ಪ್ರಧಾನಿ ನರೇಂದ್ರ ಮೋದಿಯನ್ನ ಭೇಟಿಯಾದ ಸಿಎಂ ಸಿದ್ದರಾಮಯ್ಯ:ಬಹುದಿನಗಳಿಂದ ಬಾಕಿಯಿರುವ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ: ಬೇಡಿಕೆ ಯಾವುದು….?

ದೆಹಲಿಯಲ್ಲಿ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಾಜ್ಯಕ್ಕೆ ಸಂಬಂಧಿಸಿದಂತೆ ಬಹುದಿನಗಳಿಂದ ಬಾಕಿಯಿರುವ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಪತ್ರವನ್ನು ಸಲ್ಲಿಸಿದೆ. ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ, ಕಬ್ಬಿನ ಬೆಲೆ ನಿಗದಿ, ₹2,100 ಕೋಟಿ ಪ್ರವಾಹ ಪರಿಹಾರ ಹಾಗೂ ಪ್ರಮುಖ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ತೀರುವಳಿಗಳನ್ನು ನೀಡಲು ಮನವಿ ಪತ್ರದಲ್ಲಿ ಒತ್ತಾಯಿಸಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಮನವಿ ಪತ್ರದ ಪ್ರಮುಖ ಅಂಶಗಳು ಹೀಗಿವೆ;

*ಪ್ರಮುಖ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ*
ರಾಜ್ಯದ ಪ್ರಮುಖ ನೀರಾವರಿ ಹಾಗೂ ಕುಡಿಯುವ ನೀರಿನ ಯೋಜನೆಗಳಿಗೆ ಕೇಂದ್ರದಿಂದ ಬಾಕಿ ರುವ ತೀರುವಳಿಗಳನ್ನು ದೊರಕಿಸಲು ಪ್ರಧಾನಮಂತ್ರಿಗಳು ಮಧ್ಯಪ್ರವೇಶ ಮಾಡಬೇಕು.

ಸಮತೋಲನ ಅಣೆಕಟ್ಟು ಯೋಜನೆಗೆ ಸಂಬಂಧಿಸಿದಂತೆ ಬಾಕಿ ಇರುವ ತೀರುವಳಿಗಳನ್ನು ನೀಡುವಂತೆ ಕೇಂದ್ರ ಜಲ ಆಯೋಗಕ್ಕೆ ನಿರ್ದೇಶಿಸಬೇಕು. ಕಳೆದ ಒಂದು ದಶಕದಿಂದ ಕೃಷ್ಣಾ ಜಲ ವಿವಾದ ನ್ಯಾಯಮಂಡಳಿ -2 ರಲ್ಲಿ ಬಾಕಿ ಇರುವ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಲು ಹಾಗೂ ಕೇಂದ್ರ 2023-24 ರ ಬಜೆಟ್ ನಲ್ಲಿ ಘೋಷಿಸಿರುವಂತೆ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ.ಗಳನ್ನು ಬಿಡುಗಡೆ ಮಾಡಬೇಕು.
ಕಳಸಾ- ಬಂಡೂರಿ ಯೋಜನೆಗೆ ಸಂಬಂಧಿಸಿದಂತೆ ಹುಬ್ಬಳಿ- ಧಾರವಾಡ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸಲು ಅರಣ್ಯ ಮತ್ತು ವನ್ಯಜೀವಿ ಪರಿಸರ ಇಲಾಖೆ ವತಿಯಿಂದ ನೀಡಬೇಕಾದ ತೀರುವಳಿಗಳನ್ನು ನೀಡಬೇಕು. 1/3

*ಪ್ರವಾಹದಿಂದಾಗಿರುವ ಹಾನಿಗೆ 2136 ಕೋಟಿ ರೂ.ಗಳ ಪರಿಹಾರಕ್ಕೆ ಮನವಿ*

ಈ ವರ್ಷ ಉಂಟಾದ ಭಾರಿ ಮಳೆಯಿಂದಾಗಿ ರಾಜ್ಯದ 14.5 ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿದ್ದು, 19 ಲಕ್ಷ ರೈತರಿಗೆ ನಷ್ಟ ಉಂಟಾಗಿದೆ. ಇದಲ್ಲದೇ ಸಾವಿರಾರ ಮನೆಗಳು, ರಸ್ತೆ ಹಾಗೂ ಶಾಲೆಗಳು ಹಾನಿಗೀಡಾಗಿದ್ದು ಎನ್.ಡಿ.ಆರ್ ಎಫ್ ವತಿಯಿಂದ ಪರಿಹಾರವನ್ನು ಕೋರಿ ಎರಡು ಮನವಿ ಪತ್ರಗಳನ್ನು ಸಲ್ಲಿಸಲಾಗಿದೆ. ಇನ್‌ಪುಟ್ ಸಬ್ಸಿಡಿಯಲ್ಲಿನ ಕೊರತೆಗಳನ್ನು ನೀಗಿಸಲು ‘ರಕ್ಷಣೆ ಮತ್ತು ಪರಿಹಾರ’ ದಡಿ 614.9 ಕೋಟಿಗಳು ಹಾಗೂ ಹಾನಿಗೊಳಗಾದ ಸಾರ್ವಜನಿಕ ಮೂಲಸೌಕರ್ಯಗಳ ಪುನರ್ವಸತಿ ಮತ್ತು ಪುನರ್ ನಿರ್ಮಾಣಕ್ಕಾಗಿ 1521.67 ಕೋಟಿಗಳ ಪರಿಹಾರ ನೀಡಲು ಮನವಿ ಮಾಡಲಾಗಿದೆ.

*ಜಲ ಜೀವನ ಮಿಷನ್*

ಕರ್ನಾಟಕ ರಾಜ್ಯದಲ್ಲಿ ಜಲ ಜೀವನ ಮಿಷನ್ (JJM) ಯೋಜನೆಯಡಿ 2025-26ರ ಅಂತ್ಯದವರೆಗೆ ಕರ್ನಾಟಕಕ್ಕೆ ಕೊಡಬೇಕಾದ ಪಾಲಿನಲ್ಲಿ ರೂ.13,004.63 ಕೋಟಿ ಹಣವನ್ನು ಇನ್ನೂ ಬಿಡುಗಡೆ ಮಾಡಿಲ್ಲ. 2024-25ರ ಹಣಕಾಸು ವರ್ಷದಲ್ಲಿ ಹಂಚಿಕೆಯಾಗಬೇಕಿದ್ದ 3,804.41 ಕೋಟಿ ರೂ. ಪೈಕಿ ಕೇವಲ 570.66 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರವು ಸ್ವೀಕರಿಸಲಾಗಿದ್ದರೂ, ರಾಜ್ಯ ಸರ್ಕಾರ ತಾನೇ ಮುಂಗಡವಾಗಿ ರೂ.7,045.64 ಕೋಟಿ ಬಿಡುಗಡೆ ಮಾಡುವ ಮೂಲಕ, ಯೋಜನೆಯ ಯಶಸ್ಸಿಗೆ ಅಗತ್ಯ 7,602.99 ಕೋಟಿ ರೂ. ಮೊತ್ತವನ್ನು ಒದಗಿಸಲಾಗಿದೆ.

2025-26ನೇ ಸಾಲಿನಲ್ಲಿ ಕೇಂದ್ರದಿಂದ ಈ ಯೋಜನೆಯಡಿ ಹಣ ಬಿಡುಗಡೆಯಾಗಿಲ್ಲ. ಆದರೂ ರಾಜ್ಯ ಮುಂಗಡವಾಗಿ ರೂ.1,500 ಕೋಟಿ ಬಿಡುಗಡೆ ಮಾಡಿದೆ. ಪ್ರಸ್ತುತ 1,700 ಕೋಟಿ ರೂ. ಮೊತ್ತದ ಬಿಲ್‌ಗಳು ಪಾವತಿಗೆ ಬಾಕಿ ಇವೆ ಮತ್ತು 2,600 ಕೋಟಿ ರೂ. ಮೊತ್ತದ ಬಿಲ್ಲುಗಳು ಸಲ್ಲಿಕೆಯಾಗಬೇಕಿದೆ. ಗ್ರಾಮೀಣ ಜನತೆಗೆ ಶುದ್ಧ ಕುಡಿಯುವ ನೀರು ಒದಗಿಸುವುದು ಅತ್ಯಂತ ಮುಖ್ಯವಾದ ಕೇಂದ್ರದ ಯೋಜನೆಯಾಗಿದೆ. ಇದನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಕೇಂದ್ರ ಸರ್ಕಾರದ ಸಹಾಯ ಅನಿವಾರ್ಯ. ಆದ್ದರಿಂದ, ಜಲ ಜೀವನ ಮಿಷನ್ ಯೋಜನೆಯಡಿ ರಾಜ್ಯಕ್ಕೆ ಬಾಕಿ ಇರುವ ಕೇಂದ್ರದ ಪಾಲಿನ ಹಣವನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಕೋರಲಾಗಿದೆ.

*ಕಬ್ಬು ಬೆಳೆ ದರ ನಿಗದಿಗೆ ಸುಸ್ಥಿರ ಪರಿಹಾರ*

ಕಬ್ಬು ಬೆಳೆಗಾರರಿಗೆ ತುರ್ತು ಆರ್ಥಿಕ ನೆರವು ನೀಡಲು ಮತ್ತು ಹೆಚ್ಚಿನ ನಿವ್ವಳ ದರವನ್ನು ಖಚಿತಪಡಿಸಲು ಸರ್ಕಾರ ಆದೇಶವನ್ನು ಹೊರಡಿಸಿದ್ದು, ಸಕ್ಕರೆಯ ಕನಿಷ್ಠ ಬೆಂಬಲ ಬೆಲೆ (MSP) ಪ್ರತಿ ಕೆ.ಜಿಗೆ ₹31 ರಲ್ಲಿ ಸ್ಥಗಿತಗೊಂಡಿರುವುದೇ ಸಕ್ಕರೆ ಕಾರ್ಖಾನೆಗಳು ಈ ನಿಗದಿತ ಬೆಲೆಯನ್ನು ರೈತರಿಗೆ ನೀಡಲು ಸಾಧ್ಯವಾಗದಿರಲು ಕಾರಣ. ಈ ಸಂಕಷ್ಟಕ್ಕೆ ಶಾಶ್ವತ ಮತ್ತು ಸಮರ್ಥ ಪರಿಹಾರ ಒದಗಿಸುವ ದಿಸೆಯಲ್ಲಿ, ಸಕ್ಕರೆಯ ಎಂಎಸ್‌ಪಿಯ ತಕ್ಷಣದ ಪರಿಷ್ಕರಣೆ(ಪ್ರಸ್ತುತ ಪ್ರತಿ ಕೆ.ಜಿ.ಗೆ 31 ರೂ.ಗಳು), ಕರ್ನಾಟಕದ ಸಕ್ಕರೆ ಆಧಾರಿತ ಡಿಸ್ಟಿಲರಿಗಳಿಂದ ಎಥನಾಲ್ ಖರೀದಿ ಮಂಜೂರಾತಿಯ ಹೆಚ್ಚಳ, ರಾಜ್ಯಗಳಿಗೆ ಕಬ್ಬಿನ ಬೆಲೆಯನ್ನು ನಿಗದಿಪಡಿಸಲು ಅಥವಾ ಅನುಮೋದಿಸಲು ಅಧಿಕಾರ ನೀಡುವಂತಹ ಅಧಿಸೂಚನೆಯನ್ನು ಕೇಂದ್ರ ಹೊರಡಿಸುವುದೂ ಸೇರಿದಂತೆ ಮನವಿ ಪತ್ರದಲ್ಲಿ ಮೂರು ಬೇಡಿಕೆಗಳನ್ನು ಸಲ್ಲಿಸಲಾಗಿದೆ.

*ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ*

ಕಲ್ಯಾಣ ಕರ್ನಾಟಕದ ಭಾಗವಾದ ರಾಯಚೂರು ಜಿಲ್ಲೆಯು ಆರೋಗ್ಯ ರಕ್ಷಣೆ, ಶಿಕ್ಷಣ ಹಾಗೂ ತಲಾ ಆದಾಯದ ಮಟ್ಟದಲ್ಲಿ ಆರಂಭಿಕ ಹಂತದಲ್ಲಿದೆ. ದಲಿತರು ಹಾಗೂ ಹಿಂದುಳಿದ ವರ್ಗಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಜಿಲ್ಲೆಯ ಜನರಿಗೆ ಗುಣಮಟ್ಟದ ರೆಫರೆಲ್ ವೈದ್ಯಕೀಯ ಕೇಂದ್ರದ ಅಗತ್ಯತೆಯನ್ನು ಪೂರೈಸಲು ರಾಯಚೂರು ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆಗೆ ಅನುಮೋದನೆಯನ್ನು ನೀಡುವಂತೆ ಕೋರಲಾಗಿದೆ.

ಕರ್ನಾಟಕ ಸರ್ಕಾರವು ರಾಯಚೂರಿನಲ್ಲಿ AIIMS ಸ್ಥಾಪನೆಗೆ ಅನುಮೋದನೆ ಕೋರಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ವಿವರವಾದ ಯೋಜನಾ ವರದಿಯನ್ನು ಈಗಾಗಲೇ ಸಲ್ಲಿಸಿದೆ. ಯೋಜನೆಗೆ ಅವಶ್ಯವಾದ ಭೂಮಿಯ ಲಭ್ಯತೆ, ಸಂಪರ್ಕ ವ್ಯವಸ್ಥೆ ಮತ್ತು ಸ್ಥಳೀಯ ಆಡಳಿತದ ಬೆಂಬಲ ಸೇರಿದಂತೆ AIIMS ನಂತಹ ರಾಷ್ಟ್ರೀಯ ಮಟ್ಟದ ಸಂಸ್ಥೆಯನ್ನು ಜಿಲ್ಲೆಯಲ್ಲಿ ಸ್ಥಾಪಿಸಲು ಪೂರಕ ವ್ಯವಸ್ಥೆ ಕಲ್ಪಿಸಲಾಗಿದೆ.

ರಾಜ್ಯದ ಹಲವು ನೀರಾವರಿ ಯೋಜನೆಗಳಿಗೆ ಅನುಮೋದನೆ, ಅನುದಾನ, ಪರಿಸರ ತೀರುವಳಿ ಸೇರಿದಂತೆ ಕೇಂದ್ರ ಸರ್ಕಾರದಿಂದ ದೊರೆಯಬೇಕಾದ ನೆರವಿನ ಬಗ್ಗೆ ಮನವಿ

ಶ್ರೀ ನರೇಂದ್ರ ಮೋದಿಯವರೇ,
ಕರ್ನಾಟಕ ರಾಜ್ಯದ ಪರವಾಗಿ ನಿಮಗೆ ವಂದನೆಗಳನ್ನು ತಿಳಿಸಲು ಹರ್ಷಿಸುತ್ತೇನೆ. ಕರ್ನಾಟಕವು ರಾಜಸ್ಥಾನದ ನಂತರ ಅತಿ ಹೆಚ್ಚು ಒಣ ಭೂಮಿ ಹೊಂದಿರುವ ರಾಜ್ಯವಾಗಿದೆ. ನಾವು ಅನುಷ್ಠಾನಗೊಳಿಸಿರುವ ಹಾಗೂ ಜಾರಿಗೆ ತರುತ್ತಿರುವ ನೀರಾವರಿ ಯೋಜನೆಗಳ ಫಲವಾಗಿ ಒಣ ಭೂಮಿಯು ಫಲವತ್ತತೆಯ ಭೂಮಿಯಾಗಿ ಪರಿವರ್ತನೆಗೊಳ್ಳುತ್ತಿದೆ. ರಾಜ್ಯ ಸರ್ಕಾರವು ಕೃಷಿ ಉತ್ಪಾದನೆ ಹೆಚ್ಚಿಸಲು, ರೈತರಿಗೆ ಉತ್ತಮ ಆದಾಯ ದೊರಕಿಸಿಕೊಡಲು ಅಗತ್ಯವಿರುವಷ್ಟು ನೀರನ್ನು ಪೂರೈಸುವಲ್ಲಿ ಯಶಸ್ವಿಯಾಗಿದೆ.

ಕರ್ನಾಟಕದ ಜಲಸಂಪನ್ಮೂಲ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರದೊಂದಿಗೆ ದೀರ್ಘಾವಧಿಯಿಂದ ಬಾಕಿ ಉಳಿದಿರುವ ಸಮಸ್ಯೆಗಳನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ:

1. ಕಾವೇರಿ ನದಿಯ ಮೇಕೆದಾಟು ಯೋಜನೆಗೆ ಸಂಬಂಧಿಸಿ ತಮಿಳುನಾಡು ರಾಜ್ಯದ ವಿವಿಧ ಅರ್ಜಿಗಳನ್ನು ಮಾನ್ಯ ಸುಪ್ರೀಂ ಕೋರ್ಟ್ ನವೆಂಬರ್‌ 13, 2025ರಂದು ವಜಾಗೊಳಿಸಿರುವುದು ನಿಮಗೆ ಗೊತ್ತಿದೆ ಎಂದು ಭಾವಿಸುತ್ತೇನೆ. ಮೇಕೆದಾಟು ಯೋಜನೆಗೆ ಅನುಮತಿ ನೀಡುವ ವಿಚಾರವಾಗಿ ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಮತ್ತು ಕೇಂದ್ರ ಜಲ ಆಯೋಗ (CWC) ದಂತಹ ತಜ್ಞ ಸಮಿತಿಗಳಿಗೆ ಸೂಚಿಸಿದೆ. ಈಗಾಗಲೇ ಕೇಂದ್ರ ಜಲ ಆಯೋಗಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಮನವಿ ಮಾಡಿದ್ದು, ಕೇಂದ್ರ ಸರ್ಕಾರವು ತ್ವರಿತವಾಗಿ ಕೇಂದ್ರ ಜಲ ಆಯೋಗಕ್ಕೆ ನಿರ್ದೇಶನಗಳನ್ನು ನೀಡುವ ಮೂಲಕ ಅನುಮತಿ ಕೊಡಿಸುವಂತೆ ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ.

2. ಕೃಷ್ಣಾ ನದಿ ನೀರು ಹಂಚಿಕೆ ಕುರಿತಂತೆ ಕೃಷ್ಣಾ ಜಲ ವಿವಾದ ನ್ಯಾಯಮಂಡಳಿ (KWDT-II) ತೀರ್ಪು ಘೋಷಣೆಯಾಗಿ ಒಂದು ದಶಕಕ್ಕೂ ಹೆಚ್ಚು ಕಾಲ ಕಳೆದಿದ್ದರೂ, ಇನ್ನೂ ಕೇಂದ್ರ ಸರ್ಕಾರ ಗೆಜೆಟ್‌ ಅಧಿಸೂಚನೆ ಹೊರಡಿಸಿಲ್ಲ. ಈ ಯೋಜನೆಗಾಗಿ ರಾಜ್ಯ ಸರ್ಕಾರವು ಹೆಚ್ಚಿನ ಮೊತ್ತವನ್ನು ವ್ಯಯಿಸಿದೆಯಾದರೂ, ಅಧಿಸೂಚನೆ ಹೊರಡಿಸಲು ತಡ ಮಾಡಿರುವುದರಿಂದ ಇನ್ನೂ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗಿಲ್ಲ. ದಯಮಾಡಿ ಇದನ್ನೂ ತ್ವರಿತವಾಗಿ ಇತ್ಯರ್ಥಗೊಳಿಸಿ.

3. ಕೃಷ್ಣಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರವು 2023-24ರ ಬಜೆಟ್‌ನಲ್ಲಿ ₹5,300 ಕೋಟಿ ಅನುದಾನ ಘೋಷಿಸಿತ್ತು. ಈ ಸಂಬಂಧ ಹಣ ಬಿಡುಗಡೆ ಮಾಡುವಂತೆ ಕೇಂದ್ರ ಹಣಕಾಸು ಇಲಾಖೆಗೆ ಮನವಿ ಸಲ್ಲಿಸಿದರೂ ಇನ್ನೂ ರಾಜ್ಯಕ್ಕೆ ಅನುದಾನ ಬಿಡುಗಡೆಯಾಗಿಲ್ಲ. ನೀವು ಈ ಸಂಬಂಧ ಮಧ್ಯಪ್ರವೇಶಿಸಿದರೆ, ನೆರವು ದೊರೆಯುವ ನಿರೀಕ್ಷೆಯಿದೆ. ಈ ಯೋಜನೆಯಿಂದ ಕರ್ನಾಟಕದ ಬರಗಾಲ ಪೀಡಿತ ಪ್ರದೇಶಕ್ಕೆ ಬಹಳ ಸಹಕಾರಿಯಾಗಲಿದೆ.

4. ಹುಬ್ಬಳ್ಳಿ-ಧಾರವಾಡಕ್ಕೆ ಕುಡಿಯುವ ನೀರು ಪೂರೈಸುವ ಕಳಸಾ ಬಂಡೂರಿ ನಾಲಾ ಯೋಜನೆಗೆ (ಮಹದಾಯಿ) 2022ರ ಡಿಸೆಂಬರ್‌ನಲ್ಲಿ ಕೇಂದ್ರ ಜಲ ಆಯೋಗ/ಜಲಶಕ್ತಿ ಸಚಿವಾಲಯವು ಅನುಮತಿ ನೀಡಿದೆ. ಆದರೆ ಈ ಯೋಜನೆಗಳಿಗೆ ಯಾವುದೇ ಕಾನೂನು ಅಡೆತಡೆಗಳು ಇಲ್ಲದಿದ್ದರೂ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ (Ministry of Environment, Forest and Climate Change) ಇನ್ನೂ ಕಾಡು/ವನ್ಯಜೀವಿ ಅನುಮೋದನೆ (Forest/Wildlife Clearance) ಸಿಕ್ಕಿಲ್ಲ. ಇದರಿಂದ ಯೋಜನೆಯನ್ನು ಅನುಷ್ಠಾನಗೊಳಿಸಲು ಹಾಗೂ ಕುಡಿಯುವ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಕೂಡಲೇ ನೀವು ಮಧ್ಯಪ್ರವೇಶಿಸಿ ಈ ಸಮಸ್ಯೆಯನ್ನು ಬಗೆಹರಿಸಿಕೊಡಬೇಕೆಂದು ಕೋರುತ್ತೇನೆ.

5. ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಯ (NWDA) ನದಿಗಳ ಜೋಡಣೆ ಯೋಜನೆಯಡಿ ಸಮಾನತೆ ಮತ್ತು ನ್ಯಾಯಯುತ ಹಂಚಿಕೆ ತತ್ವದಡಿ ಕರ್ನಾಟಕಕ್ಕೆ ನ್ಯಾಯಯುತ ನೀರು ಹಂಚಿಕೆ ಮಾಡಬೇಕು ಎಂಬ ನಮ್ಮ ಮನವಿಯನ್ನು ಪರಿಗಣಿಸಬೇಕು. ಈ ಸಂಬಂಧ ಅಗತ್ಯ ಬೆಂಬಲವನ್ನು ನೀಡಬೇಕು.

ಜಲಸಂಪನ್ಮೂಲ ಇಲಾಖೆಗೆ ಸಂಬಂಧಿಸಿ ಬಾಕಿ ಇರುವ ಯೋಜನೆಗಳು / ಸಮಸ್ಯೆಗಳ ಕುರಿತು ಸಂಕ್ಷಿಪ್ತ ಟಿಪ್ಪಣಿ ಮೂಲಕ ನಿಮ್ಮ ಗಮನಕ್ಕೆ ತಂದಿದ್ದೇನೆ. ಇದನ್ನು ದಯವಿಟ್ಟು ಪರಿಶೀಲಿಸಬೇಕೆಂದು ಮನವಿ ಮಾಡುತ್ತೇನೆ.

ಕರ್ನಾಟಕದ ಜಲಸಂಪನ್ಮೂಲ ಇಲಾಖೆಗೆ ಸಂಬಂಧಿಸಿ ಬಾಕಿ ಉಳಿದಿರುವ ಪ್ರಸ್ತಾವನೆಗೆ ಅನುಮತಿ ನೀಡುವಂತೆ ಕೇಂದ್ರ ಜಲಶಕ್ತಿ ಸಚಿವಾಲಯ ಹಾಗೂ ಪರಿಸರ, ಅರಣ್ಯ ಮತ್ತು ಹವಾಮಾನ ಇಲಾಖೆಗೆ ನಿರ್ದೇಶನ ನೀಡಲು ತಮ್ಮಲ್ಲಿ ವಿನಂತಿಸುತ್ತೇನೆ. ನಿಮ್ಮ ನಾಯಕತ್ವದಡಿ ಕೇಂದ್ರ ಸರ್ಕಾರವು ಕರ್ನಾಟಕದ ಪ್ರಸ್ತಾವನೆಗೆ ಒಪ್ಪಿಗೆ ನೀಡಿ, ರಾಜ್ಯದ ನೀರಾವರಿ ವಲಯದ ಸಮಗ್ರ ಅಭಿವೃದ್ಧಿಗೆ ಮತ್ತು ವಿಶೇಷವಾಗಿ ರೈತರ ಕಲ್ಯಾಣದಲ್ಲಿ ಮಹತ್ತರ ಪಾತ್ರ ವಹಿಸಬೇಕು ಎಂದು ಕೋರುತ್ತೇನೆ ಹಾಗೂ ನೀವು ರಾಜ್ಯಕ್ಕೆ ಸಹಕಾರವನ್ನು ನೀಡುತ್ತೀರಿ ಎಂಬ ನಂಬಿಕೆ ನಮಗಿದೆ.

 

Leave a Reply

Your email address will not be published. Required fields are marked *

error: Content is protected !!