ಪ್ರತ್ಯೇಕ ಕಳ್ಳತನ ಪ್ರಕರಣ: ಕಳ್ಳರ ಪತ್ತೆಗಾಗಿ ಪ್ರತ್ಯೇಕ ತಂಡ ರಚನೆ: ಕಳ್ಳರ ಜಾಡು ಹಿಡಿದು ಎಡೆಮುರಿ ಕಟ್ಟಿದ ಪೊಲೀಸರು: ವಶಕ್ಕೆ ಪಡೆದ ಮಾಲು ವಾರಸುದಾರರಿಗೆ ಹಿಂದುರಿಗಿಸಿದ ಇಲಾಖೆ

ಕೋಲಾರ: ಜಿಲ್ಲಾ ಪೊಲೀಸ್ ವ್ಯಾಪ್ತಿಯ ವಿವಿಧ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರತ್ಯೇಕ ಕಳ್ಳತನ ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ ಬೆಲೆ ಬಾಳುವ ವಸ್ತುಗಳನ್ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ವಾರಸುದಾರರಿಗೆ ಹಿಂದುರಿಗಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಕೋಲಾರ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ತಿಳಿಸಿದರು..

ನಗರದಲ್ಲಿರುವ ಎಸ್ಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಸಂಭವಿಸಿದ್ದ ಕಳ್ಳತನ ಪ್ರಕರಣಗಳ ಕಳ್ಳರ ಪತ್ತೆಗಾಗಿ ಪ್ರತ್ಯೇಕ ತಂಡಗಳನ್ನು ರಚನೆ ಮಾಡಲಾಗಿತ್ತು, ದೂರಿನ ಅನ್ವಯ ತನಿಖೆ ಕೈಗೊಂಡಿದ್ದ ಅಧಿಕಾರಿಗಳು ಬೇರೆ ರಾಜ್ಯಗಳಿಗೆ ತೆರಳಿ ಆರೋಪಿಗಳನ್ನು ಬಂಧಿಸಿ ಕರೆ ತರುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

ಜಿಲ್ಲೆಯ ಮಾಲೂರು ಠಾಣೆ ವ್ಯಾಪ್ತಿಯಲ್ಲಿ 2023ರ ಡಿಸೆಂಬರ್ 30ರಂದು ಅಂತಾರಾಜ್ಯ ಕಳ್ಳರು 6 ಲಕ್ಷ ರೂ. ನಗದು ಕಳವು ಮಾಡಿ ತಲೆಮರಿಸಿಕೊಂಡಿದ್ದರು. ಪೊಲೀಸರು ಪ್ರಕರಣ ದಾಖಲಿಕೊಂಡು ತನಿಖೆ ಕೈಗೊಂಡರು ಸಹ ಯಾವುದೇ ರೀತಿ ಸುಳಿವು ದೊರೆಯದಂತೆ ಎಚ್ಚರವಹಿಸಿದ್ದರು.

ರಾಜಸ್ಥಾನ ನಿವಾಸಿ ಅಜತ್ ಕುಮಾರ್, ಜಮ್ಮು ರಾಜ್ಯದ ಮಹಮದ್ ರಂಜಾನ್, ಮಧ್ಯ ಪ್ರದೇಶದ ಪ್ರವೀಣ್ ಸ್ವಾನಾಡಿಯಾ ಸ್ಥಳೀಯರ ಸಹಾಯವಿಲ್ಲದೆ ನಗದು ಕಳವು ಮಾಡಿದ್ದರು. ಅವರು ಸ್ವಂತ ಸ್ಥಳಗಳಿಗೆ ತೆರಳಿ ತಲೆಮರಿಸಿಕೊಂಡಿದ್ದರು. ಅವರನ್ನು ಪತ್ತೆ ಹಚ್ಚಲು ತೆರಳಿದ್ದ ಸಮಯದಲ್ಲಿ ಪೊಲೀಸರ ಮೇಲೆ ಕಳ್ಳರು ಹಲ್ಲೆ ನಡೆಸಲು ಯತ್ನಿಸಿದ್ದರು. ಅಪರಾಧಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿದರು.

ಮಾಲೂರು ಸಮೀಪದ ಫ್ಲಿಪ್ ಕಾರ್ಟ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಾಲಾಜಿ ಎಂಬಾತ 15 ಲಕ್ಷ ರೂ. ಬೆಲೆಬಾಳುವ 15 ಐಫೋನ್‌ಗಳನ್ನು ಕಳವು ಮಾಡಿ ಪರಾರಿಯಾಗಿದ್ದನು. ಮತ್ತೊಂದು ಪ್ರಕರಣದಲ್ಲಿ ಮಾಲೂರು ತಾಲೂಕಿನ ಶಿವಾರಪಟ್ಟಣ ನಿವಾಸಿ ವೃದ್ಧೆ ಮುನಿರತ್ನ ಅವರ ಮನೆಯ ಮೇಲೆ ನಾಲ್ಕು ಮಂದಿ ದಾಳಿ ಮಾಡಿ 70 ಸಾವಿರರೂ ನಗದು ದೋಚಿ ಪರಾರಿಯಾಗಿದ್ದರು. ಅಪರಾಧಿಗಳ ಪತ್ತೆ ನಡೆಸಿ ಹರೀಶ್, ತಿಪ್ಪೇಸ್ವಾಮಿ, ಶಿವರಾಜ್ ಹಾಗೂ ಅಶೋಕ್‌ನನ್ನು ಬಂಧಿಸಲಾಗಿದೆ ಎಂದರು.

ಕೆಜಿಎಫ್ ನಗರದ ಸುಮತಿ ನಗರ ನಿವಾಸಿ ಪ್ರದೀಪ್ ಫ್ಲಿಪ್ ಕಾರ್ಟ್ ಕಂಪನಿಯಲ್ಲಿ ಮೇಲಾಧಿಕಾರಿಗಳ ಕಣ್ಣು ತಪ್ಪಿಸಿ 14 ಆಪಲ್ ಫೋನ್ ಹಾಗೂ 15 ಸಾವಿರ ನಗದನ್ನು 2024ರ ಜ.17ರಂದು ದೋಚಿ ಏನು ಗೊತ್ತಿಲ್ಲದ ಹಾಗೆ ಇದ್ದ. ಈ ಕುರಿತು ಪ್ರಕರಣ ದಾಖಲಾಗಿ ಅಪರಾಧಿ ಪ್ರದೀಪ್‌ನನ್ನು ವಿಚಾರಣೆ ಮಾಡಿದಾಗ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಅಪರಾಧಿಯನ್ನು ನ್ಯಾಯಾಲಯಕ್ಕೆ ಒಪ್ಪಿಸಿ ವಾರಸುದಾರರಿಗೆ ಮಾಲನ್ನು ಒಪ್ಪಿಸಲಾಯಿತು ಎಂದರು.

ಇನ್ನು ಕೋಲಾರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಎರಡು ಪ್ರಕರಣಗಳು ಸಂಭವಿಸಿದ್ದು, ಆ ಪೈಕಿ ತಾಲೂಕಿನ ವೀರಾಪುರ ಸಮೀಪದ ಹಿಂದೂಸ್ತಾನ್ ಸಾಮಿಲ್ ಮತ್ತು ಇಟ್ಟಿಗೆ ಫ್ಯಾಕ್ಟರಿ ಆವರಣದಲ್ಲಿನ ಮನೆಯ ಮೇಲೆ ದಾಳಿ ಮಾಡಿದ್ದ ಮುಸುಕುದಾರಿಗಳು 125ಗ್ರಾಂ ಚಿನ್ನಾಭರಣ, 4 ಲಕ್ಷ ರೂ. ನಗದು ದೋಚಿ ತಲೆಮರಿಸಿಕೊಂಡಿದ್ದರು. ದೂರನ್ನು ಆಧರಿಸಿ ಆರೋಪಿಗಳಾದ ಸುಲ್ತಾನ, ಅಸೀಪ್ ಎಂಬುವರನ್ನು ಬಂಧಿಸಿ, ಮಾಲನ್ನು ವಶಪಡಿಸಿಕೊಳ್ಳಲಾಗಿದೆ. ಈ ಕೃತ್ಯದ ಅಪರಾಧಿ ಅಸೀಪ್ ಮೃತಪಟ್ಟಿದ್ದು, ಸುಲ್ತಾನ್ ವಿರುದ್ಧ ದೋಷಾರೋಪಟ್ಟಿ ಸಲ್ಲಿಸಲಾಗಿದೆ ತಿಳಿಸಿದರು.

ಜ.19ರಂದು ತಾಲೂಕಿನ ನಾಯಕರಹಳ್ಳಿ ಗ್ರಾಮದ ಶ್ರೀವೇಣುಗೋಪಾಲಸ್ವಾಮಿ ದೇವಾಲಯದ ಬಾಗಿಲನ್ನು ಮುರಿದು ದೇವರ ಅಲಂಕಾರದ ಬೆಳ್ಳಿಯ ಮೂರು ಕಿರೀಟಗಳು ಹಾಗೂ 2 ಚಿನ್ನದ ತಾಳಿ ಬೊಟ್ಟುಗಳನ್ನು ಕಳವು ಮಾಡಿದ್ದ ಆರೋಪಿಗಳಾದ ಹರಳಕುಂಟೆ ನಿವಾಸಿ ಸೈಯದ್ ನಯಾಜ್, ವಶಪಡಿಸಿಕೊಂಡು ದೇವಾಲಯಕ್ಕೆ ಹಿಂದುರುಗಿಸಲಾಗಿದೆ ಎಂದು ಮಾಹಿತಿ ನೀಡಿದ ಎಸ್ಪಿ ಎಂ.ನಾರಾಯಣ ಅವರು, ಪ್ರಕರಣಗಳ ಅಪರಾಧಿಗಳನ್ನು ಪತ್ತೆ ಹಚ್ಚಲು ಶ್ರಮಿಸಿರುವ ತನಿಖಾ ತಂಡಕ್ಕೆ ತಲಾ 5 ಸಾವಿರ ನಗದು ಬಹುಮಾನ ನೀಡುವುದಾಗಿ ಘೋಷಿಸಿದರು.

Leave a Reply

Your email address will not be published. Required fields are marked *