ಶ್ರೀ ಜಗದ್ಗುರು ಹಸರಂಗಿ ಅಜ್ಜಯ್ಯ ಧಾರ್ಮಿಕ ಸಂಸ್ಥಾನ ಹಾಗೂ ಶ್ರೀ ಹಸರಂಗಿ ಅಜ್ಜಯ್ಯ ಚಾರಿಟಬಲ್ ಟ್ರಸ್ಟ್ ವತಿಯಿಂದ ಜಗದ್ಗುರು ಹಸರಂಗಿ ಅಜ್ಜಯ್ಯ ಮತ್ತು ಬಾಲಾ ತ್ರಿಪುರಸುಂದರಿ ಅಮ್ಮನವರ ವಿಗ್ರಹ ಪ್ರಾಣ ಪ್ರತಿಷ್ಠಾಪನ ಕಾರ್ಯಕ್ರಮವನ್ನ ತಾಲೂಕಿನ ಲಕ್ಕಸಂದ್ರ ಬಳಿಯಿರುವ ಶ್ರೀ ಕ್ಷೇತ್ರ ಪುಣ್ಯಧಾಮದಲ್ಲಿ ಫೆ. 15, 16ರಂದು ಆಯೋಜನೆ ಮಾಡಲಾಗಿದೆ ಎಂದು ಪುಣ್ಯಧಾಮದ ಪೀಠಾಧ್ಯಕ್ಷ ಗುರುದೇವ ಗುರೂಜಿ ತಿಳಿಸಿದರು.
ಈ ಕುರಿತು ಲಕ್ಕಸಂದ್ರದ ಪುಣ್ಯಧಾಮದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮಕ್ಕೆ ಸುಮಾರು 15ಕ್ಕೂ ಹೆಚ್ಚು ಶಕ್ತಿ ಕೇಂದ್ರ ಹಾಗೂ ವಿವಿಧ ಮಠಗಳ ಸ್ವಾಮೀಜಿಗಳು, ನೂರಾರು ಮಂದಿ ಗಣ್ಯರು, ಸಾವಿರಾರು ಭಕ್ತಮಹಾಶಯರು ಭಾಗವಹಿಸಲಿದ್ದಾರೆ ಎಂದರು.
ಫೆ.15ರಂದು ಗುರು ಪ್ರಾರ್ಥನೆ, ಮಹಾಗಣಪತಿ ಪೂಜೆ, ಕಳಶಸ್ಥಾಪನೆ, ವಾಸ್ತು ಹೋಮ, ಮಹಾ ಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ ಮಾಡಲಾಗುತ್ತದೆ. ಫೆ.16ರಂದು ಗೋಪೂಜೆ, ಪ್ರಾಣ ಪ್ರತಿಷ್ಠಾಪನೆ, ಗೋಪ್ರವೇಶ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಪ್ರಧಾನ ದೇವತೆಗಳ ಹೋಮ, ಲಲಿತಾ ಹೋಮ, ಮಹಾಪುಣ್ಯಾಹುತಿ ಹೋಮ, ಕುಂಭಾಭಿಷೇಕ ಸೇರಿದಂತೆ ವಿವಿಧ ಪೂಜಾ ವಿಧಿವಿಧಾನಗಳನ್ನ ನೆರವೇರಿಸಲಾಗುವುದು ಎಂದು ಮಾಹಿತಿ ನೀಡಿದರು.
ಉತ್ತರ ಕರ್ನಾಟಕ ಭಾಗದಲ್ಲಿ ಅಜ್ಜಯ್ಯನವರನ್ನು ಹೆಚ್ಚಾಗಿ ಆರಾಧಿಸಲಾಗುತ್ತದೆ. ಎಲ್ಲಾ ಜಾತಿ, ಧರ್ಮ, ಬೇಧ-ಭಾವವಿಲ್ಲದೆ ಪೂಜೆ ಪುನಸ್ಕಾರ ಮಾಡಲಾಗುವುದು ಎಂದು ಹೇಳಿದರು.