ನಗರದ ತಾಲ್ಲೂಕು ಕಚೇರಿ ಆವರಣದಲ್ಲಿನ ಅಂಗನವಾಡಿ ಕಟ್ಟಡದ ಸುತ್ತ ಇರುವ ಖಾಲಿ ಜಾಗವನ್ನು ಬಯಲು ಶೌಚಾಲಯವನ್ನಾಗಿಸಿಕೊಂಡು ದಿನನಿತ್ಯ ಮೂತ್ರ ವಿಸರ್ಜನೆ ಮಾಡುತ್ತಿರುವ ಸಾರ್ವಜನಿಕರು.
ತಾಲೂಕು ಕಚೇರಿಗೆ ಪ್ರತಿದಿನ ನೂರಾರು ಮಂದಿ ಕೆಲಸ ಕಾರ್ಯಕ್ಕೆ ಬರುತ್ತಾರೆ. ಸಾರ್ವಜನಿಕರಿಗೆಂದೇ ಕಚೇರಿ ಪಕ್ಕದಲ್ಲೇ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ಆದರೆ ಅದನ್ನು ಸರಿಯಾಗಿ ಬಳಸಿಕೊಳ್ಳದ ಸಾರ್ವಜನಿಕರು ಹಾಗೂ ಸ್ಥಳೀಯರು ಕಚೇರಿ ಆವರಣದಲ್ಲಿ ಇರುವ ಅಂಗನವಾಡಿ ಕೇಂದ್ರದ ಪಕ್ಕದ ಜಾಗದಲ್ಲಿ ಮೂತ್ರ ವಿಸರ್ಜನೆ ಮಾಡಿ ಮಲಿನಗೊಳಿಸುತ್ತಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ಈ ಕುರಿತು ಮಾತನಾಡಿದ ಅಂಗನವಾಡಿ ಕಾರ್ಯಕರ್ತೆ ಚಿನ್ನಮ್ಮಯ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕಟ್ಟದ ಸುತ್ತಲೂ ಇಲ್ಲಿನ ಸ್ಥಳೀಯರು ಬೆಳ್ಳಂ ಬೆಳಗ್ಗೆ ಮತ್ತು ಸಂಜೆ ವೇಳೆ ಬಂದು ಗಲೀಜು ಮಾಡಿ ಹೋಗುತ್ತಿದ್ದಾರೆ,
ನಮ್ಮ ಅಂಗನವಾಡಿಯಲ್ಲಿ 17 ರಿಂದ 20 ಮಕ್ಕಳಿದ್ದು, ಮಕ್ಕಳ ಅಡುಗೆ ಮತ್ತು ಶೌಚಾಲಯಕ್ಕಾಗಿ ಪಕ್ಕದಲ್ಲೆ ಇರುವ ಸರ್ಕಾರಿ ಪ್ರಾಥಮಿಕ ಶಾಲೆಯಿಂದ ನೀರಿನ ಸಂಪರ್ಕವನ್ನು ಪೈಪ್ ಮುಖಾಂತರ ನಮ್ಮ ಅಂಗನವಾಡಿ ಮತ್ತು ಶಾಲಾ ಕಾಂಪೌಂಡ್ ನಡುವೆ ಹಾಕಿಸಿಕೊಳ್ಳಲಾಗಿದೆ.
ಆದರೆ ಇದೇ ನಲ್ಲಿಯನ್ನು ಜನರು ಬಯಲು ಶೌಚಾಲಕ್ಕೆ ಹೋದ ಬಳಿಕ ಇಲ್ಲಿಯ ನಲ್ಲಿಯ ನೀರನ್ನು ಬಳಸುತ್ತಾರೆ. ಅಂಗನವಾಡಿ ಆವರಣವನ್ನು ಗಬ್ಬುನಾರುವಂತೆ ಮಾಡುತ್ತಿದ್ದಾರೆ, ನಿತ್ಯ ಅಂಗನವಾಡಿಯಲ್ಲಿ ಮಕ್ಕಳೊಂದಿಗೆ ಮೂಗು ಮುಚ್ಚಿಕೊಂಡು ಒರುವಂತ ಪರಿಸ್ಥಿತಿ ನಿರ್ಮಾಣವಗಿದೆ. ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುವ ಭಯದ ಪರಿಸ್ಥಿತಿಯಲ್ಲಿ ಇದ್ದೇವೆ ಎಂದು ಹೇಳಿದರು.
ಶಾಲಾ ಆವರಣವನ್ನು ಸ್ವಚ್ಚವಾಗಿಡುವಂತೆ ಅನೇಕ ಬಾರಿ ನಗರಸಭೆಗೆ ಮನವಿ ಪತ್ರ ಸಲ್ಲಿಸಿದ್ದರೂ ಪೌರಾಯುಕ್ತರಾಗಲಿ ಅಥವಾ ನಗರಸಭಾ ಸಿಬ್ಬಂದಿಯಾಗಲಿ ಮನವಿಗೆ ಸ್ಪಂದಿಸಿಲ್ಲ ಎಂದು ಅಂಗನವಾಡಿ ಕಾರ್ಯಕರ್ತೆ ಮತ್ತು ಪೋಷಕರು ಆರೋಪಿಸುತ್ತಿದ್ದಾರೆ.
ಮಕ್ಕಳ ಆರೋಗ್ಯ ಹಿತದೃಷ್ಟಿಯಿಂದ ಇನ್ನಾದರೂ ಅಧಿಕಾರಿಗಳು ಮತ್ತು ನಗರಸಭಾ ಸದಸ್ಯರು ಇತ್ತ ಗಮನಹರಿಸಿ ಸಮಸ್ಯೆಯನ್ನು ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಂಗನವಾಡಿ ಕಾರ್ಯಕರ್ತೆ ಮತ್ತು ಪೋಷಕರು ಮನವಿ ಮಾಡಿಕೊಳ್ಳುತ್ತಿದ್ದಾರೆ.