ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸಾಮಾನ್ಯ ಜನ, ರೈತ, ಕಾರ್ಮಿಕ ವಿರೋಧಿ ಯೋಜನೆ, ನೀತಿಗಳನ್ನು ಜಾರಿಗೊಳಿಸಿರುವುದನ್ನು ವಿರೋಧಿಸಿ ಆಗಸ್ಟ್ 1ರಿಂದ 14 ರವರೆಗೆ ದೇಶವ್ಯಾಪಿ ಪ್ರಚಾರಾಂದೋಲನಕ್ಕೆ ಕರೆ ನೀಡಲಾಗಿದೆ. ಆಗಸ್ಟ್ 14ರ ಸಂಜೆಯಿಂದ ಆ.15ರ ಬೆಳಗಿನ ಜಾವವರೆಗೆ ಸರ್ಕಾರದ ಜನ ವಿರೋಧಿ ನೀತಿಗಳನ್ನು ತಿಳಿಸಲು ಅಹೋರಾತ್ರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರೈತ ಪ್ರಾಂತ ಸಂಘದ ಜಿಲ್ಲಾ ಕಾರ್ಯದರ್ಶಿ ಆರ್.ಚಂದ್ರತೇಜಸ್ವಿ ತಿಳಿಸಿದರು.
ನಗರದಲ್ಲಿ ಸಿಐಟಿಯು, ಎಐಕೆಎಸ್, ಪ್ರಾಂತ ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳಿಂದ ಸೋಮವಾರ ಹಮ್ಮಿಕೊಂಡಿದ್ದ ಕೇಂದ್ರ ಸರ್ಕಾರದ ಜನ ವಿರೋಧಿ ನಿತಿಗಳ ಪ್ರಚಾರೋಂದಲನದಲ್ಲಿ ಅವರು ಮಾತನಾಡಿ, ದೇಶಾದ್ಯಂತ ಪೆಟ್ರೋಲ್, ಡೀಸೆಲ್, ಹಾಲು, ಅಡುಗೆ ಎಣ್ಣೆ, ತರಕಾರಿ, ಗ್ಯಾಸ್ ಸೇರಿದಂತೆ ದಿನನಿತ್ಯ ಬಳಕೆಯ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ, ತೆರಿಗೆ ವಿಧಿಸಿ ಬಡ, ಮಧ್ಯಮ ವರ್ಗದ ಜನರ ಜೀವನದ ಜೊತೆ ಪ್ರಧಾನಿ ನರೇಂದ್ರ ಮೊದಿ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿ ಕಳೆದ ಒಂಭತ್ತು ವರ್ಷಗಳಿಂದ ಹಣದುಬ್ಬರ ತಾಂಡವಾಡುತ್ತಿದೆ. ಬೆಲೆ ಏರಿಕೆಯಿಂದ ಬಡ ಜನರನ್ನು ರಕ್ಷಿಸಲು ಮೋದಿ ಸರ್ಕಾರ ಯಾವುದೇ ಕ್ರಮಗಳನ್ನು ಈವರೆಗೆ ತೆಗೆದುಕೊಂಡಿಲ್ಲ. ಬಡ ಜನರಿಗೆ ಪಡಿತರ ನೀಡಲು ಸಿದ್ಧವಿರದ ಕೇಂದ್ರ ಸರ್ಕಾರ ಆಹಾರ ಭದ್ರತೆಗೆ ಧಕ್ಕೆ ತರುವಂತಹ ಕೆಲಸ ಮಾಡುತ್ತಿದೆ. ದೇಶದಲ್ಲಿ ದಿನೇ ದಿನೇ ನಿರುದ್ಯೋಗ ಪ್ರಮಾಣ ಹೆಚ್ಚಾಗುತ್ತಿದೆ, ಜನರ ನಿಜವಾದ ಆದಾಯ ಕುಸಿಯುತ್ತಿದೆ. ವೆಚ್ಚಕ್ಕೆ, ಬೆಲೆ ಏರಿಕೆ ತಕ್ಕಂತೆ ಕಾರ್ಮಿಕರ ವೇತನ ಹೆಚ್ಚಾಗುತ್ತಿಲ್ಲ. ಪ್ರಸ್ತುತ ರೈತರು ಸಂಕಷ್ಟದಲ್ಲಿದ್ದಾರೆ. ಸ್ವಾಮಿನಾಥನ್ ಶಿಫಾರಸು ನ್ನು ಜಾರಿ ಮಾಡುತ್ತಿಲ್ಲ, ರೈತರು ಉತ್ಪಾದಿಸಿದ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಮಾಡದೆ ರೈತ ವಿರೋಧಿ ಕಾನೂನನ್ನು ಜಾರಿ ಮಾಡಲು ಹೊರಟಿದ್ದಾರೆ ಎಂದರು.
ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಪಿಎ.ವೆಂಕಟೇಶ ಮಾತನಾಡಿ, ಪ್ರಧಾನಿ ಮೋದಿ ಅವರು ಜನರ ಕಷ್ಟಗಳನ್ನು ನೇರವಾಗಿ ಕೇಳದೆ ಮನ್ ಕೀ ಬಾತ್ ಮಾಡಿ ಅವರಷ್ಟಕ್ಕೆ ಅವರೆ ಮಾತನಾಡಿಕೊಳ್ಳುತ್ತಿದ್ದಾರೆ. 9 ವರ್ಷಗಳ ಅಧಿಕಾರಾವಧಿಯಲ್ಲಿ ಇಲ್ಲಿವರೆಗೆ ಒಂದೇ ಒಂದು ಪತ್ರಿಕಾಗೋಷ್ಠಿ ನಡೆಸಿ ಸರ್ಕಾರದ ಸಾಧನೆ ಬಗ್ಗೆ ಹಾಗೂ ಜನರ ಅಹವಾಲು ಸ್ವೀಕರಿಸಿಲ್ಲ. ಹಲವು ದೇಶಗಳಿಗೆ ಪ್ರಧಾನಿ ಮೋದಿ ಹೋಗಿ ಬಂದಿದ್ದಾರೆ ಅದರ ಪ್ರತಿಫಲವೇನು, 20ಲಕ್ಷ ಕೋಟಿ ಕೋವಿಡ್ ಪರಿಹಾರ ಧನ ಎಲ್ಲಿಗೆ ಹೋಯ್ತು..? ಪ್ರಧಾನಿ ಕೇರ್ಸ್ ಫಂಡ್ ಖಾತೆಗೆ ಜನರು ಹಾಕಿದ ದುಡ್ಡಿಗೆ ಲೆಕ್ಕವನ್ನು ನೀಡಿಲ್ಲ. ರೈಲು, ಬ್ಯಾಂಕ್, ಬಂದರು, ಶಿಕ್ಷಣ, ಆರೋಗ್ಯ ಕ್ಷೇತ್ರಗಳನ್ನು ಖಾಸಗೀಕರಣ ಮಾಡಲು ಹೊರಟ್ಟಿದ್ದಾರೆ.
ಸಿಐಟಿಯು ಮುಖಂಡ ರೇಣುಕಾರಾದ್ಯ, ಸಿಹೆಚ್ ರಾಮಕೃಷ್ಣ, ವಿಜಯಕುಮಾರ್, ಸಾದಿಕ್ ಪಾಷಾ, ಎ.ಜಾರ್ಜ್, ಮಣೀಶ್, ಅನಿಲ್ ಗುಪ್ತಾ, ಕೆ ರಘುಕುಮಾರ್, ಚೌಡಯ್ಯ ಸೈಯದ್ ಅಲಿ ಮತ್ತಿತರರು ಇದ್ದರು.