Categories: ಲೇಖನ

ಪ್ರಕ್ಷ್ಯುಬ್ಧ ವಿಶ್ವ….

ಕೊರೋನಾ ಮಾರಿಯ ನಂತರದಲ್ಲಿ ವಿಶ್ವದ ಒಟ್ಟಾರೆ ಪರಿಸ್ಥಿತಿ ಪ್ರಕ್ಶುಬ್ಧವಾಗಿಯೇ ಮುಂದುವರಿದಿದೆ. ಕೋವಿಡ್ ನಿಂದಾದ ನಷ್ಟದಿಂದ ಆರ್ಥಿಕ ಚೇತರಿಕೆ ಕಂಡುಕೊಳ್ಳಬೇಕಾದ ಸಂದರ್ಭದಲ್ಲಿ ನಿಧಾನವಾಗಿ ಯುದ್ಧಗಳು ಪ್ರಾರಂಭವಾದವು. ಆ ಯುದ್ಧಗಳು ಇನ್ನೂ ನಿಂತಿಲ್ಲ. ಅದರ ದುಷ್ಪರಿಣಾಮಗಳು ವಿಶ್ವದಾದ್ಯಂತ ಹರಡುತ್ತಿವೆ.

ಈ ನಡುವೆ ಇದೇ ಕಾಲಘಟ್ಟದಲ್ಲಿ ಶ್ರೀಲಂಕಾ, ಬಾಂಗ್ಲಾ, ನೇಪಾಳ, ಫ್ರಾನ್ಸ್, ಇಟಾಲಿ, ಅಲ್ಬೇನಿಯಾ, ಸ್ವಲ್ಪಮಟ್ಟಿಗೆ ಭಾರತ ಮುಂತಾದ ದೇಶಗಳಲ್ಲಿ ಜಂಝೀ ದಂಗೆಗಳು ನಡೆಯುತ್ತಿವೆ. ಒಟ್ಟಾರೆಯಾಗಿ ವಿಶ್ವದ ಸದ್ಯದ ರಾಜಕೀಯ ಮತ್ತು ಆಡಳಿತಾತ್ಮಕ ಪರಿಸ್ಥಿತಿ ಸಮಾಧಾನಕರವಾಗಿಲ್ಲ. ಜನರ ಮನಸ್ಥಿತಿಯು ಉತ್ತಮವಾಗಿಲ್ಲ.

ವಿಶ್ವ ಇತಿಹಾಸವನ್ನು ಗಮನಿಸಿದಾಗ ಪ್ರಾರಂಭದಿಂದ ಇಲ್ಲಿಯವರೆಗೂ ಈ ರೀತಿಯ ಕೆಲವು ಕಾಲಘಟ್ಟಗಳ ಸಂದರ್ಭದಲ್ಲಿ ಈ ಸಂಘರ್ಷಮಯ ಬದಲಾವಣೆಗಳು ಸಹಜವಾಗಿಯೇ ಕಾಣುತ್ತದೆ.ಇದು ಆಶ್ಚರ್ಯಕರವೇನು ಅಲ್ಲ. ಇತಿಹಾಸವನ್ನು ಕೂಲಂಕಶವಾಗಿ ಪರಿಶೀಲಿಸಿದರೆ ಈ ಮಾಹಿತಿ ಸ್ಪಷ್ಟವಾಗಿ ಸಿಗುತ್ತದೆ.

ರಾಜಪ್ರಭುತ್ವಗಳ ಆಡಳಿತದ ನಂತರವೂ ಫ್ರೆಂಚ್ ಕ್ರಾಂತಿ, ರಷ್ಯಾ ಕ್ರಾಂತಿ, ಚೀನಾ ಕ್ರಾಂತಿ, ಕ್ಯೂಬಾ ಕ್ರಾಂತಿ ಹೀಗೆ ಅನೇಕ ದೇಶಗಳ ಕ್ರಾಂತಿಗಳು ಸಾಮ್ರಾಜ್ಯಗಳನ್ನು ಉರುಳಿಸಿ ಹೊಸ ಸಾಮ್ರಾಜ್ಯಗಳಿಗೆ ಅಥವಾ ಹೊಸ ಆಡಳಿತ ವ್ಯವಸ್ಥೆಗೆ ಬದಲಾಗಿರುವುದನ್ನು ಕಾಣಬಹುದು.

ಈ ಕ್ಷಣದ ಸಮಕಾಲೀನ ಜಾಗತಿಕ ನಾಯಕರುಗಳನ್ನೊಮ್ಮೆ ಗಮನಿಸಿ. ಅವರ ಆಡಳಿತಾತ್ಮಕ ನಿರ್ಧಾರಗಳು, ಮಹತ್ವಕಾಂಕ್ಷೆಯ ಬಗ್ಗೆ ಪರಿಶೀಲಿಸಿದರೆ ಒಂದು ನೋಟ ದೊರೆಯಬಹುದು.

ವಿಶ್ವದ ದೊಡ್ಡಣ್ಣನ ಸ್ಥಾನದಲ್ಲಿರುವ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾದ ವ್ಲಾದಿಮಿರ್ ಪುಟಿನ್, ಇರಾನಿನ ಮುಜ್ತಾಬ ಖಮೇನಿ ಅಥವಾ ಐ ಆರ್ ಜಿ ಸಿ, ಉತ್ತರ ಕೋರಿಯಾದ ಕಿಮ್ ಜಾಂಗ್ ಉನ್, ಇಸ್ರೇಲ್ ನ ಬೆಂಜಿಮನ್ ನೆತನ್ಯಾಹು, ಫ್ರಾನ್ಸ್ ನ ಇಮ್ಯಾನುಯಲ್ ಮ್ಯಾಕ್ರಾನ್, ಇಟಲಿಯ ಜಾರ್ಜಿಯಾ ಮೆಲೋನಿ, ಅಲ್ಬೇನಿಯಾದ ಭಜರಾಂ ಬೇಗಜ್, ಭಾರತದ ನರೇಂದ್ರ ಮೋದಿ ಇವರೆಲ್ಲರೂ ಬಹುತೇಕ ಬಲಪಂಥೀಯ ಚಿಂತನೆಯ ಬಂಡವಾಳಶಾಹಿ ಪರ ಇರುವ, ದೊಡ್ಡ ಮಹತ್ವಕಾಂಕ್ಷೆಯನ್ನು ಹೊಂದಿರುವ ವ್ಯಕ್ತಿಗಳು. ತಮ್ಮ ತಮ್ಮ ದೇಶಗಳೇ ಶಕ್ತಿಶಾಲಿ ಆಗಬೇಕು, ತಮ್ಮ ತಮ್ಮ ದೇಶದ ಜನಾಂಗಗಳೇ ವಿಶ್ವ ಶ್ರೇಷ್ಠ, ತಮ್ಮ ದೇಶವೇ ಮೊದಲು ಎಂಬ ಸಂಕುಚಿತ ಮನೋಭಾವದವರು.

ಮೇಲ್ನೋಟಕ್ಕೆ ಇವರು ತಮ್ಮ ತಮ್ಮ ದೇಶಗಳ ಬಹುದೊಡ್ಡ ರಕ್ಷಕರು ಎಂಬಂತೆ ಬಿಂಬಿಸಿಕೊಂಡವರು. ಅವರುಗಳು ಒಂದು ರೀತಿ ಸರ್ವಾಧಿಕಾರಿ ಮನೋಭಾವದವರು. ಅತಿರೇಕದ ವರ್ತನೆಯವರು. ತಾವೇ ಬಲಿಷ್ಠ ಎಂಬ ಅಹಂ ಇರುವವರು. ಜಾಗತಿಕ ಪರಿಸ್ಥಿತಿಯ ಲಾಭ ಪಡೆಯಲು ಹೊಂಚು ಹಾಕುತ್ತಿರುವವರು. ಧರ್ಮ ಮತ್ತು ಆರ್ಥಿಕ ಅಭಿವೃದ್ಧಿಯ ನೆಪದಲ್ಲಿ ಸಾಮಾನ್ಯ ಜನರ ಭಾವನೆಗಳ ಮೇಲೆ ಸವಾರಿ ಮಾಡುತ್ತಿರುವವರು. ಸದ್ಯಕ್ಕೆ ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರನ್ನು ಈ ಪಟ್ಟಿಯಲ್ಲಿ ಸೇರಿಸುವುದು ಉಚಿತವಲ್ಲ. ಏಕೆಂದರೆ ಅವರು ಒಂದು ರೀತಿಯಲ್ಲಿ ಸೈಲೆಂಟ್ ಕಿಲ್ಲರ್ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಈ ನಾಯಕರ ಆಡಳಿತ ಪ್ರಾರಂಭದ ಕೆಲವು ವರ್ಷಗಳಲ್ಲಿ ತುಂಬಾ ಅಪ್ಯಾಯಮಾನವಾಗಿ ಕಾಣುತ್ತದೆ. ಈತ ನಮ್ಮ ದೇಶದ ರಕ್ಷಕ ಎಂಬುದಾಗಿಯೂ ಜನರು ಭಾವಿಸುತ್ತಾರೆ. ಆ ಕಾರಣದಿಂದಲೇ ಡೊನಾಲ್ಡ್ ಟ್ರಂಪ್ ಎಂಬ ವ್ಯಕ್ತಿಯನ್ನು ಅಮೆರಿಕಾದಂತಹ ಬುದ್ಧಿವಂತ ಜನ ಸಹ ಎರಡನೇ ಬಾರಿ ಆಯ್ಕೆ ಮಾಡಿದರು. ನರೇಂದ್ರ ಮೋದಿಯವರನ್ನು ಮೂರನೇ ಬಾರಿಯೂ, ಇಸ್ರೇಲ್ ಪ್ರಧಾನಿಯನ್ನು ಬೆಂಜಮಿನ್ ನೆತನ್ಯಾವು ಅವರನ್ನು ಮತ್ತೆ ಮತ್ತೆ, ರಷ್ಯಾ ಅಧ್ಯಕ್ಷ ಪುಟಿನ್ ಜೀವನಪರ್ಯಂತ ಅಧ್ಯಕ್ಷರಾಗಿಯೂ, ಉತ್ತರ ಕೊರಿಯಾದ ಅಧ್ಯಕ್ಷ ಸಂಪೂರ್ಣ ಸರ್ವಾಧಿಕಾರಿಯಾಗಿಯೂ ನೆಲೆಗೊಳ್ಳಲು ಜನರ ಈ ಮನೋಭಾವವೂ ಕಾರಣ.

ದೇಶದ ಈ ಮುಖ್ಯಸ್ಥರುಗಳ ಆಕ್ರಮಣಕಾರಿ ಮನೋಭಾವ, ಬಂಡವಾಳಶಾಹಿ ವ್ಯವಸ್ಥೆಯ ಬಗೆಗಿನ ಅತಿಯಾದ ವ್ಯಾಮೋಹದಿಂದ ಕಾರ್ಪೊರೇಟ್ ಸಂಸ್ಕೃತಿ ಬೆಳೆದು ಕೆಲವೇ ವ್ಯಕ್ತಿಗಳು ದೇಶಗಳ ಆರ್ಥಿಕ ಸಂಪನ್ಮೂಲಗಳನ್ನು ಕೇಂದ್ರೀಕರಿಸಿಕೊಂಡು ಶ್ರೀಮಂತವಾಗುತ್ತಾ ಬೆಳೆಯುತ್ತಿದ್ದಾರೆ. ಮಧ್ಯಮ ವರ್ಗದ ಜನ ಬಡತನಕ್ಕೆ ಜಾರುತ್ತಿದ್ದಾರೆ ಅಥವಾ ಸ್ವಲ್ಪಮಟ್ಟಿಗೆ ಹಣವಿದ್ದರೂ ಅದು ಸಾಕಾಗದೆ, ತಮ್ಮ ಆಸೆ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳಲಾಗದೆ ಅತೃಪ್ತ ಆತ್ಮಗಳಂತೆ ಸದಾ ಗೊಣಗುತ್ತಲೇ ಇರುತ್ತಾರೆ.

ಉಳ್ಳವರು ಮತ್ತು ಇಲ್ಲದವರ ನಡುವಿನ ವ್ಯತ್ಯಾಸ ಹೆಚ್ಚಾಗುತ್ತಿದೆ. ಇದರ ಜೊತೆಗೆ ಸಾಮಾಜಿಕ ಜಾಲತಾಣಗಳು ಇಡೀ ಜಗತ್ತನ್ನು ಏಕಕಾಲದಲ್ಲಿಯೇ ಸಂಪರ್ಕಿಸುತ್ತಾ, ತಮ್ಮ ಅಭಿಪ್ರಾಯ, ಅತೃಪ್ತಿಗಳನ್ನು ಸುಲಭವಾಗಿ ಹಂಚಿಕೊಳ್ಳುವುದು ಮತ್ತು ಸಂಪರ್ಕ ಸಾಧಿಸುವ ಸಾಧ್ಯತೆಯಿಂದ ಈ ದಂಗೆಗಳು ಎಲ್ಲಾ ಕಡೆಯೂ ಹರಡುತ್ತಿವೆ.

ಭಾರತದಲ್ಲಿಯೂ ಇದು ಆಂತರ್ಯದಲ್ಲಿ ಹರಿಯುತ್ತಿದೆ. ಸಣ್ಣದಾಗಿ ಸ್ಪೋಟಗೊಳ್ಳುತ್ತಲೂ ಇದೆ. ಮುಂದಿನ ದಿನಗಳು ಹೇಗೆ ಸಾಗುತ್ತದೆ ಎಂಬುದು ಇನ್ನೂ ನಿಗೂಢವಾಗಿದೆ. ಬಲಪಂಥೀಯ ಅಥವಾ ಎಡಪಂಥೀಯ ಆರ್ಥಿಕ ನೀತಿಗಳ ನಡುವೆ ಮಧ್ಯಮ ಅಥವಾ ಸಮನ್ವಯದ ಮಾರ್ಗವನ್ನು ಎಲ್ಲಾ ದೇಶಗಳು ಕಂಡುಕೊಳ್ಳಬೇಕಿದೆ. ಆರ್ಥಿಕ ಅಭಿವೃದ್ಧಿಯ ಹೆಸರಿನಲ್ಲಿ ಸಂಪೂರ್ಣ ಖಾಸಗಿಕರಣವಾಗಲಿ ಅಥವಾ ಹಿಂದಿನಂತೆ ಕಾರ್ಮಿಕ ವರ್ಗದ ಹಿತಾಸಕ್ತಿಯೇ ಮುಖ್ಯವಾದ ಕಮ್ಯುನಿಸಂ ಸಿದ್ದಾಂತವಾಗಲಿ ಈ ಆಧುನಿಕ ತಂತ್ರಜ್ಞಾನದ ಕಾಲದಲ್ಲಿ ಹೆಚ್ಚು ಪ್ರಾಯೋಗಿಕವಲ್ಲ. ಇವೆರಡರ ನಡುವಿನ ಒಂದು ಮಾರ್ಗ ಅತಿ ಜರೂರಾಗಿ ಬೇಕಾಗಿದೆ.

ಏಕೆಂದರೆ ಎಲ್ಲ ದೇಶಗಳಲ್ಲೂ ಶಿಕ್ಷಣ ಮತ್ತು ಆರೋಗ್ಯದ ಮೂಲಭೂತ ಸೌಕರ್ಯಗಳು ಹೆಚ್ಚಾಗಬೇಕಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಇವುಗಳು ದುಬಾರಿಯಾಗಬಾರದು. ಶ್ರೀಮಂತರು ಮಾತ್ರ ಇವುಗಳನ್ನು ಉಪಯೋಗಿಸಿಕೊಳ್ಳುವ ರೀತಿಯಲ್ಲಿ ವ್ಯವಸ್ಥೆ ನಿರ್ಮಾಣವಾದರೆ ಈ ರೀತಿಯ ದಂಗೆಗಳು ಆಗಾಗ ನಡೆಯುತ್ತಲೇ ಇರುತ್ತದೆ. ಜೊತೆಗೆ ನಿರುದ್ಯೋಗ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಬೇಕಿದೆ.

ಒಟ್ಟಿನಲ್ಲಿ ಮಾನವೀಯ ಮೌಲ್ಯಗಳನ್ನು ಮರೆತು ಹಣಕೇಂದ್ರಿಕೃತ ಸಮಾಜ ನಿರ್ಮಾಣವಾದರೆ ಒಂದಲ್ಲ ಒಂದು ದಿನ ಈ ರೀತಿಯ ದಂಗೆಗಳು ನಡೆದೇ ನಡೆಯುತ್ತದೆ. ಯಾವುದೇ ಸಮಾಜ ಅಥವಾ ದೇಶ ಸುಸ್ಥಿರ ಅಭಿವೃದ್ಧಿಯನ್ನು ಕಾಣಬೇಕೆ ಹೊರತು ಕೇವಲ ಕೆಲವೇ ಜನರ ಸುಖಕ್ಕಾಗಿ ಇತರರನ್ನು ಶೋಷಿಸುವ, ಗುಲಾಮಗಿರಿಗೆ ತಳ್ಳುವ ವ್ಯವಸ್ಥೆ ಅತ್ಯಂತ ಅಪಾಯಕಾರಿ. ಅದು ಎಂದಾದಾರೊಮ್ಮೆ ಜ್ವಾಲಾಮುಖಿಯಂತೆ ಸ್ಪೋಟಿಸುವುದು ಖಚಿತ.

ಭಾರತದ ರಾಜಕಾರಣಿಗಳು, ಮಾಧ್ಯಮಗಳು, ಸಾರ್ವಜನಿಕರು ಈ ಬಗ್ಗೆ ಯೋಚಿಸಿ ತಮ್ಮ ಅಭಿಪ್ರಾಯ ರೂಪಿಸಿಕೊಳ್ಳಬೇಕು. ಸರ್ವಾಧಿಕಾರಿ ಮನೋಭಾವ, ದೀರ್ಘಕಾಲ ಒಬ್ಬರೇ ಆಡಳಿತ ಮಾಡುವುದು, ಬಂಡವಾಳಶಾಹಿಗಳ ಕೈಗೆ ದೇಶವನ್ನು ಕೊಡುವುದು ಒಳ್ಳೆಯ ಲಕ್ಷಣವಲ್ಲ. ಉಳಿದದ್ದು ನಿಮ್ಮ ವಿವೇಚನೆಗೆ ಬಿಡುತ್ತಾ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ: ಬಿಷ್ಣೋಯ್ ಗ್ಯಾಂಗ್ ಹೊಣೆ?

  ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿರುವುದಾಗಿ…

2 days ago

ಬೀದಿ ನಾಯಿಗಳ ದಾಳಿಗೆ 10ಕ್ಕೂ ಹೆಚ್ಚು ಕುರಿ, ಮೇಕೆ ಬಲಿ!: ದೂರು ನೀಡಿದರೂ ಕ್ರಮ ಕೈಗೊಳ್ಳದ ಪಂಚಾಯಿತಿ ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ

ದೇವನಹಳ್ಳಿ: ಬೀದಿ ನಾಯಿಗಳ ಗುಂಪೊಂದು ಕುರಿ, ಮೇಕೆಗಳ ಕೊಟ್ಟಿಗೆಗೆ ನುಗ್ಗಿ ದಾಳಿ ನಡೆಸಿದ ಪರಿಣಾಮ 10ಕ್ಕೂ ಹೆಚ್ಚು ಕುರಿ ಮತ್ತು…

3 days ago

ಅಕ್ರಮ ವಿದೇಶಿಗರ ಬೇಟೆಗೆ ಪೊಲೀಸ್ ಬಲೆ!- ಕೈಗಾರಿಕಾ ವಲಯಗಳ ಬಾಡಿಗೆ ಮನೆ, ಗೆಸ್ಟ್ ಗೌಸ್, ಲಾಡ್ಜ್‌ಗಳ ಮೇಲೆ ಹದ್ದಿನ ಕಣ್ಣು-ಡಿವೈಎಸ್ಪಿ ಪಾಂಡುರಂಗ

ಸಮರ್ಪಕ ದಾಖಲೆಗಳಿಲ್ಲದೆ ವಿದೇಶಗಳಿಂದ ಬಂದು ಜಿಲ್ಲೆಯಲ್ಲಿ ನೆಲೆಸಿರುವವರ ಪತ್ತೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಇಲಾಖೆ ವಿಶೇಷ ಕಾರ್ಯಾಚರಣೆ ಆರಂಭಿಸಿದೆ.…

3 days ago

ಗುತ್ತಿಗೆದಾರರಿಂದ ಲಂಚ ವಸೂಲಿ ಶಂಕೆ; ಎಂಜಿನಿಯರ್ ಬಳಿ 21.88 ಲಕ್ಷ ನಗದು ಪತ್ತೆ!

ಒಡಿಶಾ: ಗುತ್ತಿಗೆದಾರರಿಂದ ಲಂಚ ಪಡೆಯುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಆಧಾರದ ಮೇಲೆ ಒಡಿಶಾ ವಿಜಿಲೆನ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ,…

4 days ago

ಕೆಲವು ಶಿಕ್ಷಕರ ಮತ ಮಾರಾಟ……

ವಿಧಾನ ಪರಿಷತ್ತಿನ ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯ ಆಯ್ಕೆಗೆ ಚುನಾವಣೆ ನಡೆಯುತ್ತಿದೆ. ಈ ಚುನಾವಣೆಯಲ್ಲಿಯೂ ಹಣದ ಹೊಳೆ ಹರಿಯುತ್ತಿದೆ. ಇದು ಹೊಸದೇನು…

4 days ago

ಸಚಿವ ಜಾರ್ಜ್ ಜತೆ ಶಾರದೆಯ ದರ್ಶನ ಪಡೆದ ರಾಜ್ಯಪಾಲರಾದ ಡಾ. ಸುಧಾ ಯಾದವ್

ನೂತನ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ‌ ದಿನವೇ ಡಾ. ಸುಧಾ ಯಾದವ್ ಅವರು ಇಂಧನ ಮತ್ತು ಪ್ರವಾಸೋದ್ಯಮ ಸಚಿವರಾದ ಕೆ.ಜೆ. ಜಾರ್ಜ್…

4 days ago