Categories: ರಾಜ್ಯ

ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ: ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣ ಭಾವಚಿತ್ರ ಅಳವಡಿಕೆಗೆ ಸಿಎಂ ಆದೇಶ

ಸಾಮಾಜಿಕ ನ್ಯಾಯದ ಮೊದಲ ಹರಿಕಾರ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಲು ಇಂದು ನನ್ನ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ತೀರ್ಮಾನಿಸಿದೆ.  ನಮ್ಮ ಸರ್ಕಾರದ ಈ ತೀರ್ಮಾನ ಮುಖ್ಯಮಂತ್ರಿಯಾದ ನನಗೆ ಅತೀವ ಹೆಮ್ಮೆ ಮತ್ತು ತೃಪ್ತಿಯನ್ನು ಉಂಟುಮಾಡಿದೆ. ಇದು ಕೇವಲ ಘೋಷಣೆ ಅಲ್ಲ, ಬಸವ ತತ್ವದ ಮೇಲಿರುವ ನಮ್ಮ ನಂಬಿಕೆ ಮತ್ತು ಬದ್ಧತೆ ಎಂದು‌ ಮುಖ್ಯಮಂತ್ರಿ‌ ಸಿದ್ದರಾಮಯ್ಯ ಹೇಳಿದ್ದಾರೆ.

ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಬೇಕೆಂದು ನಾಡಿನ ಲಿಂಗಾಯತ ಮಠಗಳ ಸ್ವಾಮಿಗಳು ನನ್ನ ಬಳಿ ಬಂದು ಮನವಿ ಮಾಡಿದ್ದರು. ಇದು ವೈಯಕ್ತಿಕವಾಗಿ ನನ್ನ ಅಪೇಕ್ಷೆಯೂ ಆಗಿತ್ತು. ಸ್ವಾಮಿಗಳ ಈ ಬೇಡಿಕೆಯನ್ನು ಈಡೇರಿಸಿದ ತೃಪ್ತಿ ನಮ್ಮ ಸರ್ಕಾರಕ್ಕೆ ಇದೆ.ಈ ಎಲ್ಲ ಸ್ವಾಮೀಜಿಗಳ ಆಶೀರ್ವಾದ ನಮ್ಮ ಸರ್ಕಾರದ ಮೇಲೆ ಇರಲಿ ಎಂದು ಇದೇ ಸಂದರ್ಭದಲ್ಲಿ ಅರಿಕೆ ಮಾಡಿಕೊಳ್ಳುತ್ತೇನೆ ಎಂದರು.

ವೈಯಕ್ತಿಕವಾಗಿ ಮತ್ತು ರಾಜಕೀಯವಾಗಿ ಬಸವಣ್ಣ ನನ್ನವೈಚಾರಿಕ ಗುರು. ಬಸವ ಜಯಂತಿಯ ದಿನವೇ ನಾನು ಮೊದಲ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದೆ. ಆ ನಿರ್ಧಾರ ಕಾಕತಾಳೀಯವಲ್ಲ, ಉದ್ದೇಶಪೂರ್ವಕವಾದುದು. ಆ ದಿನ ಬಸವಣ್ಣನವರ ಚಿಂತನೆಗಳ ಹಾದಿಯಲ್ಲಿ ನಡೆಯುತ್ತೇನೆ ಎಂದು ನನ್ನ ಮನಸ್ಸಿನೊಳಗೆ ಪ್ರಮಾಣ ಮಾಡಿದ್ದೆ. ಅದರಂತೆ ಬಸವಣ್ಣನವರ ತತ್ವದ ದಾರಿಯಲ್ಲಿಯೇ ನಮ್ಮ ಸರ್ಕಾರ ಈಗಲೂ ಸಾಗುತ್ತಿದೆ. ಈ ಜಾಗೃತಿ ನಮ್ಮ ಸರ್ಕಾರದ ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಇರಬೇಕೆಂಬ ಉದ್ದೇಶದಿಂದಲೇ ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರವನ್ನು ಕಡ್ಡಾಯವಾಗಿ ಹಾಕಬೇಕೆಂದು ಆದೇಶಿಸಿದ್ದೇನೆ ಎಂದು ಹೇಳಿದರು.

ಭಾರತದ ಇತಿಹಾಸದಲ್ಲಿ ಹನ್ನೆರಡನೆ ಶತಮಾನ ಅತ್ಯಂತ ಮಹತ್ವಪೂರ್ಣವಾದುದು. ಅಜ್ಞಾನ, ಜಾತೀಯತೆ,ಮತಾಂಧತೆ,ಶೋಷಣೆ, ಮೌಡ್ಯಗಳಿಂದ ಮುಳುಗಿಹೋಗಿದ್ದ ಸಮಾಜವನ್ನು ಮೇಲೆತ್ತಲು ಅರಸ ಬಿಜ್ಜಳನಿಗೆ ಹಣಕಾಸು ಸಚಿವರಾಗಿದ್ದ ಬಸವಣ್ಣನವರು, ರಾಜಿ ಇಲ್ಲದ ಬದ್ಧತೆ, ಪ್ರಶ್ನಾತೀತವಾದ ಜನಪರ ಕಾಳಜಿ ಮೂಲಕ ಮಾಡಿದ ಪ್ರಯತ್ನ-ಪ್ರಯೋಗಗಳು ಪ್ರಪಂಚದ ಎಲ್ಲ ಆಡಳಿತಗಾರರ ಆದರ್ಶವೆಂದು ನಾನು ನಂಬಿದ್ದೇನೆ. ಕಾಯಕ ಮತ್ತು ದಾಸೋಹ ನನ್ನ ಇಷ್ಟದ ಬಸವಣ್ಣನನವರ  ತತ್ವದ ಮೂಲಧಾತುಗಳು. ಕಾಯಕ ಎಂದರೆ ಉತ್ಪಾದನೆ, ದಾಸೋಹ ಎಂದರೆ ವಿತರಣೆ. ಸಂಪತ್ತಿನ ಉತ್ಪಾದನೆಯ ಶಕ್ತಿ ಎಲ್ಲರದ್ದಾಗಬೇಕು, ಅದರ ವಿತರಣೆ ಸಮನಾಗಿ ನಡೆಯಬೇಕು ಎಂದು ಬಸವಣ್ಣನವರ ಆಶಯವಾಗಿತ್ತು ಎಂದು ತಿಳಿಸಿದರು.

ಸಾಮಾಜಿಕ ನ್ಯಾಯದ ಸಿದ್ಧಾಂತವನ್ನು ಇಷ್ಟೊಂದು ಸರಳವಾಗಿ ವಿಶ್ಲೇಷಿಸುವುದು ಸಾಧ್ಯ ಇಲ್ಲ. ಅಣ್ಣನ ಅನ್ನದಾಸೋಹದ ಸಂದೇಶಕ್ಕೆ ಅನುಗುಣವಾಗಿ ಮುಖ್ಯಮಂತ್ರಿಯಾದ ಮರುಗಳಿಗೆಯಲ್ಲಿಯೇ ಅನ್ನಭಾಗ್ಯ’ಯೋಜನೆಯನ್ನು ಜಾರಿಗೊಳಿಸಿದೆ. ಈ ಮೂಲಕ ಹಸಿವು ಮುಕ್ತ ಕರ್ನಾಟಕ ನಿರ್ಮಾಣದ ಸಂಕಲ್ಪ ಕೈಗೊಂಡೆ. ವಿದ್ಯಾರ್ಥಿಗಳಿಗೆ ಬಿಸಿಯೂಟ, ಕ್ಷೀರಭಾಗ್ಯದ ಮೂಲಕ ಹಾಲು, ಇಂದಿರಾ ಕ್ಯಾಂಟೀನ್, ಗರ್ಭಿಣಿ ಮತ್ತು ಬಾಣಂತಿಯರಿಗಾಗಿ ಮಾತೃಪೂರ್ಣ ಯೋಜನೆಗಳು ಬಸವಣ್ಣನವರ ಅನ್ನದಾಸೋಹದ ಚಿಂತನೆಯಿಂದಲೇ ಪ್ರೇರಿತವಾದುದು ಎಂದರು.

ಸಮಾಜದ ಕಟ್ಟಕಡೆಯ ಮನುಷ್ಯನಿಗೂ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಅವಕಾಶಗಳು ಸಿಗಬೇಕು ಎಂದು ಬಸವಣ್ಣ ಬಯಸಿದ್ದರು. ನಮ್ಮ ಸರ್ಕಾರದ ಯೋಜನೆಗಳತ್ತ ಕಣ್ಣು ಹಾಯಿಸಿದರೆ ಬಸವಣ್ಣನ ಆಶಯಗಳ ಪ್ರಭಾವ ಪ್ರತಿಯೋಜನೆಯಲ್ಲಿಯೂ ಕಾಣಬಹುದು. ಬಡತನ ನಿವಾರಣೆ, ಕೃಷಿ, ನೀರಾವರಿ, ಗ್ರಾಮೀಣ ಅಭಿವೃದ್ಧಿ, ಮಹಿಳಾ ಸಬಲೀಕರಣ, ಉದ್ಯೋಗ ಸೃಷ್ಟಿಗೆ ನಮ್ಮ ಸರ್ಕಾರ ಆದ್ಯತೆ ನೀಡಿ ಅಭಿವೃದ್ಧಿಯ ಜೊತೆಯಲ್ಲಿ ಸಾಮಾಜಿಕ ನ್ಯಾಯವನ್ನು ಬೆಸೆಯುವ ನಮ್ಮ ಕರ್ನಾಟಕ ಅಭಿವೃದ್ಧಿ ಮಾದರಿಯನ್ನು ಇಡೀ ದೇಶ ಚರ್ಚಿಸುತ್ತಿದೆ ಎಂದು ಹೇಳಿದರು.

 ಬಸವಣ್ಣ ಎಂಬ ಜ್ಞಾನಭಂಡಾರದ ಮಾರ್ಗದರ್ಶನ ಇಲ್ಲದೆ ಇದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ. ಕನ್ನಡ ಭಾಷೆಯ ಬಗೆಗಿನ ನಮ್ಮ ಸರ್ಕಾರದ ಬದ್ಧತೆಗೂ ಬಸವಣ್ಣನೇ ಪ್ರೇರಕ ಶಕ್ತಿ. ಬಸವಣ್ಣನವರು ಕನ್ನಡವನ್ನು ಅಂದಿನ ಧರ್ಮದ ಭಾಷೆಯಾಗಿ, ವಿಚಾರದ ಭಾಷೆಯಾಗಿ, ಸಂವಹನದ ಭಾಷೆಯಾಗಿ ಬಳಸಿಕೊಳ್ಳುವ ಮೂಲಕ ಕನ್ನಡ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಬೆಲೆ ಕಟ್ಟಲಾರದ್ದು. ಹಾಗೆ ನೋಡಿದರೆ ಕನ್ನಡ ಮಾಧ್ಯಮ ಪರಿಣಾಮಕಾರಿಯಾಗಿ ಜಾರಿಗೆ ಬಂದದ್ದೇ ಹನ್ನೆರಡನೇ ಶತಮಾನದಲ್ಲಿ ಎನ್ನುವುದು ಆಶ್ಚರ್ಯದ ಸಂಗತಿಯಾದರೂ ವಾಸ್ತವ ಎಂದರು.

ಅನ್ನದಾಸೋಹ ಮತ್ತು ಜ್ಞಾನದಾಸೋಹದ ಮೂಲಕ ರಾಜ್ಯದ ಲಿಂಗಾಯತ ಮಠಗಳು ನಾಡಿನ ಸರ್ವಾಂಗೀಣ ಏಳಿಗೆಗೆ ಶ್ರಮಿಸುತ್ತಿರುವುದನ್ನು ಕೂಡಾ ನಾನು ಕೃತಜ್ಞತಾ ಭಾವದಿಂದ ಸ್ಮರಿಸುತ್ತೇನೆ. ಬಡತನ ಮತ್ತು ಅಜ್ಞಾನದ ನಿವಾರಣೆಯಲ್ಲಿ ಈ ಮಠಗಳು ವಿಶೇಷ ಪಾತ್ರವಹಿಸಿವೆ. ಶಿಕ್ಷಣ ಪ್ರಸಾರಕ್ಕೆ ಧಾರ್ಮಿಕ ಮಠಮಾನ್ಯಗಳು ನೀಡಿರುವ ಕೊಡುಗೆ ಅಪಾರವಾದುದು ಎಂದು ತಿಳಿಸಿದರು.

ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆಯನ್ನಷ್ಟೇ ಮಾಡಿ ನಾವು ವಿರಮಿಸುವುದಿಲ್ಲ. ಬಸವ ತತ್ವವನ್ನು ಮನೆಮನೆಗೆ ತಲುಪಿಸುವ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತರುತ್ತೇವೆ.. ಸಮಸಮಾಜ ನಿರ್ಮಾಣದ ಬಗ್ಗೆ ಬಸವಣ್ಣ ಕಂಡ ಕನಸನ್ನು ಸಾಕಾರಗೊಳಿಸಲು ಎಲ್ಲರ ಸಹಕಾರ ಇರಲಿ ಎಂದರು.

Ramesh Babu

Journalist

Recent Posts

ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಬೆಂಗಳೂರು ಗ್ರಾಮಾಂತರದ ಇಬ್ಬರು ಶಿಕ್ಷಕರು ಆಯ್ಕೆ

ದೇವನಹಳ್ಳಿ: ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು 2026–27ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ…

11 hours ago

ಮೇಕೆದಾಟು ಯೋಜನೆ ಶೀಘ್ರ ಜಾರಿಗೆ ಸಚಿವರ ದೃಢ ಸಂಕಲ್ಪ: ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ

ಮೇಕೆದಾಟು ಯೋಜನೆಯ ಶೀಘ್ರ ಜಾರಿಗಾಗಿ ಜಲಸಂಪನ್ಮೂಲ ಸಚಿವರು ತೀವ್ರ ಒಲವು ತೋರಿದ್ದು, ಕಾಮಗಾರಿಗೆ ಇನ್ನಷ್ಟು ವೇಗ ನೀಡುವ ನಿಟ್ಟಿನಲ್ಲಿ ರಾಜ್ಯದ…

12 hours ago

ಶ್ರೀರಂಗವನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ

ತೂಬಗೆರೆ: ಹೋಬಳಿಯ ಯದ್ದಲಹಳ್ಳಿ ಸಮೀಪದ ಶ್ರೀರಂಗವನದಲ್ಲಿರುವ ಶ್ರೀ ವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ವಿಶೇಷ ಪೂಜೆ, ಅಭಿಷೇಕ ಹಾಗೂ…

12 hours ago

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ-2026: ಹಕ್ಕು,ಆಕ್ಷೇಪಣೆ ಸಲ್ಲಿಕೆಗೆ ಸೆ. 23 ವರೆಗೆ ಅವಕಾಶ-ಡಿಸಿ ಅನುರಾಧ

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ ಸಂಬಂಧಿಸಿದಂತೆ ಕರಡು ಮತದಾರ ಪಟ್ಟಿ ಪ್ರಕಟಗೊಂಡಿದ್ದು ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ಅರ್ಹ ಮತದಾರರು ಮತಗಟ್ಟೆ…

14 hours ago

ರೈಲು ಡಿಕ್ಕಿಗೆ ಅಪರಿಚಿತ ವ್ಯಕ್ತಿ ಬಲಿ

ದೊಡ್ಡಬಳ್ಳಾಪುರ: ರೈಲಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ಅಪರಿಚಿತ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ದೊಡ್ಡಬಳ್ಳಾಪುರ ರೈಲು ನಿಲ್ದಾಣದ ಸಮೀಪ…

17 hours ago

ಮಳೆ ಕೊರತೆ ನೀಗಿಸಲು ಸರ್ಕಾರದ ಮಾಸ್ಟರ್ ಪ್ಲ್ಯಾನ್: ಎಚ್.ಎ.ಎಲ್‌ನಲ್ಲಿ ಮೋಡ ಬಿತ್ತನೆಗೆ ಜಲ ಸಂಪನ್ಮೂಲ ಸಚಿವರಿಂದ ಚಾಲನೆ

ರಾಜ್ಯದಲ್ಲಿ ಎದುರಾಗಿರುವ ಮಳೆ‌ ಕೊರತೆ ಹಾಗೂ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ ಸಲುವಾಗಿ, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ 'ಮೋಡ…

18 hours ago