ಬರದ ನಡುವೆ ಜಾನುವಾರುಗಳಿಗೆ ಹಸಿರು ಆಸರೆ: 70 ಎಕರೆಯಲ್ಲಿ ಹಸಿಹುಲ್ಲು ಬೆಳವಣಿಗೆಗೆ ಜಿಪಂ ಕ್ರಮ: ಮತ್ತಷ್ಟು ಸರ್ಕಾರಿ ಜಮೀನು ಹುಲ್ಲುಗಾವಲಾಗಿ ಪರಿವರ್ತನೆ

ಬೆಂಗಳೂರು ಗ್ರಾಮಾಂತರ: ಮಳೆ ಕೈಕೊಟ್ಟ ಪರಿಣಾಮ ಕೃಷಿ ಬೆಳೆಗಳ ಜತೆಗೆ ಜಾನುವಾರುಗಳ ಮೇವಿನ ಮೇಲೂ ಬರದ ಕರಿನೆರಳು ಆವರಿಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮುನ್ನೆಚ್ಚರಿಕೆ ಕ್ರಮಕ್ಕೆ ಮುಂದಾಗಿದೆ.

ಜಿಲ್ಲೆಯ ನಾಲ್ಕೂ ತಾಲೂಕುಗಳ ವ್ಯಾಪ್ತಿಯ ಸರ್ಕಾರಿ ಜಮೀನು, ಗೋಮಾಳ ಸೇರಿದಂತೆ ಲಭ್ಯವಿರುವ ಪ್ರದೇಶಗಳಲ್ಲಿ ಹಸಿಹುಲ್ಲು ಬೆಳೆಯುವ ಮೂಲಕ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಮೇವಿನ ಕೊರತೆ ನೀಗಿಸಲು ಯೋಜನೆ ರೂಪಿಸಲಾಗಿದೆ.

ವಿಬಿಜಿ ರಾಮ್‌ಜೀ ಯೋಜನೆಯಡಿ ಈಗಾಗಲೇ ಜಿಲ್ಲೆಯ ವಿವಿಧೆಡೆ ಸುಮಾರು 70 ಎಕರೆ ಪ್ರದೇಶದಲ್ಲಿ ಹಸಿಹುಲ್ಲು ನಾಟಿ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸರ್ಕಾರಿ ಜಮೀನುಗಳನ್ನು ಹುಲ್ಲುಗಾವಲು ಪ್ರದೇಶಗಳಾಗಿ ಪರಿವರ್ತಿಸಲು ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ. ಮಳೆ ಕೊರತೆಯ ನಡುವೆಯೂ ಜಾನುವಾರುಗಳಿಗೆ ಮೇವು ಒದಗಿಸುವ ಉದ್ದೇಶದಿಂದ ಜಿಲ್ಲಾ ಪಂಚಾಯಿತಿ ಈ ಕ್ರಮಕ್ಕೆ ಆದ್ಯತೆ ನೀಡಿದೆ.

ರಾಗಿ ಬೆಳೆಗೂ ಬರದ ಹೊಡೆತ

ಜಿಲ್ಲೆಯಲ್ಲಿ ಸುಮಾರು 69 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ನಡೆದಿದ್ದರೂ, ನಿರಂತರ ಮಳೆ ಕೊರತೆಯಿಂದ ಬೆಳೆ ಒಣಗುವ ಆತಂಕ ಎದುರಾಗಿದೆ. ರಾಗಿ ಬೆಳೆ ಕೈಕೊಟ್ಟರೆ ಜಾನುವಾರುಗಳಿಗೆ ದೊರೆಯುವ ಒಣಮೇವಿನ ಪ್ರಮಾಣವೂ ಗಣನೀಯವಾಗಿ ಕುಸಿಯುವ ಸಾಧ್ಯತೆ ಇದೆ.

ಪ್ರಸ್ತುತ ಜಿಲ್ಲಾ ಪಶುಪಾಲನಾ ಇಲಾಖೆಯ ಅಂದಾಜಿನ ಪ್ರಕಾರ ಜಿಲ್ಲೆಯಲ್ಲಿ ಸುಮಾರು 32 ವಾರಗಳಿಗೆ ಸಾಕಾಗುವಷ್ಟು ಮೇವಿನ ದಾಸ್ತಾನು ಇದೆ. ಆದರೆ ಮಳೆ ಕೊರತೆ ಮುಂದುವರಿದರೆ ಈ ಸಂಗ್ರಹದ ಮೇಲಿನ ಒತ್ತಡ ಹೆಚ್ಚಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಹಸಿಹುಲ್ಲಿನ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಜಿಪಂ ಮುಂದಾಗಿದೆ.

ಹುಲ್ಲುಗಾವಲಿಗೆ ನೀರೇ ದೊಡ್ಡ ಸವಾಲು

ಒಂದೆಡೆ ಮೇವಿನ ಕೊರತೆ ತಪ್ಪಿಸಲು ಹಸಿಹುಲ್ಲು ಬೆಳೆಯುವ ಪ್ರಯತ್ನ ನಡೆಯುತ್ತಿದ್ದರೆ, ಮತ್ತೊಂದೆಡೆ ಅದಕ್ಕೆ ಅಗತ್ಯವಾದ ನೀರು ಪೂರೈಸುವುದು ಜಿಲ್ಲಾ ಪಂಚಾಯಿತಿಗೆ ಸವಾಲಾಗಿದೆ. ಬರದ ಪರಿಣಾಮ ಅಂತರ್ಜಲಮಟ್ಟ ಕುಸಿದಿದ್ದು, ಹಲವು ಕೊಳವೆಬಾವಿಗಳಲ್ಲಿ ನೀರಿನ ಲಭ್ಯತೆ ಕಡಿಮೆಯಾಗಿದೆ.

ಈ ಹಿನ್ನೆಲೆಯಲ್ಲಿ ಸರ್ಕಾರಿ ಕೊಳವೆಬಾವಿಗಳ ಜತೆಗೆ ಖಾಸಗಿ ಕೊಳವೆಬಾವಿಗಳಿಂದಲೂ ನೀರು ಪಡೆಯುವ ಸಾಧ್ಯತೆ ಪರಿಶೀಲಿಸಲಾಗುತ್ತಿದೆ. ಅಲ್ಪ ಪ್ರಮಾಣದಲ್ಲಾದರೂ ಮಳೆಯಾದರೆ ಅಂತರ್ಜಲಮಟ್ಟ ಚೇತರಿಸಿಕೊಂಡು ಹುಲ್ಲುಗಾವಲು ನಿರ್ವಹಣೆಗೆ ಅನುಕೂಲವಾಗಬಹುದು. ಆದರೆ ಮಳೆ ಸಂಪೂರ್ಣ ಕೈಕೊಟ್ಟರೆ ಹಸಿಹುಲ್ಲು ಬೆಳೆಸುವುದು ಮತ್ತಷ್ಟು ಸವಾಲಿನ ಕೆಲಸವಾಗಲಿದೆ.

16 ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ

ಮಳೆ ಕೊರತೆಯ ಪರಿಣಾಮ ಜಿಲ್ಲೆಯ 16 ಗ್ರಾಮಗಳಲ್ಲಿ ಈಗಾಗಲೇ ಕುಡಿವ ನೀರಿನ ಸಮಸ್ಯೆ ಉಲ್ಬಣಿಸಿದೆ. ಸಮಸ್ಯೆ ಎದುರಾಗಿರುವ ಗ್ರಾಮಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲು ಜಿಪಂ ಕ್ರಮ ಕೈಗೊಂಡಿದೆ. ಅಗತ್ಯವಿರುವ ಕಡೆ ಹೊಸ ಕೊಳವೆಬಾವಿ ಕೊರೆಸುವುದು ಹಾಗೂ ಖಾಸಗಿ ಕೊಳವೆಬಾವಿಗಳಿಂದ ನೀರು ಖರೀದಿಸುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ.

ಮುಂದಿನ ದಿನಗಳಲ್ಲಿ ಮಳೆ ಕೊರತೆ ಮುಂದುವರಿದರೆ ಇನ್ನಷ್ಟು ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆಯಿದ್ದು, ಈ ಹಿನ್ನೆಲೆಯಲ್ಲಿ 470 ಖಾಸಗಿ ಕೊಳವೆಬಾವಿಗಳನ್ನು ಈಗಾಗಲೇ ಗುರುತಿಸಲಾಗಿದೆ. ಅಗತ್ಯಬಿದ್ದಲ್ಲಿ ರೈತರಿಗೆ ಹಣ ಪಾವತಿಸಿ ನೀರು ಪಡೆಯುವ ವ್ಯವಸ್ಥೆ ಮಾಡುವ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಕುಡಿವ ನೀರು–ಮೇವಿಗೆ ಮೊದಲ ಆದ್ಯತೆ

ಮಳೆ ಕೊರತೆಯ ಹಿನ್ನೆಲೆಯಲ್ಲಿ ಪ್ರಸ್ತುತ ಪರಿಸ್ಥಿತಿಯಲ್ಲಿ ಜನರಿಗೆ ಕುಡಿವ ನೀರು ಹಾಗೂ ಜಾನುವಾರುಗಳಿಗೆ ಮೇವು ಒದಗಿಸುವುದಕ್ಕೆ ಜಿಲ್ಲಾ ಪಂಚಾಯಿತಿ ಹೆಚ್ಚಿನ ಆದ್ಯತೆ ನೀಡಿದೆ. ಒಂದು ಕಡೆ ಕುಡಿವ ನೀರಿನ ಸಮಸ್ಯೆ ಬಗೆಹರಿಸುವ ಸವಾಲು, ಮತ್ತೊಂದೆಡೆ ಜಾನುವಾರುಗಳ ಮೇವಿನ ಕೊರತೆ ತಪ್ಪಿಸುವ ಹೊಣೆಗಾರಿಕೆ ಜಿಪಂ ಮುಂದಿದೆ.

ಮಳೆ ಕೊರತೆಯಿಂದ ರಾಗಿ ಬೆಳೆ ನಷ್ಟವಾಗುವ ಸಾಧ್ಯತೆ ಹೆಚ್ಚಿದ್ದು, ಮುಂದಿನ ದಿನಗಳಲ್ಲಿ ಜಾನುವಾರುಗಳಿಗೆ ಒಣ ಹಾಗೂ ಹಸಿ ಮೇವಿನ ಕೊರತೆ ಎದುರಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಕುಡಿವ ನೀರು ಹಾಗೂ ಜಾನುವಾರುಗಳ ಮೇವಿಗೆ ಆದ್ಯತೆ ನೀಡಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಸುಮಾರು 70 ಎಕರೆ ಪ್ರದೇಶದಲ್ಲಿ ವಿಬಿಜಿ ರಾಮ್‌ಜೀ ಯೋಜನೆಯಡಿ ಹಸಿಹುಲ್ಲು ಬೆಳೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿ.ಪಂ ಸಿಇಒ ಡಾ. ವಾಸಂತಿ ಅಮರ್ ಹೇಳಿದ್ದಾರೆ.

Ramesh Babu

Journalist

Recent Posts

ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಜಿದ್ದಾಜಿದ್ದಿನ ಕಣ: ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ–ಜೆಡಿಎಸ್ ಮೈತ್ರಿಕೂಟದ ನಡುವೆ ನೇರ ಹಣಾಹಣಿ

ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ–ಜೆಡಿಎಸ್ ಮೈತ್ರಿಕೂಟದ…

2 hours ago

ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾದ ನಾಡಿನ ಅಧಿದೇವತೆ ತಾಯಿ ಶ್ರೀ ಚಾಮುಂಡೇಶ್ವರಿ: 750 ಕೆ.ಜಿ. ಚಿನ್ನದ ಅಂಬಾರಿ ಹೊತ್ತ ಪ್ರಶಾಂತ!

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ವಿಜಯದಶಮಿ ಅಂಗವಾಗಿ ಅರಮನೆ ಆವರಣದಲ್ಲಿ ನಡೆದ ಐತಿಹಾಸಿಕ ಜಂಬೂಸವಾರಿಗೆ ಶುಭ ಮೀನ ಲಗ್ನದಲ್ಲಿ…

16 hours ago

ಪ್ರಕ್ಷ್ಯುಬ್ಧ ವಿಶ್ವ….

ಕೊರೋನಾ ಮಾರಿಯ ನಂತರದಲ್ಲಿ ವಿಶ್ವದ ಒಟ್ಟಾರೆ ಪರಿಸ್ಥಿತಿ ಪ್ರಕ್ಶುಬ್ಧವಾಗಿಯೇ ಮುಂದುವರಿದಿದೆ. ಕೋವಿಡ್ ನಿಂದಾದ ನಷ್ಟದಿಂದ ಆರ್ಥಿಕ ಚೇತರಿಕೆ ಕಂಡುಕೊಳ್ಳಬೇಕಾದ ಸಂದರ್ಭದಲ್ಲಿ…

1 day ago

ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ: ಬಿಷ್ಣೋಯ್ ಗ್ಯಾಂಗ್ ಹೊಣೆ?

  ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿರುವುದಾಗಿ…

3 days ago

ಬೀದಿ ನಾಯಿಗಳ ದಾಳಿಗೆ 10ಕ್ಕೂ ಹೆಚ್ಚು ಕುರಿ, ಮೇಕೆ ಬಲಿ!: ದೂರು ನೀಡಿದರೂ ಕ್ರಮ ಕೈಗೊಳ್ಳದ ಪಂಚಾಯಿತಿ ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ

ದೇವನಹಳ್ಳಿ: ಬೀದಿ ನಾಯಿಗಳ ಗುಂಪೊಂದು ಕುರಿ, ಮೇಕೆಗಳ ಕೊಟ್ಟಿಗೆಗೆ ನುಗ್ಗಿ ದಾಳಿ ನಡೆಸಿದ ಪರಿಣಾಮ 10ಕ್ಕೂ ಹೆಚ್ಚು ಕುರಿ ಮತ್ತು…

4 days ago

ಅಕ್ರಮ ವಿದೇಶಿಗರ ಬೇಟೆಗೆ ಪೊಲೀಸ್ ಬಲೆ!- ಕೈಗಾರಿಕಾ ವಲಯಗಳ ಬಾಡಿಗೆ ಮನೆ, ಗೆಸ್ಟ್ ಗೌಸ್, ಲಾಡ್ಜ್‌ಗಳ ಮೇಲೆ ಹದ್ದಿನ ಕಣ್ಣು-ಡಿವೈಎಸ್ಪಿ ಪಾಂಡುರಂಗ

ಸಮರ್ಪಕ ದಾಖಲೆಗಳಿಲ್ಲದೆ ವಿದೇಶಗಳಿಂದ ಬಂದು ಜಿಲ್ಲೆಯಲ್ಲಿ ನೆಲೆಸಿರುವವರ ಪತ್ತೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಇಲಾಖೆ ವಿಶೇಷ ಕಾರ್ಯಾಚರಣೆ ಆರಂಭಿಸಿದೆ.…

4 days ago