ಬಯಲು ಸೀಮೆಯ ಜನರು ಕುಡಿಯುವ ನೀರಿನಲ್ಲಿ ಯುರೇನಿಯಂ ಅಂಶ ಪತ್ತೆ: ಅನಾರೋಗ್ಯ ಭೀತಿಯಲ್ಲಿ ಜನ- ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ

ಬಯಲು ಸೀಮೆಯ ಜನರು ಕುಡಿಯುವ ನೀರಿನಲ್ಲಿ ಯುರೇನಿಯಂ ಅಂಶ ಕಂಡು ಬಂದಿದೆ. ಈ ನೀರಿನ್ನು ಕುಡಿಯುವುದರಿಂದ ಕ್ಯಾನ್ಸರ್, ಕಿಡ್ನಿ ಮತ್ತು ಮೆದುಳಿನ ಸಂಬಂದಿಸಿದ ಕಾಯಿಲೆಗಳು ಹರಡುತ್ತವೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಆಂಜನೇಯ ರೆಡ್ಡಿ ಹೇಳಿದರು.

ನಗರ ಕನ್ನಡ ಜಾಗೃತ ಭವನದಲ್ಲಿ ಆಯೋಜಿಸಿದ್ದ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎತ್ತಿನ ಹೊಳೆ ಯೋಜನೆ ಜಾರಿಗೆ ತರಲು ಸುಮಾರು 30ವರ್ಷಗಳಿಂದ ಹೋರಾಟ ಮಾಡಿಕೊಂಡು ಬರಲಾಗಿದೆ. ಇಲ್ಲಿಯವರೆಗೆ ಒಂದು ಹನಿ ನೀರು ತರಲು ಸಾಧ್ಯವಾಗದೇ  ಅಧಿಕಾರಕ್ಕೆ ಸರ್ಕಾರಗಳು ಬಂದಿವೆ. ಎತ್ತಿನಹೊಳೆ ಶಾಶ್ವತ ನೀರಾವರಿ ಯೋಜನೆ ಜಾರಿಗೆ ತರಲಾಗುವುದು ಎಂದು ಹಲವಾರು ವರ್ಷಗಳಿಂದ ಸರ್ಕಾರಗಳು ರೈತರಿಗೆ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಾ ಅಧಿಕಾರ ಹಿಡಿದಿವೆ. ಆದರೆ ಇಲ್ಲಿಯವರೆಗೆ  8 ಸಾವಿರ  ಕೋಟಿಯಿಂದ 10 ಸಾವಿರದ ಈಗ 15 ರಿಂದ 20 ಸಾವಿರ ಕೋಟಿಯವರೆಗೂ ಖರ್ಚು ಮಾಡಿದರೂ ಯಾವುದೇ ಪ್ರಯೋಜನ ಇಲ್ಲದಂತಾಗಿದೆ ಎಂದರು.

ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ಕೋಲಾರದ ಈ ಬಾಗದ ರೈತರಿಗೆ ಶುದ್ಧ ಕುಡಿಯುವ ನೀರನ್ನು ಸಹ ಕೊಡಲಾಗದೆ ವಂಚಿಸಿದ್ದಾರೆ. ಬೆಂಗಳೂರು ನಗರದ ತ್ಯಾಜ್ಯ ನೀರನ್ನ ಎರಡು ಹಂತದಲ್ಲಿ ಸಂಸ್ಕರಣೆ ಮಾಡಿ ಕೆರೆಗಳಿಗೆ ತುಂಬಿಸಿ ಭಾಗಶಃ ಕೆರೆಗಳನ್ನು ನಾಶ ಮಾಡಿದ್ದು ಹಾಗೂ ಕೆರೆಗಳ  ನೀರನ್ನು  ಬೆಳೆಗೆ ಹರಿಸುವುದರಿಂದ ಬೆಳೆಗಳು ಸಹ ವಿಷಯುಕ್ತ ನೀರಿನಿಂದ ಬೆಳೆ ಬಾರದೆ ರೈತರು ಕಂಗಾಲಾಗಿದ್ದಾರೆ. ಅಲ್ಪಪ್ರಮಾಣದ ಬೆಳೆಗಳಿಂದ ಆರೋಗ್ಯ ಹಾನಿಯುಂಟಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಕೆರೆಗಳ ಪಕ್ಕದಲ್ಲಿ ಕೊರೆದಂತಹ ಕೊಳವೆ ಬಾವಿಗಳಿಂದ ಗೃಹ ಬಳಕೆಗೆ ಸರಬರಾಜು ಮಾಡಿದ ನೀರು ಕುಡಿಯುವುದರಿಂದ ಮನುಷ್ಯ ಹಾಗೂ ಜಾನುವಾರುಗಳ ಮೇಲೆ ಅಪಾಯಕಾರಿ ದುಷ್ಪರಿಣಾಮ ಬೀರುವಂತಹದು ಕಂಡುಬಂದಿದೆ ಎಂದು ಹೇಳಿದರು.

2022ರಲ್ಲಿ  ಭಾರತೀಯ ವಿಜ್ಞಾನ ಸಂಸ್ಥೆ ಬೆಂಗಳೂರು ಇವರು ಚಿಕ್ಕಬಳ್ಳಾಪುರ ಕೋಲಾರದ ಭಾಗದಲ್ಲಿ ಕೊಳವೆ ಬಾವಿಯ ನೀರನ್ನು ಪರೀಕ್ಷೆ ಮಾಡಿದಂತಹ ಸಂದರ್ಭದಲ್ಲಿ ನೀರಿನಲ್ಲಿ ಯುರೇನಿಯಂ ಅಂಶ ಕಂಡುಬಂದಿರುವುದನ್ನ ಖಾತರಿಪಡಿಸಿದೆ, ಇದು ಆಘಾತಕಾರಿ ಸಂಗತಿಯಾಗಿದೆ. ಈ ನೀರು ಕುಡಿಯುವುದರಿಂದ ಕ್ಯಾನ್ಸರ್, ಕಿಡ್ನಿಯ ಮತ್ತು ಮೆದುಳಿಗೆ ಸಂಬಂಧಿಸಿದಂತಹ ಕಾಯಿಲೆಗಳಿಗೆ ಜನರು ತುತ್ತಾಗುವುದು ಕಂಡುಬಂದಿದೆ ಎಂದರು.

ಈ ಸಂದರ್ಭದಲ್ಲಿ ಕನ್ನಡ ಪಕ್ಷದ ಹಿರಿಯ ಮುಖಂಡ  ಸಂಜೀವ್ ನಾಯಕ, ತಾಲ್ಲೂಕು ಅಧ್ಯಕ್ಷ ವೆಂಕಟೇಶ್, ಹನುಮೇಗೌಡ, ಶಿರವಾರ ರವಿ ರೈತಹೋರಾಟಗಾರ ಸತೀಶ್ ಭಾಗವಹಿಸಿದ್ದರು.

Leave a Reply

Your email address will not be published. Required fields are marked *