ಹಾಲು ಉತ್ಪಾದಕರಿಂದ ಕೇವಲ ಹಾಲನ್ನು ಕೊಳ್ಳುವ ವ್ಯವಹಾರ ಮಾತ್ರ ಮಾಡದೆ ಅವರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಬಮೂಲ್ ಮತ್ತು ಕೆಎಂಎಫ್ ರೂಪಿಸಿದ್ದು ಅವುಗಳನ್ನು ಸದ್ಭಳಕೆ ಮಾಡಿಕೊಂಡು ರೈತರು ಆರ್ಥಿಕವಾಗಿ ಸದೃಢರಾಗಬೇಕೆಂದು ಕೆಎಂಎಫ್ ಮತ್ತು ಬಮೂಲ್ ನಿರ್ದೇಶಕ ಬಿಸಿ ಆನಂದ್ ಕುಮಾರ್ ತಿಳಿಸಿದರು.
ನಗರದ ಡಾ.ಬಾಬು ಜಗ ಜೀವನ್ ರಾಂ ಭವನದಲ್ಲಿ ಬೆಂಗಳೂರು ಹಾಲು ಒಕ್ಕೂಟ ಹಾಗೂ ಬಮೂಲ್ ಕಲ್ಯಾಣ ಟ್ರಸ್ಟ್ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಮೂಲ್
ರೈತರೊಂದಿಗೆ ಕೇವಲ ಹಾಲು ಕೊಳ್ಳುವ ವ್ಯಾಪಾರ ಮಾಡದೆ ಬಂದ ಲಾಭವನ್ನು ರೈತರಿಗೆ ನೀಡಲಾಗುತ್ತದೆ, ಹಾಗೆಯೇ ಪ್ರತಿಭಾ ಪುರಸ್ಕಾರ, ವಿಮಾ ಯೋಜನೆ, ಹೈನುಗಾರಿಕೆ ಯಂತ್ರಗಳಿಗೆ ಸಹಾಯಧನ, ತರಬೇತಿ ಹೀಗೆ ಹಲವಾರು ಯೋಜನೆಗಳಿಗೆ ಬಮೂಲ್ ಅನುದಾನ ಒದಗಿಸುತ್ತಿದೆ ಎಂದರು.
ಎಂಪಿಸಿಎಸ್ ಸಂಘದ ಕಾರ್ಯದರ್ಶಿಗಳು ಹಾಗೂ ಸಿಬ್ಬಂದಿಗಳು ಬಮೂಲ್‌ನಿಂದ ಸಿಗುವ ಸವಲತ್ತುಗಳ ಬಗ್ಗೆ ರೈತರಿಗೆ ತಿಳಿಸಿ, ಅಗತ್ಯವಿದ್ದವರಿಗೆ ಅವುಗಳನ್ನು ತಲುಪಿಸುವ ಕೆಲಸ ಮಾಡಬೇಕು, ಯಾರೂ ಈ ಯೋಜನೆಗಳಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದರು.
ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಜೀವನದಲ್ಲಿ ರ್ಯಾಂಕ್, ಗೋಲ್ಡ್ ಮೆಡಲ್ ಗಳನ್ನು ಪಡೆಯದೆ ಇದ್ದರೂ ಪರವಾಗಿಲ್ಲ, ತಂದೆ ತಾಯಿಗಳಿಗೆ ಗೌರವ ಬರುವಂತ ಕೆಲಸ ಮಾಡಿ. ವಿದ್ಯೆ ಜೊತೆಗೆ ವಿನಯವನ್ನು ಕಲಿಯಬೇಕು. ನಿಮ್ಮ ನಡೆ-ನುಡಿ ಶುದ್ಧವಾಗಿರಬೇಕು. ವಿದ್ಯಾರ್ಥಿಗಳು ಉತ್ತಮ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಶ್ರಮಿಸಬೇಕೆ ವಿನಃ ದುಶ್ಚಟಗಳಿಗೆ ದಾಸರಾಗಿ ತಪ್ಪು ದಾರಿ ತುಳಿಯಬಾರದು ಬಿಸಿ ಆನಂದ್ ಕುಮಾರ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು
ಶಾಸಕ ವೆಂಕಟರಮಣಯ್ಯ ಮಾತನಾಡಿ ಹೈನುಗಾರಿಕೆಗೆ ಕಾಂಗ್ರೆಸ್ ಸರಕಾರ ಹೆಚ್ಚಿನ ಪ್ರೋತ್ಸಾಹ ನೀಡಿತ್ತು. ಬೆಲೆ ಏರಿಕೆ ಯಿಂದಾಗಿ ಹೈನುಗಾರಿಕೆಯಿಂದ ರೈತರು ವಿಮುಖರಾಗುತ್ತಿರುವುದು ದುರಂತ. ಕಾಂಗ್ರೆಸ್ ಸರಕಾರ ರೈತರ ಬಳಕೆಯ ಅನೇಕ ವಸ್ತುಗಳಿಗೆ ತೆರಿಗೆ ವಿಧಿಸಿರಲಿಲ್ಲ. ಈಗ ಹಿಂಡಿ-ಬೂಸ ದಿಂದ ಪ್ರತಿಯೊಂದಕ್ಕೂ ತೆರಿಗೆ ವಿಧಿಸಿ ರೈತರನ್ನು ಬೀದಿಗೆ ತರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಎಂಎಫ್ ನಿರ್ದೇಶಕ ಬಿಸಿ ಆನಂದ್ ಕುಮಾರ್ ಅವರು ವೈಯಕ್ತಿಕವಾಗಿ 135 ವಿದ್ಯಾರ್ಥಿಗಳಿಗೆ ತಲಾ ಎರಡು ಸಾವಿರ ರೂ.ಗಳನ್ನು ಪ್ರೋತ್ಸಾಹಧನವಾಗಿ ವಿತರಣೆ ಜೊತೆಗೆ ಟ್ರಸ್ಟ್ ವತಿಯಿಂದ ವಿವಿಧ ವಿದ್ಯಾರ್ಥಿಗಳಿಗೆ ಒಟ್ಟು 12 ಲಕ್ಷ 72 ಸಾವಿರ ರೂ.ಗಳನ್ನು ಪ್ರತಿಭಾ ಪುರಸ್ಕಾರ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಟಿಎಪಿಎಂಸಿಎಸ್ ಅಧ್ಯಕ್ಷ ಅಂಜನೇಗೌಡ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಲಕ್ಷ್ಮೀನಾರಾಯಣ, ಮುಖಂಡರಾದ ರಾಮಕೃಷ್ಣ, ಕಸವನಹಳ್ಳಿ ಅಂಬರೀಶ್, ವೆಂಕಟೇಶ್ ಮತ್ತಿತರರು ಇದ್ದರು.