ಬಂಗಾರಪೇಟೆ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ ಸರಿಪಡಿಸಲು ರೈತ ಸಂಘದಿಂದ ನ.22 ರಂದು ಕೋಳಿಗಳ ಸಮೇತ ಪ್ರತಿಭಟನೆ

ಕೋಲಾರ: ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆಯನ್ನು ಸರಿಪಡಿಸಲು ವಿಫಲವಾಗಿರುವ ವೈದ್ಯಾಧಿಕಾರಿಯನ್ನು ಬೇರೆ ಕಡೆ ವರ್ಗಾವಣೆ ಮಾಡಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಆಸ್ಪತ್ರೆಯಲ್ಲಿ ಹೆಜ್ಜೆಹೆಜ್ಜೆಗೂ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ, ಗ್ರಾಮೀಣ ಪ್ರದೇಶದ ಬಡವರ ಆರೋಗ್ಯ ರಕ್ಷಣೆಗಾಗಿ ನ 22ರ ಶುಕ್ರವಾರ ಕೋಳಿಗಳ ಸಮೇತ ಆಸ್ಪತ್ರೆಯ ಮುಂದೆ ಹೋರಾಟ ಮಾಡಲು ನಗರದ ಅರಣ್ಯ ಉದ್ಯನವನದಲ್ಲಿ ಕರೆದಿದ್ದ ರೈತ ಸಂಘದ ಸಭೆಯಲ್ಲಿ ತೀರ್ಮಾನ ಮಾಡಲಾಯಿತು

ಸರ್ಕಾರಿ ಆಸ್ಪತ್ರೆ ಬಡವರ ಪಾಲಿಗೆ ಮುಳ್ಳಿನ ಹಾದಿಯಾಗಿ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಚಿನ್ನದ ಮೊಟ್ಟೆ ಇಡುವ ಇಲಾಖೆಯಾಗಿ ಆರೋಗ್ಯವಂತ ಬಡ ಕೂಲಿಕಾರ್ಮಿಕರು ಆಸ್ಪತ್ರೆಗೆ ಬಂದರೆ ಅನಾರೋಗ್ಯ ಪೀಡಿತ ರೋಗಿಗಳಾಗಿ ತಮ್ಮ ಜೀವವನ್ನು ಕಳೆದುಕೊಳ್ಳುವ ಮಟ್ಟಕ್ಕೆ ಆಸ್ಪತ್ರೆ ಹದಗೆಟ್ಟಿದೆ ಎಂದು ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಅವ್ಯವಸ್ಥೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಿ ಆಸ್ಪತ್ರೆ ಅಭಿವೃದ್ಧಿಗೆ ಕೋಟ್ಯಾಂತರ ರೂಪಾಯಿ ಅನುದಾನ ಬಿಡುಗಡೆಯಾಗುತ್ತಿದ್ದರೂ ಆಸ್ಪತ್ರೆಯಲ್ಲಿ ಮಾತ್ರ ಮೂಲಭೂತ ಸೌಕರ್ಯಗಳ ಕೊರತೆ ಹೆಚ್ಚಾಗುತ್ತಿದೆ ಹೊರತು ಸಮಸ್ಯೆ ಬಗೆಹರಿಯುತ್ತಿಲ್ಲ. ವರ್ಷಗಳಿಂದ ಮೂಲೆ ಗುಂಪಾಗಿರುವ ಸ್ಕ್ಯಾನಿಂಗ್ ಸೆಂಟರ್, ಆಂಬ್ಯುಲೆನ್ಸ್ ವ್ಯವಸ್ಥೆ, ಪಾರ್ಕಿಂಗ್, ಶುದ್ಧ ನೀರಿನ ಘಟಕದ ಯಂತ್ರೋಪಕರಣಗಳು ತುಕ್ಕು ಹಿಡಿಯುವ ಮೂಲಕ ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆ ಕಣ್ಣ ಮುಂದೆ ಇದ್ದರೂ ಸ್ಥಳೀಯ ಶಾಸಕರಾಗಲಿ ಉಸ್ತುವಾರಿ ಸಚಿವರಾಗಲಿ ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ತಲೆ ಕೆಡಿಸಿಕೊಳ್ಳದಿರುವುದು ನಾಚಿಕೆಯ ವಿಚಾರವಾಗಿದೆ ಎಂದು ಆರೋಪಿಸಿದರು.

ಜನನ ಪ್ರಮಾಣ ಪತ್ರ ಪಡೆಯಲು ತಂದೆ ಲಂಚ ನೀಡಿದರೆ ಅದೇ ತಂದೆ ಮರಣ ಹೊಂದಿದಾಗ ಮರಣ ಪ್ರಮಾಣ ಪತ್ರ ಪಡೆಯಲು ಮಗ ಹಣ ನೀಡಿ ಪ್ರಮಾಣ ಪತ್ರ ಪಡೆಯುವ ಮಟ್ಟಕ್ಕೆ ಆಸ್ಪತ್ರೆ ಹದಗೆಟ್ಟಿದೆ. ಹೆಜ್ಜೆ ಹೆಜ್ಜೆಗೂ ಬಡರೋಗಿಗಳನ್ನು ಒಂದಲ್ಲಾ ಒಂದು ಸಮಸ್ಯೆಯಡಿ ಹಣ ಸುಲಿಗೆ ಮಾಡುವ ಬ್ರೋಕರ್ ಆಸ್ಪತ್ರೆಯಾಗಿ ಮಾರ್ಪಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಳಿ ಚೀಟಿ ದಂಧೆ:
ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ ಮಾತನಾಡಿ, ಸರ್ಕಾರಿ ಆಸ್ಪತ್ರೆಯಲ್ಲಿ ಬಡವರಿಗೆ ಅನುಕೂಲವಾಗುವ ರಕ್ತ ಪರೀಕ್ಷೆ, ಕ್ಯಾಲ್ಸಿಯಂ ಔಷಧಿಗಳ ಲಭ್ಯತೆಯಿದ್ದರೂ ಇಲ್ಲಿನ ವೈದ್ಯರು ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್ ಮತ್ತು ಮೆಡಿಕಲ್ ಸ್ಟೋರ್ ಗಳ ಜೊತೆ ಶಾಮೀಲಾಗಿ ಪ್ರತಿಯೊಂದಕ್ಕೂ ಹೊರಗಡೆ ಚೀಟಿ ಬರೆದುಕೊಡುವ ಮೂಲಕ ವ್ಯಾಪಾರದ ವಹಿವಾಟಿನಲ್ಲಿ 100ಕ್ಕೆ 40% ಕಮೀಷನ್ ಪಡೆಯುವ ಮಟ್ಟಕ್ಕೆ ಆಸ್ಪತ್ರೆ ಹದಗೆಟ್ಟಿದೆ ಎಂದು ಕಿಡಿಕಾರಿದರು.

ಬಡ ಕೂಲಿ ಕಾರ್ಮಿಕರು ಸರ್ಕಾರಿ ಆಸ್ಪತ್ರೆಗೆ ಹೆರಿಗೆಗೆ ಬಂದರೆ ೧೦ ಸಾವಿರ ಜ್ವರಕ್ಕೆ ಬಂದರೆ ೧ ಸಾವಿರ ಲಂಚ ನೀಡದೇ ಇದ್ದರೆ ಆಸ್ಪತ್ರೆಯ ಬಾಗಿಲಿನ ನೆರಳು ಸಹ ಬಡ ರೋಗಿಗಳ ಮೇಲೆ ಬೀಳುವಂತಿಲ್ಲ ಹಣವಿದ್ದರೆ ಗುಣ ಇಲ್ಲವಾದರೆ ಹೆಣವಂತಾಗಿದೆ ಆಸ್ಪತ್ರೆಯ ಲಂಚವತಾರ ಇರುವ ಟಿ,ಸಿ ಯನ್ನು ಸರಿಪಡಿಸದೆ ಅಗತ್ಯವಿದ್ದಾಗ ಜನರೇಟರ್ ಉಪಯೋಗಿಸದೆ ತುರ್ತು ಪರಿಸ್ಥತಿಯಲ್ಲಿರುವ ರೋಗಿಗಳ ಜೊತೆ ಚೆಲ್ಲಾಟವಾಡುತ್ತಿರುವ ವೈದ್ಯಾಧಿಕಾರಿಗಳ ನಕಲಿ ದಾಖಲೆಗಳ ಸೃಷ್ಠಿಕರ್ತರಾಗಿ ಕೋಟಿ ಕೋಟಿ ಹಣವನ್ನು ಬಡವರ ಹೆಸರಿನಲ್ಲಿ ಲೂಟಿ ಮಾಡುತ್ತಿದ್ದಾರೆಂದು ಆರೋಪಿಸಿದರು.

ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆ, ಖಾಸಗಿ ಆಸ್ಪತ್ರೆಗಳ ದುಬಾರಿ ವೆಚ್ಚ ಇವುಗಳನ್ನೇ ಬಂಡವಾಳವಾಗಿಸಿಕೊAಡಿರುವ ಮರಣ ಹೊಂದಿರುವವರ ಹೆಸರಿನಲ್ಲಿ ನಕಲಿ ವೈದ್ಯರ ಪ್ರಮಾಣ ಪತ್ರಗಳನ್ನು ಪಡೆದು ಆಂಧ್ರ ತಮಿಳುನಾಡು ಮೂಲದ ವೈದ್ಯರು ಗಡಿಭಾಗಗಳಲ್ಲಿ ಕ್ಲಿನಿಕ್‌ಗಳನ್ನು ತೆರೆದು ಗುಣಮಟ್ಟದ ಚಿಕಿತ್ಸೆ ಹೆಸರಿನಲ್ಲಿ ಬಡ ರೋಗಿಗಳ ಜೊತೆ ಚೆಲ್ಲಾಟವಾಡುತ್ತಿದ್ದರೂ ತಡೆಯಬೇಕಾದ ಆರೋಗ್ಯಾಧಿಕಾರಿಗಳು ತಿಂಗಳ ಮಾಮೂಲಿ ವಸೂಲಿ ಮಾಡಿ ಅವರ ವಿರುದ್ಧ ಕ್ರಮಕೈಗೊಳ್ಳಲು ಕೇಳಿದರೆ ರಾಜಕೀಯ ಒತ್ತಡದ ನೆಪ ಹೇಳುತ್ತಿದ್ದಾರೆ ಎಂದು ಆರೋಪಿಸಿದರು.

24 ಗಂಟೆಯಲ್ಲಿ ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆಯನ್ನು ಸರಿಪಡಿಸಿ ನಕಲಿ ಕ್ಲಿನಿಕ್‌ಗಳಿಗೆ ಕಡಿವಾಣ ಹಾಕಬೇಕು. ಒತ್ತಾಯಿಸಿ ನ.22 ರ ಶುಕ್ರವಾರ ಆಸ್ಪತ್ರೆ ಮುಂದೆ ಅಹೋರಾತ್ರಿ ಕೋಳಿಗಳ.ಸಮೇತ ಧರಣಿ ಹಮ್ಮಿಕೊಳ್ಳುವ ನಿರ್ಧಾರ ಕೈಗೂಳ್ಳಲಾಯಿತೆಂದರು.

ಸಭೆಯಲ್ಲಿ ಜಿಲ್ಲಾದ್ಯಕ್ಷ ಮಂಜುನಾಥ ಕದಿರಿನತ್ತ ಅಪೋಜಿರಾವ್. ಮುನಿಕೃಷ್ಣ ಚಾಂದ್‌ಪಾಷ ಕಿರಣ ವೇಣು ವಿಶ್ವ ಮುನಿರಾಜು ಶೈಲಜಾ ರತ್ನಮ್ಮ ವೆಂಕಟಮ್ಮ ಗೌರಮ್ಮ ಕಂಪಮ್ಮ ಮುಂತಾದವರಿದ್ದರು.

Leave a Reply

Your email address will not be published. Required fields are marked *