ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಂವಿಧಾನದ ಆಶಯದೊಂದಿಗೆ ನಾವೆಲ್ಲರೂ ಮುಂದೆ ಸಾಗಬೇಕು ಎಂದು
ಭಾರತ ಸೇವಾದಳ ದೊಡ್ಡಬಳ್ಳಾಪುರ ತಾಲೂಕು ಘಟಕದ ಅಧ್ಯಕ್ಷರು ಹಾಗೂ ವಕೀಲ ಆರ್.ವಿ ಮಹೇಶ್ ಕುಮಾರ್ ಹೇಳಿದರು.
ಅಂಬೇಡ್ಕರ್ ಅವರ ರೀತಿಯಲ್ಲಿ ಯುವ ಜನಾಂಗವು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುವುದರಿಂದ ದೇಶದಲ್ಲಿ ಇನ್ನೂ ಮಹತ್ತರವಾದ ಬದಲಾವಣೆಯನ್ನು ಕಾಣಬಹುದು. ಶಿಕ್ಷಣ ಮತ್ತು ಸಬಲೀಕರಣದಿಂದ ಅಸಮಾನತೆಯನ್ನು ಸಂಪೂರ್ಣವಾಗಿ ಹೋಗಲಾಡಿಸಬೇಕು. ‘ಶಿಕ್ಷಣ ಎಂಬುದು ಹುಲಿಯ ಹಾಲಿದ್ದಂತೆ ಅದನ್ನು ಕುಡಿದವರು ಘರ್ಜಿಸಲೇಬೇಕು’ ಎಂದು ಹೇಳುವುದರ ಮೂಲಕ ದೇಶದಲ್ಲಿನ ಅಸಮಾನತೆ ನಿವಾರಣೆಗೆ ಶಿಕ್ಷಣವೇ ಮೂಲ ಮದ್ದು ಎಂದು ಹೇಳಿದ್ದಾರೆ.
ದೇಶದಲ್ಲಿ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿ ಕೊಟ್ಟಿರುವುದು ಭಾರತದ ಸಂವಿಧಾನ. ಅಂತಹ ಸಂವಿಧಾನ ಕೊಟ್ಟಿರುವುದು ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ಅವರು, ಶೋಷಿತರಿಗೆ, ಹಿಂದುಳಿದವರಿಗೆ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿಕೊಡಬೇಕು. ಸರ್ವರು ಸ್ವಂತಂತ್ರರರು, ಸರ್ವರು ಸಮಾನರು, ಸರ್ವರಿಗೂ ಸಮಾನ ನ್ಯಾಯ, ಎಲ್ಲರಿಗೂ ಸಮಾನ ಅವಕಾಶ ಸಿಗುವಂತಾಗಬೇಕು ಎಂಬ ತತ್ವದಡಿ ಸಂವಿಧಾನವನ್ನು ಡಾ.ಬಿ.ಆರ್ ಅಂಬೇಡ್ಕರ್ ಅವರು ರೂಪಿಸಿದರು ಎಂದರು.
ಸಂವಿಧಾನದಿಂದ ಕೇವಲ ಒಂದು ಜಾತಿ, ಸಮುದಾಯ, ವರ್ಗಕ್ಕೆ ಸೀಮಿತವಾಗಿಲ್ಲ, ಭಾರತದ ಕೊಟ್ಟು ಕಡೆಯ ಪ್ರಜೆಗೂ ಸಮಾನ ಅವಕಾಶ ನೀಡಲಾಗಿದೆ. ಗುಣಮಟ್ಟದ ಶಿಕ್ಷಣ ಹಾಗೂ ಜ್ಞಾನ ವೃದ್ಧಿಯಿಂದ ಎಲ್ಲರಿಗೂ ಸಮಾನ ಅವಕಾಶ ಸಿಗುತ್ತದೆ ಎಂಬುದು ನನ್ನ ಭಾವನೆ ಎಂದರು.
ಅಂಬೇಡ್ಕರವರ ಮೂಲಮಂತ್ರ ಹಾಗೂ ಆಶಯಗಳನ್ನು ಎಲ್ಲರೂ ಪಾಲನೆ ಮಾಡಬೇಕು. ಪ್ರತಿಯೊಬ್ಬರೂ ವಿದ್ಯಾವಂತರಾಗಬೇಕು. ಸಂಘಟಿತರಾಗಬೇಕು. ಅಂಬೇಡ್ಕರ್ ಇಲ್ಲದಿದ್ದರೆ ಶೋಷಿತರಿಗೆ ನ್ಯಾಯ ಸಿಗುತ್ತಿರಲಿಲ್ಲ ಎಂದರು.
ಬಾಬಾ ಸಾಹೇಬ್ ಅವರು ಸುಮಾರು 32 ಪದವಿಗಳನ್ನು ಅಧ್ಯಯನ ಮಾಡಿದ್ದಾರೆ. ನಮ್ಮ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಎಷ್ಟೇ ಮಾತನಾಡಿದರು ಅದು ಕಡಿಮೆ, ಅವರ ಸಾಧನೆ ಒಂದು ಜನಾಂಗಕ್ಕೆ ಮಾತ್ರ ಸೀಮಿತ ಅಲ್ಲ, ಇಡೀ ಜಗತ್ತಿಗೆ ಅವರು ಮಾಡಿರುವ ಸಾಧನೆ ಅಗಾಧ. ಅವರು ನಡೆದ ದಾರಿಯಲ್ಲಿ ಇಂದಿನ ಯುವ ಜನಾಂಗವು ಸಾಗಬೇಕು ಎಂದರು.