ಪ್ರಮೋದ್ ಮುತಾಲಿಕ್ ವಿರುದ್ಧ ಪ್ರಕರಣ ದಾಖಲಿಸಿ: ಶ್ರೀರಾಮ ಸೇನೆ ಸಂಘಟನೆಯನ್ನ ಬ್ಯಾನ್ ಮಾಡಿ- ವಕೀಲ ಪ್ರೊ.ಹರಿರಾಂ

ಸೆ.24 ರಂದು ನಗರದ ಡಾ.ಬಿ.ಆರ್.ಅಂಬೇಡ್ಕರ್‌ ವೃತ್ತದಲ್ಲಿ  ಹಿಂದೂಪುರದಿಂದ ಬೆಂಗಳೂರಿಗೆ ಗೋಮಾಂಸ ಸಾಗಾಟ ಮಾಡುತ್ತಿದ್ದ ವಾಹನಗಳನ್ನ ತಡೆದು, ಗೋಮಾಂಸ ಸಾಗಾಟ ಮಾಡುತ್ತಿದ್ದ ಮುಸ್ಲಿಂ ಯುವಕರನ್ನ ಥಳಿಸಿ, ಒಂದು ಕಾರಿಗೆ ಬೆಂಕಿ ಇಟ್ಟು ಅಮಾನವೀಯ ಕೃತ್ಯ ಎಸಗಿರುವ ಶ್ರೀರಾಮ ಸೇನೆ ಸಂಘಟನೆಯನ್ನ ಕೂಡಲೇ ರಾಜ್ಯದಲ್ಲಿ ಬ್ಯಾನ್ ಮಾಡಬೇಕು ಎಂದು ವಕೀಲ ಪ್ರೊ.ಹರಿರಾಂ ಆಗ್ರಹಿಸಿದರು.

ಈ ಕುರಿತು ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಶ್ರೀರಾಮ ಸೇನೆಯು ಸಂವಿಧಾನ ವಿರೋಧಿ, ಸಮಾಜ ಘಾತುಕ ಹಾಗೂ ಭಯೋತ್ಪಾದಕ ಸಂಘಟನೆಯಾಗಿದೆ. ದಲಿತ, ಅಮಾಯಕ ಯುವಕರನ್ನ ಒಗ್ಗೂಡಿಸಿ, ಕೋಮುವಾದಿ ಕೃತ್ಯಗಳಿಗೆ ಬಳಸಿಕೊಂಡು, ಸಮಾಜ ಘಾತುಕ ಕೆಲಸಗಳನ್ನ ಇವರ ಕೈಯಲ್ಲಿ ಮಾಡಿಸಿ ಜೈಲಿಗೆ ಕಳುಹಿಸುವ ಹುನ್ನಾರ ಮಾಡುತ್ತಿದೆ. ಆದ್ದರಿಂದ ಈ ಸಂಘಟನೆಯನ್ನ ನಿಷೇಧ ಮಾಡಿ, ಇದರ ರಾಜ್ಯಧ್ಯಕ್ಷರಾದ ಪ್ರಮೋದ್ ಮುತಾಲಿಕ್ ಅವರ ಮೇಲೂ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಇದೆ. ಯಾರಿಗೆ ಆಗಲಿ ತಮಗೆ ತಪ್ಪು ಅನಿಸಿದರೆ ಕೂಡಲೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ಅದನ್ನ ಬಿಟ್ಟು ತಾವೇ ಯಾವ ಅಧಿಕಾರವಿಲ್ಲದೇ ತಪ್ಪನ್ನ ಸರಿಪಡಿಸಲು ಮುಂದಾಗುವುದು ಕಾನೂನಾತ್ಮಕವಾಗಿ ಅಪರಾಧ. ದಲಿತರು ಹಾಗೂ ಮುಸ್ಲಿಂರ ನಡುವೆ ಬಿರುಕು ಉಂಟುಮಾಡುವ ಕೆಲಸವನ್ನ ಶ್ರೀ ರಾಮ ಸೇನೆ ಮಾಡುತ್ತಿದೆ ಎಂದು ಆರೋಪಿಸಿದರು.

ಈಗಿನ ರಾಜಕೀಯ ಪಕ್ಷಗಳು ತಮ್ಮ ವೋಟ್ ಬ್ಯಾಂಕ್ ಗಾಗಿ ಎಲ್ಲರನ್ನು ಎಲ್ಲಾ ರೀತಿಯಲ್ಲಿ ಅದರಲ್ಲೂ ಮುಸಲ್ಮಾನರನ್ನ, ದಲಿತರು, ಅಮಾಯಕ ಯುವಕರನ್ನು ಬಳಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿವೆ. ಈಗಿನ ಕಾಂಗ್ರೆಸ್ ಸರ್ಕಾರವು ಸಮಾಜ ಘಾತುಕ ಸಂಘಟನೆಗಳನ್ನು ನಿಷೇಧ ಮಾಡುತ್ತೇವೆ ಎಂದು ತಮ್ಮ ಪ್ರಣಾಳಿಕೆಯಲ್ಲಿ ಹೇಳಲಾಗಿತ್ತು.ಆದರೆ ಇದುವರೆಗೆ ಅಂತಹ ಯಾವ ಸಂಘಟನೆಯನ್ನ ಬ್ಯಾನ್ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಂತರ ಬಿ.ಆರ್.ಭಾಸ್ಕರ್ ಪ್ರಸಾದ್ ಮಾತನಾಡಿ, ಪ್ರತಿದಿನ ನಮ್ಮ ದೇಶದಿಂದ ಹೊರ ದೇಶಕ್ಕೆ ಒಂದೂವರೆ ಲಕ್ಷ ಟನ್ ನಿಂದ ಹಿಡಿದು ಎರಡು ಲಕ್ಷ ಟನ್ ವರೆಗೆ ದನದ ಮಾಂಸ ರಫ್ತು ಆಗುತ್ತದೆ. ಇದನ್ನ ರಫ್ತು ಮಡುತ್ತಿರುವ ಆರು ಕಂಪನಿಗಳ ಮಾಲೀಕರು ಉನ್ನತ ಜಾತಿಗೆ ಸೇರಿದವರು. ಈ ಆರು ಕಂಪನಿಗಳಿಂದ ನೂರಾರು ಕೋಟಿ ರೂಪಾಯಿಗಳನ್ನ ಬಿಜೆಪಿ ದೇಣಿಗೆ ಪಡೆಯುತ್ತಿದೆ. ಅಂತಹ ಕಂಪನಿಗಳ ಮುಂದೆ ಈ ಶ್ರೀರಾಮ ಸೇನೆ ಎಂದಾದರು ಹೋಗಿ ದನದ ಮಾಂಸ ರಫ್ತು ಆಗುವುದನ್ನ ಎಂದಾದರೂ ತಡೆದಿದ್ದಾರಾ?. ತಡೆಯುವ ತಾಕತ್ತು ಈ ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ಅವರಿಗೆ ಇದಿಯಾ? ಎಂದು ಪ್ರಶ್ನೆ ಮಾಡಿದ್ದಾರೆ.

ದನದ ಚರ್ಮ, ಮೂಳೆಗಳಿಂದ ಚಪ್ಪಲಿ, ಬೆಲ್ಟ್, ಟೋಪಿ, ವ್ಯಾನಿಟಿ ಬ್ಯಾಗ್, ಲಿಪ್‌ಸ್ಟಿಕ್, ಬಿಪಿ ಶುಗರ್ ಮಾತ್ರೆ, ಸಕ್ಕರೆ ಸೇರಿದಂತೆ ಇತರೆ ವಸ್ತುಗಳನ್ನು ತಯಾರಿಸಲಾಗುತ್ತದೆ, ಅದನ್ನು ನಾವು ಉಪಯೋಗಿಸುತ್ತೇವೆ ಎಂದರು.

ಹಫ್ತಾ ಕೊಟ್ಟಿಲ್ಲ ಎಂದು ಏಕಾಏಕಿ ಕಾರಿಗೆ ಬೆಂಕಿ ಇಟ್ಟು ಸಮಾಜದಲ್ಲಿ ಅಶಾಂತಿ ಉಂಟುಮಾಡಿ, ಮುಸ್ಲಿಂ ಯುವಕರನ್ನ ಮನಬಂದಂತೆ ಥಳಿಸಿ, ಗೋ ರುಂಡಗಳನ್ನ ತಲೆ ಮೇಲೆ ಹೊರಿಸಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗುವಂತೆ ಒತ್ತಾಯ ಮಾಡಿ ಕೋಮು‌ ಸೌಹಾರ್ದ ಕದಡುವ ಕೆಲಸ ಮಾಡಲಾಗಿದೆ. ಇದು ಅಕ್ಷಮ್ಯ ಅಪರಾಧ. ಇದರಲ್ಲಿ ಭಾಗಿಯಾದವರಿಗೆ ತಕ್ಕ ಶಿಕ್ಷೆ ಆಗಲೇಬೇಕು, ಇನ್ನೂ ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಸಂಬಂಧಿತ ಇಲಾಖೆ ಎಚ್ಚರ ವಹಿಸಬೇಕು ಎಂದು ಒತ್ತಾಯಿಸಿದರು.

Leave a Reply

Your email address will not be published. Required fields are marked *