ಪ್ರಧಾನಿ‌ ಮೋದಿ ಕೈ ಬಲಪಡಿಸಲು ಸುಧಾಕರ್ ಅವರನ್ನು ಗೆಲ್ಲಿಸಬೇಕು- ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಹರೀಶ್ ಗೌಡ

ದೊಡ್ಡಬಳ್ಳಾಪುರ: ತಾಲೂಕಿನ ಮಧುರೆ ಹೋಬಳಿಯ ವಿವಿಧ ಗ್ರಾಮ ಪಂಚಾಯ್ತಿಗಳಲ್ಲಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಹರೀಶಗೌಡ ಅವರ ನೇತೃತ್ವದಲ್ಲಿ ಸರಣಿ ಸಭೆಗಳನ್ನು ನಡೆಸಿ, ಚಿಕ್ಕಬಳ್ಳಾಪುರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಪರ‌ ಮತಯಾಚನೆ ಮಾಡಲಾಯಿತು.

ಹೊನ್ನಾವರ ಗ್ರಾಮದ ವೀರಭದ್ರಸ್ವಾಮಿ ದೇವಾಲಯ ಆವರಣದಲ್ಲಿ ಜೆಡಿಎಸ್- ಬಿಜೆಪಿ ಕಾರ್ಯಕರ್ತರು ಹಾಗೂ ಗ್ರಾಮಸ್ಥರ ಸಭೆ‌ ನಡೆಸಿದ ಮುಖಂಡರು, 3ನೇ ಅವಧಿಗೆ ಮೋದಿ ಪ್ರಧಾನಿಯಾಗಿ ದೇಶವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯಲು ಮತ ಹಾಕುವಂತೆ ಮನವಿ ಮಾಡಿದರು.

ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಹರೀಶ್ ಗೌಡ ಮಾತನಾಡಿ, ಚಿಕ್ಕಬಳ್ಳಾಪುರದಲ್ಲಿ ಪ್ರಧಾನಿ ನರೇಂದ್ರ‌ಮೋದಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ನೀಡಿರುವ ಆಶ್ವಾಸನೆಗಳನ್ನು ಮನದಲ್ಲಿಟ್ಟುಕೊಂಡು ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಕೆಲಸ ಮಾಡಬೇಕು. ಸ್ಥಳೀಯವಾಗಿ ಉಭಯ ಪಕ್ಷಗಳ ಮುಖಂಡರ ಎಷ್ಟೇ ವೈಮನಸ್ಸಿದ್ದರೂ ಮರೆತು ಪ್ರಧಾನಿ‌ ಮೋದಿ ಕೈ ಬಲಪಡಿಸಲು ಸುಧಾಕರ್ ಅವರನ್ನು ಗೆಲ್ಲಿಸಬೇಕು ಎಂದು ಕೋರಿದರು.

ಶಾಸಕ ಧೀರಜ್ ಮುನಿರಾಜು ಮಾತನಾಡಿ, ಕಾಂಗ್ರೆಸ್ ಸರ್ಕಾರವು ಗ್ಯಾರೆಂಟಿ ಯೋಜನೆಗಳಿಗೆ ರಾಜ್ಯದ ಜನರ ತೆರಿಗೆ ಹಣ ಬಳಸುತ್ತಿದ್ದು, ಬೊಕ್ಕಸ ಬರಿದು ಮಾಡುತ್ತಿದೆ. ಉಚಿತ ಗ್ಯಾರೆಂಟಿಗಳಿಗೆ ಯಾವುದೇ ಗ್ಯಾರೆಂಟಿ ಇಲ್ಲ. ಸುಳ್ಳು ಭರವಸೆಗಳ ಮೂಲಕ ಜನರ ದಾರಿ ತಪ್ಪಿಸಲಾಗುತ್ತಿದೆ. ಹಿಂದೂ ಸಮಾಜದ ಹೆಣ್ಣು‌ಮಕ್ಕಳ‌ ಮೇಲೆ ನಿತ್ಯ ದೌರ್ಜನ್ಯ, ಕೊಲೆ, ಅತ್ಯಾಚಾರದಂತಹ ಕುಕೃತ್ಯಗಳು ನಡೆಯುತ್ತಿವೆ. ಇಂತಹ ಘಟನೆಗಳಿಗೆ ಕಡಿವಾಣ ಹಾಕಲು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂದು ಎಂದು ಹೇಳಿದರು.

ನಂತರ ಕನಸವಾಡಿ, ಸಿ.ಡಿ.ಅಗ್ರಹಾರ, ದೊಡ್ಡತುಮಕೂರು, ಕಾಡನೂರು, ಹಾದ್ರಿಪುರ ಕೆಸ್ತೂರು ಹಾಗೂ ಕೊಡಿಗೇಹಳ್ಳಿ ಗ್ರಾಮ ಪಂಚಾಯ್ತಿ ಕೇಂದ್ರ ಸ್ಥಾನಗಳಲ್ಲಿ ಎನ್ ಡಿಎ ಮೈತ್ರಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಪರ ಪ್ರಚಾರ ನಡೆಸಿ, ಮತಯಾಚಿಸಲಾಯಿತು.

ಹೊನ್ನಾವರ ಗ್ರಾ.ಪಂ.ವ್ಯಾಪ್ತಿಯಲ್ಲಿ‌ ನಡೆದ ಪ್ರಚಾರ ಸಭೆಯಲ್ಲಿ ಬಿಜೆಪಿ‌ ಮುಖಂಡರಾದ ಟಿ.ವಿ.ಲಕ್ಷ್ಮಿನಾರಾಯಣ, ನಾಗೇಶ್, ಜೆಡಿಎಸ್ ಮುಖಂಡರಾದ ಲಕ್ಷ್ಮಿಪತಯ್ಯ, ದೇವರಾಜಮ್ಮ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *