ಫ್ರೆಂಡ್ ಶಿಪ್ ಡೇ ಮತ್ತು ಭೀಮನ ಅಮಾವಾಸ್ಯೆ ಅದರಲ್ಲೂ ವಿಕೇಂಡ್ ಎಂಜಾಯ್ ಮಾಡಲು ನಂದಿಗಿರಿಧಾಮಕ್ಕೆ ಲಗ್ಗೆ ಇಟ್ಟ ಜನ: ಬೆಳ್ಳಂ ಬೆಳಗ್ಗೆ ಬೆಟ್ಟದುದ್ದಕ್ಕೂ ಫುಲ್ ಟ್ರಾಫಿಕ್ ಜಾಮ್: ನಂದಿಗಿರಿಧಾಮದ ಪ್ರಕೃತಿ ಸೌಂದರ್ಯಕ್ಕೆ ‌ಮನಸೋತ ಪ್ರಕೃತಿ ಪ್ರೇಮಿಗಳು

ಇಂದು ಫ್ರೆಂಡ್ ಶಿಪ್ ಡೇ ಮತ್ತು ಭೀಮನ ಅಮಾವಾಸ್ಯೆ ಹಾಗಾಗಿ ಸ್ನೇಹಿತರು ಮತ್ತು ಕುಟುಂಬಸ್ಥರು, ಬಡವರ ಪಾಲಿನ ಊಟಿ ಎಂದೇ ಪ್ರಖ್ಯಾತಿ ಪಡೆದಿರುವ ನಂದಿಗಿರಿಧಾಮಕ್ಕೆ ಲಗ್ಗೆಯಿಟ್ಟಿದ್ದಾರೆ‌. ಪ್ರಕೃತಿ ಸೌಂದರ್ಯಕ್ಕೆ ಮನಸೋತು ಮೈ ಚಳಿ ಬಿಟ್ಟು ಕುಣಿದು ಕುಪ್ಪಳಿಸಿದ್ದಾರೆ.

ಹೌದು, ಇಂದು ಸ್ನೇಹಿತರ ದಿನಾಚರಣೆ ಜೊತೆಗೆ ಭೀಮನ ಅಮಾವಾಸ್ಯೆ. ಹಾಗಾಗಿ ಕುಟುಂಬಸ್ಥರು ಮತ್ತು ಸ್ನೇಹಿತರು ಚಿಕ್ಕಬಳ್ಳಾಪುರದ ಪ್ರಸಿದ್ಧ ನಂದಿಗಿರಿಧಾಮಕ್ಕೆ ಲಗ್ಗೆಯಿಟ್ಟಿದ್ದಾರೆ.  ಮುಂಜಾನೆ  5 ಗಂಟೆಗೆ ಬೆಟ್ಟದ ತಪ್ಪಲಿಗೆ ಆಗಮಿಸಿದ ಜನರು ಒಂದು ಗಂಟೆ ಸುತ್ತಮುತ್ತಲಿನ ವಾತಾವರಣದಲ್ಲಿ ಕಾಲಕಳೆದರು. ನಂತರ 6 ಗಂಟೆಯಿಂದ ನಂದಿಗಿರಿಧಾಮಕ್ಕೆ ಪ್ರವೇಶ ಆರಂಭ ಆಗುತ್ತಿದ್ದಂತೆ ಏಕಾಏಕಿ ವಾಹನಗಳು ಬೆಟ್ಟ ಏರಲು ಪ್ರಾರಂಭಿಸಿದವು. ಈ ವೇಳೆ‌ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಯಿತು. ಪ್ರತಿ ಎರಡು ನಿಮಿಷಕ್ಕೆ ಒಂದು ಬಾರಿ ಟ್ರಾಫಿಕ್ ಜಾಮ್ ಎದುರಾಗುತ್ತಿತ್ತು. ಇನ್ನೂ ನಂದಿಗಿರಿಧಾಮದ ಸೆಲ್ಫಿ ಗ್ಯಾಲರಿಯಲ್ಲಿ ನಿಂತು ಸೂರ್ಯೋದಯ ನೋಡುವುದೇ ಇಲ್ಲಿ ಫೇಮಸ್. ಆದರೆ ಇಂದು ಮೋಡ ಕವಿದ ವಾತಾವರಣ ಇದ್ದ ಕಾರಣ ಸೂರ್ಯೋದಯ ಕಾಣದೆ ಪ್ರವಾಸಿಗರು ನಿರಾಸೆ ಅನುಭವಿಸಿದರು.

ಇನ್ನು ಇಂದು ವೀಕೆಂಡ್ ಆಗಿದ್ದ ಹಿನ್ನೆಲೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದು, ನಂದಿಗಿರಿಧಾಮದ ಪಾರ್ಕಿಂಗ್ ಫುಲ್ ಆಗಿತ್ತು. ಸ್ನೇಹಿತರು, ಪ್ರೇಮಿಗಳು, ಕುಟುಂಬಸ್ಥರು ಬೆಟ್ಟದಲ್ಲಿ ಪ್ರಕೃತಿ ಸೌಂದರ್ಯಕ್ಕೆ ಮನಸೋತರು. ಎಲ್ಲಿ ನೋಡಿದರೂ ಸೆಲ್ಪಿ ತೆಗೆದುಕೊಳ್ಳುವುದು ಸಾಮಾನ್ಯವಾಗಿತ್ತು. ಭಾರೀ ಮಳೆಯಿಂದಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಸಿ ತಾಣಗಳಲ್ಲಿ ನಿರ್ಬಂಧ ಹೇರಿದ ಹಿನ್ನೆಲೆ ನಂದಿಗಿರಿಧಾಮದಲ್ಲಿ ಜನಸಂದಣಿ ಹೆಚ್ಚಾಗಿತ್ತು. ಜಡಿ ಮಳೆಗೆ ಮಳೆಯ ಹನಿಗಳು ಬೀಳುತ್ತಿದ್ದಂತೆ ನಂದಿಗಿರಿಧಾಮ ಕರಾವಳಿ ಭಾಗದ ಸೌಂದರ್ಯವೂ ನಾಚುವಂತೆ ಇತ್ತು. ಟಿಪ್ಪು ಡ್ರಾಪ್, ಸೆಲ್ಫಿ ಗ್ಯಾಲರಿ ಬಳಿ ಎಲ್ಲಿ ನೋಡಿದರೂ ಜನವೋ ಜನ. ಮೊದಲ ಬಾರಿ ಬಂದ ಪ್ರವಾಸಿಗರು ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಫುಲ್ ಫಿದಾ ಆಗಿ ಒಂದು ಕ್ಷಣ ಮೈ ಮರೆತರು.

ಒಟ್ಟಾರೆ ಸ್ನೇಹಿತರ ದಿನಾಚರಣೆ ದಿನ ಸ್ನೇಹಿತರೆಲ್ಲರೂ ಪ್ರಕೃತಿ ಸೌಂದರ್ಯದ ಜೊತೆಯಲ್ಲಿ ಕಾಲ ಕಳೆದರು. ಮೊದಲ ಬಾರಿಗೆ ಇಲ್ಲಿಗೆ ಬಂದವರು ಸೂರ್ಯೋದಯ ನೋಡಲು ಬೇಸರ ಆಗಿದ್ದು ಬಿಟ್ಟರೆ ಎಲ್ಲರೂ ಮೈ ಮರೆತು ಪ್ರಕೃತಿ ಸೊಬಗನ್ನ ಸವಿದರು.

Leave a Reply

Your email address will not be published. Required fields are marked *