ಎರಡು ಮುಖಗಳ, ವಿವಿಧ ಆಯಾಮಗಳ ಒಂದು ವಿಮರ್ಶೆ. ಭಾರತದ ಸಂವಿಧಾನ ಪ್ರತಿಪಾದಿಸುವ ಆಶಯಗಳ ಹಿನ್ನೆಲೆಯಲ್ಲಿ…….
ಭಾರತದ ಸಂವಿಧಾನ ಮತ್ತು ಅದರ ಕ್ರಿಮಿನಲ್ ಕಾನೂನುಗಳ ಮೂಲ ಉದ್ದೇಶ ಕೇವಲ ಅಪರಾಧಿಗಳನ್ನು ಕಠಿಣವಾಗಿ ಶಿಕ್ಷಿಸುವುದು ಮಾತ್ರವಲ್ಲದೆ ಅಪರಾಧಿಗಳನ್ನು ಪರಿವರ್ತನೆ ಮಾಡುವುದು, ಅಪರಾಧಗಳನ್ನು ತಡೆಗಟ್ಟುವುದು, ನಿರಪರಾಧಿಗಳನ್ನು ರಕ್ಷಿಸುವುದು, ಸಮಾಜವನ್ನು ಸರಿದಾರಿಗೆ ತರುವುದು, ವ್ಯವಸ್ಥೆಯನ್ನು ಕ್ರಮಬದ್ಧವಾಗಿ ನಡೆಸಿಕೊಂಡು ಹೋಗುವುದು, ಮಾನವೀಯ ಮೌಲ್ಯಗಳನ್ನು ಉಳಿಸುವುದು, ಭವಿಷ್ಯದಲ್ಲಿ ಅಭಿವೃದ್ಧಿ ಹೊಂದಿದ ಮಾದರಿ ದೇಶವನ್ನು ನಿರ್ಮಿಸುವುದು ಸಹ ಅದರ ಪ್ರಮುಖವಾದ ಆಶಯಗಳಲ್ಲಿ ಒಂದಾಗಿದೆ.
ಆ ಬಗ್ಗೆ ಸಂವಿಧಾನದ ಕೆಲವು ಕಲಂಗಳಲ್ಲಿ ಕೂಡ ಇದೇ ಅರ್ಥದ ಸಾರಾಂಶದಂತೆ ಸ್ಪಷ್ಟವಾಗಿ ಹೇಳಲಾಗಿದೆ. ಅಪರಾಧಿಗಳನ್ನು ಶಿಕ್ಷಿಸುವುದು ಅದರ
ತಡೆಗಟ್ಟುವಿಕೆಯಲ್ಲಿ ಕೇವಲ ಒಂದು ಭಾಗ ಮಾತ್ರ, ಅದೇ ಪ್ರಮುಖವಲ್ಲ. ಈ ಸಂದರ್ಭದಲ್ಲಿ ಇಲ್ಲಿ ಎರಡು ಸಾಲುಗಳನ್ನು ನೆನಪಿಸಿಕೊಳ್ಳಬೇಕಾಗುತ್ತದೆ. ” ನೂರು ಅಪರಾಧಿಗಳು ತಪ್ಪಿಸಿಕೊಂಡರು ಪರವಾಗಿಲ್ಲ, ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು ” ಎಂಬ ಮಹೋನ್ನತ ಆಶಯ ನಮ್ಮ ಸಂವಿಧಾನದ ಮೂಲದಲ್ಲಿ ಅಡಗಿದೆ. ಹಾಗೆಯೇ
” ಅಪರಾಧವನ್ನು ದ್ವೇಷಿಸಿ, ಅಪರಾಧಿಯನ್ನಲ್ಲ ” ಎಂಬ ಮತ್ತೊಂದು ಸಾರ್ವಕಾಲಿಕ ವಾಸ್ತವದ ಪರಿವರ್ತನಾ ಮಾತುಗಳನ್ನು ಸಹ ಹೇಳಲಾಗಿದೆ.
ಇಲ್ಲಿ ಈ ವಿಷಯ ಪ್ರಸ್ತಾಪಿಸಲು ಮುಖ್ಯ ಕಾರಣ ಪ್ರಜ್ವಲ್ ರೇವಣ್ಣ ಎಂಬ ಮಾಜಿ ಸಂಸದನಿಗೆ ಅವರ ಮನೆ ಕೆಲಸದ ಹೆಣ್ಣಿನ ಮೇಲೆ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಅತ್ಯಂತ ಗರಿಷ್ಠ ಪ್ರಮಾಣ ಎನ್ನಬಹುದಾದ, ವಿಶೇಷ ಪ್ರಕರಣಗಳಲ್ಲಿ ಮಾತ್ರ ನೀಡುವಂತಹ, ಅತ್ಯಂತ ಕ್ರೌರ್ಯ ಮೆರೆದ ಸಂದರ್ಭದಲ್ಲಿ ಕೊಡಬಹುದಾದ ಜೀವನ ಪರ್ಯಂತ ಜೈಲಿನಲ್ಲಿ ಕಳೆಯುವ ಜೀವಾವಧಿ ಶಿಕ್ಷೆಯನ್ನು ನೀಡಲಾಗಿದೆ.
ಕೆಲವರು ಇದನ್ನು ಸ್ವಾಗತಿಸಿ ಸಂಭ್ರಮ ಪಡುತ್ತಿದ್ದರೆ, ಇದೊಂದು ಐತಿಹಾಸಿಕ ತೀರ್ಪು, ಇದರಿಂದಾಗಿ ನ್ಯಾಯಾಂಗ ವ್ಯವಸ್ಥೆಯ ಮೇಲಿನ ನಂಬಿಕೆ ಹೆಚ್ಚಾಗಿದೆ ಎಂದು ಹೇಳಿದರೆ, ಮತ್ತೊಂದಿಷ್ಟು ಜನ ಇದು ನ್ಯಾಯಾಂಗದ ಅತಿರೇಕ, ಇಷ್ಟೊಂದು ದೀರ್ಘ ಅವಧಿಯ ಶಿಕ್ಷೆಯ ಅವಶ್ಯಕತೆ ಇರಲಿಲ್ಲ. 34 ವರ್ಷ ವಯಸ್ಸಿನ ವ್ಯಕ್ತಿ ಕನಿಷ್ಠ ಏಳು ವರ್ಷದಿಂದ ಹತ್ತು ವರ್ಷದವರೆಗಿನ ಶಿಕ್ಷೆಗೆ ಅರ್ಹ. ಆ ಅವಧಿಯ ಜೈಲುವಾಸದಲ್ಲಿ ಆತ ಪರಿವರ್ತನೆಯಾಗುವ ಸಾಧ್ಯತೆಯೂ ಇದೆ ಅಥವಾ ನ್ಯಾಯಾಲಯ ಅದಕ್ಕೆ ಅವಕಾಶ ಮಾಡಿಕೊಡಬೇಕು. ಅದನ್ನು ಮೀರಿ ಇಷ್ಟೊಂದು ಕಠಿಣ ಶಿಕ್ಷೆ ವಿಧಿಸಿದಲ್ಲಿ ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ಆಗಬಹುದು ಮತ್ತು ಭಾರತದ ಸಂವಿಧಾನವು ಮಧ್ಯಪ್ರಾಚ್ಯದ ದೇಶಗಳಂತೆ ತೀರಾ ಕಾಠಿಣ್ಯತೆಯನ್ನು ಹೊಂದಿದೆ ಎಂದು ಭಾವಿಸಬಹುದು ಎಂಬುದಾಗಿ ಸಹ ವಾದ ಮಂಡಿಸುತ್ತಿದ್ದಾರೆ.
ಅತ್ಯಾಚಾರವೆಂಬುದು ಹೆಣ್ಣಿನ ಬದುಕಿನ ಅತ್ಯಂತ ಧಾರುಣ ಘಟನೆ. ಆಕೆಯನ್ನು ಅತ್ಯಾಚಾರ ಮಾಡಿ ಜೀವನಪರ್ಯಂತ ಕೊರಗುವಂತೆ ಮಾಡಿದ ಸಂಸದನೊಬ್ಬನಿಗೆ ಆತನು ಸಹ ಜೀವನಪರ್ಯಂತ ಜೈಲಿನಲ್ಲಿ ಕೊರಗಲಿ, ಅದೇ ಸರಿಯಾದ ಶಿಕ್ಷೆ ಎನ್ನುವ ವಾದದ ನಡುವೆ, ಈ ಅತ್ಯಾಚಾರ ತೀರಾ ಬರ್ಬರವಲ್ಲ, ಹಿಂಸಾತ್ಮಕವಲ್ಲ, ಕೊಲೆಯಲ್ಲ, ಬದಲಾಗಿ ಒಂದು ಬಲವಂತದ ಲೈಂಗಿಕ ವಾಂಚೆ ತೀರಿಸಿಕೊಳ್ಳುವ ಯುವಕನ ಗುಣ. ಆದ್ದರಿಂದ ಅದೂ ದೊಡ್ಡ ಅಪರಾಧವೇ, ಆದರೆ 10 ವರ್ಷ ಸಾಕಿತ್ತು ಎಂಬ ಮತ್ತೊಂದು ವಾದವು ಕೆಲವರ ಮನಸ್ಸುಗಳ ಮೂಲೆಯಲ್ಲಿ ಚರ್ಚೆ ನಡೆಯುತ್ತಿದೆ.
ಪ್ರಜ್ವಲ್ ರೇವಣ್ಣ ಅವರನ್ನು ಇಷ್ಟಪಡುವ ಒಂದಷ್ಟು ಜನ, ಅವರನ್ನು ವಿರೋಧಿಸುವ ಮತ್ತೊಂದಿಷ್ಟು ಜನ, ಹೆಣ್ಣಿನ ಬಗ್ಗೆ ಅಪಾರ ಗೌರವ ಮತ್ತು ಕಾಳಜಿಯ ಹೊಂದಿರುವ ಒಂದಷ್ಟು ಜನ, ಹೆಣ್ಣುಗಳಿಂದ ವಂಚನೆಗೊಳಗಾದ ಮತ್ತೊಂದಿಷ್ಟು ಜನ ಹೀಗೆ ವಿವಿಧ ಮನಸ್ಥಿತಿಯ ಜನರಲ್ಲಿ ಒಂದೊಂದು ಅಭಿಪ್ರಾಯ
ರೂಪಗೊಳ್ಳುತ್ತಿರುತ್ತದೆ.
ಇನ್ನು ಕೆಲವರು ಭಾವನಾತ್ಮಕವಾಗಿ ಹೆಣ್ಣಿಗೆ ಪ್ರಾಣಕ್ಕಿಂತ ಮಾನವೇ ಮುಖ್ಯ ಅದನ್ನು ವಿಡಿಯೋ ಚಿತ್ರಣ ಮಾಡಿ ಅದೀಗ ಬಹಿರಂಗಗೊಂಡು ಇಡೀ ಬದುಕು ಸರ್ವನಾಶ ಮಾಡಿದ ವ್ಯಕ್ತಿಗೆ ಹೊರಗಿನ ಸಮಾಜದಲ್ಲಿ ಬದುಕುವ ಹಕ್ಕಿಲ್ಲ ಎಂದು ಬಲವಾಗಿ ವಾದಿಸಿದರೆ, ಇಲ್ಲ ಬೆಳೆಯುವ ಯುವಕ ತನ್ನ ದೇಹದ ಬೇಡಿಕೆಯನ್ನು, ಅಧಿಕಾರ ಮತ್ತು ಪಾಳೆಗಾರಿಕೆ ಪ್ರಾಬಲ್ಯದ ಮದದಲ್ಲಿ ನಿಯಂತ್ರಿಸಲಾಗದೆ ಈ ಅತ್ಯಾಚಾರವೆಂಬ ದುಷ್ಕೃತ್ಯ ನಡೆಸಿದ್ದಾನೆ. ಆದರೆ ಈಗ ಎಲ್ಲವೂ ಬಟಾ ಬಯಲಾಗಿರುವಾಗ, ಪೋಲೀಸರ ಒತ್ತಡದ ಕಾರಣ ತನ್ನನ್ನು ತಾನೇ ಕಾನೂನಿನ ವ್ಯಾಪ್ತಿಗೆ ಶರಣಾಗಿಸಿ ಒಪ್ಪಿಕೊಂಡಿರುವಾಗ ಏಳರಿಂದ ಹತ್ತು ವರ್ಷದ ಶಿಕ್ಷೆ ಸಾಕಾಗಿತ್ತು ಎಂಬ ಮತ್ತೊಂದು ಚಿಂತನೆಯು ಕೆಲವರಲ್ಲಿ ಮೂಡಿದೆ.
ಸಂವಿಧಾನ ರಚಿಸುವ ಸಂದರ್ಭದಲ್ಲಿ ಬಾಬಾ ಸಾಹೇಬರು ಕಾನೂನಿನ ನೀತಿ ನಿಯಮಗಳ ಜೊತೆಗೆ ನ್ಯಾಯಾಧೀಶರ ವಿವೇಚನೆಯ ಮಹತ್ವವನ್ನು ಸಾರಿ ಸಾರಿ ಹೇಳುತ್ತಾರೆ. ನ್ಯಾಯಾಧೀಶರು ಅತಿಮುಖ್ಯವಾಗಿ ಕಾನೂನನ್ನೇ ಎತ್ತಿ ಹಿಡಿಯಬೇಕಾಗುತ್ತದೆ, ಆದರೆ ಜೊತೆಗೆ ಈ ಮಣ್ಣಿನ ಮಾನವೀಯ ಮೌಲ್ಯಗಳನ್ನು ತಮ್ಮ ವಿವೇಚನಾಧಿಕಾರ ಬಳಸಿ ಅರ್ಥೈಸಬೇಕಾಗುತ್ತದೆ. ಪರಿವರ್ತನೆಗೆ ಅವಕಾಶ ಕಲ್ಪಿಸಬೇಕಾಗುತ್ತದೆ.
ಜನಾಭಿಪ್ರಾಯ ಏನೇ ಇರಲಿ, ಭಾವನಾತ್ಮಕ ಸನ್ನಿವೇಶ ಏನೇ ಇರಲಿ ಅಪರಾಧಿಯನ್ನು ಶಿಕ್ಷಿಸುವಾಗ ಘಟನೆಯ ಸಂಪೂರ್ಣ ವಿವರಗಳನ್ನು, ಅದರ ಹಿಂಸಾತ್ಮಕ ಪ್ರಮಾಣವನ್ನು, ಸಮಾಜದ ಮೇಲೆ ಬೀರುವ ಪರಿಣಾಮವನ್ನು ಸರಿಯಾಗಿ ಗ್ರಹಿಸಬೇಕು. ಇಲ್ಲದಿದ್ದಲ್ಲಿ ತುಂಬಾ ಎಡವಟ್ಟುಗಳಾಗುತ್ತದೆ ಎಂದು ಅವರು ಸೂಕ್ಷ್ಮವಾಗಿ ಪ್ರಸ್ತಾಪಿಸಿದ್ದಾರೆ.
ಶಿಕ್ಷೆಗಿಂತ ಶಿಕ್ಷಣವು ಮುಖ್ಯವಾಗಬೇಕು, ಹಾಗೆಯೇ ಅದು ಪರಿವರ್ತನೆಯ ಒಂದು ಭಾಗವಾಗಬೇಕು. ಎಲ್ಲರಿಗೂ ಜೀವಿಸುವ ಹಕ್ಕು ಇದೆ, ಹಾಗೆಯೇ ಅಷ್ಟೇ ಪ್ರಮುಖವಾದ ಕರ್ತವ್ಯಗಳು ಇವೆ. ಇವುಗಳ ನಡುವೆ ಸಮನ್ವಯ ಸಾಧಿಸಬೇಕು ಎಂಬ ಆಶಯವನ್ನು ಡಾಕ್ಟರ್ ಅಂಬೇಡ್ಕರ್ ಅವರು ಹೊಂದಿದ್ದರು. ಈ ಆಶಯದಲ್ಲಿ ಪ್ರಜ್ವಲ್ ರೇವಣ್ಣ ಅವರಿಗೆ ಏಳರಿಂದ ಹತ್ತು ವರ್ಷಗಳವರೆಗೆ ಅವಧಿಯ ಶಿಕ್ಷೆ ಸರಿಯಾದ ಕ್ರಮ ಎನ್ನುವುದು ಕೆಲವರ ಅಭಿಪ್ರಾಯ.
ಹೇಗಿದ್ದರೂ ಅವರು ಮುಂದಿನ ದಿನಗಳಲ್ಲಿ ಹೈಕೋರ್ಟ್ ಅಥವಾ ಸುಪ್ರೀಂಕೋರ್ಟಿಗೆ ಹೋಗಿ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಿಸಿಕೊಳ್ಳಬಹುದು. ಇಲ್ಲಿ ನ್ಯಾಯಾಲಯದ ಆದೇಶವನ್ನು ಗೌರವಿಸುತ್ತಾ, ಸ್ವೀಕರಿಸುತ್ತಾ ಕೇವಲ ಮಾನವೀಯ ಮೌಲ್ಯಗಳ ಹಿನ್ನೆಲೆಯಲ್ಲಿ ಅಪರಾಧಿಯ ಪರಿವರ್ತನೆಗೆ ಅವಕಾಶವು ಇರಲಿ ಎಂಬ ಭಾವನೆಯೊಂದಿಗೆ ಒಂದು ಸಣ್ಣ ಅಭಿಪ್ರಾಯವಷ್ಟೇ. ನ್ಯಾಯಾಲಯದ ಆದೇಶವನ್ನು ಪ್ರಶ್ನಿಸುವುದಲ್ಲ, ಅದರ ವಿರುದ್ಧವೂ ಅಲ್ಲ, ಕೇವಲ ಒಂದು ಅನಿಸಿಕೆ ಮಾತ್ರ……….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ
ಲೇಖಕ-ವಿವೇಕಾನಂದ. ಎಚ್. ಕೆ