ಬಕ್ರೀದ್ ಹಬ್ಬದ ಶಾಂತಿ ಸಭೆ: ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸಕಲ ಸಿದ್ಧತೆ; ಶಾಂತಿ- ನೆಮ್ಮದಿ, ಸಂತೋಷದಾಯಕವಾಗಿ ಹಬ್ಬ ಆಚರಿಸಲು ಮನವಿ: ಸುಳ್ಳು ಸುದ್ದಿ ಹಬ್ಬಿಸಿ ಶಾಂತಿ ಭಂಗ ಉಂಟುಮಾಡಿದರೆ ಕಠಿಣ ಕ್ರಮ- ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ

ಜೂನ್ 29ರಂದು ನಡೆಯಲಿರುವ ಬಕ್ರೀದ್ ಹಬ್ಬ ದಾನ ಧರ್ಮದ ಹಬ್ಬವಾಗಿದ್ದು, ಹಬ್ಬವನ್ನು ಶಾಂತಿ, ಸಂತೋಷವಾಗಿ ಆಚರಣೆ ಮಾಡಬೇಕು. ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳು ಕಂಡು ಬಂದಲ್ಲಿ, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ಎಲ್ಲಾ ಧರ್ಮಗಳು ಶಾಂತಿ-ಸುವ್ಯವಸ್ಥೆ, ಅಹಿಂಸೆ, ಸಹಬಾಳ್ವೆ, ಸೌಹಾರ್ದ ಸೇರಿದಂತೆ ಒಳ್ಳೆ ಗುಣಗಳನ್ನು ಹೇಳುತ್ತವೆ. ಅಂತಹ ಒಳ್ಳೆ ಗುಣಗಳನ್ನು ನಾವು ನಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಂಡು ಹೋದರೆ ನಮ್ಮ ಅಭಿವೃದ್ಧಿ ಜೊತೆಗೆ ಸಮಾಜನೂ ಅಭಿವೃದ್ಧಿ ಆಗುತ್ತದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಢಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.

ನಗರದ ಬಸವ ಭವನದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವತಿಯಿಂದ ಬಕ್ರೀದ್ ಹಬ್ಬದ ಪ್ರಯುಕ್ತ ಶಾಂತಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಭೆಯಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಶಾಂತಿ‌- ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರು ಸಹಕರಿಸಬೇಕು, ಸಮಾಜದಲ್ಲಿ ಸಣ್ಣ ತಪ್ಪು ನಡೆದರೂ ಕೂಡಲೇ ಪೊಲೀಸ್ ಇಲಾಖೆ ಗಮನಕ್ಕೆ ತರಬೇಕು, ಯಾರೂ ಸಹ ಕಾನೂನು ಉಲ್ಲಂಘನೆ ಮಾಡಬಾರದು ಎಂದು ಮನವಿ ಮಾಡಿದರು.

ಯಾವುದೇ ಸಮುದಾಯವಾಗಿರಲಿ ಹಬ್ಬಗಳ ಆಚರಣೆ ವೇಳೆ ಅನ್ಯ ಧರ್ಮದ ಬಗ್ಗೆ ತಾತ್ಸಾರ ಮಾಡಬಾರದು. ಶಾಂತಿಯುತವಾಗಿ ಆಚರಿಸಿದಾಗ ಮಾತ್ರ ಭಾವೈಕ್ಯ, ಸಹಭಾಳ್ವೆ ಸಾಧ್ಯ. ಹಾಗಗಿ ಶಾಂತಿ ಭಂಗ ತರುವ ಯಾವುದೇ ಹೇಳಿಕೆಗಳು, ಸಾಮಾಜಿಕ ಜಾಲ ತಾಣಗಳಲ್ಲಿ ಪೋಸ್ಟ್ ಮಾಡುವುದು. ಅದನ್ನು ಫಾರ್ವಡ್ ಮಾಡಿ ಮತ್ತೊಬ್ಬರಿಗೆ ನೋವುಂಟು ಮಾಡುವುದು ಕಾನೂನಿನಲ್ಲಿ ಅಪರಾಧವಾಗಿದೆ. ಕಾನೂನು ಉಲ್ಲಂಘಿಸುವವರ ವಿರುದ್ದ ನಿರ್ದಾಕ್ಷ್ಯಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ಹೇಳಿದರಲ್ಲದೆ ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗಿರುವವರ ಮೇಲೆ ಈಗಾಗಲೇ ಪೊಲೀಸ್ ಇಲಾಖೆ ಕಣ್ಣಿಟ್ಟಿದೆ ಎಂದು ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ನೆಲಮಂಗಲ, ದೇವನಹಳ್ಳಿ, ಹೊಸಕೋಟೆ, ಆನೇಕಲ್ ತಾಲೂಕಿನ ಎಲ್ಲಾ ಧರ್ಮಗಳ ಮುಖಂಡರ ಸಲಹೆ, ಸೂಚನೆಗಳನ್ನು ಪಡೆದುಕೊಂಡು ಪೊಲೀಸ್ ಭದ್ರತೆ ಯಾವ ರೀತಿ ಅಳವಡಿಸಬೇಕು ಎಂಬುದನ್ನು ಚರ್ಚೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ಸಮಾಜದ ಶಾಂತಿ ಕಾಪಾಡಲು ಪೊಲೀಸ್ ಇಲಾಖೆ ಸದಾ ಸನ್ನದ್ಧವಾಗಿದೆ ಎಂದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಶಾಂತಿ ಜಿಲ್ಲೆ ಈ ಹೆಸರನ್ನು ಸದಾ ಮುಂದುವರಿಸಿಕೊಂಡು ಹೋಗಬೇಕು. ಜೊತೆಗೆ ಸ್ವಚ್ಛತೆಯನ್ನ ಕಾಪಾಡಿ ಆರೋಗ್ಯ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.

ಬಕ್ರೀದ್ ಹಬ್ಬದಂದು ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಎರಡು ಕೆಎಸ್ಆರ್ ಪಿ ತುಕಡಿ, 200 ಮಂದಿ ಹೋಮ್ ಗಾರ್ಡ್ಸ್ ಸಿಬ್ಬಂದಿಯನ್ನ ಹೆಚ್ಚುವರಿಯಾಗಿ ನಿಯೋಜನೆ ಮಾಡಲಾಗುತ್ತದೆ. ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತದೆ ಎಂದರು.

ಈ ವೇಳೆ ‌ಗ್ರಾಮಾಂತರ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪುರುಷೋತ್ತಮ್, ಡಿವೈಎಸ್ಪಿ ನಾಗರಾಜ್, ಗ್ರಾಮಾಂತರ ಜಿಲ್ಲೆಯ ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *