ಪ್ರಜ್ವಲ್ ರೇವಣ್ಣ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಮುಂದೆ ಹಾಜಾರುಗುವಂತೆ ಪ್ರಜ್ವಲ್ ಗೆ ದೇವೇಗೌಡರು ಈಗಾಗಲೇ ಎಚ್ಚರಿಕೆ ಕೊಟ್ಟಿದ್ದಾರೆ. ನಾನೂ ಕೂಡ ಪ್ರಜ್ವಲ್ ಗೆ ಮನವಿ ಮಾಡಿದ್ದೇನೆ. ಕಾರ್ಯಕರ್ತರ ಮೇಲೆ ಗೌರವ ಇದ್ದರೆ ತಕ್ಷಣ ವಾಪಸ್ ಬರುವಂತೆ ಮನವಿ ಮಾಡಿದ್ದೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಇವತ್ತು ವಿಡಿಯೋ ಮಾಡಿ ಎಸ್ಐಟಿ ಮುಂದೆ ಹಾಜರಾಗುವ ಬಗ್ಗೆ ಹೇಳಿದ್ದಾರೆ. ಈಗ ನಮಗೂ ಕೂಡ ಸ್ವಲ್ಪ ಸಮಾಧಾನವಿದೆ. ಮುಂದಿನ ದಿನಗಳಲ್ಲಿ ಕಾನೂನು ಪ್ರಕ್ರಿಯೆಗಳು ಏನು ಆಗಬೇಕೋ ಅದು ಆಗುತ್ತದೆ. ಸತ್ಯಾಂಶಗಳ ಕುರಿತು ತನಿಖೆಯಿಂದ ಹೊರಬರಲಿದೆ ಎಂದರು.
ವಿಡಿಯೊ ಮಾಡಿ ಕಾರ್ಯಕರ್ತರ ಮೇಲೆ ಈಗಲೂ ಮಮಕಾರ ಇದೆ ಎಂದು ತೋರಿಸಿರೋದು ನನಗೂ ಸಮಾಧಾನವಿದೆ ಚಿಕ್ಕಬಳ್ಳಾಪುರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ನಂತರ ವಿರೋಧಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಪ್ರಜ್ವಲ್ ರೇವಣ್ಣ ವಿಡಿಯೋ ಬಿಡುಗಡೆ ಮಾಡಿ ವಾಪಸ್ ದೇಶಕ್ಕೆ ಬರೋದಾಗಿ ಹೇಳಿದ್ದಾರೆ. ಆದರೆ, ಅವರು ಈ ಕೆಲಸ ಮುಂಚೆಯೇ ಮಾಡಬೇಕಿತ್ತು. ಈ ಕುರಿತು ಮುಂಚಿತವಾಗಿ ಹೇಳಿದ್ದರೆ ಅದಕ್ಕೆ ಒಂದು ಅರ್ಥ ಇರೋದು. ಈಗ ಹೇಳಿರೋದು ಬಹಳ ನಿಧಾನ ಎಂದು ಭಾವಿಸಲಾಗುತ್ತದೆ. ಇಷ್ಟಾದರೂ ಈಗಾಗಲಾದರು ಹೇಳಿದ್ದರಲ್ಲ, ಕಾನೂನಿಗಿಂತ ದೊಡ್ಡೋರು ಯಾರೂ ಇಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಷಡ್ಯಂತ್ರ ಮಾಡಿರೋದು ಎಲ್ಲರ ಕಣ್ಣಿಗೆ ಕಾಣಿಸುತ್ತಿದೆ. ಯಾರು ಪೆನ್ ಡ್ರೈವ್ ಹಂಚಿದ್ದಾರೆ ಅವರನ್ನು ಇದೂವರೆಗೂ ಅರೆಸ್ಟ್ ಮಾಡಿಲ್ಲ, ಬೇಲೂ ಕೊಟ್ಟಿಲ್ಲ ಇದು ಷಡ್ಯಂತ್ರ ಎಂದು ಸ್ಪಷ್ಟವಾಗಿ ಕಾಣುತ್ತಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಒಕ್ಕಲಿಗರನ್ನ ಮುಗಿಸುವ ಷಡ್ಯಂತ್ರ ಮಾಡಿದೆ. ಪ್ರಜ್ವಲ್ ರೇವಣ್ಣ ತಪ್ಪು ಮಾಡಿದ್ದರೆ ಕಾನೂನು ಶಿಕ್ಷೆ ಆಗಬೇಕು ಎಂಬುದು ಬಿಜೆಪಿ ನಿಲುವು ಆಗಿದೆ ಎಂದು ಹೇಳಿದ್ದಾರೆ.
ತದನಂತರ ಮಾಜಿ ಸಚಿವ ಡಾ.ಅಶ್ವತ್ ನಾರಾಯಣ ಮಾತನಾಡಿ, ಈ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆ ಆಗಿದೆ. ವಿಡಿಯೋ ಮಾಡಿರುವವರು, ವಿಡಿಯೋ ಹಂಚಿದವರು ಇವರಿಬ್ಬರಿಗೂ ಶಿಕ್ಷೆ ಆಗಬೇಕು. ಒಟ್ಟು ಯಾರೇ ಕೂಡ ತಪ್ಪು ಮಾಡಿದ್ದರೂ ಶಿಕ್ಷೆ ಆಗಲೇಬೇಕು ಎಂದು ಹೇಳಿದ್ದಾರೆ.