ಕಂಠ ಪೂರ್ತಿ ಕುಡಿದು, ಕುಡಿದ ಅಮಲಿನಲ್ಲಿ ಅಣ್ಣ-ತಮ್ಮನ ನಡುವೆ ಜಗಳವಾಗಿ ತಮ್ಮನ ಕೊಲೆಯಲ್ಲಿ ಅಂತ್ಯವಾಗಿದೆ.
ಆನೇಕಲ್ ಪೊಲೀಸ್ ಉಪವಿಭಾಗದ ಸರ್ಜಾಪುರ ಠಾಣಾ ವ್ಯಾಪ್ತಿಯ ಪಂಡಿತನ ಅಗ್ರಹಾರದಲ್ಲಿ ಈ ಘಟನೆ ನಡೆದಿದೆ. ತಮಿಳುನಾಡು ಮೂಲದ ಆನಂದ್ (27) ಕೊಲೆಯಾದ ವ್ಯಕ್ತಿ. ಅಣ್ಣ ಮಣಿಕಂಠ (32) ಕೊಲೆ ಆರೋಪಿ.
ತಮಿಳುನಾಡು ಮೂಲದ ಈ ಅಣ್ಣ-ತಮ್ಮಂದಿರು ಪಂಡಿತನ ಅಗ್ರಹಾರದಲ್ಲಿ ಗಾರೆ ಕೆಲಸಕ್ಕಾಗಿ ಬಂದಿದ್ದರು. ನಿರ್ಮಾಣ ಹಂತದ ಕಟ್ಟಡದಲ್ಲಿ ಆನಂದ್ ತಂದೆ-ತಾಯಿ ಜತೆಗೆ ವಾಸವಿದ್ದರೆ, ಇತ್ತ ಮಣಿಕಂಠ ಮಂಡ್ಯದಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ.
ನಿನ್ನೆ ತಂದೆ-ತಾಯಿಯನ್ನು ನೋಡಿಕೊಂಡು ಹೋಗಲು ಮಣಿಕಂಠ ಬಂದಿದ್ದ. ಆನಂದ ಕುಡಿದು ಬಂದು ನಿತ್ಯ ಗಲಾಟೆ ಮಾಡುತ್ತಿದ್ದ. ಸುಖಾ ಸುಮ್ಮನೆ ತಂದೆ, ತಾಯಿ, ಅಣ್ಣನ ಜತೆಗೆ ಕಿರಿಕ್ ತೆಗೆಯುತ್ತಿದ್ದ. ಕಳೆದ ರಾತ್ರಿ ಹನ್ನೊಂದು ಗಂಟೆ ಸುಮಾರಿಗೆ ಕುಡಿದು ಬಂದು ಆನಂದ ಗಲಾಟೆ ಮಾಡಿದ್ದ. ಗಲಾಟೆ ವಿಕೋಪಕ್ಕೆ ತಿರುಗಿ ದೊಣ್ಣೆಯಿಂದ ಮಣಿಕಂಠ ಆನಂದ್ಗೆ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವವಾಗಿ ಆನಂದ್ ಸ್ಥಳದಲ್ಲೆ ಮೃತಪಟ್ಟಿದ್ದಾನೆ ಎಂದು ಮೂಲಗಳಿಂದ ತಿಳಿದುಬಂದಿದೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಸರ್ಜಾಪುರ ಪೊಲೀಸರು ಪರಿಶೀಲನೆ ನಡೆಸಿ, ಆರೋಪಿ ಮಣಿಕಂಠನನ್ನು ಸರ್ಜಾಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.