ಬಜೆಟ್ ಮಂಡನೆ‌ ನಂತರ ಸಿಎಂ‌ ಸಿದ್ದರಾಮಯ್ಯ ಮಾತು

ರಾಜ್ಯ ಬಜೆಟ್ ನಂತರ ವಿಧಾನಸೌಧದಲ್ಲಿ‌‌ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾತುಗಳು…..

2025-26 ನೇ ಸಾಲಿನ ಮುಂಗಡ ಪತ್ರವನ್ನು ಮಂಡಿಸಲಾಗಿದ್ದು, ಕರ್ನಾಟಕ ಸರ್ಕಾರ ಕಳೆದ ಸಾಲಿನಲ್ಲಿ 3,71,121 ಕೋಟಿ ಬಜೆಟ್ ಮಂಡಿಸಿತ್ತು. ಈ ಬಾರಿಯ ಬಜೆಟ್ ಗಾತ್ರ 4,09,549 ಕೋಟಿಯಾಗಿದೆ. ಮೊದಲ ಬಾರಿಗೆ ನಮ್ಮ ರಾಜ್ಯದ ಆಯವ್ಯಯ ಗಾತ್ರ 4 ಲಕ್ಷ ಕೋಟಿ ರೂ.ಗಳ ಗಡಿ ದಾಟಿರುವುದು ಒಂದು ಹೊಸ ಮೈಲಿಗಲ್ಲು. ಕಳೆದ ಬಾರಿಗಿಂತ ಈ ಬಾರಿ 38,166 ಕೋಟಿ ರೂ.ಗಳು ಹೆಚ್ಚಾಗಿದೆ. ಬಜೆಟ್ ನ ಬೆಳವಣಿಗಯ ದರ 10.3 ರಷ್ಟು ಹೆಚ್ಚಳವಾಗಿದೆ.

ಕಳೆದ ವರ್ಷ ರಾಜಸ್ವ ಸ್ವೀಕೃತಿಗಳು, ₹2,63,178 ಕೋಟಿ ಇದ್ದು ಈ ಬಾರಿ 2,92,477 ಕೋಟಿ ರೂ. ಇದೆ. 2024-25ರ ಆಯವ್ಯಯಕ್ಕೆ ಹೋಲಿಸಿದರೆ ₹29,299 ಕೋಟಿ ಹೆಚ್ಚಾಗಿದೆ –ಬೆಳವಣಿಗೆ ದರ 11.1 % ರಷ್ಟಿದೆ. 2024-25ರ ರಲ್ಲಿ ರಾಜಸ್ವ ವೆಚ್ಚ 2,90,531 ಕೋಟಿ ಇದ್ದದ್ದು, 2025-26ರಲ್ಲಿ 3,11,739 ಕೋಟಿ , 2024-25ರ ಆಯವ್ಯಯಕ್ಕೆ ಹೋಲಿಸಿದರೆ 21,207 ಕೋಟಿ ಹೆಚ್ಚಳ-ಬೆಳವಣಿಗೆ ದರ 7.3 % ರಷ್ಟಿದೆ.

2024-25ರಲ್ಲಿ ಸಾಲ ₹1,05,246 ಕೋಟಿ, ಈ ವರ್ಷ ಸಾಲ ₹1,16,000 ಕೋಟಿ, 2024-25ರ ಆಯವ್ಯಯಕ್ಕೆ ಹೋಲಿಸಿದರೆ ₹10,754 ಕೋಟಿ ಹೆಚ್ಚಳವಾಗಿದೆ(10.2% ರಷ್ಟು ಹೆಚ್ಚಳ). ಇದಕ್ಕೆ ವಿರೋಧ ಪಕ್ಷದವರು ಟೀಕಿಸುತ್ತಾರೆ. ಆರ್ಥಿಕ ಹೊಣೆಗಾರಿಕೆ ಅಧಿನಿಯಮದ ಮಾನದಂಡದಂತೆ, ಸಾಲದ ಮೊತ್ತ GSDP ಯ ಶೇ.25 ರ ಒಳಗಿರಬೇಕು, ರಾಜ್ಯದ ಸಾಲ ಶೇ.24.91ರ ಮಿತಿಯಲ್ಲಿದೆ. ವಿತ್ತೀಯ ಕೊರತೆಯನ್ನು GSDPಯ ಶೇ.3 ರಷ್ಟುನ್ನು ಮೀರಬಾರದೆಂದಿದ್ದು, 2.95 % ರಷ್ಟಿದೆ.

ರಾಜಸ್ವ ಕೊರತೆ ₹19,262 ಕೋಟಿ ಇದೆ. ಈ ಬಾರಿ ರಾಜಸ್ವ ಕೊರತೆಯಿಂದ ರಾಜಸ್ವ ಹೆಚ್ಚುವರಿ ಸ್ಥಿತಿಗೆ ಬರಲಿದ್ದೇವೆ. 2024-25 ರಲ್ಲಿ ರಾಜಸ್ವ ಕೊರತೆ 0.95 ಇತ್ತು, 2025-26ರಲ್ಲಿ 0.63 ಆಗಿದೆ. ರಾಜ್ಯದ GSDP ಕಳೆದ ವರ್ಷ 28,61,929 ಕೋಟಿಗಳಾಗಿತ್ತು, 2025-26 ರಲ್ಲಿ 30,70,103 ಕೋಟಿಯಾಗಿದೆ, ಇದರಲ್ಲಿ ಶೇ. 25 ರಷ್ಟು ಸಾಲ ಪಡೆಯಬಹುದಾಗಿದ್ದು, ಸರ್ಕಾರ ಆರ್ಥಿಕ ಶಿಸ್ತನ್ನು ಪಾಲನೆ ಮಾಡಿದೆ. ಆಯವ್ಯಯದಲ್ಲಿ ಬಡವರು, ಮಹಿಳೆಯರು, ಕಾರ್ಮಿಕರು, ದುರ್ಬಲರಿಗೆ, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರ ಆರ್ಥಿಕ ಬೆಳವಣಿಗೆಗೆ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.

ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಆರ್ಥಿಕ ಹೊಣಗಾರಿಕೆ ಅಧಿನಿಯಮದ ಬಗ್ಗೆ ತಿಳಿಯದೇ, ನಮ್ಮ ಆಯವ್ಯಯದ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ವಿತ್ತೀಯ ಕೊರತೆ ಶೇ. 4.61 ರಷ್ಟಿದೆ. ಆದರೆ ರಾಜ್ಯದ ವಿತ್ತೀಯ ಕೊರತೆ ಶೇ.2.95 ರಷ್ಟಿದೆ. ಕೇಂದ್ರ ಸರ್ಕಾರದ ಬಜೆಟ್ 50 ಲಕ್ಷ ಕೋಟಿಯಲ್ಲಿ 15.66 ಲಕ್ಷ ಕೋಟಿ ಸಾಲ ಪಡೆದಿದ್ದು( ಶೇ.56 ಸಾಲ), ರಾಜ್ಯ 2.95% ರಷ್ಟು ಸಾಲ ಪಡೆದಿದ್ದೇವೆ. ಅಶೋಕ್ ರವರು ರಾಜಕೀಯಕ್ಕಾಗಿ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಟೀಕೆ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ದಿವಾಳಿ ಪದದ ಅರ್ಥ ಗೊತ್ತೇ? ರಾಜ್ಯಸರ್ಕಾರ ಆರ್ಥಿಕವಾಗಿ ಸದೃಢವಾಗಿದ್ದು, ಆರ್ಥಿಕ ಶಿಸ್ತನ್ನು ಪಾಲಿಸಲಾಗುತ್ತಿದೆ. ವಿತ್ತೀಯ ಹೊಣೆಗಾರಿಕೆ ಕಾಯ್ದೆಯ ಮಾನದಂಡಗಳನ್ನು ಪಾಲಿಸಲಾಗಿದೆ.

ಹಿಂದಿನ ನಮ್ಮ ಭರವಸೆಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದಿದ್ದೇವೆ. ಅಭಿವೃದ್ಧಿಗೂ ಹಣ ಖರ್ಚು ಮಾಡಿ, ಗ್ಯಾರಂಟಿಗಳಿಗೆ ₹52,009 ಕೋಟಿ ನೀಡಿ, ಎಲ್ಲ ಗ್ಯಾರಂಟಿಗಳು ಜಾರಿಯಾಗಿದೆ. ಮುಂದಿನ ವರ್ಷವೂ ಗ್ಯಾರಂಟಿಗಳನ್ನು ಮುಂದುವರೆಸುತ್ತೇವೆ.

ಈ ವರ್ಷ ಬಜೆಟ್ ನಲ್ಲಿ ಗ್ಯಾರಂಟಿಗಳಿಗೆ ₹51,034 ಕೋಟಿ ಮೀಸಲಿರಿಸಿದ್ದೇವೆ. 2025-26ನೇ ಸಾಲಿಗೆ ಗೃಹಲಕ್ಷ್ಮಿ ಯೋಜನೆಗೆ ₹28,608 ಕೋಟಿ, ಗೃಹಜ್ಯೋತಿ ಯೋಜನೆಗೆ ₹10,100 ಕೋಟಿ, ಅನ್ನಭಾಗ್ಯ ಯೋಜನೆಗೆ ₹6,426 ಕೋಟಿ, ಶಕ್ತಿ ಯೋಜನೆಗೆ ₹5,300 ಕೋಟಿ, ಯುವನಿಧಿ ಯೋಜನೆಗೆ ₹600 ಕೋಟಿಗಳನ್ನು ಮೀಸಲಿರಿಸಲಾಗಿದೆ. ಈ ಬಾರಿ ಆಯವ್ಯಯದಲ್ಲಿ ಎಲ್ಲಾ ಇಲಾಖೆಗಳಿಗೆ ಹೆಚ್ಚು ಅನುದಾನ ನೀಡಲಾಗಿದೆ. ಅಭಿವೃದ್ಧಿ ಕೆಲಸಗಳಿಗೆ ಅನುದಾನದ ಕೊರತೆ ಇಲ್ಲ. ಬಿಜೆಪಿಯವರ ಹೇಳಿಕೆಗಳು ಸತ್ಯಕ್ಕೆ ದೂರವಾದುದು. ದೆಹಲಿ, ಮದ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಹರಿಯಾಣಗಳಲ್ಲಿ ಬಿಜೆಪಿಯವರು ನಮ್ಮ ಗ್ಯಾರಂಟಿಗಳನ್ನು ನಕಲು ಮಾಡಿದ್ದಾರೆ.

ಗ್ಯಾರಂಟಿಗಳನ್ನು ಮದ್ಯವರ್ತಿಗಳ ಹಾವಳಿ ಇಲ್ಲದೇ ನೇರವಾಗಿ ಫಲಾನುಭವಿಗಳಿಗೆ ಡಿಬಿಟಿ ಮಾಡಲಾಗುತ್ತಿದ್ದು, ಸಾರ್ವತ್ರಿಕ ಮೂಲ ಆದಾಯ ತತ್ವದ ಆಧಾರದ ಮೇಲೆ ರೂಪಿಸಲಾಗಿದೆ. ಗ್ಯಾರಂಟಿ ಯೋಜನೆಗಳಿಂದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಸುಮಾರು ₹232 ಕೋಟಿಗಳು ವೆಚ್ಚವಾಗುತ್ತಿದೆ. ಜನರಿಗೆ ಆರ್ಥಿಕ ಬಲ ತುಂಬಿದರೆ, ಅವರ ಖರೀದಿ ಶಕ್ತಿಯೂ ಹೆಚ್ಚಿ, ರಾಜ್ಯದ ಆರ್ಥಿಕತೆಯೂ ಬೆಳೆಯುತ್ತದೆ.

ಅಲ್ಪಸಂಖ್ಯಾತರು, ಪ.ಜಾ, ಪ.ವರ್ಗ, ಹಿಂ.ವರ್ಗಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದೆ. ಬೌದ್ಧರು, ಜೈನ್, ಕ್ರಿಶ್ಚಿಯನ್ ಸೇರಿದಂತೆ ಅಲ್ಪಸಂಖ್ಯಾತರ ಎಲ್ಲ ಸಮುದಾಯದವರಿಗೆ ₹4,500 ಕೋಟಿ ಕೊಟ್ಟರೂ , ಇದನ್ನು ಹಲಾಲ್ ಬಜೆಟ್ ಎಂದು ಟೀಕಿಸುತ್ತಾರೆ. ಇದು ಬಿಜೆಪಿಯವರ ಕೊಳಕು ಮನಸ್ಥಿತಿಯನ್ನು ಬಿಂಬಿಸುತ್ತದೆ.
ಅಲ್ಪಸಂಖ್ಯಾತರು ಶಿಕ್ಷಣದಿಂದ ವಂಚಿತರು. ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ 75% ಅಲ್ಪಸಂಖ್ಯಾತರಿಗೆ ಹಾಗೂ 25% ಇತರರಿಗೂ ಅವರ ಅವಕಾಶ ನೀಡಿದೆ. ಅಲ್ಪಸಂಖ್ಯಾತರಿಗೆ ಶಿಕ್ಷಣ ನೀಡಿದರೆ ಮುಖ್ಯವಾಹಿನಿಗೆ ಬರಲು ಅನುಕೂಲವಾಗುತ್ತದೆ. ಬಿಜೆಪಿ ಜಾತ್ಯಾತೀತತೆಯ ವಿರೋಧಿಗಳು. ಭಾರತ ಬಹುತ್ವದ ದೇಶ, ಯಾವುದೇ ಒಂದು ಧರ್ಮ, ಜಾತಿಗೆ ಸೇರಿಲ್ಲ. ಸಂವಿಧಾನವು ಎಲ್ಲರಿಗೂ ಸಮಾನ ಅವಕಾಶ ನೀಡಬೇಕು ಎಂದು ಹೇಳಿದೆ. ಬಿಜೆಪಿಯವರು ಸಂವಿಧಾನದ ಆಶಯಗಳನ್ನು ಪಾಲಿಸುವುದಿಲ್ಲ. ಅವರು ಜಾತ್ಯಾತೀತತೆ, ಬಹುತ್ವ, ಹಾಗೂ ಸಂವಿಧಾನದ ವಿರುದ್ಧವಾಗಿದ್ದಾರೆ.

ಎಸ್.ಸಿ.ಎಸ್.ಪಿ – ಟಿ.ಎಸ್.ಪಿ ಯೋಜನೆಗಳಿಗೆ ₹42,000 ಕೋಟಿ ನೀಡಲಾಗುತ್ತಿದೆ. ಅಲ್ಪಸಂಖ್ಯಾತರಿಗೆ ₹4,500 ಕೋಟಿ, ಓಬಿಸಿಗೆ ₹4,300 ಕೋಟಿ ನೀಡಲಾಗಿದೆ. ಬಿಜೆಪಿಯ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು SCP/TSP ಕಾಯ್ದೆ ಮಾಡಿ ಜಾರಿಗೊಳಿಸಿದ್ದಾರೆಯೇ?

ಅಲ್ಪಸಂಖ್ಯಾತರಿಗೆ ಸರ್ಕಾರದ ಗುತ್ತಿಗೆಯಲ್ಲಿ ಮೀಸಲಾತಿ ನೀಡಿರುವುದು ಧರ್ಮದ ಆಧಾರದ ಮೇಲೆ ಅಲ್ಲ . 2 ಎ, ಎಸ್‌ಸಿ, ಎಸ್‌ಟಿ, ಪ್ರವರ್ಗ 1 ವರ್ಗಗಳಿಗೆ ಕೊಟ್ಟಿಲ್ಲವೇ? ಕೇವಲ ಮುಸ್ಲಿಂರಿಗೆ ಮಾತ್ರ ಎನ್ನುವುದು ತಪ್ಪು.

Leave a Reply

Your email address will not be published. Required fields are marked *

error: Content is protected !!