ಪರ್ಮಿಟ್, ಇನ್ಶೂರೆನ್ಸ್, ಫಿಟ್ ನೆಸ್ ಸರ್ಟಿಫಿಕೆಟ್ ಸೇರಿದಂತೆ ಇತರೆ ದಾಖಲೆಗಳಿಲ್ಲದೇ ರೋಡಿಗಿಳಿದಿದ್ದ ಪ್ಯಾಸೆಂಜರ್ ಆಟೋಗಳನ್ನು ನಗರ ಪೊಲೀಸ್ ಇನ್ಸ್ ಪೆಕ್ಟರ್ ಅಮರೇಶ್ ಗೌಡ ಸೂಚನೆ ಮೇರೆಗೆ ಸಬ್ ಇನ್ಸ್ಪೆಕ್ಟರ್ ಕೃಷ್ಣಪ್ಪ ನೇತೃತ್ವದಲ್ಲಿ ನಗರದ ಡಿಕ್ರಾಸ್ ಬಳಿ ತಡೆದು ಪರಿಶೀಲನೆ ನಡೆಸಲಾಗುತ್ತಿದೆ.
ಪರ್ಮಿಟ್, ಇನ್ಶೂರೆನ್ಸ್, ಫಿಟ್ ನೆಸ್ ಸರ್ಟಿಫಿಕೆಟ್ ಇಲ್ಲದ ಆಟೋಗಳನ್ನು ಸದ್ಯ ವಶಕ್ಕೆ ಪಡೆಯಲಾಗುತ್ತಿದೆ.
ಆಟೋ ರಿಕ್ಷಾಗಳು ಯಾವುದೇ ಪರ್ಮಿಟ್ ಇಲ್ಲದೇ, ಕಾನೂನು ಬಾಹಿರವಾಗಿ ಸಂಚರಿಸುತ್ತಿರುವ ಪರಿಣಾಮ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ. ಅಲ್ಲದೇ, ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಸಂಚರಿಸುವುದು, ಎಲ್ಲೆಂದರಲ್ಲಿ ಏಕಾಏಕಿ ನಿಲ್ಲಿಸುವ ಮೂಲಕ ಸಂಚಾರ ನಿಯಮ ಪಾಲಿಸದೇ ಪ್ರಯಾಣಿಕರಿಗೆ, ಸಾರ್ವಜನಿಕರಿಗೆ ತೀವ್ರ ತೊಂದರೆ ನೀಡುತ್ತಿದ್ದಾರೆ ಎಂದು ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ಇಂದು ಪೊಲೀಸರು ಆಟೋ ರಿಕ್ಷಾಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ….
ಪೊಲೀಸರು ಎಷ್ಟೇ ಎಚ್ಚರಿಕೆ, ಸೂಚನೆ ನೀಡಿದರೂ ಬಹುತೇಕ ಆಟೋ ಚಾಲಕರು ಸಮವಸ್ತ್ರ ಧರಿಸದೇ ಆಟೋ ಓಡಿಸುತ್ತಿರುವುದು ಕಂಡುಬಂದಿದೆ. ಪೊಲೀಸರ ಕಣ್ಣು ತಪ್ಪಿಸಿ ಕಾನೂನು ಬಾಹಿರವಾಗಿ ಆಟೋ ಓಡಿಸುವವರ ಹಾವಳಿ ಮಿತಿ ಮೀರಿದ್ದು, ಇದಕ್ಕೆ ಕಡಿವಾಣ ಅಗತ್ಯವಾಗಿದೆ.
ಆಟೋ ರಿಕ್ಷಾ ಚಾಲಕರಿಗೆ ಜಾಗೃತಿ ಮೂಡಿಸುವ ಜೊತೆಗೆ ದಾಖಲೆ ಪತ್ರಗಳಿಲ್ಲದೇ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮಕೈಗೊಳ್ಳುತ್ತಿದ್ದಾರೆ. ಆಟೋ ರಿಕ್ಷಾ ಚಾಲಕರು ಸಂಚಾರ ನಿಯಮ ಪಾಲಿಸಬೇಕು ಸಾರ್ವಜನಿಕರಿಗೆ ಪ್ರಯಾಣಿಕರಿಗೆ ತೊಂದರೆ ನೀಡಬಾರದು. ಪ್ರಯಾಣಕರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳುವಂತೆ ಪೊಲೀಸರು ಸೂಚಿಸಿದ್ದಾರೆ.