ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸೋಗಿನಲ್ಲಿ ಬರುತ್ತಿದ್ದ ಸುಂದರ ಯುವತಿಯರು, ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಬ್ಯಾಗ್ ನಲ್ಲಿದ್ದ ಚಿನ್ನಾಭರಣಗಳನ್ನ ಕ್ಷಣ ಮಾತ್ರದಲ್ಲಿ ಎಗರಿಸುತ್ತಿದ್ದರು. ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ನಗರ ಪೊಲೀಸರು ಮೂವರು ಯುವತಿಯರನ್ನ ಬಂಧಿಸಿದ್ದಾರೆ.
ಜುಲೈ 27 ರಂದು ಮಧ್ಯಾಹ್ನ ಚಿಕ್ಕಬಳ್ಳಾಪುರ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದ್ದು, ಘಟನೆ ಸಂಬಂಧ ಚಿನ್ನಾಭರಣ ಕಳೆದುಕೊಂಡಿದ್ದ ಚಿಕ್ಕಬಳ್ಳಾಪುರ ನಿವಾಸಿ ರಿಹಾನಾ ಖಾನಂ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು, ದೂರು ದಾಖಲಿಸಿಕೊಂಡ ನಗರ ಠಾಣೆ ಪೊಲೀಸರು ಚಿನ್ನಾಭರಣ ಕಳವು ಮಾಡಿದ್ದ ಮೂವರು ಯುವತಿಯರನ್ನ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನ 22 ವರ್ಷದ ತುಳಸಿ, 21 ವರ್ಷದ ಪ್ರೇಮ, ಹಾಗೂ 25 ವರ್ಷದ ಸೋನಿಯಾ ಎಂದು ಗುರುತಿಸಲಾಗಿದ್ದು, ಬಂಧಿತರಿಂದ 70 ಗ್ರಾಂ ತೂಕದ 7 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನ ವಶಪಡಿಸಿಕೊಂಡಿದ್ದು, ಮೂವರು ಕಳ್ಳಿಯರನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರಕರಣ ಸಂಬಂಧ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಜುಲೈ 27 ರಂದು ರಿಹಾನ ಖಾನಂ ಚಿನ್ನಾಭರಣ ಕಳವು ಸಂಬಂಧ ಚಿಕ್ಕಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು, ಆರೋಪಿಗಳ ಪತ್ತೆಗೆ ಮುಂದಾದ ಪೊಲೀಸರು, ಬಸ್ ನಿಲ್ದಾಣದ ಸಿಸಿ ಕ್ಯಾಮಾರ ಪರಿಶೀಲನೆ ಮಾಡಿದ್ದು, ಅನುಮಾನಸ್ಪದ ವ್ಯಕ್ತಿಗಳ ಬಗ್ಗೆ ಗಮನ ಹರಿಸಿದ್ದಾರೆ, ಈ ವೇಳೆ ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಮೂವರು ಯುವತಿಯರು ಪತ್ತೆಯಾಗಿದ್ದಾರೆ, ಇವರನ್ನ ಬಂಧಿಸಿ ವಿಚಾರಣೆ ನಡೆಸಿದಾಗ ಚಿನ್ನಾಭರಣಗಳನ್ನ ಕದ್ದಿರೋದಾಗಿ ಅಸಲಿ ಸತ್ಯ ಬಾಯಿಬಿಟ್ಟಿದ್ದಾರೆ.
ಬಂಧಿತ ಆರೋಪಿಗಳು ಕಲಬುರ್ಗಿ ಮೂಲದ ಸೇಡಂ ನವರು, 22 ವರ್ಷದಿಂದ 25 ವರ್ಷದೊಳಗಿನ ಯುವತಿಯರು, ಬುರ್ಖಾ ಧರಿಸಿ ಬಸ್ ನಿಲ್ದಾಣದಲ್ಲಿ ಓಡಾಡುತ್ತಾರೆ, ಪ್ರಯಾಣಿಕರ ಗಮನ ಸೆಳೆದು ಚಿನ್ನಾಭರಣ ಕಳವು ಮಾಡುತ್ತಾರೆ, ಇವರ ಮೇಲೆ ವಿವಿಧ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದೆ ಎಂದರು.