಂತೆ ಸುಮಾರು 37 ಸಾವಿರ ಕೋಟಿ ಬಿಲ್ ಬಾಕಿ ಇದೆ. ನಿಮ್ಮ ನೋವು ನಮಗೆ ಗೊತ್ತಿದೆ. ನಾನು ಚುನಾವಣೆಗೆ ಆರು ತಿಂಗಳು ಮುಂಚಿತವಾಗಿ ಹೇಳಿದ್ದೆ. ಇಲಾಖೆಗಳಲ್ಲಿ ಹಣವಿಲ್ಲದೆ ಯಾವುದೇ ಗುತ್ತಿಗೆ ಕಾಮಗಾರಿ ತೆಗೆದುಕೊಳ್ಳಬೇಡಿ ಎಂದು ಎಚ್ಚರಿಸಿದ್ದೆ. ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರು ಹಣ ಇರಲಿ, ಬಿಡಲಿ, ಕಾಮಗಾರಿ ಕೊಟ್ಟಿದ್ದೇ ಕೊಟ್ಟಿದ್ದು, ನೀವು ಕೆಲಸ ತೆಗೆದುಕೊಂಡು ನಮ್ಮ ಎದೆ ಮೇಲೆ ಕೂತಿದ್ದೀರಿ. ಇದರ ಪರಿಹಾರಕ್ಕಾಗಿ ಸುಮಾರು 50 ಸಾವಿರ ಕೋಟಿಯಷ್ಟು ಬಾಂಡ್ ಅಥವಾ ಇತರೆ ಮಾರ್ಗ ಹುಡುಕಬೇಕು,” ಎಂದರು.

“ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನರಿಗೆ ನೆರವು ನೀಡಲು ನಮ್ಮ ಸರಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದು, ಇದಕ್ಕಾಗಿ ಸುಮಾರು 52 ಸಾವಿರ ಕೋಟಿ ವಾರ್ಷಿಕವಾಗಿ ವೆಚ್ಚ ಮಾಡಲಾಗುತ್ತಿದೆ. ಆದರೂ, ನಮ್ಮ ರಾಜ್ಯದಲ್ಲಿ ಉತ್ತಮ ಬಜೆಟ್ ನೀಡುತ್ತಿದ್ದೇವೆ. ಇವತ್ತು ಕೂಡ ಮುಖ್ಯಮಂತ್ರಿಗಳು ಸರಿದೂಗಿಸಿ ಬಜೆಟ್ ಮಂಡಿಸಿದ್ದಾರೆ. ಬಿಜೆಪಿಯವರು ಖಾಲಿ ಚೊಂಬು ತೆಗೆದುಕೊಂಡಿದ್ದಾರೆ. ಕೇಂದ್ರ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಅವರು ಏನು ಕೊಟ್ಟರು? ಖಾಲಿ ಬಿಂದಿಗೆ ಕೊಟ್ಟರು. ಆಗ ಇವರು ಏನೂ ಮಾತನಾಡಲಿಲ್ಲ, ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್‌ನಲ್ಲಿ 5300 ಕೋಟಿ ಘೋಷಣೆ ಮಾಡಿ ಈಗ ಕೊಟ್ಟಿದ್ದಾರಾ?,” ಎಂದು ಪ್ರಶ್ನಿಸಿದರು.

”ಬೆಂಗಳೂರು ಅಭಿವೃದ್ಧಿಗೆ ಅವರು ಹಣ ಕೊಟ್ಟಿಲ್ಲ, ಅವರು ಮಾಡಲಿ ಬಿಡಲಿ, ನಮ್ಮ ಕರ್ತವ್ಯ ನಾವು ಮಾಡಬೇಕು. ನೀವು ನಮ್ಮನ್ನು ಬಿಡಂಗಿಲ್ಲ. ನಾವು ನಿಮ್ಮನ್ನು ಬಿಡಂಗಿಲ್ಲ, ಮಾಧ್ಯಮಗಳ ಮುಂದೆ ಹೇಳಿಕೆ ನೀಡುವುದನ್ನು ಬಿಡಿ. ನೀವು ಹೇಳಿಕೆ ನೀಡಿದರೆ ಅದು ಒಂದು ದಿನದ ಸುದ್ದಿಯಾಗಬಹುದು, ಬೇರೆ ಯಾವುದೇ ಪ್ರಯೋಜನವಿಲ್ಲ, ನೀವು ನಮ್ಮ ಬಳಿ ಬಂದು ಚರ್ಚೆ ಮಾಡಿ, ಯಾವ ರೀತಿ ಹಣ ಹೊಂದಿಸಿ ಸಮಸ್ಯೆ ಬಗೆಹರಿಸಬೇಕು. ನೋಡೋಣ.” ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಚಿವರಾದ ಸತೀಶ್ ಜಾರಕಿಹೊಳಿ, ಎನ್‌.ಎಸ್. ಬೋಸರಾಜ್, ಸಂಫದ ಅಧ್ಯಕ್ಷರಾದ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!