ಪರಿಶಿಷ್ಟ ಜಾತಿಯೊಳಗಿನ ಉಪ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ಸಂವಿಧಾನ ಬದ್ಧವಾದ ಅಧಿಕಾರವಿದೆ. ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಅನ್ವಯ ಈ ಆದೇಶವನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ಇದೆ ಎಂದು ಆ.01 ರಂದು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದು. ಕಳೆದ 30 ವರ್ಷಗಳಿಂದ ಪ್ರೊ.ಬಿ. ಕೃಷ್ಣಪ್ಪನವರು ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಹೋರಾಟಕ್ಕೆ ಸಿಕ್ಕ ಜಯವಾಗಿದೆ. ಅಲ್ಲದೇ ಇದು ಮೀಸಲಾತಿ ವ್ಯವಸ್ಥೆಯಲ್ಲಿ ಬಹಳ ಮುಖ್ಯವಾದ ಹೆಜ್ಜೆಯಾಗಿದೆ. ಈ ಹಿಂದೆ ಈ ವಿಚಾರದಲ್ಲಿ ಪರಸ್ಪರ ವಿರುದ್ಧವಾದ ತೀರ್ಪುಗಳನ್ನು ನ್ಯಾಯಾಲಯಗಳು ನೀಡಿದ್ದವು. ಈಗ ಸಿಜಿಐ ಡಿ. ವೈ. ಚಂದ್ರಚೂಡ್ ನೇತೃತ್ವದ ಏಳು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ಈ ವಿಚಾರದಲ್ಲಿದ್ದ ಗೊಂದಲವನ್ನು ಪರಿಹರಿಸಿದೆ. ಪರಿಶಿಷ್ಟಜಾತಿಗಳ ಒಳಗೆ ಇರುವ ಕೆಲವು ಉಪಜಾತಿಗಳಿಗೆ ಮೀಸಲಾತಿಯ ಪ್ರಯೋಜನವನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಇಂತಹ ಉಪಜಾತಿಗಳು ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿವೆ. ಹಿಂದುಳಿದಿರುವಿಕೆಯ ಆಧಾರದಲ್ಲಿ ಮೀಸಲಾತಿ ನೀಡಿದರೆ ಈ ತನಕ ಮೀಸಲಾತಿಯ ಲಾಭ ಪಡೆದುಕೊಳ್ಳಲು ಸಾಧ್ಯವಾಗದ ಸಮುದಾಯಗಳಿಗೆ ಕೂಡ ಪ್ರಯೋಜನ ದೊರೆಯಬಹುದಾಗಿದೆ. ಆದರೆ ಆದೇಶವನ್ನು ಜಾರಿಗೊಳಿಸುವಲ್ಲಿ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕುರಿತಾಗಿ ಇಂದು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಸಾಂಕೇತಿಕವಾಗಿ ಪ್ರತಿಭಟನೆ ಮಾಡಲಾಗುತ್ತಿದೆ. ಸರ್ಕಾರ ಈ ಕೂಡಲೇ ಎಚ್ಚೆತ್ತುಕೊಂಡು ಆದೇಶವನ್ನು ಜಾರಿಗೊಳಿಸಬೇಕೆಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ನೆಲಮಂಗಲ ಬಸವರಾಜು ಮನವಿ ಮಾಡಿದರು.
“ಪರಿಶಿಷ್ಟ ಜಾತಿಯೊಳಗಿನ ಉಪಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ಸಂವಿಧಾನ ಬದ್ಧವಾದ ಅಧಿಕಾರ ಇದೆ ಎಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪುನ್ನು ರಾಜ್ಯ ಸರ್ಕಾರ ತಕ್ಷಣವೇ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಹಾಗೂ ವಿವಿಧ ಹಕ್ಕೊತ್ತಾಯಗಳನ್ನು ಈಡೇರಿಕೆಗಾಗಿ ಒತ್ತಾಯಿಸಿ ಜಿಲ್ಲಾ ಸಂಚಾಲಕ ರಾಮಮೂರ್ತಿ ( ರಾಮುನೇರಳಘಟ್ಟ) ನೇತೃತ್ವದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯು “ಬೃಹತ್ ತಮಟೆ ಚಳುವಳಿ” ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆಯಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಂಚಾಲಕ ರಾಮಮೂರ್ತಿ (ರಾಮು ನೇರಳಘಟ್ಟ) ಮಾತನಾಡಿ, ಒಳ ಮೀಸಲಾತಿ ಕುರಿತು ಸುಪ್ರೀಂಕೋರ್ಟ್ ಆದೇಶ ನೀಡಿ ಒಂದು ತಿಂಗಳು ಕಳೆದಿದ್ದರೂ, ರಾಜ್ಯ ಸರ್ಕಾರ ಸದರಿ ಆದೇಶ ವನ್ನು ಅನುಷ್ಠಾನ ಗೊಳಿಸದೆ ಇರುವುದು ವಿಪರ್ಯಾಸ, ನಿದ್ದೆ ಹೊಡೆಯುತ್ತಿರುವ ಸರ್ಕಾರವನ್ನು ಬಡಿದೆಬ್ಬಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಪ್ರೊ.ಬಿ. ಕೃಷ್ಣಪ್ಪನವರು ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಸುಪ್ರೀಂಕೋರ್ಟ್ ತೀರ್ಪು ಅನ್ವಯ ರಾಜ್ಯ ಸರ್ಕಾರ ತಕ್ಷಣವೇ ಪರಿಶಿಷ್ಟ ಜಾತಿಯೊಳಗಿನ ಉಪ ಜಾತಿಗಳಿಗೆ ಒಳಮೀಸಲಾತಿ ಅನುಷ್ಠಾನಗೊಳಿಸಲು ಆಗ್ರಹಿಸಿ ಈ ಕೆಳಕಂಡ ಹಕ್ಕೊತ್ತಾಯಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ, “ಬೃಹತ್ ತಮಟೆ ಚಳುವಳಿ” ಮಾಡುವುದರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಸರ್ಕಾರ ಈ ಕೂಡಲೇ ಸೂಕ್ತ ಕ್ರಮ ಕೈಗೊಳ್ಳದೆ ಇದ್ದಲ್ಲಿ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು ಎಂದರು .
1. ಪರಿಶಿಷ್ಟ ಜಾತಿಯೊಳಗಿನ ಉಪಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ಸಂವಿಧಾನ ಬದ್ಧವಾದ ಅಧಿಕಾರವಿದೆ ಎಂದು ಆಗಸ್ಟ್ 1 ರಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಐತಿಹಾಸಿಕವಾಗಿದೆ. ಮತ್ತು ಈ ತೀರ್ಪುನ್ನು ಅನುಷ್ಠಾನ ಗೊಳಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ಇದೆ ಎಂದು ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ರಾಜ್ಯ ಸರ್ಕಾರ ತಕ್ಷಣವೇ ಅನುಷ್ಠಾನ ಗೊಳಿಸಬೇಕು.
2. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕ ಪ್ರೊ.ಬಿ. ಕೃಷ್ಣಪ್ಪನವರ ಜನ್ಮ ದಿನವಾದ ಜೂನ್ 09 ನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಬೇಕು. ಮತ್ತು ಪ್ರೊ.ಬಿ.ಕೃಷ್ಣಪ್ಪ ನವರಿಗೆ “ಕರ್ನಾಟಕ ರತ್ನ ” ಪ್ರಶಸ್ತಿ ಯನ್ನು ರಾಜ್ಯ ಸರ್ಕಾರ ನೀಡ ಬೇಕು.
3. ಬಾಕಿ ಉಳಿದಿರುವ “ಬ್ಯಾಕ್ ಲಾಗ್” ಹುದ್ದೆಗಳನ್ನು ರಾಜ್ಯ ಸರ್ಕಾರ ತಕ್ಷಣವೇ ಭರ್ತಿ ಮಾಡಬೇಕು. ಒಳಮೀಸಲಾತಿ ಜಾರಿಯಾಗುವವರೆಗೂ ರಾಜ್ಯ ಸರ್ಕಾರದ ಎಲ್ಲಾ ಹೊಸ ನೇಮಕಾತಿ ಪ್ರಕ್ರಿಯೆಗಳನ್ನು ತಡೆ ಹಿಡಿಯಬೇಕು.
4. ಬಗರ್ ಹುಕುಂ ಸಾಗುವಳಿಯನ್ನು ಸಕ್ರಮಗೊಳಿಸಿ ಹಕ್ಕು ಪತ್ರ ನೀಡಬೇಕು. ಮತ್ತು ಕಳೆದ ಎರಡು ಮೂರು ತಲೆ ಮಾರುಗಳಿಂದ 3-4 ಎಕರೆ ಯಷ್ಟು ಅರಣ್ಯ ಭೂಮಿ ಸಾಗುವಳಿ ಮಾಡುತ್ತಾ ಉಪ ಜೀವನ ಸಾಗಿಸುತ್ತಿರುವ ಕೃಷಿ ಕಾರ್ಮಿಕರನ್ನು ದೌರ್ಜನ್ಯ ದಿಂದ ಒಕ್ಕಲೆಬ್ಬಿಸದೆ ಪರ್ಯಾಯ ಭೂಮಿ ನೀಡಬೇಕು.
5. ಸಮಾಜ ಕಲ್ಯಾಣ ಇಲಾಖೆ ಯ ವಿದ್ಯಾರ್ಥಿ ವಸತಿ ನಿಲಯ ಮತ್ತು ವಸತಿ ಶಾಲೆಗಳಲ್ಲಿ ಹೊರ ಸಂಪನ್ಮೂಲದಡಿ ಕೆಲಸ ನಿರ್ವಹಿಸುತ್ತಿರುವ ನೌಕರರನ್ನು ಕಾಯಂ ಗೊಳಿಸಬೇಕು.
ಪ್ರತಿಭಟನೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನ ಸಂಚಾಲಕರು ಬಸವರಾಜು, ದೊಡ್ಡಬಳ್ಳಾಪುರ ತಾಲ್ಲೂಕು ಸಂಘಟನ ಸಂಚಾಲಕರು ಜಿ.ನರಸಿಂಹಮೂರ್ತಿ, ದೊಡ್ಡಬಳ್ಳಾಪುರ ತಾಲ್ಲೂಕು ಸಂಘಟನಾ ಸಂಚಾಲಕ ಬೈಲಾಂಜಿನಮೂರ್ತಿ, ಎನ್.ನರಸಿಂಹಮೂರ್ತಿ, ಮನೋಜ್.ವಿ, ನಾಗರತ್ನಮ್ಮ ಮಲ್ಲೋಹಳ್ಳಿ, ಆನಂದ್ ಸಕ್ಕರೆಗೊಲ್ಲಹಳ್ಳಿ, ಹನುಮಂತಯ್ಯ, ಹನುಮಯ್ಯ, ತಾಲ್ಲೂಕು ಸಂಘಟನಾ ಸಂಚಾಲಕರಾದ ನಂದಿಗುಂದ ಮೈಲಾರಪ್ಪ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ನಟ ಪ್ರಥಮ್ ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸ್ ನೋಟಿಸ್ ನ್ನು ರಕ್ಷಕ್ ಬುಲೆಟ್ ಗೆ ನೀಡಲಾಗುತ್ತು.…
ನಟ ಪ್ರಥಮ್ ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ರಕ್ಷಕ್ ಬುಲೆಟ್ ಇಂದು ವಿಚಾರಣೆಗೆ ಹಾಜರಾಗಿದ್ದರು. ಇನ್ಸ್ ಪೆಕ್ಟರ್ ಸಾಧಿಕ್…
ಜನಸಂಖ್ಯೆ ಆಧಾರದ ಮೇಲೆ ಒಳ ಮೀಸಲಾತಿ ನೀಡುವಂತೆ ರಾಜ್ಯ ಸರ್ಕಾರಗಳಿಗೆ ಆದೇಶ ನೀಡಿ ಇಂದಿಗೆ ಒಂದು ವರ್ಷ ಕಳೆದಿದೆ ಆದರೆ…
ಜಿಲ್ಲೆಯಲ್ಲಿ 10.165 ಮೆಟ್ರಿಕ್ ಟನ್ ರಸಗೊಬ್ಬರ ಲಭ್ಯ ಇದ್ದು, ಬೇಡಿಕೆಗಿಂತ ಹೆಚ್ಚಿನ ರಸಗೊಬ್ಬರ ದಾಸ್ತಾನು ಇದೆ ಹಾಗಾಗಿ ರಸಗೊಬ್ಬರ ಕೊರತೆ…
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಮೇಲಿದ್ದ ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ ಆರೋಪ ಸಾಬೀತಾಗಿದೆ. ಪ್ರಜ್ವಲ್ ರೇವಣ್ಣ ಅಪರಾಧಿ…
ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸೋಗಿನಲ್ಲಿ ಬರುತ್ತಿದ್ದ ಸುಂದರ ಯುವತಿಯರು, ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಬ್ಯಾಗ್ ನಲ್ಲಿದ್ದ ಚಿನ್ನಾಭರಣಗಳನ್ನ ಕ್ಷಣ…