ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ರೈತರಿಗೆ ಬಮೂಲ್ ಮತ್ತು ಕೆಎಂಎಫ್ ನಿಂದ ಸಕಲ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಆದರೂ ಇತ್ತೀಚಿನ ದಿನಗಳಲ್ಲಿ ರೈತರು ಹೈನುಗಾರಿಕೆಯಿಂದ ವಿಮುಖರಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಬಮೂಲ್ ಪ್ರಧಾನ ವ್ಯವಸ್ಥಾಪಕ ಎಸ್.ಟಿ ಸುರೇಶ್ ಹೇಳಿದರು.
ನಗರದ ಒಕ್ಕಲಿಗರ ಕಲ್ಯಾಣ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಮೂಲ್ 2022-23 ನೇ ಸಾಲಿನ ತಾಲ್ಲೂಕಿನ ಎಂಪಿಸಿಎಸ್ ಗಳ ಅಧ್ಯಕ್ಷರುಗಳು, ಮುಖ್ಯಕಾರ್ಯನಿರ್ಹಾಹಕರುಗಳ ಪ್ರಾದೇಶಿಕ ಸಭೆ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಪ್ರತಿ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಹೆಚ್ಚು ರೈತರು ಹೈನುಗಾರಿಕೆಯಿಂದ ವಿಮುಖರಾಗಿರುವುದು ಕಂಡುಬಂದಿದೆ. ಹಾಲಿನ ಉಪ ಉತ್ಪನ್ನಗಳಿಂದ ಬರುವ ಲಾಭಾಂಶದಲ್ಲಿ 87 ರೂ. ರೈತರಿಗೆ ನೀಡಲಾಗುತ್ತಿದೆ. ಹಾಲಿನ ದರವನ್ನು 5 ರೂ.ಏರಿಕೆಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಸರ್ಕಾರ 3 ರೂ. ಏರಿಕೆ ಮಾಡಿದೆ.
ಪಶು ಆಹಾರ ಬೆಲೆ ಏರಿಕೆಗೂ ಹಾಲಿನ ದರ ನಿಗದಿಗೂ ಸಂಬಂಧವಿರುವುದಿಲ್ಲ. ರೈತರು ಸಂಕಷ್ಟವನ್ನು ಅರಿತ ಬಮೂಲ್ ಕಳೆದ ಏಪ್ರಿಲ್, ಮೇ, ಜೂನ್ ತಿಂಗಳಲ್ಲಿ ಸಹಾಧನ ನೀಡುವುದರ ಮೂಲಕ ನೆರವಿಗೆ ನಿಂತಿದೆ. ಇದಕ್ಕಾಗಿ ಏಪ್ರಿಲ್ ನಿಂದ ಜೂನ್ ತಿಂಗಳ ಅವಧಿಯಲ್ಲಿ ಬಮೂಲ್ ಗೆ 46 ಕೋಟಿ ರೂ. ನಷ್ಟವಾಗಿತ್ತು. ಕೊವಿಡ್ ಸಮಯದಲ್ಲಿಯೂ ಬಮೂಲ್ ರೈತರೊಂದಿಗೆ ನಿಂತಿತ್ತು. ದೊಡ್ಡಬಳ್ಳಾಪುರ ಹಾಲು ಒಕ್ಕೂಟದಿಂದ ಪ್ರತಿ ನಿತ್ಯ 4.5 ಫ್ಯಾಟ್ ಯುಳ್ಳ ಉತ್ಕೃಷ್ಟ ಹಾಲನ್ನು ನೀಡುತ್ತಿದ್ದಾರೆ. ಪಶು ಆಹಾರ, ಪಶು ಆರೋಗ್ಯ ಸಮಸ್ಯೆಗೆ ಅತ್ಯಂತ ಶೀಘ್ರವಾಗಿ ಸ್ಪಂದಿಸಲಾಗುತ್ತಿದೆ ಎಂದರು.
ಬಮೂಲ್ ನೂತನ ಅಧ್ಯಕ್ಷ ಹೆಚ್.ಪಿ ರಾಜಕುಮಾರ್ ಮಾತನಾಡಿ ದೊಡ್ಡಬಳ್ಳಾಪುರ ಡೇರಿಯನ್ನು ಮಾದರಿಯಾಗಿಟ್ಟುಕೊಂಡು ಕನಕಪುರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಲಾಗಿದೆ. ನಗರೀಕರಣದಿಂದ ಹಾಲಿನ ಉತ್ಪಾದನೆ ಕಡಿಮೆಯಾಗುತ್ತಿದೆ. ಹೈನೋದ್ಯಮವನ್ನು ಬಲಿಷ್ಠಗೊಳಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಪಶು ಆಹಾರ ರೈತರಿಗೆ ಅತ್ಯಗತ್ಯವಾಗಿದ್ದು, ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ. ಹೀಗಾಗಿ ಕ್ಷೀರಭಾಗ್ಯದಂತೆ ರೈತರಿಗಾಗಿ ಪಶು ಆಹಾರ ಭಾಗ್ಯ ನೀಡಿ ಸಿಎಂ ಸಿದ್ದರಾಮಯ್ಯ ನೆರವಿಗೆ ಧಾವಿಸಬೇಕು. ವಿಮೆ ವಿತರಣೆ ಕಾರ್ಯವಿಧಾನವನ್ನು ಬದಲಾವಣೆ ಮಾಡಿಕೊಂಡು ಮುಂದಿನ ತಿಂಗಳಿಂದ ಮತ್ತಷ್ಟು ವೇಗವಾಗಿ ನೀಡಲಾಗುತ್ತದೆ. ರೈತರು ಪಿಎಫ್ ಮಾಡಿಸಿಕೊಂಡು ಸೌಲಭ್ಯ ಪಡೆದುಕೊಳ್ಳಿ. ಹಾಲಿನ ಉತ್ಪಾದನೆ ಕಡಿಮೆಯಾಗಿರುವುದರಿಂದ ನಿರ್ದೇಶಕರುಗಳಿಗೆ ನೀಡಲಾಗುವ ಅನುದಾನವನ್ನು ಕಡಿತ ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಮೂಲ್ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್ ಮಾತನಾಡಿ ಎಂಪಿಸಿಎಸ್ ಅಧ್ಯಕ್ಷರುಗಳು ಪ್ರಶ್ನೆ ಮಾಡುವ ಅವಕಾಶ ಇದ್ದಾಗ ಪ್ರಶ್ನೆ ಮಾಡುವುದಿಲ್ಲ. ಮೊದಲು ಪ್ರಶ್ನೆ ಮಾಡುವುದನ್ನು ರೂಪಿಸಿಕೊಳ್ಳಿ. ಹಾಲಿನ ದರವನ್ನು ಏರಿಕೆ ಮಾಡಲು ನಾಲ್ಕು ಗಂಟೆಗಳ ಕಾಲ ದೀರ್ಘಕಾಲದ ಸಭೆ ಮಾಡಿ ಸಿಎಂ, ಸಚಿವರಿಗೆ ಮನವರಿಕೆ ಮಾಡಿದ್ದರಿಂದ ಬೆಲೆ ಏರಿಕೆ ಸಾಧ್ಯವಾಯಿತು. ವೈದ್ಯಕೀಯ ವೆಚ್ಚ, ಮರಣ ಹೊಂದಿದ ರೈತರ ಕುಟುಂಬಗಳಿಗೆ ಸಹಾಯಧನ, ವಿಮೆ ಹಣವನ್ನು ರೈತರ ಮನೆ ಬಾಗಿಲಿಗೆ ತಲುಪಿಸಲಾಗಿದೆ. ಹಾಲಿನ ದರ ಏರಿಕೆ ಮಾಡಬೇಕಾದರೆ ಹೋರಾಟಕ್ಕೆ ರೈತರು ಕೈ ಜೋಡಿಸಬೇಕು. ಗ್ರಾಮಗಳಲ್ಲಿ ಡೇರಿಗಳ ಚುನಾವಣೆಗಳು ಅವಿರೋಧ ಆಯ್ಕೆ ಮುಖಾಂತರ ಮಾಡುವಂತ ವಾತವರಣ ಸೃಷ್ಟಿಯಾದರೆ ಗ್ರಾಮ ಮತ್ತು ಡೇರಿಗಳ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಡೇರಿಗಳಲ್ಲಿ ಯಾವುದೇ ರಾಜಕೀಯ ಮುಖಂಡರು ಹಸ್ತಕ್ಷೇಪ ಮಾಡಿಲ್ಲ. ಬಮೂಲ್ ಮತ್ತು ಕೆಎಂಎಫ್ ನಿಂದ ದೊರೆತ ಸೌಲಭ್ಯಗಳನ್ನು ತಾಲ್ಲೂಕಿಗೆ ಶೇ.99 ರಷ್ಟು ಒದಗಿಸಲಾಗಿದೆ ಎಂದರು. ಇದೇ ವೇಳೆ ದೊಡ್ಡಬಳ್ಳಾಪುರದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಟೆಟ್ರಾಪ್ಯಾಕ್ ಕಟ್ಟಡ ನಿರ್ಮಾಣಕ್ಕೆ ನೂತನ ಅಧ್ಯಕ್ಷ ಹೆಚ್.ಪಿ ರಾಜಕುಮಾರ್ ಸಹಕರಿಸಬೇಕು ಎಂದರು.
ಸಭೆಯಲ್ಲಿ ವಿವಿಧ ಅಧ್ಯಕ್ಷರುಗಳು ಮಾತನಾಡಿ
ಹಾಲು ಸಾಗಾಣಿಕೆ ವೆಚ್ಚ ಇಳಿಸಲು, ಕೆಚ್ಚಲು ಬಾಹು ಸಮಸ್ಯೆಗೆ ಪರಿಹಾರ, ರಜಾ ದಿನಗಳಲ್ಲಿ ಪಶು ವೈದ್ಯರು ಅಲಭ್ಯತೆ, ಪಶು ಔಷಧಗಳ ಕೊರತೆ ನಿಗಿಸಬೇಕು. ಪಶು ಆಹಾರವನ್ನು ಇಳಿಕೆ ಮಾಬೇಕು ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಶೇಖರಣೆ ಮತ್ತು ತಾಂತ್ರಿಕ ವಿಭಾಗದ ಪ್ರಧಾನ ವ್ಯವಸ್ಥಾಪಕ ಗಂಗಯ್ಯ, ಬಮೂಲ್ ವಾರ್ಷಿಕ ಸಭೆಯಲ್ಲಿ ಪ್ರಸ್ತಾಪಿಸಿ ಸಮಸ್ಯೆಗೆ ಪರಿಹಾರ ಮಾಡಲಾಗುವುದು. ಕೆಚ್ಚಲು ಬಾಹು ತಡೆಯಲು ಹಾಲು ಕರೆದ ಬಳಿಕ 40 ನಿಮಿಷ ಹಸುವನ್ನು ಮಲಗಿಸಬಾರದು, ಕೆಚ್ಚಲನ್ನು ಶುದ್ಧ ಮೃದು ಬಟ್ಟೆಯಿಂ ಒರೆಸಿದರೆ ತಡೆಯಬಹುದು ಎಂದರು. ತಾಲ್ಲೂಕಿನ ೨೦೪ ಸಂಘಗಳಲ್ಲಿ 181 ಸಂಘಗಳಿಗೆ ಆನ್‌ಲೈನ್ ಫ್ಯಾಟ್ ವ್ಯವಸ್ಥೆ ಮಾಡಲಾಗಿದೆ ವಿವರಿಸಿದರು.
ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ಡೇರಿ ಉಪ ವ್ಯವಸ್ಥಾಪಕ ಎಲ್.ಬಿ ನಾಗರಾಜು, ಮುನಿರಾಜೇಗೌಡ,
ವಿಸ್ತಾರಣಾಧಿಕಾರಿಗಳು, ಎಂಪಿಸಿಎಸ್ ನೌಕರರ ಹಿತರಕ್ಷಣಾ ಸಮಿತಿ ಅಧ್ಯಕ್ಷ ರವೀಂದ್ರ, ಕಾರ್ಯದರ್ಶಿ ದೇವರಾಜು, ಸದಸ್ಯ ಸತೀಶ್, ವಿವಿಧ ಸಂಘದ ಅಧ್ಯಕ್ಷರುಗಳು, ಮುಖ್ಯಕಾರ್ಯನಿರ್ಹಾಹಕರುಗಳು ಇದ್ದರು.