
ಕೋಲಾರ: ರಾಜ್ಯ ಸರ್ಕಾರವು ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್) ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ (ಒಪಿಎಸ್) ಮರು ಜಾರಿಗೊಳಿಸುವಿಕೆ, ಏಳನೇ ವೇತನ ಆಯೋಗದ ವರದಿ ಯಥಾವತ್ತಾಗಿ ಜಾರಿ ಸೇರಿದಂತೆ ಸರ್ಕಾರಿ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಫೆ.20 ರಂದು ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ನೌಕರರ ಬೃಹತ್ ಸಮಾವೇಶವನ್ನು ಆಯೋಜನೆ ಮಾಡಲಾಗಿದೆ ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎ.ಅಜಯ್ ಕುಮಾರ್ ತಿಳಿಸಿದರು.
ಕಾರ್ಯಕ್ರಮ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಸರ್ಕಾರವು ಈಗಾಗಲೇ ಹಳೆ ಪಿಂಚಣಿ ಯೋಜನೆಯನ್ನು ಮರು ಜಾರಿ ಮಾಡುವ ಸಾಧ್ಯತೆಗಳ ಕುರಿತು ಪರಿಶೀಲಿಸಿ ವರದಿ ನೀಡಲು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚನೆ ಮಾಡಿದೆ. ಆದರೆ ಈ ಸಮಿತಿಗೆ ಕಾಲಮಿತಿ ನಿಗದಿ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿ ಒಪಿಎಸ್ ಮರು ಜಾರಿಗೊಳಿಸಬೇಕು ಎಂಬುದು ರಾಜ್ಯಾದ್ಯಂತ ಇರುವ ಸರ್ಕಾರಿ ನೌಕರರ ಪ್ರಮುಖ ಬೇಡಿಕೆಯಾಗಿದ್ದು, ಈ ಸಮಾವೇಶದಲ್ಲಿ ಗಂಭೀರವಾಗಿ ಸರ್ಕಾರಕ್ಕೆ ಮನವರಿಕೆ ಮಾಡಲಾಗುತ್ತದೆ ಎಂದು ತಿಳಿಸಿದರು.
ನೌಕರರ ನೆಮ್ಮದಿಯ ಬದುಕಿಗಾಗಿ ಆರೋಗ್ಯ ಸಂಜೀವಿನಿ ಯೋಜನೆ ಲೋಕಾರ್ಪಣೆ ಮಂಡಿಸಲಾಗುತ್ತದೆ ಜೊತೆಗೆ ಸರ್ಕಾರದ ಅಧಿಕಾರಿ, ನೌಕರರು ಹಾಗೂ ಸರ್ಕಾರದ ಅಧೀನಕ್ಕೊಳಪಡುವ ನೌಕರರು ಕಾಲಕಾಲಕ್ಕೆ ವೇತನ ಹಾಗೂ ಭತ್ಯೆಗಳನ್ನು ಪರಿಷ್ಕರಣೆಯೊಂದಿಗೆ ಪಡೆಯುವುದು ಅವರ ನ್ಯಾಯಸಮ್ಮತ ಹಕ್ಕಾಗಿದ್ದು, ಪ್ರಸ್ತುತ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆಯಲ್ಲಿ ನೌಕರರು ಕುಟುಂಬ ನಿರ್ವಹಣೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವುದರಿಂದ ನೌಕರರ ವೇತನ ಪರಿಷ್ಕರಣೆ ಮಾಡಿ ಆರ್ಥಿಕ ವ್ಯತ್ಯಾಸಗಳನ್ನು ಸರಿಪಡಿಸಲು ಸರ್ಕಾರವನ್ನು ಒತ್ತಾಯಿಸಲಾಗುತ್ತದೆ ಎಂದು ತಿಳಿಸಿದರು.
ಈ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪಾಲ್ಗೊಳ್ಳಲಿದ್ದು ಕಾರ್ಯಕ್ರಮ ಅಧ್ಯಕ್ಷತೆಯನ್ನು ನೌಕರರ ಸಂಘದ ರಾಜ್ಯ ಅಧ್ಯಕ್ಷ ಸಿ.ಎಸ್ ಷಡಾಕ್ಷರಿ ವಹಿಸಲಿದ್ದಾರೆ ಸಮಾವೇಶದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯರು ಹಾಗೂ ಎಲ್ಲಾ ಜಿಲ್ಲಾ ತಾಲ್ಲೂಕು ಶಾಖೆಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ನಿರ್ದೇಶಕರು ಭಾಗವಹಿಸಲಿದ್ದಾರೆ ಎಂದು ಅಜಯ್ ಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದರು.