ನವದೆಹಲಿ: ಚಂಡಿಗಢ ಮೇಯರ್ ಚುನಾವಣೆ ಅಕ್ರಮದ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠ, ನ್ಯಾಯಾಲಯದ ಸಭಾಂಗಣದಲ್ಲೇ ಮತ ಎಣಿಕೆ ಮಾಡಿ ಫಲಿತಾಂಶ ಘೋಷಿಸಿದ ಪ್ರಸಂಗ ಮಂಗಳವಾರ ನಡೆಯಿತು.
ಎಎಪಿ ಹಾಗೂ ಕಾಂಗ್ರೆಸ್ ಪಕ್ಷದ ಮೈತ್ರಿ ಅಭ್ಯರ್ಥಿ ಕುಲದೀಪ್ ಕುಮಾರ್ ಅವರನ್ನು ನ್ಯಾಯಾಲಯ ಚಂಡಿಗಢದ ನೂತನ ಮೇಯರ್ ಆಗಿ ಪ್ರಕಟಿಸಿತು.
ಮಂಗಳವಾರ ಬೆಳಿಗ್ಗೆ ನ್ಯಾಯಾಲಯಕ್ಕೆ ಮತ ಪತ್ರಗಳನ್ನು ತರಿಸಿಕೊಂಡು ಪರಿಶೀಲಿಸಿದ ನ್ಯಾಯಮೂರ್ತಿಗಳು, ಎಂಟು ಮತ ಪತ್ರಗಳನ್ನು ವಿರೂಪಗೊಳಿಸಿ ಅನೂರ್ಜಿತಗೊಳಿಸಿದ್ದ ಚುನಾವಣಾಧಿಕಾರಿ ಅನಿಲ್ ಮೆಸಿಹ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು.
ಜ.30 ರಂದು ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಮತ ಪತ್ರಗಳನ್ನು ವಿರೂಪಗೊಳಿಸಿ, ಬಿಜೆಪಿ ಪಕ್ಷದ ಏಜೆಂಟರಂತೆ ವರ್ತಿಸಿದ್ದ ಚುನಾವಣಾಧಿಕಾರಿ ವಿರುದ್ಧ ನ್ಯಾಯಾಲಯ ಆಕ್ರೋಶ ವ್ಯಕ್ತಪಡಿಸಿತ್ತು. ಮತಪತ್ರ ತಿದ್ದಿದ ವಿಡಿಯೋ ತುಣುಕುಗಳು ವೈರಲ್ ಆಗಿದ್ದವು.
ಈ ಹಿನ್ನೆಲೆ ಮತಗಳ ಮರು ಎಣಿಕೆ ಪ್ರಕ್ರಿಯೆಯನ್ನು ಚುನಾವಣಾ ಆಯೋಗಕ್ಕೆ ಒಪ್ಪಿಸಲು ನಿರಾಕರಿಸಿ ಖುದ್ದು ನ್ಯಾಯಪೀಠವೇ ಪ್ರಕ್ರಿಯೆ ನಡೆಸಿ, ನ್ಯಾಯಮೂರ್ತಿಗಳೇ ಫಲಿತಾಂಶ ಘೋಷಿಸಿದರು.
ಚುನಾವಣಾ ಅಕ್ರಮದ ಹಿನ್ನೆಲೆಯಲ್ಲಿ ಹೊಸದಾಗಿ ಚುನಾವಣೆ ನಡೆಸಬೇಕೆಂಬ ಬಿಜೆಪಿ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತು. ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ಯಾವುದೇ ಹಸ್ತಕ್ಷೇಪಗಳಿಲ್ಲದಂತೆ ನೋಡಿಕೊಳ್ಳುವುದು ನ್ಯಾಯಾಲಯದ ಕರ್ತವ್ಯ. ಹಾಗಾಗಿ ಇಂತಹ ವಿರಳ ಸನ್ನಿವೇಶಗಳಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಿ, ಪ್ರಜಾಸತ್ತಾತ್ಮಕ ಜನಮತವನ್ನು ಖಾತರಿಗೊಳಿಸಿದೆ ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದರು.