ಬಗರ್ ಹುಕ್ಕುಂ ಸಮಿತಿ ಸಭೆ ವಿಳಂಬ: ಹಕ್ಕುಪತ್ರಕ್ಕಾಗಿ ರೈತರ ಅಲೆದಾಟ: ಅರ್ಜಿ ಸಲ್ಲಿಸಿ ವರ್ಷಗಳಾದರೂ ಸಾಗುವಳಿ ಚೀಟಿ ಇಲ್ಲ: ಆತಂಕದಲ್ಲಿ ರೈತ

ಗ್ರಾಮೀಣ ಭಾಗದಲ್ಲಿ ಜೀವನ ನಡೆಸಲು ಸರ್ಕಾರಿ ಜಮೀನುಗಳಲ್ಲಿ ಉಳುಮೆ ಮಾಡಿಕೊಂಡು ಜೀವನೋಪಾಯ ರೂಪಿಸಿಕೊಂಡಿರುವ ರೈತಾಪಿ ವರ್ಗದ ಜನರಿಗಾಗಿ ಸರ್ಕಾರ ಸಾಗುವಳಿ ಚೀಟಿಗಳನ್ನ ನೀಡುವ ಮೂಲಕ ರೈತನ ಬದುಕಿಗೆ ಆಸರೆಯಾಗಿದೆ. ಹೀಗೆ ಸುಮಾರು 25-30 ವರ್ಷಗಳಿಂದ ವ್ಯವಸಾಯ ಮಾಡಿಕೊಂಡಿರುವ ಜಮೀನುಗಳನ್ನು ತಮ್ಮ ಹೆಸರಿಗೆ ಮಾಡಿಸಿಕೊಳ್ಳಲು ಅರ್ಜಿ ನಮೂನೆ-53 ಸಲ್ಲಿಸಿದ ರೈತರು ತಾಲ್ಲೂಕು ಕಚೇರಿ, ಕಂದಾಯ ಇಲಾಖೆಗೆ ಅಲೆದು ಅಲೆದು ಚಪ್ಪಲಿಗಳು ಸವೆದದ್ದು ಬಿಟ್ಟರೆ ಒಂದೇ ಒಂದು ಪೂರಕ ಕೆಲಸವಾಗಿಲ್ಲ. ಮುಖ್ಯವಾಗಿ ಸರ್ಕಾರ ಬಗರ್ ಹುಕ್ಕುಂ ಅರ್ಜಿಗಳನ್ನು ಪರಿಶೀಲಿಸಿ ಅರ್ಹ ರೈತರಿಗೆ ಹಕ್ಕುಪತ್ರ ನೀಡುವ ಉದ್ದೇಶದಿಂದ ತಾಲೂಕು ಮಟ್ಟದಲ್ಲಿ ಸಮಿತಿಗಳನ್ನು ರಚಿಸಿದೆ. ಆದರೆ, ತಾಲೂಕುಗಳಲ್ಲಿ ಭೂ ಮಂಜೂರಾತಿ ಸಮಿತಿ ಕಳೆದ ಮೂರು ವರ್ಷಗಳಿಂದ ಬೆರಳೆಣಿಕೆಯಷ್ಟು ಸಭೆಗಳನ್ನು ಮಾಡಲಷ್ಟೆ ಸೀಮಿತವಾಗಿದೆ. ಇದೂವರೆಗೂ ಒಬ್ಬ ಅರ್ಹ ರೈತನಿಗೆ ಸಾಗುವಳಿ ಚೀಟಿ ವಿತರಣೆ ಮಾಡಿಲ್ಲ. ವರ್ಷಗಳ ಹಿಂದೆ ಅರ್ಜಿ ಸಲ್ಲಿಸಿರುವ ರೈತರು, ಡಿಸಿ‌ ಕಚೇರಿ, ತಹಶೀಲ್ದಾರ್ ಕಚೇರಿ, ಕಂದಾಯ ಕಚೇರಿಗಳ ಸುತ್ತಲೂ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಜಮೀನು ದಾಖಲೆ ಇಲ್ಲದೆ ರೈತರ ಪರದಾಟ:

ರೈತ ಕುಟುಂಬಗಳು ಹಲವು ತಲೆಮಾರುಗಳಿಂದ ಸರ್ಕಾರದ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಕೆಲವರು ಬೆಳೆ ಸಾಲ ಪಡೆದು ಕೃಷಿ ಮಾಡುತ್ತಿದ್ದರೂ, ಜಮೀನಿನ ದಾಖಲೆ ಇಲ್ಲದ ಕಾರಣ ಬ್ಯಾಂಕ್ ಸಾಲ, ಬೆಳೆ ವಿಮೆ ಸೇರಿದಂತೆ ಸರ್ಕಾರದ ಅನೇಕ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಮಳೆ, ಬೆಳೆ ಹಾನಿ, ಆರ್ಥಿಕ ಸಂಕಷ್ಟಗಳ ನಡುವೆಯೂ ಹಕ್ಕುಪತ್ರ ಸಿಗದಿರುವುದು ರೈತರ ಬೇಸರಕ್ಕೆ ಕಾರಣವಾಗಿದೆ.

ಭೂಮಿಯ ಸಾಗುವಳಿ ಚೀಟಿ ಇಲ್ಲದ ಕಾರಣ ಅನೇಕ ಕುಟುಂಬಗಳು ಆತಂಕದಲ್ಲಿವೆ. ಯಾವಾಗ ಬೇಕಾದರೂ ಜಮೀನು ಖಾಲಿ ಮಾಡುವಂತೆ ನೋಟಿಸ್ ಬರುತ್ತದೆ ಎಂಬ ಭಯದಲ್ಲಿ ರೈತರು ಬದುಕುತ್ತಿದ್ದಾರೆ. ಮತ್ತೊಂದೆಡೆ, ಕೆಲವು ಪ್ರದೇಶಗಳಲ್ಲಿ ಅರಣ್ಯ ಇಲಾಖೆ ಹಾಗೂ ರಾಜಸ್ವ ಇಲಾಖೆಗಳ ನಡುವಿನ ಗೊಂದಲವೂ ಸಮಸ್ಯೆಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ.

ಕೆಐಎಡಿಬಿ ಭೂಸ್ವಾಧೀನದ ಆತಂಕ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆಗಳು ಬಗರ್ ಹುಕ್ಕುಂ ಅರ್ಜಿದಾರರಲ್ಲಿ ಮತ್ತಷ್ಟು ಆತಂಕ ಮೂಡಿಸಿವೆ. ಹಲವು ವರ್ಷಗಳಿಂದ ಉಳುಮೆ ಮಾಡುತ್ತಿರುವ ಜಮೀನುಗಳು ದಾಖಲೆ ಇಲ್ಲದ ಕಾರಣ ಯಾವುದೇ ಕ್ಷಣದಲ್ಲಿ ಕೈತಪ್ಪುವ ಭೀತಿ ರೈತರನ್ನು ಕಾಡುತ್ತಿದೆ.

ಕೆಲವು ಗ್ರಾಮಗಳಲ್ಲಿ ಸ್ಮಶಾನ, ರಸ್ತೆ, ಕೈಗಾರಿಕಾ ಯೋಜನೆಗಳ ಹೆಸರಿನಲ್ಲಿ ರೈತರು ಕೃಷಿ ಮಾಡುತ್ತಿರುವ ಜಾಗಗಳನ್ನು ವಶಪಡಿಸಿಕೊಳ್ಳಲು ಯತ್ನಗಳು ನಡೆಯುತ್ತಿರುವ ಆರೋಪವೂ ಕೇಳಿಬರುತ್ತಿದೆ. ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಗಳ ನಡುವಿನ ಗೊಂದಲವೂ ಸಮಸ್ಯೆಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ.

ಏಪ್ರಿಲ್‌ನಲ್ಲಿ ಭರವಸೆ, ಮೇ ಅಂತ್ಯವಾದರೂ ಕ್ರಮವಿಲ್ಲ

ಏಪ್ರಿಲ್ 13ರಂದು ದೊಡ್ಡಬಳ್ಳಾಪುರ ನಗರದ ತಾಲೂಕು ಕಚೇರಿ ಆವರಣದಲ್ಲಿ ಶಾಸಕ ಧೀರಜ್ ಮುನಿರಾಜು ಅಧ್ಯಕ್ಷತೆಯಲ್ಲಿ ನಡೆದ ಕಂದಾಯ ಅದಾಲತ್ ಕಾರ್ಯಕ್ರಮದಲ್ಲಿ ಇದೇ ಏಪ್ರಿಲ್ ತಿಂಗಳಾಂತ್ಯಕ್ಕೆ ಬಗರ್ ಹುಕ್ಕುಂ ಸಮಿತಿ ಸಭೆ ನಡೆಸಿ ರೈತರಿಗೆ ಭೂ ಮಂಜೂರು ಮಾಡುವ ಪ್ರಕ್ರಿಯೆ ಆರಂಭಿಸಲಾಗುವುದು. ತಿಂಗಳಾಂತ್ಯಕ್ಕೆ ಸಭೆ ಮಾಡಿ ಕನಿಷ್ಟ 100 ಮಂದಿಗೆ ಸಾಗುವಳಿ ಚೀಟಿ ವಿತರಣೆ ಭರವಸೆ ನೀಡಿದ್ದರು. ಆದರೆ, ಏಪ್ರಿಲ್ ಕಳೆದು, ಈಗ ಮೇ ತಿಂಗಳೂ ಮುಗಿಯುವ ಹಂತಕ್ಕೆ ಬಂದರೂ ಸಮಿತಿ ಸಭೆ ನಡೆಯದಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ. ಜೊತೆಗೆ ಹೊಸಕೋಟೆ, ನೆಲಮಂಗಲ, ದೇವನಹಳ್ಳಿಯಲ್ಲಿಯೂ ಸಹ ಸಮಿತಿ ಸಭೆ ನಡೆಸಿ ಅರ್ಹ ರೈತರಿಗೆ ಸಾಗುವಳಿ ಚೀಟಿ ನೀಡಿಲ್ಲ. ಇನ್ನಷ್ಟು ವಿಳಂಬ ಮಾಡದೆ ತಕ್ಷಣ ಸಮಿತಿ ಸಭೆ ನಡೆಸಿ ಅರ್ಹ ರೈತರಿಗೆ ಸಾಗುವಳಿ ಚೀಟಿ ವಿತರಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಒಟ್ಟಾರೆ, ಬಗರ್ ಹುಕ್ಕುಂ ಸಮಸ್ಯೆ ಕೇವಲ ಭೂಮಿಯ ವಿಚಾರವಲ್ಲ, ಅದು ಸಾವಿರಾರು ರೈತ ಕುಟುಂಬಗಳ ಬದುಕಿನ ಪ್ರಶ್ನೆಯಾಗಿದೆ. ಸರ್ಕಾರ ಶೀಘ್ರ ಕ್ರಮ ಕೈಗೊಂಡು ರೈತರ ದಶಕಗಳ ಕನಸಾದ ಹಕ್ಕುಪತ್ರ ವಿತರಣೆಗೆ ಸ್ಪಷ್ಟ ದಿಕ್ಕು ನೀಡಬೇಕಿದೆ.

ಸಾಗುವಳಿ ಚೀಟಿ ವಿತರಣೆ ಕುರಿತು ಶಾಸಕರೊಂದಿಗೆ ಚರ್ಚೆ ಮಾಡಲಾಗಿದೆ. ಜೂನ್ ಮೊದಲ ವಾರದಲ್ಲಿ ಬಗುರ್ ಹುಕುಂ ಸಮಿತಿ ಸಭೆ ಮಾಡಲಾಗುವುದು. ಸುಮಾರು 60 ರಿಂದ 100 ಮಂದಿ ಅರ್ಹ ರೈತರಿಗೆ ಸಾಗುವಳಿ ಚೀಟಿ ವಿತರಣೆಗೆ ಕ್ರಮ ವಹಿಸಲಾಗಿದೆ ಎಂದು ತಹಶೀಲ್ದಾರ್ ಮಲ್ಲಪ್ಪ ಕೆ ಯರಗೋಳ ತಿಳಿಸಿದ್ದಾರೆ.

ಸುಮಾರು ಮೂವತ್ತು ವರ್ಷಗಳಿಂದ ಗೋಮಾಳದಲ್ಲಿ ಉತ್ತು ಬಿತ್ತು ಬೆಳೆದು ಜೀವನ ಸಾಗಿಸುತ್ತಿದ್ದೇವೆ. ನಮೂನೆ 53 ಅರ್ಜಿ ಸಲ್ಲಿಸಿ ಸಾಗುವಳಿ ಚೀಟಿಗಾಗಿ ಕಾಯುತ್ತಿದ್ದೇವೆ.‌ ನಮ್ಮ ಹೆಸರಿನಲ್ಲಿ ದಾಖಲೆಗಳಿಲ್ಲದ‌ ಕಾರಣ ಇತ್ತಿಚೆಗೆ ಸ್ಮಶಾನಕ್ಕೆ ಜಾಗ ಬೇಕೆಂದು ನಮ್ಮಿಂದ ಭೂಮಿಯನ್ನು ಬಲವಂತವಾಗಿ ಕಿತ್ತುಕೊಳ್ಳಲು ಪ್ರಯತ್ನ‌ ನಡೆಯುತ್ತಿದೆ.‌ ಬಗರ್ ಹುಕುಂ ಕಮಿಟಿ ಸಭೆ ಆಗಿದ್ದರೆ ನಮಗೆ ಭೂಮಿ ಸಿಗುತ್ತಿತ್ತು.‌ ಈ ಸಭೆ ವಿಳಂಬದಿಂದ ನಾವು ನಮ್ಮ ಭೂಮಿ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದೇವೆ ಎಂದು ರೈತ ಕೆಂಪರಾಜು ಹೇಳಿದ್ದಾರೆ.

Ramesh Babu

Journalist

Recent Posts

ವಾಲ್ಮೀಕಿ ಜಯಂತಿ ರಜೆ ದಿನಾಂಕ ಬದಲು

ಬೆಂಗಳೂರು: ಮಹರ್ಷಿ ವಾಲ್ಮೀಕಿ ಜಯಂತಿಯ ಸಾರ್ವತ್ರಿಕ ರಜೆ ದಿನಾಂಕವನ್ನು ಬದಲಾಯಿಸಿ ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಹಿಂದೆ…

11 hours ago

ನೇಯ್ಗೆ ಉದ್ಯಮದ ಕಚ್ಚಾ ವಸ್ತುಗಳ ಬೆಲೆ ಏರಿಕೆಗೆ ಖಂಡನೆ: ನೇಕಾರ ಹೋರಾಟ ಸಮಿತಿಯಿಂದ ಪ್ರತಿಭಟನೆ

ದಿನದಿಂದ ದಿನಕ್ಕೆ ನೇಕಾರಿಕೆ ಮಾಡುವುದು ಕಷ್ಟವಾಗುತ್ತಿದೆ. ಸೀರೆ ಉತ್ಪಾದನೆಯಲ್ಲಿ ಬಳಸುವ ಕಚ್ಚ ಸಾಮಗ್ರಿಗಳ ಬೆಲೆ ಗಗನಕ್ಕೆರುತ್ತಿದೆ ಕೂಡಲೇ ಸರ್ಕಾರ ಮಧ್ಯೆ…

14 hours ago

ಜಗಳ ಬಿಡಿಸಲು ಹೋದ ಪೊಲೀಸರ ಮೇಲೆಯೇ ಹಲ್ಲೆ ಆರೋಪ: 112 ತುರ್ತು ಸೇವೆ ಸಿಬ್ಬಂದಿಗೆ ಗಾಯ: ಇಬ್ಬರು ಆರೋಪಿಗಳು ವಶಕ್ಕೆ

ದೊಡ್ಡಬಳ್ಳಾಪುರ: ಕುಡಿದ ಮತ್ತಿನಲ್ಲಿ ಪರಸ್ಪರ ಜಗಳವಾಡುತ್ತಿದ್ದವರನ್ನು ಬಿಡಿಸಲು ತೆರಳಿದ್ದ 112 ತುರ್ತು ಸೇವೆಯ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಆರೋಪ…

17 hours ago

ಮ್ಯಾನ್‌ಹೋಲ್ ತುಂಬಿ ಹೆದ್ದಾರಿಗೆ ಹರಿದ ಕೊಳಚೆ ನೀರು

ದೊಡ್ಡಬಳ್ಳಾಪುರ: ನಗರದ ಡಾ. ಬಿ.ಆರ್. ಅಂಬೇಡ್ಕರ್ (ಟಿಬಿ) ವೃತ್ತದಲ್ಲಿ ಮ್ಯಾನ್‌ಹೋಲ್ ತುಂಬಿ ತುಳುಕುತ್ತಿದ್ದು, ಕೊಳಚೆ ನೀರು ಹೆದ್ದಾರಿಗೆ ಹರಿದು ವಾಹನ…

19 hours ago

ಎಸಿ ಕಚೇರಿ ಮೇಲೆ ಲೋಕಾಯುಕ್ತ ದಾಳಿ: ಕಚೇರಿಯ ಕೆಲ ಅಧಿಕಾರಿಗಳು, ಸಿಬ್ಬಂದಿ ನಾಪತ್ತೆ: ಅಧಿಕಾರಿಗಳಿಗಾಗಿ ಕಾಯುತ್ತಿರುವ ಸಾರ್ವಜನಿಕರು

ದೊಡ್ಡಬಳ್ಳಾಪುರ: ನಗರದ ಉಪವಿಭಾಗಾಧಿಕಾರಿ (ಎಸಿ) ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಲೋಕಾಯುಕ್ತ…

20 hours ago

ಸ್ಪರ್ಧಾತ್ಮಕ ಜಗತ್ತಿಗೆ ಮಕ್ಕಳನ್ನು ಅಣಿಗೊಳಿಸಿ- ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ನೀಲಕಂಠ ಗವಾಂಕರ್ ಸಲಹೆ

ಜಗತ್ತು ದಿನದಿಂದ ದಿನಕ್ಕೆ ವೇಗವಾಗಿ ಬದಲಾಗುತ್ತಿದ್ದು, ಹೆಚ್ಚುತ್ತಿರುವ ಸ್ಪರ್ಧೆಯನ್ನು ಎದುರಿಸುವ ಸಾಮರ್ಥ್ಯವನ್ನು ಮಕ್ಕಳಲ್ಲಿ ಬೆಳೆಸಲು ಪೋಷಕರು ಹಾಗೂ ಶಿಕ್ಷಕರು ಒಟ್ಟಾಗಿ…

2 days ago