ಬಡವರಿಗೆ ಅನ್ನದಾಸೋಹ ಹಾಗೂ ಮಕ್ಕಳಿಗೆ ನೋಟ್ ಬುಕ್ ವಿತರಣೆ ಮಾಡುವ ಮೂಲಕ 24ನೇ ಹುಟ್ಟುಹಬ್ಬ ಆಚರಣೆ ಮಾಡಿಕೊಂಡ ಯುವಕ ಕಿರಣ್

ಬಾಶೆಟ್ಟಿಹಳ್ಳಿಯ ಅಂಬೇಡ್ಕರ್ ನಗರದ ನಿವಾಸಿ ಕಿರಣ್ ಅವರು ತಮ್ಮ 24ನೇ ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸುವುದಕ್ಕೆ ನಿರ್ಧಾರ ಮಾಡಿ, ಸತತವಾಗಿ ಕಳೆದ ಹಲವು ವರ್ಷಗಳಿಂದ ತಾಲ್ಲೂಕಿನ ದರ್ಗಾ ಜೋಗಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಿರಂತರ ಅನ್ನದಾಸೋಹ ಸಮಿತಿ ವತಿಯಿಂದ ಅನ್ನದಾಸೋಹಿ ಮಲ್ಲೇಶ್ ನೇತೃತ್ವದಲ್ಲಿ ನಡೆಯುತ್ತಿರುವ ನಿರಂತರ ಅನ್ನದಾಸೋಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಡುಬಡವರಿಗೆ ಆಹಾರ ವಿತರಣೆ ಮಾಡಿ, ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳನ್ನು ವಿತರಣೆ ಮಾಡುವ ಮೂಲಕ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಿಕೊಂಡರು.

ಕಾರ್ಯಕ್ರಮದ ಆಯೋಜಕ ಮಲ್ಲೇಶ್ ಮಾತನಾಡಿ, ಹುಟ್ಟು ಹಬ್ಬವನ್ನು ದುಂದು ವೆಚ್ಚ ವ್ಯಯಿಸಿ ಆಚರಣೆ ಮಾಡಿ ಸಂಭ್ರಮಿಸುವ ಬದಲು ಬಡವರಿಗೆ ಊಟ ಕೊಟ್ಟು ಸಮಾಜಕ್ಕೆ ಮಾದರಿಯಾಗಬೇಕು ಎಂದರು.

ಇಂದಿನ ಅನ್ನದಾಸೋಹ ಕಾರ್ಯಕ್ರಮಕ್ಕೆ ಯುವಕ‌ ಕಿರಣ್ ಅವರು ತಮ್ಮ ಹುಟ್ಟುಹಬ್ಬ ಹಿನ್ನೆಲೆ ನಿರಂತರ ಅನ್ನದಾಸೋಹ‌ಕ್ಕೆ ಸಹಾಯಹಸ್ತ ನೀಡಿದ್ದಾರೆ.

ಹಾಗೇ ಶಾಲಾ ಮಕ್ಕಳ ವಿದ್ಯಾರ್ಜನೆಗೆ ಅವಶ್ಯಕವಿರುವ ಸಾಮಗ್ರಿಗಳನ್ನು ಮಕ್ಕಳಿಗೆ ನೀಡಿದ್ದಾರೆ. ಅವರ ಸಮಾಜ ಸೇವೆ ಮತ್ತಷ್ಟು ಮುಂದುವರೆಯಲಿ ಎಂದು ಹಾರೈಸಿದರು. ತಮ್ಮ ಯಾವುದೇ ವಿಶೇಷ ದಿನಗಳನ್ನು ಸಂಭ್ರಮಾಚರಣೆಯನ್ನು ಅನ್ನದಾಸೋಹ ಸಮಿತಿಯೊಂದಿಗೆ ಆಚರಿಸುವಂತೆ ಮನವಿ ಮಾಡಿದರು.

ನನ್ನ ಹುಟ್ಟುಹಬ್ಬವನ್ನು ಸರಳವಾಗಿ ಆಚರಣೆ ಮಾಡಿಕೊಳ್ಳಬೇಕು ಎಂದು ನಿರ್ಧಾರ ಮಾಡಿ ನಿರಂತರ ಅನ್ನದಾಸೋಹ ಸಮಿತಿ ಸಹಕಾರ ಜೊತೆ ಬಡವರಿಗೆ ಅನ್ನದಾಸೋಹ ಹಾಗೂ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್ ಬುಕ್ ಹಾಗೂ ಲೇಖನಿಯನ್ನು ನೀಡಿದ್ದೇವೆ. ಇದರಿಂದ‌ ನಮಗೆ ತುಂಬಾ ಖುಷಿ‌ ಕೊಟ್ಟಿದೆ. ಮುಂದೆ ಇದೇ ರೀತಿ ಸರಳವಾಗಿ ಅರ್ಥಪೂರ್ಣವಾಗಿ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತೇನೆ ಎಂದು ಕಿರಣ್ ಅವರು ತಿಳಿಸಿದರು.

Leave a Reply

Your email address will not be published. Required fields are marked *