ಬಸವಣ್ಣ ಪುರುಷ ಅಹಂಕಾರವನ್ನು ಹೊಂದಿದ್ದರೇ….?

ಬಸವಣ್ಣನವರ ಪುರುಷ ಅಹಂಕಾರ…….

” ಬಸವಣ್ಣನವರಿಗೂ ಪುರುಷ ಅಹಂಕಾರ ಮೀರಲು ಸಾಧ್ಯವಾಗಲಿಲ್ಲ …” ಎಂಬ ಲೇಖಕಿಯೊಬ್ಬರ ಭಾಷಣದ ಮಾತುಗಳು ಒಂದಷ್ಟು ಚರ್ಚೆಗೆ ಗ್ರಾಸವಾಗಿದೆ. ಯಾವುದೇ ವ್ಯಕ್ತಿಯೂ ಪರಿಪೂರ್ಣರಲ್ಲ, ಯಾವುದೇ ಸಿದ್ಧಾಂತವೂ ಪರಿಪೂರ್ಣವಲ್ಲ. ಕಾಲದ ಪರಿಸ್ಥಿತಿಗೆ ಅನುಗುಣವಾಗಿ ಬದಲಾವಣೆ, ವಿಮರ್ಶೆ, ವ್ಯಾಖ್ಯಾನಗಳು ನಡೆಯುತ್ತಲೇ ಇರುತ್ತದೆ…..

ಹಾಗೆ ಹೇಳಲು ಅವರಿಗೂ ಅಧಿಕಾರ ಮತ್ತು ಸ್ವಾತಂತ್ರ್ಯವಿದೆ. ಅದನ್ನು ವಿರೋಧಿಸಲು ಸಹ ಅಷ್ಟೇ ಅಧಿಕಾರ ಮತ್ತು ಸ್ವಾತಂತ್ರ್ಯ ಇದೆ. ಇವು ನಮ್ಮ ನಮ್ಮ ಗ್ರಹಿಕೆ ಮತ್ತು ಅರಿವಿನ ಅನಿಸಿಕೆಗಳು ಮಾತ್ರ….

ಈ ಚರ್ಚೆಯಲ್ಲಿ ನಿಜಕ್ಕೂ ಬಸವಣ್ಣ ಪುರುಷ ಅಹಂಕಾರವನ್ನು ಹೊಂದಿದ್ದರೇ ? ಎಂಬ ಪ್ರಶ್ನೆ ಸಾಮಾನ್ಯ ಜನರಲ್ಲಿ ಮೂಡಬಹುದು. ಮೊದಲಿಗೆ ಈ ಅಹಂಕಾರ ಎಂದರೇನು ? ಸಾಮಾನ್ಯವಾಗಿ ಅಹಂಕಾರ ಮತ್ತು ದುರಹಂಕಾರ ಎಂಬ ಎರಡು ರೀತಿಯ ಪದಗಳು ಮತ್ತು ಎರಡು ರೀತಿಯ ಭಾವಗಳು ಇವೆ. ಮೊದಲನೆಯ ಅಹಂಕಾರ ಒಂದು ರೀತಿಯಲ್ಲಿ ಹೆಮ್ಮೆ, ಆತ್ಮವಿಶ್ವಾಸ, ಧೈರ್ಯ ಸೂಚಕವಾಗಿದ್ದರೆ ಅದೇ ಅಹಂಕಾರದಲ್ಲಿ ತಾನು ಇತರರಿಗಿಂತ ಭಿನ್ನ, ಶ್ರೇಷ್ಠ, ಹೆಚ್ಚುಗಾರಿಕೆ ಹೊಂದಿದ್ದೇನೆ ಎಂಬ ಭಾವವೂ ಸೇರಿರುತ್ತದೆ. ದುರಹಂಕಾರದಲ್ಲಿ ಸಹಜವಾಗಿಯೇ ಇತರರನ್ನು ಕೀಳಾಗಿ ಕಾಣುವ, ತಿರಸ್ಕರಿಸುವ, ತನ್ನನ್ನು ತಾನು ಮೇಲಕ್ಕೇರಿಸಿಕೊಳ್ಳುವ ಮನೋಭಾವ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತದೆ…..

ಅಹಂಕಾರ ಎಂಬುದು ಒಂದು ರೀತಿಯ ಸಾಫ್ಟ್ ಅಥವಾ ಮೃದು ಧೋರಣೆಯ ಸಕಾರಾತ್ಮಕ ಅಹಂಕಾರವೂ ಆಗಿರಬಹುದು. ಈ ಅಹಂಕಾರ ಪ್ರತಿ ಮನುಷ್ಯನಲ್ಲೂ ಸಹಜವಾಗಿಯೇ
ಮಿಳಿತವಾಗಿರುತ್ತದೆ. ಅಂದರೆ ಹೆಣ್ಣಿಗೆ ಹೆಣ್ಣೆಂಬ ಅಹಂಕಾರ, ಗಂಡಿಗೆ ಗಂಡೆಂಬ ಅಹಂಕಾರ, ವೃತ್ತಿಯಲ್ಲಿರುವವರಿಗೆ ಆ ವೃತ್ತಿಯ ಅಹಂಕಾರ, ಹಣ ಇರುವವರಿಗೆ ಹಣದ ಅಹಂಕಾರ, ಆರೋಗ್ಯ ಇರುವವರಿಗೆ ಆರೋಗ್ಯದ ಅಹಂಕಾರ, ರೂಪವಿರುವವರಿಗೆ ರೂಪದ ಅಹಂಕಾರ, ಅಕ್ಷರದ ಅಹಂಕಾರ, ಭಾಷಣಕಾರರಿಗೆ ಅಥವಾ ಕ್ರೀಡಾಪಟುಗಳಿಗೆ ಈರೀತಿ ಯಾರೇ ಇರಲಿ ಯಾರ್ಯಾರಿಗೆ ಏನೆಲ್ಲ ಸಾಮರ್ಥ್ಯವಿರುತ್ತದೋ ಅದರ ಬಗ್ಗೆ ಅಹಂಕಾರವು ಸಹಜವಾಗಿಯೇ ಇರುತ್ತದೆ. ಅದು ಒಂದು ರೀತಿಯ ಆರೋಗ್ಯಕರವೂ ಹೌದು. ಅದು ದುರಹಂಕಾರವಾಗಿ ಮಾರ್ಪಟ್ಟಾಗ ಅದು ಅನಾರೋಗ್ಯಕಾರಿಯಾಗುತ್ತದೆ……

12ನೇ ಶತಮಾನದ ಕಾಲಘಟ್ಟದಲ್ಲಿ ಬಸವಣ್ಣನವರ ಕೆಲವು ವಚನಗಳ ಸಾಲುಗಳು ಅವರು ತಾನು ಗಂಡಸು ಎಂಬ ಮನೋಭಾವವನ್ನು ವ್ಯಕ್ತಪಡಿಸುವ ರೀತಿಯಲ್ಲಿ ಆ ಗಂಡಿನ ಅಹಮಿಕೆ ಕಂಡು ಬರುತ್ತದೆ, ಅದು ಹೆಣ್ಣಿನ ಮೇಲಿನ ಹಿಡಿತ ಸಾಧಿಸುವಿಕೆ ಎನ್ನುವ ಅರ್ಥದಲ್ಲಿ ಲೇಖಕಿ ಹೇಳಿದ್ದಾರೆ. …..

ನನಗನಿಸಿದಂತೆ ಆಗಿನ ಕಾಲಘಟ್ಟದಲ್ಲಿ ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆ ಇರಲಿಲ್ಲ. ಈಗಿನಂತೆ ಸಂಪರ್ಕ ವ್ಯವಸ್ಥೆಗಳು ಇರಲಿಲ್ಲ. ಆಧುನಿಕತೆಯೂ ಇರಲಿಲ್ಲ. ಪೊಲೀಸ್ ವ್ಯವಸ್ಥೆಯೂ ಇರಲಿಲ್ಲ. ಮಹಿಳೆಯನ್ನು ಭೋಗದ ವಸ್ತುವಂತೆ, ಸಂತಾನಾಭಿವೃದ್ಧಿಯ ಮುಂದುವರಿಕೆಯ ಜೀವದಂತೆ, ಕೌಟುಂಬಿಕ ನಿರ್ವಹಣೆಯ ವ್ಯಕ್ತಿಯಂತೆ, ಸರಿಸುಮಾರು ಎರಡನೇ ದರ್ಜೆಯ ನಾಗರಿಕಳಂತೆ ನೋಡಲಾಗುತ್ತಿತ್ತು. ಅಲ್ಲದೇ ಗಂಡಿನ ಜವಾಬ್ದಾರಿ ಬಹುತೇಕ ಹೆಣ್ಣಿನ ರಕ್ಷಣೆಯೇ ಆಗಿದ್ದಿತು. ಅಂತಹ ಸಂದರ್ಭದಲ್ಲಿ ಹೆಣ್ಣಿನ ಈ ಕಾಲದಲ್ಲಿ ಪ್ರತಿಪಾದಿಸುವ ಸ್ವಾತಂತ್ರ್ಯವನ್ನು ಊಹಿಸಿಕೊಳ್ಳುವುದು ಸಾಧ್ಯವಿಲ್ಲ….

ಆಕೆಯ ಹೊರಗಿನ ತಿರುಗಾಟವೇ ಇರಲಿ, ಉದ್ಯೋಗವೇ ಇರಲಿ, ವೇಷ ಭೂಷಣವೇ ಇರಲಿ, ಮಾತುಕತೆಯೇ ಇರಲಿ ಯಾವುದೇ ಕ್ಷೇತ್ರದಲ್ಲಿ ಆಕೆಗೆ ಸಾಮಾನ್ಯವಾಗಿ ಪ್ರವೇಶವೇ ಇರಲಿಲ್ಲ, ಪ್ರಾಮುಖ್ಯತೆಯೂ ಇರಲಿಲ್ಲ. ಅಂತಹ ಸಂದರ್ಭದಲ್ಲಿ ಹೆಣ್ಣು ಕುಟುಂಬದ ಗೌರವಸ್ಥ ಸದಸ್ಯೆ ಎಂದು ನೋಡಿಕೊಳ್ಳುವುದೇ ಆಗಿನ ಸಮಾನತೆಯಾಗಿತ್ತು. ಆಕೆಯ ಹೊರಗಿನ ರಕ್ಷಣೆಗೆ ಯಾವ ನ್ಯಾಯಾಲಯವೂ ಇರಲಿಲ್ಲ. ಆ ನಿಟ್ಟಿನಲ್ಲಿ ಬಸವಣ್ಣನವರ ಮಹಿಳಾ ಸಮಾನತೆ ಮಾನಸಿಕವಾಗಿ ತುಂಬಾ ಅತ್ಯುತ್ತಮ ಮಟ್ಟದಲ್ಲಿತ್ತು ಎಂದು ಭಾವಿಸಬಹುದು….

ತನ್ನ ಅಕ್ಕನಿಗೆ ಜನಿವಾರ ಹಾಕಲಿಲ್ಲವೆಂದು ತಾನೇ ಜನಿವಾರ ನಿರಾಕರಿಸಿದರು ಎನ್ನುವ ಘಟನೆಯ ಬಗ್ಗೆಯೂ ಉಲ್ಲೇಖವಿದೆ. ಸಕಲ ಜೀವಾತ್ಮಗಳಿಗೆ ಲೇಸನ್ನೇ ಬಯಸು ಎಂದು ಇಡೀ ಜೀವರಾಶಿಗಳ ಸಮಾನತೆಯ ಬಗ್ಗೆ ಮಾತನಾಡುತ್ತಾರೆ. ಆಗಿನ ಕಾಲದಲ್ಲಿ ಸೂಳೇ ಸಂಕವ್ವನಂತ ಅನೇಕ ಮಹಿಳಾ ವಚನಕಾರರಿಗೆ ತನ್ನ ಅನುಭವ ಮಂಟಪದಲ್ಲಿ ಸ್ಥಾನ ಕಲ್ಪಿಸಿಕೊಡುತ್ತಾರೆ. ಆ ಕಾಲಘಟ್ಟದಲ್ಲಿ ಇದೆ ಅತ್ಯದ್ಭುತವಲ್ಲವೇ….

ಅದನ್ನು ಈಗಿನ ಕಾಲಘಟ್ಟದಲ್ಲಿ, ಈಗಿನ ಮಹಿಳಾ ಸ್ವಾತಂತ್ರ್ಯ, ಸಮಾನತೆ, ಸ್ವಾವಲಂಬನೆ, ಸ್ವಾಭಿಮಾನದ ಆಧಾರದ ಮೇಲೆ ವಿಮರ್ಶಿಸುವುದು ಎಷ್ಟು ಸರಿ. ರಕ್ಷಣೆಯೇ ಇಲ್ಲದ ಸಂದರ್ಭದಲ್ಲಿ ಸ್ವಾತಂತ್ರ್ಯಕ್ಕೆ ಯಾವ ಅರ್ಥವೂ ಇರುವುದಿಲ್ಲ. ಇಡೀ ವ್ಯವಸ್ಥೆ ಹೆಣ್ಣನ್ನು ಎರಡನೆಯ ದರ್ಜೆ ನಾಗರಿಕಳಂತೆ ನೋಡುತ್ತಿರುವಾಗ ಬಸವಣ್ಣನವರು ಸಮಾನತೆಯ ಬಗ್ಗೆ, ಲಿಂಗಭೇದವಿಲ್ಲದೆ ವರ್ತಿಸುವ ಮಾತುಗಳೇ ಆಗಿನ ಕಾಲಕ್ಕೆ ಸರ್ವಶ್ರೇಷ್ಠ. ಅಷ್ಟನ್ನು ಮಾತ್ರ ಗ್ರಹಿಸಬೇಕು. ಯಾವುದೋ ವಚನದ, ಯಾವುದೋ ಸಾಲುಗಳು, ಅದನ್ನೇ ಉಲ್ಲೇಖಿಸಿ ಬಸವಣ್ಣನವರು ಪುರುಷ ಅಹಂಕಾರ ಮೀರಲಿಲ್ಲ ಎನ್ನುವುದು ಅಷ್ಟೇನೂ ಸಮಂಜಸವಲ್ಲ….

ಲಕ್ಷಾಂತರ ವಚನಗಳನ್ನು ಹುಡುಕುತ್ತಾ ಹೋದರೆ ಕೆಲವು ವಚನಗಳಲ್ಲಿ ಮೌಢ್ಯವು ಸಿಗಬಹುದು, ಅಂಧ ಧಾರ್ಮಿಕ ನಂಬಿಕೆಯೂ ಸಿಗಬಹುದು, ಮಹಿಳಾ ಸ್ವಾತಂತ್ರ್ಯ ವಿರೋಧಿ ನಿಲುವುಗಳೂ ಸಿಗಬಹುದು, ವರ್ಣಾಶ್ರಮ ವ್ಯವಸ್ಥೆಯ ಪ್ರತಿಪಾದನೆಯೂ ಸಿಗಬಹುದು. ಆದರೆ ಅದನ್ನೇ ಮುಖ್ಯವಾಗಿಟ್ಟುಕೊಂಡು ಚರ್ಚೆ ಮಾಡುವುದು ಉಚಿತವಲ್ಲ….

ಬುದ್ಧನನ್ನು, ಆತನ ಸಿದ್ದಾಂತವನ್ನು ಇನ್ನೊಂದು ನೆಲೆಯಲ್ಲಿ ಟೀಕಿಸಬಹುದು. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು, ಮಹಾತ್ಮ ಗಾಂಧಿಯವರನ್ನು, ಸ್ವಾಮಿ ವಿವೇಕಾನಂದರನ್ನು, ಪೌರಾಣಿಕ ಪಾತ್ರಧಾರಿಗಳಾದ ರಾಮ, ಕೃಷ್ಣರ. ವಿಚಾರಗಳಲ್ಲಿ ಸಾಕಷ್ಟು ಟೀಕೆಗಳನ್ನು ಮಾಡಬಹುದು….

ಜ್ಞಾನ ಎಂಬುದು ಕಾಲದ ಪಯಣದಲ್ಲಿ ಚಿತ್ರ ವಿಚಿತ್ರ ತಿರುಗುಗಳನ್ನು ಪಡೆಯುತ್ತಲೇ ಇರುತ್ತದೆ. ಅದಕ್ಕೆ ಯಾವುದೇ ಮಿತಿ ಇಲ್ಲ. ಇತ್ತೀಚೆಗೆ ಒಬ್ಬರು ಚರ್ಚೆಯ ಸಂದರ್ಭದಲ್ಲಿ ನಾವೆಲ್ಲರೂ ಗೌರವಿಸುವ ಅತ್ಯಂತ ಬಹುದೊಡ್ಡ ಚಿಂತಕ, ದಾರ್ಶನಿಕ ಬುದ್ಧ ಜೀವನೋತ್ಸಾಹದ ಕುರುಹು ಎಂದರೆ, ಆ ವ್ಯಕ್ತಿಯ ದೃಷ್ಟಿಯಲ್ಲಿ ಬುದ್ಧನನ್ನು ಹೆಚ್ಚು ಅಧ್ಯಯನ ಮಾಡಿದರೆ ವಿರಹ ವೇದನೆ, ಜಿಗುಪ್ಸೆ, ಸನ್ಯಾಸ ಪ್ರಜ್ಞೆ ಉಂಟಾಗುತ್ತದೆ. ಆದರೆ ಶ್ರೀಕೃಷ್ಣ ಒಬ್ಬ ಜೀವನೋತ್ಸಾಹಿ ಎಂದರು. ಇನ್ನೊಬ್ಬರು ಶ್ರೀ ಕೃಷ್ಣ ಮಹಾನ್ ಕುತಂತ್ರಿ, ದುಷ್ಟತನದ ಪರಮಾವಧಿ ಬುದ್ಧನೇ ನಮ್ಮೆಲ್ಲರ ನೋವು ನಲಿವಿಗೆ ನಿಜವಾದ ಸೂತ್ರಧಾರ ಎಂದರು…….

ಹೀಗೆ ಎಲ್ಲರನ್ನೂ, ಎಲ್ಲವನ್ನೂ ವಿಮರ್ಶಿಸುತ್ತಾ ಸಾಗಬಹುದು. ಆದರೆ ಈಗಿನ ಸಂದರ್ಭ ಸನ್ನಿವೇಶದಲ್ಲಿ ಇತಿಹಾಸದ ಚಿಂತಕರ ಒಳ್ಳೆಯ ಅಂಶಗಳನ್ನು ಹೆಚ್ಚು ತೆಗೆಯುತ್ತಾ ಕೆಲವು ಆಗಿನ ಕಾಲಘಟ್ಟದ ಹಳೆಯದಾದ ಚಿಂತನೆಗಳನ್ನು ನಿರ್ಲಕ್ಷಿಸುತ್ತಾ, ಯುವ ಜನಾಂಗಕ್ಕೆ ಮಾರ್ಗದರ್ಶನ ನೀಡಬೇಕಾಗುತ್ತದೆ. ಮಾತಿನ ಭರದಲ್ಲಿ ಕೆಲವು ಮಾತುಗಳು ಹೊರಡಬಹುದು. ಸಾಹಿತ್ಯಕವಾಗಿ ಚರ್ಚೆಗಳು ಆಗಬಹುದು. ಆದರೆ ಒಟ್ಟಾರೆಯಾಗಿ ನಾವು ಪಡೆದುಕೊಳ್ಳಬೇಕಾಗಿರುವುದು ಅಮೃತವೇ ಹೊರತು, ಸಿಹಿಯೇ ಹೊರತು ವಿಷವಲ್ಲ, ಕಹಿಯಲ್ಲ. ಹಾಗೊಂದು ವೇಳೆ ಪುರುಷ ಅಹಂಕಾರ, ಸ್ತ್ರೀ ಅಹಂಕಾರ, ಅಕ್ಷರ ಜ್ಞಾನದ ಅಹಂಕಾರ ಒಂದಷ್ಟು ಪ್ರಮಾಣದಲ್ಲಿ ಇದ್ದಲ್ಲಿ ಅದು ಅಪಾಯಕಾರಿ ಹಂತ ತಲುಪದಿದ್ದಲ್ಲಿ ಅದು ಆರೋಗ್ಯಕರವೇ ಮತ್ತು ಸಹಜವೇ……

ಒಬ್ಬ ವ್ಯಕ್ತಿ ಒಂದು ಹೋರಾಟದಲ್ಲಿ ತೊಡಗಿಸಿ ಕೊಂಡಾಗ ಸಹಜವಾಗಿಯೇ ಇತರ ಕೆಲವು ಸಮಸ್ಯೆಗಳು ಸ್ವಲ್ಪಮಟ್ಟಿಗೆ ಆ ವ್ಯಕ್ತಿಯ ಕಣ್ಣಿನಿಂದ, ಮನಸ್ಸಿನಿಂದ ಮರೆಯಾಗಿರಬಹುದು. ಏಕೆಂದರೆ ಆಗಿನ ಕಾಲಕ್ಕೆ ಸಮ ಸಮಾಜದ ನಿರ್ಮಾಣ, ವರ್ಣಶ್ರಮ ವ್ಯವಸ್ಥೆಯ ನಿರ್ಮೂಲನೆ ಇವೇ ಬಸವಣ್ಣನವರಿಗೆ ಬಹಳ ಮುಖ್ಯವಾಗಿತ್ತು. ಆಗ ಮ‌ಹಿಳಾ ಸ್ವಾತಂತ್ರ್ಯ ಎಂಬುದು ಚರ್ಚೆಯ ವಿಷಯವೇ ಆಗಿರಲಿಲ್ಲ. ಅಂತಹ ಸಂದರ್ಭದಲ್ಲಿ ಸಹಜವಾಗಿಯೇ ಬಸವಣ್ಣನವರ ಮಾತುಗಳು ಕೌಟುಂಬಿಕ ವ್ಯವಸ್ಥೆಯ, ಸ್ತ್ರೀ ರಕ್ಷಣೆಯ ಕುರಿತು ಇರುತ್ತದೆಯೇ ಹೊರತು ಅವರ ಸ್ವಾತಂತ್ರ್ಯದ ಬಗ್ಗೆ ಗಮನವಿಲ್ಲದೇ ಇರಬಹುದು. ಅದನ್ನು ಸಹ ನಾವು ಗ್ರಹಿಸಬೇಕಲ್ಲವೇ…..

ಬಸವಣ್ಣನವರ ಪುರುಷ ಅಹಂಕಾರ ಲೇಖಕಿ ಹೇಳಿದಂತೆ ಇದ್ದರೂ ಅದು ಅತ್ಯಂತ ಸಹಜ ಮತ್ತು ಆರೋಗ್ಯಕರವೇ ಹೊರತು ಖಂಡಿತವಾಗಲೂ ಅದು ಸ್ತ್ರೀ ವಿರೋಧಿ ಭಾವನೆಯ ದುರಹಂಕಾರವಲ್ಲ ಎಂದು ಖಚಿತವಾಗಿ ಹೇಳಬಹುದು. ಲೇಖಕಿಯ ಕೆಲವು ಸಾಲುಗಳನ್ನು ಓದಿದಾಗ ಅವರು ಹೆಚ್ಚು ಅಕಾಡೆಮಿಕ್ ಆಗಿ ಮಾತನಾಡಿರುವುದು ಕಂಡುಬರುತ್ತದೆ. ಆದರೆ ಬದುಕಿನ ಆಳದ ಅನುಭವದಲ್ಲಿ ನಿಂತು ಯೋಚಿಸಿದಾಗ ಬಸವಣ್ಣನವರ ಪುರುಷ ಅಹಂಕಾರ ಅತ್ಯಂತ ಸ್ವಾಭಾವಿಕ ಎನಿಸುತ್ತದೆ…..

ಹಾಗೆಂದು ಸ್ವಾತಂತ್ರ್ಯದ ಅನಪೇಕ್ಷಿತ, ಅತಿರೇಕದ, ಅಸ್ವಾಭಾವಿಕ, ಅನಾವಶ್ಯಕ ಟೀಕೆಗಳು ಸಹನೀಯವಲ್ಲ. ಒಂದು ಜವಾಬ್ದಾರಿ ಇದೆ ಎಂದ ಮೇಲೆ ಸಾಹಿತಿಗಳು, ಬರಹಗಾರರು, ಚಿಂತಕರು ಸ್ವಲ್ಪ ತೂಕದ ನಡೆ ನುಡಿಗಳು ಅಪೇಕ್ಷಣೀಯ…..

ಯಾರು ಎಷ್ಟೇ ಜಾಗ್ರತೆ ವಹಿಸಿದರು ಸ್ವಾಭಾವಿಕವಾಗಿ ಪುರುಷ ಪುರುಷನಾಗಿ, ಮಹಿಳೆ ಮಹಿಳೆಯಾಗಿಯೇ ತಮ್ಮ ಬೇಡಿಕೆ, ಪೂರೈಕೆ, ಕಷ್ಟ, ಸುಖ, ನೋವುಗಳ ಬಗ್ಗೆ ಮಾತನಾಡುತ್ತಾರೆ. ಆಗ ಇನ್ನೊಬ್ಬರಿಗೆ ಸ್ವಲ್ಪ ನೋವಾಗಬಹುದು, ನಿರ್ಲಕ್ಷಿಸಬಹುದು ಅಥವಾ ಕಡಿಮೆ ಪ್ರಾಮುಖ್ಯತೆ ಸಿಗಬಹುದು. ಹಾಗೆಂದು ಅದನ್ನು ಅಹಂಕಾರ ಎಂದು ಕರೆಯುವ ಹಾಗಿಲ್ಲ ಕರೆಯಬಾರದು…..

ಉಳಿದದ್ದು ಅವರವರ ವಿವೇಚನೆಗೆ ಬಿಡುತ್ತಾ….

ಎಂಟು ಶತಮಾನಗಳಿಂದ ವಚನ ಸಾಹಿತ್ಯ, ಸಂಸ್ಕೃತಿ ಅಗ್ನಿಪರೀಕ್ಷೆಯಲ್ಲಿ ಗೆದ್ದು ಬರುತ್ತಲೇ ಇದೆ. ಅದು ಮತ್ತಷ್ಟು ಗಟ್ಟಿಯಾಗಲು ಯಾವುದೇ ಟೀಕೆ, ವಿಮರ್ಶೆಗೆ ಅನುಭವ ಮಂಟಪದ ರೀತಿಯಲ್ಲಿ ಸದಾ ಸ್ವಾಗತಿ‌ಸೋಣ. ಸಕಲ ಜೀವಾತ್ಮಗಳಿಗೆ ಲೇಸನ್ನೇ ಬಯ‌ಸುವ ಚಿಂತನೆಗಳಿಗೆ ಭಯವೇಕೆ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Leave a Reply

Your email address will not be published. Required fields are marked *