ಆಕ್ಸಿಯಮ್-4 ಬಾಹ್ಯಾಕಾಶ ಕಾರ್ಯಾಚರಣೆಯ ಭಾಗವಾಗಿದ್ದ ಭಾರತೀಯ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು, ಇಂದು (ಆ.18-ಸೋಮವಾರ) ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ.
ಈ ವೇಳೆ ಭಾರತೀಯ ಗಗನಯಾತ್ರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಪ್ಪುಗೆಯ ಸ್ವಾಗತ ಕೋರಿದ್ದಾರೆ.
ಪ್ರಧಾನಿ ಅಧಿಕೃತ ಕಚೇರಿಗೆ ಭೇಟಿ ನೀಡಿದ ಶುಭಾಂಶು ಶುಕ್ಲಾ ಅವರನ್ನು, ನರೇಂದ್ರ ಮೋದಿ ಅವರು ಆತ್ಮೀಯವಾಗಿ ಬರಮಾಡಿಕೊಂಡು, ಶುಕ್ಲಾ ಅವರನ್ನು, “ಭಾರತದ ಬಾಹ್ಯಾಕಾಶ ಯೋಜನೆಯ ಪ್ರತಿನಿಧಿ” ಎಂದು ಪ್ರಧಾನಿ ಮೋದಿ ಕೊಂಡಾಡಿದ್ದಾರೆ.
ಶುಭಾಂಶು ಶುಕ್ಲಾ ಅವರಿಂದ ಆಕ್ಸಿಯಮ್-4 ಬಾಹ್ಯಾಕಾಶ ಕಾರ್ಯಾಚರಣೆಯ ವಿವರ ಪಡೆದುಕೊಂಡ ಪ್ರಧಾನಿ ಮೋದಿ, ಭಾರತೀಯ ಗಗನಯಾತ್ರಿಯ ಬಾಹ್ಯಾಕಾಶ ಯಾತ್ರೆಯ ಅನುಭವಗಳನ್ನು ಕೇಳಿ ರೋಮಾಂಚನಗೊಂಡಿದ್ದಾರೆ.
ಇದೇ ವೇಳೆ ಶುಭಾಂಶು ಶುಕ್ಲಾ ಅವರು ಪ್ರಧಾನಿ ಮೋದಿ ಅವರಿಗೆ, ಆಕ್ಸಿಯಮ್ -4 ಮಿಷನ್ ಪ್ಯಾಚ್‌ವೊಂದನ್ನು ಉಡುಗೊರೆಯಾಗಿ ನೀಡಿದರು. ಪ್ರಧಾನಿ ಮೋದಿ ಈ ಉಡುಗೊರೆಯನ್ನು ಅತ್ಯಂತ ಸಂತಸದಿಂದ ಸ್ವೀಕರಿಸಿದ್ದಾರೆ.
ತಮ್ಮ ಭೇಟಿಯ ಸಂದರ್ಭದಲ್ಲಿಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ಐಎಸ್‌ಎಸ್)ದಿಂದ ಕ್ಲಿಕ್ಕಿಸಿದ ಭೂಮಿಯ ಚಿತ್ರಗಳನ್ನು ಪ್ರಧಾನಿ ಮೋದಿ ಅವರಿಗೆ ತೋರಿಸಿದರು. ಶುಭಾಂಶು ಶುಕ್ಲಾ ಐಎಸ್‌ಎಸ್‌ಗೆ ಭೇಟಿ ನೀಡಿದ ಮೊದಲ ಮತ್ತು ಬಾಹ್ಯಾಕಾಶ ತಲುಪಿದ ಎರಡನೇ ಭಾರತೀಯ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಶುಭಾಂಶು ಶುಕ್ಲಾ ಅವರೊಂದಿಗೆ ಉತ್ತಮ ಸಂವಾದ ನಡೆಯಿತು. ಬಾಹ್ಯಾಕಾಶದಲ್ಲಿ ಅವರ ಅನುಭವಗಳು, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಪ್ರಗತಿ ಹಾಗೂ ಭಾರತದ ಮಹತ್ವಾಕಾಂಕ್ಷೆಯ ಗಗನಯಾನ ಮಿಷನ್ ಸೇರಿದಂತೆ ವಿವಿಧ ವಿಷಯಗಳ ಕುರಿತು ನಾವು ಚರ್ಚಿಸಿದ್ದೇವೆ. ಅವರ ಸಾಧನೆಯ ಬಗ್ಗೆ ಭಾರತ ಹೆಮ್ಮೆಪಡುತ್ತದೆ.