ಬಸ್ಸಿನಲ್ಲಿ 55 ಲಕ್ಷ ಹಣ ಮತ್ತು ಬಿಲ್ಡಿಂಗ್ ಗೆ ಸಂಬಂಧಿಸಿದ ದಾಖಲಾತಿಗಳನ್ನು ಕಳವು ಮಾಡಿದ್ದ ಅಂತಾರಾಜ್ಯ ಕಳ್ಳರ ಬಂಧನ

ಬಸ್ಸಿನಲ್ಲಿ ಸಾಗಿಸುತ್ತಿದ್ದ 55 ಲಕ್ಷ ರೂ. ನಗದು ಹಾಗೂ ಕಟ್ಟಡಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕಳವು ಮಾಡಿದ್ದ ಅಂತಾರಾಜ್ಯ ಕಳ್ಳರನ್ನ ಬಂಧಿಸುವಲ್ಲಿ ಚಿಕ್ಕಬಳ್ಳಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಅಲ್ಲದೆ, ಕಳುವಾಗಿದ್ದ ಸಂಪೂರ್ಣ ಹಣ ಹಾಗೂ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಘಟನೆ ವಿವರ

ಡಿಸೆಂಬರ್ 8ರಂದು ಶ್ರೀ ವೆಂಕಟೇಶ್ವರ್ ರಾವ್ ಬಿನ್ ಸಾಂಬಶಿವರಾವ್ ಎಂಬುವವರು ಬೆಂಗಳೂರಿನ ಅಶ್ವತ್ಥನಗರ ಮಾರತ್ ಹಳ್ಳಿಯಲ್ಲಿ ಬಿಲ್ಡಿಂಗ್ ಮಾರಾಟ ಮಾಡಿದ್ದರು. ಈ ವ್ಯವಹಾರದ ಅಗ್ರಿಮೆಂಟ್ ಮಾಡಿಕೊಂಡಿದ್ದ ಖರೀದಿದಾರರಿಂದ 55 ಲಕ್ಷ ರೂ. ನಗದು ಹಾಗೂ ಬಿಲ್ಡಿಂಗ್ ಗೆ ಸಂಬಂಧಿಸಿದ ದಾಖಲೆಗಳನ್ನು ಪಡೆದುಕೊಂಡು ಬೆಂಗಳೂರಿನಿಂದ ಹೈದರಾಬಾದ್ ಗೆ ಹೋಗಲು ಕೆಎ 57-ಎಫ್ 3911 ನೋಂದಣಿ ಸಂಖ್ಯೆಯ ಅಂಬಾರಿ ಗ್ರೀನ್ ಕ್ಲಾಸ್ ಕೆಎಸ್‌ಆರ್‌ಟಿಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು.

ಪೆರೇಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯ ಅರೂರು ಬಳಿ ರಾತ್ರಿ 10 ಗಂಟೆ ಸುಮಾರಿಗೆ ಬಸ್ ನಿಲ್ಲಿಸಲಾಗಿತ್ತು. ಈ ವೇಳೆ ವೆಂಕಟೇಶ್ವರ್ ರಾವ್ ಅವರು ಊಟಕ್ಕಾಗಿ ಹೋಗಿ ವಾಪಸ್ ಬಂದು ನೋಡಿದಾಗ, ಬಸ್ಸಿನಲ್ಲಿಟ್ಟಿದ್ದ 55 ಲಕ್ಷ ರೂ. ಹಣ ಮತ್ತು ದಾಖಲೆಗಳಿದ್ದ ಬ್ಯಾಗ್ ಕಳವಾಗಿತ್ತು. ಕೂಡಲೇ ರಾತ್ರಿ 11 ಗಂಟೆಗೆ ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ತನಿಖಾ ತಂಡವು ಕಳುವಾದ ಹಣವನ್ನು ಶೀಘ್ರವಾಗಿ ಪತ್ತೆಹಚ್ಚಲು ಕಾರ್ಯಪ್ರವೃತ್ತವಾಯಿತು. ಸ್ಥಳದಿಂದ ಆಂಧ್ರಪ್ರದೇಶದ ಗಡಿಭಾಗದವರೆಗೆ, ತುಮಕೂರು ಹಾಗೂ ಬೆಂಗಳೂರು ನಗರದ ವಿವಿಧೆಡೆ ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಯಿತು.

ಆರೋಪಿಗಳು ಮಧ್ಯಪ್ರದೇಶ ರಾಜ್ಯದ ಧಾರ್ ಜಿಲ್ಲೆಯವರು ಎಂದು ತಿಳಿದುಬಂದ ಹಿನ್ನೆಲೆಯಲ್ಲಿ, ಗುಡಿಬಂಡೆ ವೃತ್ತದ ಅಪರಾಧ ಸಿಬ್ಬಂದಿ ಹಾಗೂ ಇತರ ಸಿಬ್ಬಂದಿ ತಂಡ ಮಧ್ಯಪ್ರದೇಶಕ್ಕೆ ತೆರಳಿ ಆರೋಪಿಗಳನ್ನ ಬಂಧಿಸಿತು.

ಈ ಪ್ರಕರಣದಲ್ಲಿ ಆರೋಪಿಗಳಾದ ಎ-1 ಅಸ್ಲಂ ಖಾನ್ ಬಿನ್ ಆಲಿಖಾನ್, ಎ-2 ಮುನೀರ್ ಖಾನ್ ಬಿನ್ ಬಾಬುಖಾನ್ ಎ-3 ಅಬ್ಯಾಖಾನ್ ಬಿನ್ ಆಲಿಖಾನ್, ಎ-4 ಶೇರು ಬಿನ್ ಪಪ್ಪು ರನ್ನ ಬಂಧಿಸಲಾಗಿದೆ.

ಬಂಧಿತ ಆರೋಪಿಗಳಿಂದ ಕಳುವಾಗಿದ್ದ 55 ಲಕ್ಷ ರೂ. ನಗದು ಹಾಗೂ ಬಿಲ್ಡಿಂಗ್ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಪ್ರಕರಣವನ್ನು ಭೇದಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!