ಫೀಡರ್‌ ಸೌರೀಕರಣ ಅನುಷ್ಠಾನಕ್ಕಾಗಿ 3 ಸಾವಿರ ಎಕರೆ ಭೂಮಿ ಅಗತ್ಯ- ಸಿಎಂ ಸಿದ್ದರಾಮಯ್ಯ

PM-KUSUM Component C ಯೋಜನೆಯಡಿ ಫೀಡರ್‌ ಸೌರೀಕರಣಕ್ಕಾಗಿ ರಾಜ್ಯದ 400 ಉಪಕೇಂದ್ರಗಳ ಬಳಿ ಸೌರ ವಿದ್ಯುತ್‌ ಘಟಕ ಸ್ಥಾಪನೆಗೆ ಇಂಧನ ಇಲಾಖೆಗೆ ಜಮೀನು ಹಸ್ತಾಂತರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ ಕ್ರಮ ವಹಿಸಲು ಸುತ್ತೋಲೆ ಹೊರಡಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಇಂದು PM-KUSUM Component C ಯೋಜನೆಗೆ ಗುರುತಿಸಿದ ಸರ್ಕಾರಿ ಭೂಮಿಯನ್ನು ಯೋಜನೆಯ ಅನುಷ್ಠಾನಕ್ಕಾಗಿ ಕಂದಾಯ ಇಲಾಖೆಗೆ ಹಸ್ತಾಂತರಿಸುವ ಕುರಿತು ಉನ್ನತ ಮಟ್ಟದ ಸಭೆ ನಡೆಸಿ, ಕೆಲವು ಪ್ರಮುಖ ಸೂಚನೆಗಳನ್ನು ನೀಡಿದರು.

400 ವಿದ್ಯುತ್‌ ಉಪಕೇಂದ್ರಗಳ ಸಮೀಪದಲ್ಲಿ ಫೀಡರ್‌ ಸೌರೀಕರಣ ಅನುಷ್ಠಾನಕ್ಕಾಗಿ 3000 ಎಕರೆ ಭೂಮಿ ಅಗತ್ಯವಿದೆ. ಜಿಲ್ಲಾಧಿಕಾರಿಗಳಿಗೆ ಭೂಮಿ ಹಂಚಿಕೆ ಮಾಡಲು ಅಧಿಕಾರ ಪ್ರತ್ಯಾಯೋಜನೆ ಮಾಡಿದರೆ ತ್ವರಿತವಾಗಿ ಯೋಜನೆ ಅನುಷ್ಠಾನ ಮಾಡಲು ಸಾಧ್ಯವಿದೆ. ಇದರಿಂದ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು ಹೊತ್ತಿನಲ್ಲೇ ವಿದ್ಯುತ್‌ ಪೂರೈಕೆ ಮಾಡಲು ಸಹ ಸಾಧ್ಯವಾಗಲಿದೆ ಎಂದರು.

ಇಂಧನ ಇಲಾಖೆಯ ಸಂಬಂಧಿಸಿದ ಅಧಿಕಾರಿಗಳು ಸ್ಥಳೀಯ ತಹಶೀಲ್ದಾರರೊಂದಿಗೆ ಜಮೀನು ಗುರುತಿಸಿ, ಕೂಡಲೇ ಸೂಕ್ತ ಪ್ರಸ್ತಾವನೆ ಕಳುಹಿಸಿ, ಹಸ್ತಾಂತರಕ್ಕೆ ಕ್ರಮ ಕೈಗೊಳ್ಳಬೇಕು. ಕಂದಾಯ ಇಲಾಖೆಯು ಇಂಧನ ಇಲಾಖೆಗೆ ಭೂಮಿಯನ್ನು ಲೀಸ್‌ ಆಧಾರದಲ್ಲಿ ಹಸ್ತಾಂತರಿಸಬೇಕು. ಆದರೆ ಈ ಆಸ್ತಿಯನ್ನು ಇಂಧನ ಇಲಾಖೆ ಖಾಸಗಿಯವರಿಗೆ ಹಸ್ತಾಂತರಿಸುವಂತಿಲ್ಲ ಎಂಬ ಷರತ್ತಿನೊಂದಿಗೆ ಹಸ್ತಾಂತರ ಮಾಡಬೇಕು ಎಂದು ತಿಳಿಸಿದರು.

ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್‌ ನಡೆಸಿ ಖುದ್ದು ಸೂಚನೆ ನೀಡುತ್ತೇನೆ ಹಾಗೂ ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರಿಗೂ ಈ ಕುರಿತು ಆದ್ಯತೆ ನೀಡಲು ಸೂಚಿಸುತ್ತೇನೆ ಎಂದರು.

Leave a Reply

Your email address will not be published. Required fields are marked *