ಪ್ರೇಮಿಗಳ ದಿನವೇ ನಂದಿಬೆಟ್ಟದ ಟಿಪ್ಪು ಡ್ರಾಪ್‌ನಿಂದ ಬಿದ್ದು ಯುವಕ ಆತ್ಮಹತ್ಯೆ ಮಾಡಿಕೊಂಡಿರೋ ಪ್ರಕರಣ ಬೆಳಕಿಗೆ ಬಂದಿದೆ.
ಮೂರು ದಿನಗಳಿಂದ ಅನಾಥವಾಗಿದ್ದ ಬೈಕ್ ಹಿಂದೆ ಬಿದ್ದಿದ್ದ ಪೊಲೀಸರಿಗೆ ಯುವಕನ ಆತ್ಮಹತ್ಯೆ ಪ್ರಕರಣ ತಿಳಿದಿದೆ. ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ ಬಂದು ಅರುಣ್ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದು, ಆತನ ಮೃತದೇಹ ಸಹ ಪತ್ತೆಯಾಗಿದೆ.
ಕಳೆದ ಶನಿವಾರ ತನ್ನ ಸ್ನೇಹಿತನ ಬೈಕ್‌ನಲ್ಲಿ ನಂದಿಬೆಟ್ಟಕ್ಕೆ ಬಂದ ಅರುಣ್, ಪಾರ್ಕಿಂಗ್ ಪ್ಲಾಟ್‌ನಲ್ಲಿ ಬೈಕ್ ನಿಲ್ಲಿಸಿ ನಂದಿಬೆಟ್ಟದ ಮೇಲ್ಭಾಗಕ್ಕೆ ಹೋಗಿದ್ದಾನೆ. ಆದರೆ ಶನಿವಾರ ಬೆಟ್ಟದ ಮೇಲೆ ಹೋದವನು ಮರಳಿ ವಾಪಸ್ ಬಂದಿಲ್ಲ. ಶನಿವಾರ, ಭಾನುವಾರ, ಸೋಮವಾರ ಕಾದರೂ ಅರುಣ್ ವಾಪಸ್ ಬಾರದ ಹಿನ್ನೆಲೆ ಅನುಮಾನಗೊಂಡ ಹೆಲ್ಮೆಟ್ ಲಾಕ್ ರೂಂ ಮಾಲೀಕರು, ಪೊಲೀಸರಿಗೆ ತಿಳಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿದಾಗ ಅರುಣ್ ಹೋಗಿರೋ ವೀಡಿಯೋ ಸಿಕ್ಕಿದೆ. ಆದರೆ ವಾಪಾಸ್ ಬಂದಿರೋ ವೀಡಿಯೋ ಸಿಕ್ಕಿಲ್ಲ. ಹೀಗಾಗಿ ಬೆಟ್ಟವೆಲ್ಲಾ ತಡಿಕಾಡಿದಾಗ ಟಿಪ್ಪು ಡ್ರಾಪ್‌ನ ಜಾಗದಲ್ಲಿ ಅರುಣ್ ಬ್ಯಾಗ್ ಪತ್ತೆಯಾಗಿದೆ.
ಬ್ಯಾಗ್‌ನಲ್ಲಿ ಡೆತ್‌ನೋಟ್ ಸಹ ಪತ್ತೆಯಾಗಿದ್ದು, ಅದರಲ್ಲಿ ಸಾವಿಗೆ ನಿಖರ ಕಾರಣ ಬರೆದಿಲ್ಲ. “ತಾನು ಸಂತೋಷವಾಗಿ ಸಾಯುತ್ತಿದ್ದೇನೆ. ರಾಜಕೀಯ ವ್ಯವಸ್ಥೆ ಸರಿ ಇಲ್ಲ. ನಟ ಉಪೇಂದ್ರ ಅವರ ಪ್ರಜಾಕೀಯ ಪಕ್ಷದ ಸಿದ್ದಾಂತಗಳನ್ನ ಜನ ಬೆಂಬಲಿಸಿಬೇಕು” ಎಂದು ಡೆತ್‌ನೋಟ್‌ನಲ್ಲಿ ಯುವಕ ಬರೆದಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡಿರುವ ಅರುಣ್ ಮೂಲತಃ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಅಂಬರಹಳ್ಳಿ ನಿವಾಸಿಯಾಗಿದ್ದು, ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಫಾರ್ಮಾಸಿಸ್ಟ್ ಆಗಿ ಕೆಲಸ ಮಾಡುತ್ತಿದ್ದ. ಸ್ನೇಹಿತರ ಜೊತೆ ಪಿಜಿಯಲ್ಲಿ ಉಳಿದುಕೊಂಡಿದ್ದ.