ಪ್ರತಿಯೊಬ್ಬ ಸಾಧಕ ವ್ಯಕ್ತಿಯ ಹಿಂದೆ ಶಿಕ್ಷಕ ಇದ್ದೇ ಇರುತ್ತಾನೆ- ಉಪನ್ಯಾಸಕ ಸುಧಾಕರ್

ಎಲ್ಲಾ ವೃತ್ತಿಗಳಲ್ಲಿ ನಿವೃತ್ತಿ ಹೊಂದಿದ ಮೇಲೆ ಮಾಜಿ ಅನ್ನೋ ಪದ ಇರುತ್ತದೆ‌. ಆದರೆ ಶಿಕ್ಷಕ ವೃತ್ತಿಯಲ್ಲಿ ಮಾಜಿ ಅನ್ನೋ ಪದ ಇರೋದಿಲ್ಲ. ಶಿಕ್ಷಕರು ಸದಾ ಕಲಿಯುತ್ತಿರುತ್ತಾರೆ ಕಲಿತ್ತದ್ದನ್ನ ಇನ್ನೊಬ್ಬರಿಗೆ ಕಲಿಸುವ ಹಂಬಲ ಶಿಕ್ಷಕರಿಗೆ ಮಾತ್ರ ಇರುತ್ತದೆ ಎಂದು ಉಪನ್ಯಾಸ ಸುಧಾಕರ್ ಹೇಳಿದರು.

ತಾಲೂಕಿನ ಗುಂಜೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೇ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, ಪ್ರತಿಯೊಬ್ಬ ಸಾಧಕ ವ್ಯಕ್ತಿಯ ಹಿಂದೆ ಶಿಕ್ಷಕ ಇದ್ದೇ ಇರುತ್ತಾನೆ. ಪ್ರಾಥಮಿಕ ಶಿಕ್ಷಣವು ಎಲ್ಲರಿಗೂ ತಳಹದಿ. ವಿದ್ಯಾದಾನ ಮಾಡುವವರನ್ನ ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದರು.

ನಂತರ ಹಳೇ ವಿದ್ಯಾರ್ಥಿ ಹರೀಶ್ ಮಾತನಾಡಿ, ನಮ್ಮೂರಿನ ಶಾಲೆಗೆ ನೂರು ವರ್ಷಗಳ ಇತಿಹಾಸ ಇದೆ. 1975-2023ರ ಬ್ಯಾಚ್ ನ ಎಲ್ಲಾ ಹಳೇ ವಿದ್ಯಾರ್ಥಿಗಳು ಸೇರಿ ನಮಗೆ ಪಾಠ ಹೇಳಿಕೊಟ್ಟ ಶಿಕ್ಷಕರಿಗೆ ಗುರುವಂದನೆ ಮಾಡಿರುವುದು ಸಂತೋಷವಾಗಿದೆ. ಶಿಕ್ಷಕರು ಹಾಕಿ‌ಕೊಟ್ಟ ಒಳ್ಳೆ ಮಾರ್ಗದಲ್ಲಿ ನಡೆದಿರುವುದರಿಂದ ನಾವು ಈಗ ಉತ್ತಮ ಪ್ರಜೆಗಳಾಗಿ ಜೀವನ ರೂಪಿಸಿಕೊಂಡಿದ್ದೇವೆ. ಅವರಿಲ್ಲದೇ ನಾವಿಲ್ಲ. ನಾವು ಶಿಕ್ಷಕರಿಗೆ ಸದಾ ಕಾಲ ಚಿರ ಋಣಿಯಾಗಿರುತ್ತೇವೆ ಎಂದರು.

ನಂತರ ಶಿಕ್ಷಕ ಚಂದ್ರಶೇಖರಯ್ಯ ಮಾತನಾಡಿ, ಪಾಠ ಹೇಳಿಕೊಟ್ಟ ಶಿಕ್ಷಕರನ್ನು ವಿದ್ಯಾರ್ಥಿಗಳು ನೆನಪಿನಲ್ಲಿಟ್ಟುಕೊಂಡು ಗೌರವ ನೀಡುತ್ತಿರುವುದು ಬಹಳ ಸಂತೋಷದ ಸಂಗತಿ. ಒಬ್ಬ ಶಿಕ್ಷಕನಿಗೆ ಯಾವಾಗ ಸಂತೋಷ ಆಗುತ್ತೆಂದರೆ ತನ್ನ ವಿದ್ಯಾರ್ಥಿ ದೇಶದ ಉತ್ತಮ ಪ್ರಜೆಯಾದಾಗ, ಅಸಹಾಯಕರಿಗೆ ಸಹಾಯ ಮಾಡಿದಾಗ ಎಂದರು.

ಈ ಹಿಂದೆ ಖಾಸಗಿ ಶಾಲೆಗಳ ಹಾವಳಿ ಕಡಿಮೆ ಇತ್ತು. ಈಗ ಖಾಸಗಿ ಶಾಲೆಗಳು ಹೆಚ್ಚಾಗಿರುವುದರಿಂದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ಸರ್ಕಾರವು ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಶಿಕ್ಷಣದ ಜೊತೆಗೆ ಶೂ, ಪಠ್ಯಪುಸ್ತಕ, ಬ್ಯಾಗ್, ಸಮವಸ್ತ್ರ, ಬಿಸಿ ಊಟ, ಸ್ಕಾಲರ್ ಶಿಪ್ ಸೇರಿದಂತೆ ಎಲ್ಲವೂ ಉಚಿತವಾಗಿ ನೀಡುತ್ತಿದೆ. ನುರಿತ ಶಿಕ್ಷಕರನ್ನು ಸರ್ಕಾರಿ ಶಾಲೆಗಳಿಗೆ ನೇಮಕ ಮಾಡಲಾಗಿದೆ. ಆದರೆ ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಬಿದ್ದು ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲು ಮಾಡುತ್ತಿಲ್ಲ ಎಂದರು.

ಈ ವೇಳೆ ಶಾಲೆಯ ಹಳೇ ವಿದ್ಯಾರ್ಥಿಗಳಾದ  ಮಂಜುನಾಥ್, ಅಪೂರ್ವ, ಪುಷ್ಪ, ಮುನಿರಾಜ, ರಾಮಲಕ್ಷಮ್ಮ, ಚಂದ್ರಪ್ಪ, ನರಸಿಂಹಮೂರ್ತಿ, ರಾಮಮೂರ್ತಿ, ಶ್ರೀನಿವಾಸ್, ಒಬಳಪ್ಪ, ಗೋವಿಂದರಾಜು, ಮಧುಸೂಧನ್, ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *