ಹಲವಾರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಿಜೆಪಿ ಸಂಸದ ಮತ್ತು ದೇಶದ ಕುಸ್ತಿ ಒಕ್ಕೂಟದ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳಿಗೆ ಹಿರಿಯ ಕ್ರಿಕೆಟಿಗ ಅನಿಲ್ ಕುಂಬ್ಳೆ ಬೆಂಬಲ ವ್ಯಕ್ತಪಡಿಸಿದ್ದಾರೆ.
“ಮೇ 28 ರಂದು ನಮ್ಮ ಕುಸ್ತಿಪಟುಗಳ ಮೇಲೆ ಹಲ್ಲೆ ಮಾಡುವುದರೊಂದಿಗೆ ಏನಾಯಿತು ಎಂಬುದನ್ನು ಕೇಳಿ ಬೇಸರವಾಯಿತು. ಸರಿಯಾದ ಮಾತುಕತೆಯ ಮೂಲಕ ಯಾವುದನ್ನಾದರೂ ಪರಿಹರಿಸಬಹುದು. ಆದಷ್ಟು ಬೇಗ ಪರಿಹಾರಕ್ಕಾಗಿ ಆಶಿಸುತ್ತೇನೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
36 ದಿನಗಳಿಂದ ಬೀದಿಯಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿರುವ ಮಹಿಳಾ ಕುಸ್ತಿಪಟುಗಳ ಪರವಾಗಿ ದನಿಯೆತ್ತಿದ ಮೊದಲ ಕ್ರಿಕೆಟಿಗ ಎಂಬ ಖ್ಯಾತಿಗೆ ಅನಿಲ್ ಕುಂಬ್ಳೆ ಪಾತ್ರರಾಗಿದ್ದಾರೆ.
ಇನ್ನು ತಮ್ಮ ಪ್ರತಿಭಟನೆಗೆ ಕೇಂದ್ರ ಸರ್ಕಾರ ಸ್ಪಂದಿಸುವ ಬದಲು ಹಲ್ಲೆಯ ಮೂಲಕ, ಪ್ರತಿಭಟನೆಗೆ ಜಾಗ ನಿರಾಕರಿಸುವ ಮೂಲಕ ಪ್ರತಿಭಟನೆ ಹತ್ತಿಕ್ಕುವುದಕ್ಕೆ ಕುಸ್ತಿಪಟುಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಗಣ್ಯ ಅಥ್ಲೀಟ್‌ಗಳಲ್ಲಿ ಒಬ್ಬರಾದ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸಾಕ್ಷಿ ಮಲಿಕ್, ನಾವು ಗೆದ್ದ ಪದಕಗಳನ್ನ ಗಂಗಾ ನದಿಗೆ ಎಸೆದು ಅಮರಣಾಂತ ಉಪವಾಸ ಕೂರುತ್ತೇವೆ” ಎಂದು ಪತ್ರ ಬರೆದಿದ್ದಾರೆ.