ಪ್ರೊಬೆಷನರಿ ಐಪಿಎಸ್ ಅಧಿಕಾರಿಯಾಗಿ ಸೋಮವಾರ ಹಾಸನದಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕಿತ್ತು. ಮೈಸೂರಿನ ದಕ್ಷಿಣ ವಲಯ ಐಜಿ ಅವರ ಬಳಿ ವರದಿ ಮಾಡಿಕೊಂಡು ಹಾಸನಕ್ಕೆ ಜೀಪ್ ನಲ್ಲಿ ಬರುವಾಗ ಕಿತ್ತಾನೆ ಬಳಿ ನಿನ್ನೆ ಸಂಜೆ 4.30ರ ವೇಳೆಗೆ ಜೀಪ್ ನ ಟೈರ್ ಸ್ಫೋಟಗೊಂಡು ಜೀಪ್ ಮೂರು ಸುತ್ತು ಉರುಳಿ ಚಾಲಕನ ನಿಯಂತ್ರಣ ತಪ್ಪಿ ಜೀಪ್ ರಸ್ತೆ ಬದಿಗೆ ಉರುಳಿದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಪ್ರೊಬೆಷನರಿ ಐಪಿಎಸ್ ಅಧಿಕಾರಿಗೆ ಗಂಭೀರ ಗಾಯಗಳಾಗಿದ್ದವು. ಕೂಡಲೇ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕರ್ತವ್ಯಕ್ಕೆ ಹಾಜರಾಗುವ ಮುನ್ನವೇ ಇಹಲೋಕ ತ್ಯಜಿಸಿದ ದಾರುಣ ಘಟನೆ ಹಾಸನ ತಾಲೂಕಿನ ಕಿತ್ತಾನೆಗಡಿ ಬಳಿ ಸಂಭವಿಸಿದೆ.
ಹರ್ಷವರ್ಧನ್ (25), ಮೃತ ದುರ್ದೈವಿ. ಹರ್ಷವರ್ಧನ್ ಮೂಲತಃ ಬಿಹಾರದ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿದೆ. ಮಧ್ಯಪ್ರದೇಶದ ಐಇಟಿಯಲ್ಲಿ ಡಿಎವಿಇ ಎಂಜಿನಿಯರಿಂಗ್ ಪದವಿ ಪಡೆದು 2022-23 ರ ಐಪಿಎಸ್ ಬ್ಯಾಚ್ ನಲ್ಲಿ ತೇರ್ಗಡೆ ಹೊಂದಿದ್ದ ಇವರು, ಕರ್ನಾಟಕ ಕೇಡರ್ ನಲ್ಲಿ ರಾಜ್ಯಕ್ಕೆ ಆಯ್ಕೆಯಾಗಿದ್ದರು.
ಮೃತರ ತಂದೆ ಕೂಡ ಐಎಎಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಪೊಲೀಸ್ ಮೂಲ ತಿಳಿಸಿದೆ.
ಘಟನೆ ಬಗ್ಗೆ ಎಡಿಜಿಪಿ ಅಲೋಕ್ ಕುಮಾರ್ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಸಂತಾಪ
ಹಾಸನ – ಮೈಸೂರು ಹೆದ್ದಾರಿಯ ಕಿತ್ತಾನೆ ಗಡಿ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಹರ್ಷಬರ್ಧನ್ ಅವರು ನಿಧನರಾದ ವಿಷಯ ತಿಳಿದು ದುಃಖವಾಯಿತು.
ಐಪಿಎಸ್ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಲು ತೆರಳುತ್ತಿದ್ದ ವೇಳೆ ಇಂಥದ್ದೊಂದು ದುರ್ಘಟನೆ ಜರುಗಿದೆ ಎನ್ನುವುದು ಬಹಳಾ ಬೇಸರದ ಸಂಗತಿ. ವರ್ಷಗಳ ಕಠಿಣ ಪರಿಶ್ರಮ ಫಲ ನೀಡುವ ಹೊತ್ತಲ್ಲಿ ಹೀಗಾಗಬಾರದಿತ್ತು.
ಹರ್ಷಬರ್ಧನ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಮೃತನ ಕುಟುಂಬಕ್ಕೆ ನನ್ನ ಸಂತಾಪಗಳು -ಸಿಎಂ ಸಿದ್ದರಾಮಯ್ಯ ಟ್ವೀಟ್