ಪ.ಜಾ, ಪ.ಪಂ ಮೀಸಲಾತಿ ಪ್ರಮಾಣ ಹೆಚ್ಚಳ: ಸಂವಿಧಾನದ 9ನೇ ಶೆಡ್ಯೂಲ್‌ನಲ್ಲಿ ಸೇರ್ಪಡೆಗೆ ಕೇಂದ್ರಕ್ಕೆ ರಾಜ್ಯ ಸರ್ಕಾರ ಪ್ರಸ್ತಾವನೆ; ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೇಂದ್ರ ಗೃಹ ಇಲಾಖೆಗೆ ಪತ್ರ

ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಮೀಸಲಾತಿ ಪ್ರಮಾಣ ಶೇ.15 ರಿಂದ ಶೇ. 17 ಕ್ಕೆ ಹಾಗೂ ಪರಿಶಿಷ್ಟ ಪಂಗಡದ ಶೇ. 3 ರಿಂದ ಶೇ. 7 ಕ್ಕೆ ಹೆಚ್ಚಿಸಲಾಗಿದೆ. ಮೀಸಲಾತಿ ಹೆಚ್ಚಳ ಕುರಿತ ಕಾಯ್ದೆಯನ್ನು ಸಂವಿಧಾನದ 9 ನೇ ಶೆಡ್ಯೂಲ್ ಗೆ ಸೇರಿಸುವ ಕುರಿತ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು‌ ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

ಅವಕಾಶ ವಂಚಿತ ಸಮುದಾಯಗಳ ಕುರಿತು ನಮ್ಮ ಸರ್ಕಾರದ ಬದ್ಧತೆಗೆ ಇದು ನಿದರ್ಶನವಾಗಿದೆ. ಉಳಿದ ಸಾಂವಿಧಾನಿಕ ಪ್ರಕ್ರಿಯೆಗಳು ಜಾರಿಯಲ್ಲಿವೆ.

ವಿರೋಧ ಪಕ್ಷಗಳ ಟೀಕೆ ಟಿಪ್ಪಣಿಗೆ ಪ್ರತಿಕ್ರಿಯಿಸಿದ ಅವರು, ಜನ ಜಾಣರಿದ್ದಾರೆ. ನಿಮ್ಮ ಆರೋಪಗಳು ಕಂಠ ಶೋಷಣೆಗೆ ಮಾತ್ರ ಎಂದು ತಿರುಗುಬಾಣ ನೀಡಿದ್ದಾರೆ.

ಪರಿಶಿಷ್ಟ ಸಮುದಾಯಗಳ ಮೀಸಲಾತಿ ಹೆಚ್ಚಳದ ಬಗ್ಗೆ ನಮಗಿರುವ ಬದ್ಧತೆಯನ್ನು ಪ್ರಶ್ನಿಸುತ್ತಿರುವವರು ಒಮ್ಮೆ ಕನ್ನಡಿಯಲ್ಲಿ ತಮ್ಮ ಮುಖ ನೋಡಿಕೊಳ್ಳಲೇಬೇಕು. ಶೋಷಿತ ವರ್ಗಗಳು 40 ವರ್ಷಗಳಿಂದ ನಿಮ್ಮೆದುರು ಆಸೆ, ನಿರೀಕ್ಷೆ ಭರವಸೆಗಳಿಂದ ಕೈಯೊಡ್ಡಿ ನಿಂತಿದ್ದವು.

ಬಾಯಿ ಮಾತಿನ ಭರವಸೆ ಕೊಟ್ಟು-ಕೊಟ್ಟು ಓಟು ಒತ್ತಿಸಿಕೊಂಡವರು ನೀವು, ಯಾವ ಭರವಸೆ ಕೊಡದಿದ್ದರೂ ಮೀಸಲಾತಿ ಹೆಚ್ಚಳ ಮಾಡಿ ಅವರ ಬದುಕಿಗೆ ಬೆಳಕಾದವರು ನಾವು. ಹೆಚ್ಚಿಸಲಾಗಿರುವ ಮೀಸಲಾತಿಯ ಲಾಭಗಳನ್ನು ಈಗಾಗಲೇ ಶೋಷಿತ ಸಮುದಾಯಗಳು ಪಡೆಯುತ್ತಿವೆ ಎಂದು ಸಾಮಾಜಿಕ ಜಾಲತಾಣದಲ್ಲಿ‌ ಸಿಎಂ ಬೊಮ್ಮಾಯಿ‌ ಬರೆದುಕೊಂಡಿದ್ದಾರೆ.

ರಾಜ್ಯದಲ್ಲಿ ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡುವಂತೆ ಆಗ್ರಹಿಸಿ ವಾಲ್ಮೀಕಿ ಸಮುದಾಯದ ಪ್ರಸನ್ನಾನಂದಪುರಿ ಸ್ವಾಮೀಜಿ ಅವರು ನಿರಂತರವಾಗಿ ಆಮರಣಾಂತ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದರು. ಮೀಸಲು ಪರಿಷ್ಕರಣೆ ಸಂಬಂಧ ನಾಗಮೋಹನ್ ದಾಸ್ ಸಮಿತಿ ವರದಿಯನ್ನು ಅನುಷ್ಠಾನ ಮಾಡುವಂತೆಯೂ ಆಗ್ರಹಿಸಿದ್ದರು. ತೀವ್ರ ಹೋರಾಟಕ್ಕೆ ಮಣಿದ ಸರ್ಕಾರ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಅವರ ವರದಿಯನ್ನು ಅವಲೋಕಿಸಿ, ರಾಜ್ಯಕ್ಕೆ ಶಿಫಾರಸು ಮಾಡಲು ನ್ಯಾ .ಸುಭಾಷ್ ಅಡಿ ಸಮಿತಿಯನ್ನು ಕೂಡ ರಚಿಸಿತ್ತು .

ಈ ಸಮಿತಿ ಎಸ್ಸಿ ಎಸ್ಟಿ ಮೀಸಲು ಪರಿಷ್ಕರಣೆ ಸಂಬಂಧ ತನ್ನ ಅಭಿಪ್ರಾಯ ದಾಖಲಿಸಿ, ಕೇಂದ್ರ ಸರ್ಕಾರಿ ಉದ್ಯೋಗ ಹಾಗೂ ರಾಜ್ಯ ಸರ್ಕಾರಿ ಉದ್ಯೋಗದಲ್ಲಿ ಬುಡಕಟ್ಟು ಪಂಗಡಗಳ ಮೀಸಲಾತಿಯನ್ನು ಹೋಲಿಸಿದಲ್ಲಿ ಬುಡಕಟ್ಟು ಮೀಸಲಾತಿ ಕೊರತೆಯನ್ನು ಗುರುತಿಸಿತ್ತು. ಈ ಅಂಶವನ್ನು ಪರಿಗಣಿಸಿ ರಾಜ್ಯ ಸರ್ಕಾರ ಮೀಸಲಾತಿ ಹೆಚ್ಚಳ ಮಾಡಿದೆ.

Leave a Reply

Your email address will not be published. Required fields are marked *