ಪ್ರತಿಪಕ್ಷದ ನಾಯಕರು ಯಾರಾದರೂ ನಮಗೆ ಅಭ್ಯಂತರವಿಲ್ಲ- ಸಿಎಂ ಸಿದ್ದರಾಮಯ್ಯ

ಬಿಜೆಪಿಯು ಆರ್. ಅಶೋಕ್ ಅವರನ್ನು ಪ್ರತಿಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿದೆ. ಪ್ರತಿಪಕ್ಷದ ನಾಯಕರು ಯಾರಾದರೂ ನಮಗೆ ಅಭ್ಯಂತರವಿಲ್ಲ. ಜನರ ಆಶೀರ್ವಾದದಿಂದ ಸರ್ಕಾರ ರಚಿಸಿರುವ ನಾವು ಜನರಿಗೆ ನೀಡಿರುವ ಆಶ್ವಾಸನೆಗಳನ್ನು ಈಡೇರಿಸುತ್ತಿದ್ದೇವೆ. ರಾಜ್ಯದಲ್ಲಿ ದ್ವೇಷದ ರಾಜಕಾರಣ ಮಾಡದೆ ಶಾಂತಿಯುತವಾದ ವಾತಾವರಣವನ್ನು ಸರ್ಕಾರ ನಿರ್ಮಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬಿಜೆಪಿಯವರು ಸರ್ಕಾರದ ವಿರುದ್ಧ ಮಾಡುತ್ತಿರುವ ಭ್ರಷ್ಟಾಚಾರದ ಆರೋಪಗಳಿಗೆ ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಉತ್ತರ ನೀಡುತ್ತೇವೆ. ಪೆನ್ ಡ್ರೈವ್ ನಲ್ಲಿ ಸಾಕಷ್ಟು ಮಾಹಿತಿಗಳಿದ್ದು, ಆಡಳಿತ ಪಕ್ಷದವರು ಅದನ್ನು ಬಹಿರಂಗಗೊಳಿಸದಂತೆ ಮನವಿ ಮಾಡಿದ್ದಾರೆ ಎಂಬ ಕುಮಾರಸ್ವಾಮಿಯವರ ಹೇಳಿಕೆ ಹಾಸ್ಯಸ್ಪದವಾಗಿದೆ. ಅವರ ಪೆನ್ ಡ್ರೈವ್ ಹೇಳಿಕೆಯ ನಂತರ ವಿಧಾನಸಭೆ ಅಧಿವೇಶನ ನಡೆದರೂ ಅದರ ಬಗ್ಗೆ ಪ್ರಸ್ತಾಪ ಮಾಡಲಿಲ್ಲವೇಕೆ? ಪೆನ್ ಡ್ರೈವ್ ಬಹಿರಂಗಗೊಳಿಸಬೇಡಿ ಎಂದು ಮನವಿ ಮಾಡಿದವರು ಯಾರು ಎಂಬ ಮಾಹಿತಿಯನ್ನು ನೀಡಲಿ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿಯಾಗಿದ್ದುಕೊಂಡು ವಿದ್ಯುತ್ ಕಳವು ಮಾಡಿರುವ ಕುಮಾರಸ್ವಾಮಿಯವರಿಗೆ ಇಂತಹ ಹೇಳಿಕೆಗಳನ್ನು ನೀಡಲು ಯಾವ ನೈತಿಕತೆಯೂ ಇಲ್ಲ. ದಂಡ ಕಟ್ಟುವ ಮೂಲಕ ವಿದ್ಯುತ್ ಕಳುವು ಮಾಡಿರುವ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಚಿಕ್ಕದಾದರೂ ಅಪರಾಧ ಅಪರಾಧವೇ. ಅಡಿಕೆ ಕದ್ದು ಹೋದ ಮಾನ ಆನೆ ಕೊಟ್ಟರೂ ಬರಲ್ಲ ಎಂದು ತಿಳಿಸಿದ್ದಾರೆ.

ಇಂದು ಚುನಾವಣೆ ನಡೆದರೂ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬುದು ಯಡಿಯೂರಪ್ಪನವರಿಗೆ ಬಿದ್ದಿರುವ ಕನಸಾಗಿರಬಹುದು, ಆದರೆ ಅದು ನನಸಾಗಲ್ಲ. ಚುನಾವಣೆಯಲ್ಲಿ ಕೇವಲ 66 ಸೀಟು ಪಡೆದು ವಿರೋಧ ಪಕ್ಷದಲ್ಲಿ ಕುಳಿತಿದ್ದಾರೆ. ಅವರ ಮಗ ವಿಜಯೇಂದ್ರರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಿರುವುದರಿಂದ ಬಿಜೆಪಿಯ ಅನೇಕ ನಾಯಕರು ಅಸಮಧಾನಗೊಂಡಿದ್ದಾರೆ. ಇನ್ನು ಸ್ಪಲ್ಪ ದಿನಗಳಲ್ಲಿ ಬಿಜೆಪಿಯ ಪರಿಸ್ಥಿತಿ ಏನಾಗಲಿದೆ ಎಂದು ನಾವು ನೀವೆಲ್ಲ ನೋಡಬಹುದು ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *