Categories: ಲೇಖನ

ಬದುಕೊಂದು ಪ್ರಯೋಗ ಶಾಲೆ….

” ನಿಜವಾದ ಪ್ರೀತಿ ಮತ್ತು ಸತ್ಯವು ಯಾವುದೇ ದುಷ್ಟ ಶಕ್ತಿ ಅಥವಾ ದುರಾದೃಷ್ಟಕ್ಕಿಂತಲೂ ಪ್ರಬಲ…..”

ಚಾರ್ಲ್ಸ್ ಡಿಕನ್ಸ್…….

ಇತ್ತ ಕಡೆ,
” ಭೀತಿ ಇಲ್ಲದೆ ಪ್ರೀತಿ ಸಾಧ್ಯವಿಲ್ಲ ” ಎಂದೂ ಲೋಕರೂಡಿಯಾಗಿ ಮತ್ತು ವ್ಯಾವಹಾರಿಕವಾಗಿ ಹೇಳಲಾಗುತ್ತದೆ………..

ಚಾರ್ಲ್ಸ್ ಡಿಕನ್ಸ್ ಇಂಗ್ಲೆಂಡಿನ ಪ್ರಖ್ಯಾತ ಬರಹಗಾರ ಮತ್ತು ಚಿಂತಕ.

ಈ ಎರಡೂ ಹೇಳಿಕೆಗಳ ವೈರುಧ್ಯಗಳು ನಮ್ಮನ್ನು ಜೀವನ ಪರ್ಯಂತ ಕಾಡುತ್ತದೆ. ಅದರಲ್ಲೂ ಭಾರತೀಯ ಸಮಾಜದಲ್ಲಿ ನಾವು ಪ್ರೀತಿ ಮತ್ತು ಸತ್ಯದ ಹಾದಿಯಲ್ಲಿ ನಡೆಯಬೇಕೆ, ವ್ಯಾವಹಾರಿಕ ಹಾದಿಯಲ್ಲಿ ಸಾಗಬೇಕೆ, ಸ್ವಾರ್ಥದ ಪರಿಧಿಯಲ್ಲಿ ಜೀವಿಸಬೇಕೆ, ನಾವು ಇಚ್ಚಿಸುವ ಯಶಸ್ಸಿಗೆ ಯಾವುದು ಮಾನದಂಡ ಎಂಬುದು ಈಗಲೂ ಸ್ಪಷ್ಟವಾಗಿಲ್ಲ.

ಡಿಕನ್ಸ್ ಹೇಳಿದಂತೆ ನಿಜವಾದ ಪ್ರೀತಿ ಮತ್ತು ಸತ್ಯ ದುಷ್ಟ ಶಕ್ತಿ ಮತ್ತು ದುರಾದೃಷ್ಟಕ್ಕಿಂತಲೂ ಪ್ರಬಲ ಎನ್ನುವದಾದರೆ ಜಗತ್ತನ್ನು ಪ್ರೀತಿ ಮತ್ತು ಸತ್ಯ ಆಳಬೇಕಿತ್ತು. ಆದರೆ ವಾಸ್ತವ ಹಾಗಿಲ್ಲ. ದ್ವೇಷ, ಅಸೂಯೆ, ಸುಳ್ಳುಗಳು ಈ ಜಗತ್ತನ್ನು ಸುತ್ತುವರಿದಿವೆ. ವೈಯಕ್ತಿಕವಾಗಿ ಮಾತ್ರ ಎಲ್ಲೋ ಕೆಲವು ಕಡೆ ಪ್ರೀತಿ ಮತ್ತು ಸತ್ಯ ತಣ್ಣಗೆ ಉಸಿರಾಡುತ್ತಿದೆ.

ನಮ್ಮ ನೆಲದಲ್ಲೇ ಬುದ್ಧ, ಮಹಾವೀರ, ಗಾಂಧಿಯವರು ಇದೇ ವಿಷಯಗಳಿಗೆ ಮಹತ್ವ ನೀಡಿ ತಮ್ಮ ಬದುಕನ್ನೇ ಇದಕ್ಕಾಗಿ ಪ್ರಯೋಗಶಾಲೆ ಮಾಡಿಕೊಂಡಿದ್ದರು.

ಈಗ ಈ ಕ್ಷಣದಲ್ಲಿ ನಾವು ನಿಂತ ನೆಲೆಯಲ್ಲಿ, ನಮ್ಮ ಅರಿವು ಅನುಭವದ ಆಧಾರದ ಮೇಲೆ ಪ್ರೀತಿ ಮತ್ತು ಸತ್ಯದ ಶಕ್ತಿಯನ್ನು ಆತ್ಮಾವಲೋಕನ ಮಾಡಿಕೊಳ್ಳೋಣ. ಏಕೆಂದರೆ ಅದು ನಮ್ಮ ನಮ್ಮ ಆತ್ಮಕ್ಕೆ ಮಾತ್ರ ಅರ್ಥವಾಗುವಂತದ್ದು. ಇಲ್ಲಿ ಒಂದು ಅಭಿಪ್ರಾಯ ವ್ಯಕ್ತಪಡಿಸಬಹುದೇ ಹೊರತು ಚರ್ಚೆಗೆ ಹೆಚ್ಚಿನ ಅವಕಾಶ ಇಲ್ಲ.

ಪ್ರೀತಿ ಮತ್ತು ಸತ್ಯದಿಂದ ನಾವು ಬದುಕನ್ನು ಗೆಲ್ಲಬಹುದೆ, ನಮ್ಮ ನಂಬಿಕೆಯ ಮೋಕ್ಷದೆಡೆಗೆ ಸಾಗಬಹುದೆ, ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ಯಶಸ್ವಿ ಮಾರ್ಗ ಸಿಗಬಹುದೇ ?????
ಸತ್ಯ ಮತ್ತು ಪ್ರೀತಿಯ ಮಾರ್ಗ ಹಿಡಿದ ಜನರು ಸುಳ್ಳು ಮತ್ತು ದ್ವೇಷ ಮನೋಭಾವದ ಜನರಿಗಿಂತ ನೆಮ್ಮದಿಯಾಗಿದ್ದಾರೆಯೇ ????

ಪ್ರೀತಿ ಮತ್ತು ಸತ್ಯ ನಮಗೆ ಜೀವನದ ಬಾಲ್ಯದ ಹಂತದಲ್ಲೇ ಅನುಭವಕ್ಕೆ ಬರತೊಡಗುತ್ತದೆ. ಅದರ ಜೊತೆಗೇ ದ್ವೇಷ ಮತ್ತು ಸುಳ್ಳುಗಳು ಸಹ ಅರಿವಾಗತೊಡಗುತ್ತದೆ.

ನಮ್ಮ ಮುಂದೆ ಈ ಎರಡೂ ಆಯ್ಕೆಗಳು ಸದಾ ಮುಕ್ತವಾಗಿರುತ್ತದೆ. ತಾಯಿ, ತಂದೆ, ಒಡಹುಟ್ಟಿದವರು, ಕುಟುಂಬ, ಸಮಾಜ, ಪರಿಸರ ಎಲ್ಲವೂ ನಮ್ಮನ್ನು ರೂಪಿಸತೊಡಗುತ್ತದೆ. ಭೋದನೆಯ ರೂಪದಲ್ಲಿ ನಮಗೆ ಪ್ರೀತಿ ಮತ್ತು ಸತ್ಯ ಸದಾ ಸಿಗುತ್ತದೆ. ವಾಸ್ತವದಲ್ಲಿ ಅದಕ್ಕೆ ವಿರುದ್ಧ ನಡವಳಿಕೆಯ ಜನರೇ ಸಿಗುತ್ತಾರೆ ಮತ್ತು ನಮಗೂ ಸಹ ಅಸತ್ಯ ಮತ್ತು ದ್ವೇಷಗಳು ಸುಲಭ ಮಾರ್ಗಗಳಾಗಿ ಉಪಯೋಗಕ್ಕೆ ಬರತೊಡಗುತ್ತದೆ.

ಸತ್ಯ ಹೇಳಿ ಪಡಬಾರದ ಕಷ್ಟ ಪಟ್ಟ ಹರಿಶ್ಚಂದ್ರನ ಕಥೆ ಮತ್ತು ಸುಳ್ಳು ಹೇಳಿ ಹಣ ಅಧಿಕಾರಗಳಿಸಿದ ಜನರ ನಡುವೆ ನಮ್ಮ ಆಯ್ಕೆ ಸಹಜವಾಗಿ ಭೌತಿಕ ಜಗತ್ತಿನ ಯಶಸ್ಸೇ ಆಗಿರುತ್ತದೆ.

ಇಲ್ಲಿ ಇನ್ನೊಂದು ಬಹುಮುಖ್ಯ ಅಂಶ ಅಡಕವಾಗಿದೆ. ನಿಜವಾದ ಪ್ರೀತಿ ಮತ್ತು ಸತ್ಯ ಬೇರೆ, ತೋರಿಕೆಯ ಅಥವಾ ನಮಗೆ ಅನುಕೂಲಕರ ಲಾಭಗಳನ್ನು ನಾವು ಪ್ರೀತಿ ಮತ್ತು ಸತ್ಯವೆಂದು ಭಾವಿಸಿ ಅದನ್ನು ಅರ್ಥೈಸುವುದು ಬೇರೆ. ಹಾಗೆಯೇ ಬೇರೆಯವರ ಪ್ರತಿಕ್ರಿಯೆಯ ಮೇಲೆ ನಾವು ನಮ್ಮ ಪ್ರೀತಿ ಮತ್ತು ಸತ್ಯವನ್ನು ಅಳೆಯಬಾರದು.

ಯೋಚಿಸಿದಷ್ಟು ನಮಗೆ ನಿರಾಸೆಯೇ ಕಾಡುತ್ತದೆ. ಪ್ರೀತಿಯನ್ನು ಪ್ರೀತಿಯಾಗಿಯೇ ಮತ್ತು ಸತ್ಯವನ್ನು ಸತ್ಯವಾಗಿಯೇ ಜೀವನದಲ್ಲಿ ಅಳವಡಿಸಿಕೊಂಡಾಗ ಅದು ನೇರ ನಮ್ಮನ್ನು ವ್ಯವಹಾರ ಜಗತ್ತಿನ ಸೋಲಿನೆಡೆಗೆ, ವೈರಾಗ್ಯದ ಕಡೆಗೆ, ಸ್ವಲ್ಪ ದುರ್ಬಲ ಮನಸ್ಸಾದರೆ ಹುಚ್ಚುತನದೆಡೆಗೆ ಅಥವಾ ಆತ್ಮಹತ್ಯೆಯ ಕಡೆಗೆ ಕರೆದುಕೊಂಡು ಹೋಗುವ ಸಾಧ್ಯತೆಯೇ ಹೆಚ್ಚು. ಏಕೆಂದರೆ……….

ನಿಜವಾದ ಪ್ರೀತಿ ಮತ್ತು ಸತ್ಯ 24 ಕ್ಯಾರೇಟಿನ ಚಿನ್ನದಂತೆ. ಅದರಲ್ಲಿ ಒಡವೆ ಮಾಡುವುದು ಕಷ್ಟ. ಮಾಡಿದರು ಅದು ಸಾಮಾನ್ಯ ಉಪಯೋಗಕ್ಕೆ ಬರುವುದಿಲ್ಲ. ತುಂಬಾ ಸೂಕ್ಷ್ಮವಾಗಿ ಉಪಯೋಗಿಸಬಹುದೇನೋ..

ಸಾಮಾಜಿಕ ಜೀವನದಲ್ಲಿ ಪ್ರೀತಿ ಮತ್ತು ಸತ್ಯ ಖಂಡಿತ ಬೆಲೆ ಕಳೆದುಕೊಂಡ ನಾಣ್ಯ ಎಂಬುದು ನಿಶ್ಚಿತ. ವೈಯಕ್ತಿಕ ಬದುಕಿನಲ್ಲಿ ಅದಕ್ಕೆ ಈಗಲೂ ಒಂದಷ್ಟು ಜಾಗವಿದೆ. ಆದರೆ ಅದರಿಂದ ನೀವು ತುಂಬಾ ತುಂಬಾ ಕಷ್ಟ ಪಡಬೇಕಾಗುತ್ತದೆ. ನಿಮ್ಮ ಮಾನಸಿಕ ನಿಯಂತ್ರಣ ವಜ್ರದಷ್ಟು ಗಟ್ಟಿಯಾಗಿರಬೇಕಾಗುತ್ತದೆ. ನಿರೀಕ್ಷೆಗಳೇ ಇಲ್ಲದ ಬದುಕು ನಿಮ್ಮದಾಗಿದ್ದರೆ ಸ್ವಲ್ಪ ಸಾಧ್ಯವಾಗಬಹುದೇನೋ.
ಭೀತಿ ಇಲ್ಲದ ಪ್ರೀತಿ ಸಾಧ್ಯವೇ ಇಲ್ಲ ಎಂಬ ಮನಸ್ಥಿತಿ ಸಮಾಜದಲ್ಲಿ ಅಚ್ಚಾಗಿ ಹೋಗಿದೆ. ಆದರೆ ಭೀತಿ ಇರುವ ಪ್ರೀತಿ ಪ್ರೀತಿಯೇ ಅಲ್ಲ, ಅದು ಕೇವಲ ಅನಿವಾರ್ಯತೆ ಮಾತ್ರವಾಗಿರುತ್ತದೆ.

ಹಾಗಾದರೆ ಬುದ್ಧ, ಮಹಾವೀರ, ಗಾಂಧಿ ಮುಂತಾದವರಿಗೆ ಇದು ಸಾಧ್ಯವಾಗಿದೆಯಲ್ಲವೇ, ನಮಗೇಕೆ ಸಾಧ್ಯವಿಲ್ಲ ಎಂಬ ಪ್ರಶ್ನೆ ಮೂಡಬಹುದು. ಅಪರೂಪದ ಉದಾಹರಣೆಗಳೇ ಸಮಾಜದ ಸಹಜ ನಿಯಮಗಳಲ್ಲ. ಕೆಲವು ಅದ್ಬುತಗಳು ಕೆಲವೇ ಮಾತ್ರ.

ಆದರೂ,….
ವೈಯಕ್ತಿಕ ನೆಲೆಯಲ್ಲಿ ಶುದ್ಧ ಪ್ರೀತಿ ಮತ್ತು ಸತ್ಯ ಅನುಸರಿಸಲು ಸಾಧ್ಯವಾದರೆ ಅದೊಂದು ಅತ್ಯಮೋಘ ಅನುಭವ ನಿಮ್ಮದಾಗುತ್ತದೆ. ಬಹುತೇಕ ದೈವಿಕ ಪ್ರಜ಼್ಞೆಯ ಹಂತಕ್ಕೆ ನೀವು ತಲುಪಬಹುದು. ಡಿಕನ್ಸ್ ಹೇಳಿದಂತೆ ಅದು ಯಾವುದೇ ದುಷ್ಟ ಶಕ್ತಿ ಮತ್ತು ದುರಾದೃಷ್ಟವನ್ನು ಖಂಡಿತ ಗೆಲ್ಲಬಹುದು. ಬುದ್ಧನ ಜೀವನದ ಅಂಗುಲಿಮಾಲನ ಮನಃ ಪರಿವರ್ತನೆ, ಗಾಂಧಿಯವರ ಬ್ರಹ್ಮಚರ್ಯ ಪಾಲನೆಯ ಪ್ರಯೋಗ ಸೇರಿ ಅನೇಕ ದೃಷ್ಟಾಂತಗಳಲ್ಲಿ ಇದನ್ನು ಕಾಣಬಹುದು.

ಪ್ರೀತಿ ಮತ್ತು ಸತ್ಯದ ನಿಜವಾದ ಪಾಲನೆ ಸಾಧ್ಯವಾಗದಿದ್ದರು ಅದೊಂದು ದಿವ್ಯ ಅನುಭವ ಎಂಬುದಾದರು ನಿಮ್ಮ ಅರಿವಿನಲ್ಲಿರಲಿ, ಬದುಕಿನ ಯಾವುದೋ ಒಂದು ಹಂತದಲ್ಲಿ, ಯಾವುದೋ ಒಂದು ಸನ್ನಿವೇಶದಲ್ಲಿ ಇದನ್ನು ಪಾಲನೆ ಮಾಡಲು ಸಾಧ್ಯವಾಗುವುದಾದರೆ ಆ ಅನುಭವದ ಕನಿಷ್ಠ ಪ್ರಜ್ಞೆ ನಿಮ್ಮದಾಗಿಸಿಕೊಳ್ಳಲು ಪ್ರಯತ್ನಿಸಿ. ಬದುಕೊಂದು ಪ್ರಯೋಗ ಶಾಲೆ ಎಂಬುದನ್ನು ಸದಾ ನೆನಪಿಡಿ.

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್.ಕೆ

Ramesh Babu

Journalist

Recent Posts

ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿದ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಬ್ರಹ್ಮರಥೋತ್ಸವ

ದಕ್ಷಿಣ ಭಾರತದಲ್ಲಿ ನಾಗರಾಧನೆಗೆ ಸುಪ್ರಸಿದ್ಧಿ ಪಡೆದಿರುವ ಘಾಟಿ ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮರಥೋತ್ಸವ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿಂದು ಅದ್ಧೂರಿಯಾಗಿ ನೆರವೇರಿತು. ತಾಲೂಕಿನ…

2 hours ago

ಜಗತ್ತಿನ ಬೆಳಕಿನ ಹಬ್ಬ – ಶಾಂತಿಯ ಸಂದೇಶ ಎಲ್ಲೆಡೆಯೂ ರವಾನೆಯಾಗಲಿ…..

ಕ್ರಿಸ್ಮಸ್ ಮತ್ತು ಜೀಸಸ್, ಪ್ರೀತಿ ಮತ್ತು ಸೇವೆ.......... ಜಗತ್ತಿನ ಬೆಳಕಿನ ಹಬ್ಬ - ಶಾಂತಿಯ ಸಂದೇಶ ಎಲ್ಲೆಡೆಯೂ ರವಾನೆಯಾಗಲಿ..... ಯೇಸುಕ್ರಿಸ್ತನ…

4 hours ago

ಖಾಸಗಿ ಬಸ್ ಲಾರಿಗೆ ಡಿಕ್ಕಿ: ಹೊತ್ತಿ ಉರಿದ ಬಸ್: 9 ಮಂದಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಬಸ್ ಒಳಗಡೆಯೇ ಸಜೀವ ದಹನ

ಎಲ್ಲರನ್ನು ಬೆಚ್ಚಿಬೀಳಿಸುವಂತಹ ಭೀಕರ ರಸ್ತೆ ಅಪಘಾತವೊಂದು ಚಿತ್ರದುರ್ಗದ ಬಳಿ ನಡೆದಿದ್ದು, ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ 'ಸೀ ಬರ್ಡ್' ಖಾಸಗಿ ಬಸ್…

5 hours ago

ಡಿ.28ರಂದು ದೊಡ್ಡಬಳ್ಳಾಪುರ ನಗರ ಮತ್ತು ತಾಲ್ಲೂಕಿನ ಹಲವೆಡೆ ವಿದ್ಯುತ್​ ಪೂರೈಕೆ ಸ್ಥಗಿತ: ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು ಇಲ್ಲಿವೆ ನೋಡಿ…

ಡಿ.28ರಂದು ದೊಡ್ಡಬಳ್ಳಾಪುರ ನಗರ ಮತ್ತು ತಾಲ್ಲೂಕಿನ ಹಲವೆಡೆ ವಿದ್ಯುತ್​ ಪೂರೈಕೆ ಸ್ಥಗಿತಗೊಳ್ಳಲಿದೆ ಎಂದು ದೊಡ್ಡಬಳ್ಳಾಪು ಉಪವಿಭಾಗದ ಬೆಸ್ಕಾಂ ಅಧಿಕಾರಿಗಳು ಪತ್ರಿಕಾ…

18 hours ago

ನಾಳೆ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ಬ್ರಹ್ಮರಥೋತ್ಸವ: ಬ್ರಹ್ಮ ರಥೋತ್ಸವಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ: ಇಂದು ಕ್ಷೇತ್ರಕ್ಕೆ ಜಿಲ್ಲಾಧಿಕಾರಿ ಎ.ಬಿ ಬಸವರಾಜು ಭೇಟಿ, ಪರಿಶೀಲನೆ

ಇತಿಹಾಸ ಪ್ರಸಿದ್ಧ ದೊಡ್ಡಬಳ್ಳಾಪುರದ ಶ್ರೀ ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ ನಾಳೆ(ಡಿಸೆಂಬರ್ 25) ಬ್ರಹ್ಮರಥೋತ್ಸವ ನಡೆಯಲಿದ್ದು, ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಲು ಜಿಲ್ಲಾಡಳಿತ…

19 hours ago