ಬಡವರ ಅನ್ನ ಕಸಿಯಲು ಹೊರಟ ಕಾಂಗ್ರೆಸ್ ಸರ್ಕಾರ: ಬಿಪಿಎಲ್ ಕಾರ್ಡ್ ರದ್ದು ಆದೇಶ ವಾಪಸ್ಸು ಮಾಡುವಂತೆ ಕಲ್ಲಂಡೂರು ಡಾ.ಕೆ ನಾಗರಾಜ್ ಒತ್ತಾಯ

ಕೋಲಾರ: ರಾಜ್ಯದಲ್ಲಿನ ಕಾಂಗ್ರೆಸ್ ಸರಕಾರವು ಐದು ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸಾಧ್ಯವಾಗದೆ ಅನ್ನ ಭಾಗ್ಯದ ಫಲಾನುಭವಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ಹೊರಟಿದ್ದು, ಇದರ ಭಾಗವಾಗಿಯೇ ಬಡವರ ಬಿಪಿಎಲ್ ಪಡಿತರ ಕಾರ್ಡ್ ಗಳನ್ನು ರದ್ದುಪಡಿಸುವ ಕ್ರಮವು ಖಂಡನೀಯವಾಗಿದ್ದು. ಬಡವರ ಅನ್ನಕ್ಕೆ ಕೈಹಾಕಿದೆ ಕೂಡಲೇ ಈ ಆದೇಶವನ್ನು ವಾಪಸ್ಸು ಪಡೆಯುವಂತೆ ಜೆಡಿಯು ಪಕ್ಷದ ರಾಜ್ಯ ಯುವ ಘಟಕದ ಅಧ್ಯಕ್ಷ ಕಲ್ಲಂಡೂರು ಡಾ.ಕೆ ನಾಗರಾಜ್ ಒತ್ತಾಯಿಸಿದರು.

ಈ ಕುರಿತು ಪತ್ರಿಕಾ ಹೇಳಿಕೆ ಮೂಲಕ ಒತ್ತಾಯಿಸಿದ ಅವರು ರಾಜ್ಯದಲ್ಲಿ ಸುಮಾರು 11 ಲಕ್ಷ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸಲು ಕಾಂಗ್ರೆಸ್ ಸರ್ಕಾರವು ಮುಂದಾಗಿದೆ. ಯಾವುದೇ ಪರಿಶೀಲನೆಯಾಗಲಿ ತಜ್ಞರ ಮಾರ್ಗದರ್ಶನವಾಗಲಿ ಪಡೆಯದೇ ಅವೈಜ್ಞಾನಿಕವಾದ ಆದೇಶವನ್ನು ಜಾರಿ ಮಾಡಲು ಹೊರಟಿದ್ದಾರೆ ಈ ಮೂಲಕ ಬಿಪಿಎಲ್ ಕಾರ್ಡ್ ರದ್ದು ಮಾಡಿದರೆ ಬಡವರು, ರೈತರು, ಸಾಮಾನ್ಯ ವರ್ಗದ ಜನರು ಆರ್ಥಿಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಬಡವರ ಪರವಾದ ಸರ್ಕಾರ ಎಂದು ಅಧಿಕಾರಕ್ಕೆ ಬಂದು ಬಡವರ ಅನ್ನವನ್ನು ಕಸಿಯಲು ಹೊರಟಿದ್ದಾರೆ ಈ ಕ್ರಮವನ್ನು ಕೂಡಲೇ ವಾಪಸ್ಸು ಪಡೆಯಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಜಾರಿಯಿಂದ ವರ್ಷಕ್ಕೆ ಕನಿಷ್ಠ 55 ರಿಂದ 60 ಸಾವಿರ ಕೋಟಿ ಖರ್ಚಾಗುತ್ತಿದೆ ಎಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೇಳಿಕೊಂಡಿದ್ದಾರೆ ಇಷ್ಟೊಂದು ಹಣ ಹೊಂದಿಸಲು ಸಾಧ್ಯವಾಗದ ಸರ್ಕಾರವು ಬಡವರ ಬಿಪಿಎಲ್ ಕಾರ್ಡ್‌ ಸಂಖ್ಯೆಯನ್ನು ಕಡಿಮೆ ಮಾಡಿ ಅದರ ಮೂಲಕವೇ ಹಣ ಉಳಿಸಲು ಹೊರಟಿದ್ದು ಈ ಕ್ರಮ ಜಾರಿಯಾದರೆ ಬಡವರನ್ನು ಬೀದಿಗೆ ತಂದು ನಿಲ್ಲಿಸಿದ ಸಾಧನೆ ಕಾಂಗ್ರೆಸ್ ಸರಕಾರಕ್ಕೆ ಸಲ್ಲುತ್ತದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೂ ಮುಂಚೆ ಕೊಟ್ಟ ಆಶ್ವಾಸನೆಗಳಿಂದ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದಿದೆ ಅಧಿಕಾರಕ್ಕೆ ಬರುವ ಮುಂಚೆ ಒಂದು ಮಾತು ಅಧಿಕಾರಕ್ಕೆ ಬಂದ ನಂತರ ಮತ್ತೊಂದು ಮಾತಾಗಿದೆ ಈ ಸರಕಾರದಿಂದ ಬಡವರ ಮನೆ ಅನ್ನ ಕಿತ್ತುಕೊಳ್ಳುವ ಆದೇಶವನ್ನು ವಾಪಸ್ಸು ಪಡೆದು ಗ್ಯಾರಂಟಿ ಯೋಜನೆಗಳನ್ನು ರಾಜ್ಯದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ಕೆಲಸವನ್ನು ಮಾಡುವ ಮೂಲಕ ಕೊಟ್ಟ ಮಾತನ್ನು ಸರ್ಕಾರವು ಉಳಿಸಿಕೊಳ್ಳಬೇಕು ಎಂದು ಡಾ.ನಾಗರಾಜ್ ಒತ್ತಾಯಿಸಿದರು.

Leave a Reply

Your email address will not be published. Required fields are marked *