ಬದುಕನ್ನು ಅಭಿವ್ಯಕ್ತಿಗೊಳಿಸುವ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು ಇರಬೇಕು-ರಾಜ್ಯ ಪ್ರಶಸ್ತಿ ಪುರಸ್ಕೃತ ಎಂ.ಎ.ಹನುಮಂತರಾಜು

ಬದುಕನ್ನು ಅಭಿವ್ಯಕ್ತಿಗೊಳಿಸುವ ಸಾಹಿತ್ಯದಲ್ಲಿ   ಮಾನವೀಯ ಮೌಲ್ಯಗಳು ಮುಖ್ಯವಾಗಿ ಇರಬೇಕಾಗುತ್ತದೆ ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಪ್ರಾಂಶುಪಾಲ ಎಂ.ಎ.ಹನುಮಂತರಾಜು ತಿಳಿಸಿದರು.

ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಜಾಗೃತ ಪರಿಷತ್ತು ಸಹಯೋಗದಲ್ಲಿ ಕನ್ನಡ ಜಾಗೃತ ಭವನದಲ್ಲಿ ನಡೆದ ಯುವ ಕವಿ ಅಂಜಿನಗೌಡ ಅವರ ಕಾವ್ಯ ಮಂದಾರ ಕವನ ಸಂಕಲನವನ್ನು ಬಿಡುಗಡೆಗೊಳಿಸಿ ಮಾತನಾಡಿದರು.‌

ನಮ್ಮ ಜನಪದರು ಸಹ ಬದುಕಿನ ಮೌಲ್ಯಗಳನ್ನು ಮತ್ತು ಸತ್ಯ ಸಂಗತಿಗಳನ್ನು ಜನಪದ ಸಾಹಿತ್ಯ ಪರಂಪರೆಯಲ್ಲಿ ತಂದರು. ಭಾಷಾ ಸೌಂದರ್ಯ ಮತ್ತು ಭಾವನಾತ್ಮಕತೆಯಿಂದ ಕೂಡಿದ ಸಾಹಿತ್ಯ ಓದುಗರ ಮೆಚ್ಚುಗೆ ಪಡೆಯುತ್ತದೆ. ಕನ್ನಡ ಕಾವ್ಯ ಪರಂಪರೆಗೆ ಸುದೀರ್ಘವಾದ ಇತಿಹಾಸವಿದೆ. ಕನ್ನಡ ಕಾವ್ಯ ಕೃಷಿ ನಿರಂತರವಾಗಿ ನಡೆಯುತ್ತಾ ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಸಮೃದ್ಧಗೊಳಿಸಿದೆ ಎಂದರು.

ಸಾಹಿತಿ ಮತ್ತು ಪತ್ರಕರ್ತ ಮಣ್ಣೆ ಮೋಹನ್ ಮಾತನಾಡಿ,  ಕಲೆ, ಸಾಹಿತ್ಯ, ಸಂಗೀತ ಮನುಷ್ಯನ ಅವಿಭಾಜ್ಯ ಅಂಗವಾಗಿವೆ. ಸಾಹಿತ್ಯ ಒಂದು ಪ್ರಭಾವಶಾಲಿ ಮಾಧ್ಯವಾಗಿದೆ. ಕನ್ನಡ ನಾಡು ಆಳ್ವಿಕೆ ಮಾಡಿದ ರಾಜ ಮನೆತನಗಳು ಕಲೆ ಮತ್ತು ಸಾಹಿತ್ಯಕ್ಕೆ ನೀಡಿದ ಪ್ರೋತ್ಸಾಹ ಅನನ್ಯವಾಗಿದೆ. ಕನ್ನಡ ಕವಿಗಳು, ವಚನಕಾರರು, ಹರಿದಾಸರು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು.‌ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕ್ರತಿ ಉಳಿಸಿ ಬೆಳೆಸುವುದು ಕನ್ನಡದ ಕೆಲಸವಾಗಿದೆ. ಕನ್ನಡ ಯುವ ಕವಿಗಳಿಗೆ ನಿರಂತರ ಪ್ರೋತ್ಸಾಹ ನೀಡುವುದು ನಮ್ಮ ಜವಾಬ್ದಾರಿ ಆಗಬೇಕಾಗಿದೆ ಎಂದರು.

ಪ್ರಾಧ್ಯಾಪಕ ಮತ್ತು ಕವಿ ಡಾ.ಪ್ರಕಾಶ್ ಮಂಟೇದ ಮಾತನಾಡಿ, ಮಾನವ ಚೇತನಗಳನ್ನು ಎಚ್ಚರಿಸುವ ಕೆಲಸವನ್ನು ಕವಿಗಳು ಮಾಡಬೇಕು. ಸಮಾಜದಲ್ಲಿ ಬಂಧುತ್ವ ಭಾವನೆ ಮೂಡಿಸುವುದು ಮತ್ತು ಪ್ರೀತಿ ವಿಶ್ವಾಸದ ಸೇತುವೆ ಕಟ್ಟಬೇಕು. ಕವಿಯು ಸೇರಿದಂತೆ ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಪರಿಸರದ ಬಗ್ಗೆ ಅಭಿಮಾನ ಇರಬೇಕು. ಉತ್ತಮ ಸಮಾಜಕ್ಕೆ ಮಿಡಿಯುವ ಭಾವ ಕವಿಗೆ ಪ್ರಧಾನವಾಗಿ ಇರಬೇಕೆಂದರು.

ಕಾವ್ಯ ಮಂದಾರ ಕವನ ಸಂಕಲನ ಕುರಿತು ಮಾತನಾಡಿದ ಕವಿ ಮತ್ತು ಉಪನ್ಯಾಸಕ ಡಾ.ಶಿವಲಿಂಗಯ್ಯ, ಯುವ ಕವಿಗಳಿಗೆ ನಿರಂತರ ಅಧ್ಯಯನಶೀಲತೆ  ಮುಖ್ಯ.  ಸಮಾಜದ ವಿದ್ಯಮಾನಗಳ ಬಗ್ಗೆ ಚಿಂತಿಸಿ, ಅವುಗಳನ್ನು  ತಮ್ಮ ಕವನಗಳಲ್ಲಿ ಅಭಿವ್ಯಕ್ತಿಗೊಳಿಸಬೇಕು. ಬದುಕು ಬೇರೆಯಲ್ಲ, ಕಾವ್ಯ ಬೇರೆಯಲ್ಲ ಎಂಬುದನ್ನು  ಅರಿಯಬೇಕೆಂದರು.

ಕಾರ್ಯಕ್ರಮದಲ್ಲಿ ಪ್ರಜಾಕವಿ ನಾಗರಾಜು, ಕನ್ನಡ ಜಾಗೃತ ಪರಿಷತ್ತು ಪ್ರಧಾನ ಕಾರ್ಯದರ್ಶಿ ಡಿ.ಪಿ.ಆಂಜನೇಯ, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಗೌರವ ಕಾರ್ಯದರ್ಶಿ ಪ್ರೊ.ಕೆ.ಆರ್.ರವಿಕಿರಣ್, ತಾಲ್ಲೂಕು ಕಸಾಪ ಅಧ್ಯಕ್ಷ ಪಿ.ಗೋವಿಂದರಾಜು, ಹೋಬಳಿ ಘಟಕದ ಕೋಶಾಧ್ಯಕ್ಷ ಜಿ.ಸುರೇಶ್, ಕಾಡನೂರು ಪಾಳ್ಯ ಗ್ರಾಮದ ಮುಖಂಡ  ಮರೀಗೌಡ, ಭಾರತ್ ಸ್ಕೌಟ್ಸ್ ಮತ್ತು ಗೈಡ್ ಸಹಾಯಕ ಆಯುಕ್ತ ವೆಂಕಟರಾಜು, ನವೋದಯ ವಿದ್ಯಾಲಯ ನಿವೃತ್ತ ಅಧ್ಯಾಪಕ ವಿ.ಎಸ್.ಹೆಗಡೆ, ಯುವಕವಿ ಅಂಜಿನಗೌಡ, ನಾಗರಾಜು, ಲಲಿತಮ್ಮ ಮುಂತಾದವರು ಭಾಗವಹಿಸಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮ :- ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ದೊಡ್ಡಬಳ್ಳಾಪುರ ಕಲಾವಿದರುಗಳಾದ ರಾಮಕೃಷ್ಣ, ದರ್ಗಾಜೋಗಿಹಳ್ಳಿ ಮಲ್ಲೇಶ್, ಕುಮಾರ್, ಶೋಭಾ, ಮುನಿರತ್ನಮ್ಮ‌ ಮೊದಲಾದವರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

Leave a Reply

Your email address will not be published. Required fields are marked *

error: Content is protected !!