ನನಗೇನು ಯಾವ ಕಾನೂನು ತೊಡಕು ಇಲ್ಲ. ಬಮೂಲ್ ರಣಕಣದಲ್ಲಿ ಶಾಸಕ ಧೀರಜ್ ಮುನಿರಾಜ್ ರಥ ಓಡಿಸುತ್ತಾರೆ. ನಾನು ಯುದ್ಧ ಮಾಡಿ ಗೆಲುವು ಸಾಧಿಸುತ್ತೇವೆ. ಕಾಂಗ್ರೆಸ್ ಹಾಗೂ ಜೆಡಿಎಸ್ ನವರ ಆರೋಪ ಸತ್ಯಕ್ಕೆ ದೂರವಾದದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ನವರು ನಾವು ಮಾಡಿದ್ದೇ ಕಾನೂನು, ಹೇಳಿದ್ದೇ ಕಾನೂನು ಅಂದು ಕೊಂಡಿದ್ದಾರೆ. ನಮ್ಮ ತಾಲೂಕಿನಲ್ಲಿ 201 ಡೈರಿ ಅಧ್ಯಕ್ಷರು ಇದ್ದಾರೆ. ಆ 201 ಅಧ್ಯಕ್ಷರೆಲ್ಲರೂ ನನಗೆ ಮತ ನೀಡುತ್ತಾರೆ ಎಂಬ ನಂಬಿಕೆ ನನಗಿದೆ. ಒಂದು ವೇಳೆ ಕಾನೂನು ತೊಡಕಾದರೆ ಇನ್ನೊಂದು ಬಾರಿ ಚುನಾವಣೆಯಾಗಲಿ ಬಿಡಿ, ನಮ್ಮ ಅಧ್ಯಕ್ಷರುಗಳು ಚೆನ್ನಾಗಿರುತ್ತಾರೆ ಎಂದು ಬಿಜೆಪಿ ಅಭ್ಯರ್ಥಿ ಬಿ.ಸಿ ಆನಂದ್ ಹೇಳಿದರು.
ದೇವೇಗೌಡರು ಕಟ್ಟಿದಂತಹ ಜೆಡಿಎಸ್ ನ ಪ್ರಾಮಾಣಿಕ ಕಾರ್ಯಕರ್ತರು ನಮ್ಮ ಪರ ಇದ್ದಾರೆ. ನಾನು ಹಾಲು ಉತ್ಪಾದಕರನ್ನು ನಂಬಿದ್ದೇನೆ. ಕಾಂಗ್ರೆಸ್ ಪಕ್ಷದಲ್ಲಿದ್ದಾಗ ನಾನು ಅಪಾರವಾದ ಸೇವೆ ಮಾಡಿದ್ದೇನೆ. ಆಗ ನನಗೆ ಎಲ್ಲಾರು ಪಕ್ಷಾತೀತವಾಗಿ ವೋಟ್ ಮಾಡಿ ಗೆಲ್ಲಿಸಿದ್ದಾರೆ. ಕಳೆದ ಬಾರಿ ನಾನು 140 ಮತ ಪಡೆದು ಗೆದ್ದಿದ್ದೆ. ಗೆದ್ದು ಅಧಿಕಾರಕ್ಕೆ ಬಂದ ಮೇಲೆ ಪಕ್ಷ ಮರೆತು ಪಕ್ಷಾತೀತವಾಗಿ ಕೆಲಸ ಮಾಡಿದ್ದೇನೆ. ಕೆಲವೊಂದು ಸೊಸೈಟಿಗಳಿಗೆ ಕಾಂಗ್ರೆಸ್ ನವರು ಅಧ್ಯಕ್ಷರಾಗಿದ್ದರು ಸಹ ಅವರಿಗೆ ಶಾಸಕ ಧೀರಜ್ ಮುನಿರಾಜ್ ಅವರು ತಲಾ ಎರಡು ಲಕ್ಷ ಅನುದಾನ ನೀಡಿದ್ದಾರೆ. ನಮಗೆ ಪಕ್ಷ ಭೇದವಿಲ್ಲ. ಕೆಲವರಿಗೆ ಪಕ್ಷದ ಹುಚ್ಚು ಹಿಡಿದಿದೆ..ಎಲ್ಲರಲ್ಲೂ ಕೇಳಿಕೊಳ್ಳುವುದಿಷ್ಟೇ ಎಂಎಲ್ ಎ, ಎಂಪಿ, ಜಿ.ಪಂ, ತಾ.ಪಂ ಸೇರಿದಂತೆ ಇತರೆ ಚುನಾವಣೆಗಳಿಗೆ ರಾಜಕೀಯ ಮಾಡಿ, ಆದರೆ, ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ರಾಜಕೀಯ ಮಾಡಬೇಡಿ, ರಾಜಕಾರಣ ಮಾಡಿ ಊರಲ್ಲಿರುವ ಅಣ್ಣ-ತಮ್ಮ ಸಂಬಂಧಗಳನ್ನ ಹಾಳು ಮಾಡಬೇಡಿ ಎಂದು ಕೋರಿದರು.
ಹಾಲಿನ ಡೈರಿ ದೇವಸ್ಥಾನ ಇದ್ದಂತೆ. ಅಲ್ಲಿ ಪ್ರಾಮಾಣಿಕರು ಇದ್ದಾರೆ. ದುಡ್ಡು ಕೊಟ್ಟು ಅಥವಾ ಪಡೆದು ಯಾರೂ ಡೈರಿ ಅಧ್ಯಕ್ಷರಾಗಿಲ್ಲ. 201 ಜನ ಅಧ್ಯಕ್ಷರು ನನ್ನ ಪ್ರಾಮಾಣಿಕತೆ, ಕೆಲಸ ನೋಡಿ ನನಗೆ ಮತ ನೀಡಿ ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ಇದೆ ಎಂದರು.
ನನ್ನನ್ನು ಸೋಲಿಸುವ ಅಜೆಂಡಾ ಫಲಿಸಲ್ಲ. ನನ್ನ ಅಧಿಕಾರ ಅವಧಿಯಲ್ಲಿ ಎಲ್ಲಿಯೂ ಸಹ ಹೆಸರು ಕೆಡಿಸಿಕೊಳ್ಳುವ ಕೆಲಸ ಮಾಡಿಲ್ಲ. ಒಂದು ವೇಳೆ ಮಾಡಿದ್ದರೆ ನನಗೆ ವೋಟ್ ಹಾಕಿ ಗೆಲ್ಲಿಸುವುದು ಬೇಡ, ಜೆಡಿಎಸ್ ಹಾಗೂ ಕಾಂಗ್ರೆಸ್ ನವರು ಚುನಾವಣೆ ಹಿನ್ನೆಲೆ ಈಗ ಹೊರ ಬಂದಿದ್ದಾರೆ. ಹಾಲು ಉತ್ಪಾದಕರಿಗೆ ಕಷ್ಟ ಬಂದಾಗ, ಹಸುಗಳು ಸತ್ತಾಗ ರೈತರ ನೆರವಿಗೆ ಬಾರದೇ ಇವರು ಎಲ್ಲಿ ಹೋಗಿದ್ದರು. ಇದೆಲ್ಲಾ ಜನ ಗಮನಿಸುತ್ತಿದ್ದಾರೆ. ಸತ್ಯಕ್ಕೆ, ಪ್ರಾಮಾಣಿಕತೆಗೆ ಜಯ ಸಿಕ್ಕೇ ಸಿಗುತ್ತದೆ ಎಂದರು.
ಕಾಂಗ್ರೆಸ್ ನವರಿಗೆ ನನ್ನ ಮೇಲೆ ದ್ವೇಷ ಇದ್ದೇ ಇರುತ್ತದೆ. ನಾನು ಕೂಲಿ ಮಾಡಿಕೊಂಡು ಇದ್ದೆ, ನನ್ನನ್ನು ಬೆಳೆಸಿದ್ದು ರಂಗರಾಜು, ರಂಗರಾಜು ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಅವಮಾನವಾಗಿತ್ತು. ಆದ್ದರಿಂದ ಅವರು ಅಲ್ಲಿಂದ ಬಿಜೆಪಿಗೆ ಬಂದರು. ಅವರು ಬಂದರೆಂದು ನಾನು ಬಿಜೆಪಿಗೆ ಬಂದೆ. ನಾನು ಕಾಂಗ್ರೆಸ್ ನಲ್ಲಿದ್ದಾಗ ಡಿಸಿಎಂ ಡಿಕೆಶಿಯಿಂದ ಹಿಡಿದು ರಾಜ್ಯದ ಕೆಲ ನಾಯಕರು ನನ್ನನ್ನು ಗುರುತಿಸುವ ಮಟ್ಟಕ್ಕೆ ಇದ್ದೆ. ಹೀಗಿದ್ದಾಗ ನನ್ನನ್ನು ಆ ಮಟ್ಟಕ್ಕೆ ಬೆಳೆಸಿದವರು ಕಾಂಗ್ರೆಸ್ ಪಕ್ಷದಲ್ಲಿ ಇಲ್ಲ ಅಂದ ಮೇಲೆ ನಾನು ಏನಕ್ಕೆ ಇರಬೇಕು, ನನ್ನನ್ನು ಬೆಳೆಸಿದವರಿಗಾಗಿ ಪಕ್ಷಾಂತರವಾದೆ ಅಷ್ಟೆ. ನಾನು ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡರಿಗೆ ಯಾವತ್ತೂ ಏನೂ ಮೋಸ ಮಾಡಿಲ್ಲ. ನಾನು ಪ್ರಾಮಾಣಿಕವಾಗಿ ಇದ್ದೀನಿ, ಆದರೆ ಅವರಿಗೆ ತಪ್ಪು ಸಂದೇಶ, ತಿಳುವಳಿಕೆಯಿಂದ ಕಾಂಗ್ರೆಸ್ ಬೆಂಬಲ ಕೋರಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ಮನವರಿಕೆ ಆಗುತ್ತದೆ ಎಂದರು.
ಇದೀಗ ನನ್ನ ವಿರುದ್ಧ ನಿಂತಿರುವ ಜೆಡಿಎಸ್ ಅಭ್ಯರ್ಥಿ ಹುಸ್ಕೂರ್ ಆನಂದ್ ಅವರ ನಿಜ ಸ್ವರೂಪ ಎಲ್ಲರಿಗೂ ಗೊತ್ತಿದೆ… ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡರು ವಿನಾ ಕಾರಣ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಅದು ಅವರಿಗೇ ಮುಳುವಾಗುತ್ತದೆ. ನನಗೇನು ಆಗಲ್ಲ ಎಂದರು.
2019ರಲ್ಲಿ ಬಮೂಲ್ ಚುನಾವಣೆ ನಡೆದಾಗ ನಮ್ಮತ್ರ ಇದ್ದಿದ್ದು 33 ವೋಟ್, ನನಗೆ ಬಂದಿದ್ದು 140 ಮತ. ನನಗೆ 33 ವೋಟ್ ಬಂದಿದ್ದರೆ ನಾನು ಕಾಂಗ್ರೆಸ್ ನಿಂದ ಗೆದ್ದೆ ಅಂದುಕೊಳ್ಳುತ್ತಿದ್ದೆ. ಆದರೆ ನನಗೆ ಪಕ್ಷಾತೀತವಾಗಿ ಮತ ಬಂದಿದೆ. ಟಿ.ವೆಂಕಟರಮಣಯ್ಯ ತಾಲೂಕಿನಲ್ಲಿ 10ವರ್ಷ ಶಾಸಕರಾಗಿದ್ದವರು ಏಕೆ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಯನ್ನು ನಿಲ್ಲಿಸಲಿಲ್ಲ. ನೀವು ನನ್ನನ್ನು ಸೋಲಿಸಬೇಕೆಂದುಕೊಂಡಿದ್ದರೆ ಪಕ್ಷದಿಂದ ಅಭ್ಯರ್ಥಿಯನ್ನ ನಿಲ್ಲಿಸಬೇಕಿತ್ತು. ಅದನ್ನು ಬಿಟ್ಟು ಜೆಡಿಎಸ್ ಗೆ ಬೆಂಬಲ ಸೂಚಿಸಿ ರಾಜಕಾರಣದ ಅನೈತಿಕ ಸಂಬಂಧವನ್ನ ಇಟ್ಟಿಕೊಳ್ಳುವುದು ಏಕೆ..? ಇಡೀ ರಾಜ್ಯದಲ್ಲಿ ರಾಜಕಾರಣದ ಅನೈತಿಕ ಸಂಬಂಧ ನಡೆದಿದೆ ಎಂದರೆ ಅದು ದೊಡ್ಡಬಳ್ಳಾಪುರದಲ್ಲಿ ಎಂದು ಕಿಡಿಕಾರಿದರು….