ಪೋಡಿ ಮುಕ್ತ ಅಭಿಯಾನ ಹಾಗೂ ಫವತಿ ಖಾತೆ ಆಂದೋಲನಕ್ಕೆ ಕ್ರಮ-ಕಂದಾಯ ಸಚಿವ ಕೃಷ್ಣ ಬೈರೇಗೌಡ

ಬಹು ಮಾಲಿಕತ್ವ ಹೊಂದಿರುವ ಖಾಸಗಿ ಜಮೀನುಗಳ ಪೋಡಿ ಕಾರ್ಯ, ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿನ ದರಾಖಾಸ್ತು ಪೋಡಿ ಕಾರ್ಯ ಹಾಗೂ ಜಮೀನು ಮಾಲಿಕತ್ವ ವನ್ನು ವಾರಸುದಾರರಿಗೆ ಮಾಡಿಕೊಡುವ ಫವತಿ ಖಾತೆ ಆಂದೋಲನಕ್ಕೆ ಮೊದಲ ಪ್ರಾಶಸ್ತ್ಯ ನೀಡಿ ಕಾರ್ಯರೂಪಕ್ಕೆ ತಂದು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಕಂದಾಯ ಅಧಿಕಾರಿಗಳಿಗೆ ಸೂಚಿಸಿದರು.

ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಈಗಾಗಲೇ ಸರ್ಕಾರಿ ಜಮೀನುಗಳ ಸರ್ವೆ ಕಾರ್ಯ ಮುಗಿಸಿ ಶೇಕಡ 98% ರಷ್ಟು ಸರ್ಕಾರಿ ಜಮೀನು ಗುರ್ತಿಸಲಾಗಿದೆ. ಸರ್ಕಾರಿ ಹಾಗೂ ಖಾಸಗಿ ಮಾಲೀಕತ್ವದ ಒಂದೇ ಪಹಣಿಯಲ್ಲಿನ ಖಾತೆಗಳನ್ನು ಪೋಡಿ ಮಾಡಲು, ಖಾಸಗಿ ಜಂಟಿ ಮಾಲಿಕತ್ವದ ಖಾತೆಗಳನ್ನು ಪೋಡಿ ಮಾಡಲು ಜಿಲ್ಲೆಯಾದ್ಯಂತ ಸರ್ವೇ ಕಾರ್ಯ ನಡೆಯುತ್ತಿದೆ. ಅಂದಾಜು 45000 ಬಹುಮಾಲಿಕತ್ವ ಪಹಣಿಗಳು ಬಾಕಿ ಇದ್ದು, ಹಂತ ಹಂತವಾಗಿ ಸರ್ವೆ ಕಾರ್ಯ ಮುಗಿಸಿ ಪೋಡಿ ಮಾಡಿ ಎಂದರು.

ಮೊದಲ ಹಂತವಾಗಿ ಈ ತಿಂಗಳಲ್ಲಿ 05 ಗ್ರಾಮಗಳನ್ನು ದರಖಾಸ್ತು ಪೋಡಿ ಆಂದೋಲನಕ್ಕೆ ಆಯ್ಕೆ ಮಾಡಿಕೊಂಡ ಕಾರ್ಯಾರಂಭ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸರ್ಕಾರಿ ಜಮೀನು ಒತ್ತುವರಿ ತೆರವು ಕಾರ್ಯ ಶೀಘ್ರವಾಗಿ ಆಗಬೇಕು. ಸ್ಮಶಾನ ಹಾಗೂ ಕೆರೆ ಒತ್ತುವರಿ ತೆರವು ತ್ವರಿತವಾಗಿ ಪೂರ್ಣಗೊಳಿಸಿ. ಸ್ಮಶಾನ ಜಾಗವನ್ನು ಸರ್ವೆ ಕಾರ್ಯ ಮಾಡಿಸಿದ ನಂತರ ನರೇಗಾ ಯೋಜನೆ ಮುಖಾಂತರ ಕಾಂಪೌಂಡ್ ನಿರ್ಮಿಸಿ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಗೆ ಒಪ್ಪಿಸಿ , ಗ್ರಾಮ ಪಂಚಾಯಿತಿ ಸ್ವತ್ತು ಎಂದು ನಾಮಫಲಕ ಅಳವಡಿಸಿ ಎಂದರು.

*ಡಿಜಿಟಲೀಕರಣಕ್ಕೆ ಒತ್ತು*
ತಂತ್ರಜ್ಞಾನವನ್ನು ಬಳಸಿ ಇ-ಆಫೀಸ್, ಇ- ಗೌರ್ನೆಸ್ ಮೂಲಕ ಕಂದಾಯ ಇಲಾಖೆಯಡಿ ಬರುವ ಎಲ್ಲಾ ಕಾರ್ಯಗಳನ್ನು ಡಿಜಿಟಲೀಕರಣ ಮಾಡಲಾಗುವುದು. ಇದರಿಂದ ಕೆಲಸದ ಒತ್ತಡ ಸರಳೀಕರಣವಾಗಲಿದೆ. ಮುಂದುವರೆದು ಎಲ್ಲಾ ಜಮೀನುಗಳ ದಾಖಲೆಗಳು ಆನ್ಲೈನ್ ಲ್ಲಿ ಸಿಗುವಂತೆ ಡಿಜಿಟಲೀಕರಣ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 1993 ಸರ್ವೆ ನಂಬರ್ ಗಳ ಪೈಕಿ 589 ಸರ್ವೆ ನಂಬರ್ ಗಳು ಡಿಜಿಟಲೀಕರಣಗೊಳಿಸಲಾಗಿದೆ. ಬಾಕಿ ಇರುವ 1404 ಸರ್ವೆ ನಂಬರ್ ಗಳನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.

*ಪಹಣಿಗೆ ಆಧಾರ್ ಜೋಡಣೆ*
ಜಿಲ್ಲೆಯಲ್ಲಿ 7,29,567 ಜಮೀನು ಮಾಲೀಕರರು ಆಧಾರ್ ಜೋಡಣೆ ಮಾಡಬೇಕಿದೆ, ಇದುವರೆಗೂ 2,94,856 ಜಮೀನು ಮಾಲೀಕರು ಪಹಣಿಗೆ ಆಧಾರ್ ಜೋಡಣೆ ಮಾಡಿಸಿದ್ದಾರೆ. 82,264 ಜಮೀನುಗಳು ಮರಣ ಹೊಂದಿದವರ ಹೆಸರಿನಲ್ಲೇ ಇವೆ. ಶೇಕಡ 79.88 ರಷ್ಟು ಆಧಾರ್ ಜೋಡಣೆ ಪ್ರಗತಿ ಸಾಧಿಸಲಾಗಿದೆ. ನ್ಯಾಯಾಂಗ ವ್ಯಾಜ್ಯದಲ್ಲಿರುವ ಜಮೀನುಗಳು ಮಾತ್ರ ಬಿಟ್ಟು, ಉಳಿದೆಲ್ಲ ಜಮೀನುಗಳ ಕುಟುಂಬದವರ ಸಂಪರ್ಕ ಸಾಧಿಸಿ ಜಂಟಿಯಾಗಿ (ಇ-ಖಾತೆಯನ್ನು) ಹೆಸರು ನೋಂದಣಿ ಕಡ್ಡಾಯವಾಗಿ ಮಾಡಿಸಿಕೊಡಲು ಸಂಬಂಧಪಟ್ಟ ಅಧಿಕಾರಿಗಳು ಕಾರ್ಯನಿರತರಾಗಬೇಕು ಎಂದು ಸೂಚಿಸಿದರು.

ಪಹಣಿಗೆ ಆಧಾರ ಜೋಡಣೆ ಮಾಡುವದರಿಂದ ಯಾರದೋ ಜಮೀನು ಇನ್ಯಾರೋ ಮಾರಾಟ ಮಾಡುವ ವಂಚನೆ ತಪ್ಪಿಸಲು ಸಹಕಾರಿಯಾಗಿದ್ದು, ರೈತರು ಬೇಗನೆ ತಮ್ಮ ಜಮೀನು ಪಹಣಿಗೆ ಆಧಾರ ಜೋಡಣೆ ಮಾಡಿಕೊಳ್ಳಬೇಕು ಎಂದು ಕಂದಾಯ ಸಚಿವರು ರೈತರಲ್ಲಿ ಮನವಿ ಮಾಡಿದರು.

ತಹಶೀಲ್ದಾರ್ ನ್ಯಾಯಾಲಯ, ಎಸಿ ನ್ಯಾಯಾಲಯ ಹಾಗೂ ಜಿಲ್ಲಾಧಿಕಾರಿ ನ್ಯಾಯಾಲಯಗಳಲ್ಲಿ ದಾಖಲಾಗಿರುವ ಪ್ರಕರಣಗಳನ್ನು ನಿಗದಿತ ಕಾಲಮಿತಿಯಲ್ಲಿ ಇತ್ಯರ್ಥಪಡಿಸಬೇಕು. ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಅಡಿಯಲ್ಲಿ ದಾಖಲಾಗುವ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದು, ಹೆಚ್ಚುವರಿ ಉಪವಿಭಾಗಾಧಿಕಾರಿಯನ್ನು ನೇಮಿಸಲಾಗಿದ್ದು, ಪ್ರಕರಣಗಳನ್ನು ಇಬ್ಬರಿಗೆ ಹಂಚಿಕೆ ಮಾಡಿ ಶೀಘ್ರ ಪ್ರಕರಣಗಳನ್ನು ಇತ್ಯರ್ಥಪಡಿಸಲು ಕ್ರಮ ವಹಿಸಲಾಗುವುದು ಎಂದರು.

ಕಂದಾಯ ಇಲಾಖೆಯನ್ನು ಮಾತೃ ಇಲಾಖೆ ಎಂದು ಕರೆಯಲಾಗುತ್ತದೆ. ಕಂದಾಯ ಇಲಾಖೆ ಅಧಿಕಾರಿಗಳು ಇದನ್ನು ಅರಿತು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಜನರ ನಿರೀಕ್ಷೆಯನ್ನು ಹುಸಿಗೊಳಿಸದೇ ಜನರ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸಿ ಪರಿಹಾರ ಒದಗಿಸುವಲ್ಲಿ ನಿರಂತರ ಕಾರ್ಯಪ್ರವೃತ್ತರಾಗಿರಬೇಕು ಎಂದು ಕಂದಾಯ ಸಚಿವರು ಹೇಳಿದರು.

ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಚ್ ಮುನಿಯಪ್ಪ ಅವರು ಮಾತನಾಡಿ, ಜಿಲ್ಲಾ ವ್ಯಾಪ್ತಿಯಲ್ಲಿರುವ ಸರ್ಕಾರಿ ಕಚೇರಿಗಳಿಗೆ ರೈತರು ಹಾಗೂ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಕ್ಕೆ ಅಲೆದಾಟವನ್ನು ಅಧಿಕಾರಿಗಳು ತಪ್ಪಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದರು.

ಯಾವುದೇ ಸಮಸ್ಯೆಗೆ ಸಂಬಂಧಿಸಿ ರೈತರು ಸರ್ಕಾರಿ ಕಚೇರಿಗಳಿಗೆ ಅರ್ಜಿ ಸಲ್ಲಿಸಿದರೆ ಗರಿಷ್ಠ 15 ದಿನಗಳ ಕಾಲಮಿತಿಯಲ್ಲಿ ಅರ್ಜಿ ವಿಲೇವಾರಿ ಅಥವಾ ಅರ್ಜಿಗೆ ಸ್ಪಂದನೆ ಅಥವಾ ಉತ್ತರ ಸಿಗುವ ಹಾಗೆ ಅಧಿಕಾರಿಗಳು ಕೆಲಸ ಮಾಡಿದಲ್ಲಿ ಕರ್ನಾಟಕವು ದೇಶದಲ್ಲಿ ಮೊಟ್ಟಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತದೆ. ಹಾಗಾಗಿ ಅಧಿಕಾರಿಗಳ ಮನೋಸ್ಥಿತಿ ಬದಲಾಗಿ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸುವಲ್ಲಿ ನಾವು ನೀವು ತ್ವರಿತಗತಿಯಲ್ಲಿ ಕೆಲಸ ನಿರ್ವಹಿಸಬೇಕು ಎಂದು ಅಭಿಪ್ರಾಯ ಪಟ್ಟರು.

ಗ್ರಾಮೀಣ ಹಾಗೂ ನಗರ ಪ್ರದೇಶದ ಹಲವೆಡೆ ಸ್ಮಶಾನಕ್ಕೆ ತೆರಳಲು ರಸ್ತೆಗಳ ಸಮಸ್ಯೆ ಇಂದಿಗೂ ಸಮಸ್ಯೆಯಾಗಿ ಉಳಿದಿದೆ. ರಸ್ತೆ ಇಲ್ಲದ ಸ್ಮಶಾನಕ್ಕೆ ಸರ್ಕಾರವೇ ಖಾಸಗಿ ಜಾಗವನ್ನು ಖರೀದಿಸಿ ಸ್ಮಶಾನಕ್ಕೆ ತೆರಳಲು ಶಾಶ್ವತ ಪರಿಹಾರ ನೀಡುವ ಮೂಲಕ ಜನರಿಗೆ ಅನುಕೂಲ ಕಲ್ಪಿಸುವಂತಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಆದೇಶ ಹೊರಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಚ್. ಮುನಿಯಪ್ಪನವರು ಕಂದಾಯ ಸಚಿವರಲ್ಲಿ ಕೋರಿದರು.

ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಎಸ್.ರವಿ, ಪ್ರಾದೇಶಿಕ ಆಯುಕ್ತರಾದ ಅಮ್ಲಾನ್ ಆದಿತ್ಯ ಬಿಸ್ವಾಸ್, ಕಂದಾಯ ಇಲಾಖೆಯ ಆಯುಕ್ತರಾದ ಪೊಮ್ಮಲ್ ಸುನಿಲ್ ಕುಮಾರ್, ಭೂ ಮಾಪನ ಮತ್ತು ಕಂದಾಯ ವ್ಯವಸ್ಥೆಯ ಆಯುಕ್ತರಾದ ಜೆ.ಮಂಜುನಾಥ, ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತರಾದ ಕೆ.ಬಿ.ಶಿವಕುಮಾರ್, ಅಟಲ್ ಜಿ ಜನಸ್ನೇಹಿ ಕೇಂದ್ರ ಯೋಜನೆ ನಿರ್ದೇಶಕರಾದ ಭೋಯಾರ್ ಹರ್ಷಲ್ ನಾರಾಯಣರಾವ್, ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್, ಅಪರ ಜಿಲ್ಲಾಧಿಕಾರಿ ಅಮರೇಶ್.ಹೆಚ್, ಉಪವಿಭಾಗಾಧಿಕಾರಿ ದುರ್ಗಶ್ರೀ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ತಾಲ್ಲೂಕು ತಹಶೀಲ್ದಾರ್, ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Ramesh Babu

Journalist

Recent Posts

ಬಹಿರ್ದೆಸೆಗೆ ಹೋದ ಬಾಲಕನ ಜೀವ ಕಸಿದ ವೇಗದ ಆಟೋ

ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲೂಕಿನ ಐನೋಳಿ ಗ್ರಾಮದಲ್ಲಿ ದುರ್ಘಟನೆಯೊಂದು ಸಂಭವಿಸಿದ್ದು, ರಸ್ತೆ ಪಕ್ಕದಲ್ಲಿ ಬಹಿರ್ದೆಸೆಗೆ ಕುಳಿತಿದ್ದ 6 ವರ್ಷದ ಬಾಲಕನ…

53 minutes ago

ವೀಲಿಂಗ್ ಪುಂಡನ ಬೈಕ್ ಡಿಕ್ಕಿ: ಗೃಹ ರಕ್ಷಕ ದಳ ಸಿಬ್ಬಂದಿ ಗಂಭೀರ ಗಾಯ

ದೊಡ್ಡಬಳ್ಳಾಪುರ: ಮೋಟಾರ್ ವಾಹನಗಳ ತಪಾಸಣೆ ವೇಳೆ ವೀಲಿಂಗ್ ಮಾಡುತ್ತಿದ್ದ ಬೈಕ್ ಸವಾರನೊಬ್ಬ ಗೃಹ ರಕ್ಷಕ ದಳದ ಸಿಬ್ಬಂದಿಗೆ ಡಿಕ್ಕಿ ಹೊಡೆದು…

21 hours ago

ಡಿಸಿ ಭವನದಲ್ಲಿ ಜಿಲ್ಲಾಧಿಕಾರಿಗಳಿಂದ ರಿಯಾಲಿಟಿ ಚೆಕ್: ಅಧಿಕಾರಿಗಳು ಫುಲ್ ಶಾಕ್: ಸಮಯಕ್ಕೆ ಬಾರದ ಅಧಿಕಾರಿಗಳಿಗೆ ಡಿಸಿ ಕ್ಲಾಸ್

ಬೆಂಗಳೂರು ಗ್ರಾಮಾಂತರ: ಸೋಮವಾರ ಬೆಳಗ್ಗೆ ಎಂದಿನಂತೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕಚೇರಿಗಳಿಗೆ ಆಗಮಿಸುತ್ತಿದ್ದ ವೇಳೆ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.…

1 day ago

ನೆಲಮಂಗಲ–ದೊಡ್ಡಬಳ್ಳಾಪುರ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಳ: ಫ್ಲೈಓವರ್, ರಸ್ತೆ ವಿಸ್ತರಣೆ, ಬಸ್ ನಿಲ್ದಾಣ ನಿರ್ಮಾಣಕ್ಕೆ ಆಗ್ರಹ

ದೊಡ್ಡಬಳ್ಳಾಪುರ: ದಾಬಸ್ಪೇಟೆ–ಹೊಸಕೋಟೆ ರಾಷ್ಟ್ರೀಯ ಹೆದ್ದಾರಿಯ ಹುಲಿಕುಂಟೆ ಟೋಲ್‌ಪ್ಲಾಜಾದಲ್ಲಿ ಶುಲ್ಕ ಪಾವತಿಸುವುದನ್ನು ತಪ್ಪಿಸಲು ವಾಹನಗಳು ಹೆಚ್ಚಿನ ಪ್ರಮಾಣದಲ್ಲಿ ನೆಲಮಂಗಲ–ದೊಡ್ಡಬಳ್ಳಾಪುರ ರಸ್ತೆಯನ್ನು ಪರ್ಯಾಯ…

1 day ago

ಹಳ್ಳಿಗಳಿಂದ ಅಪಾರ್ಟ್‌ಮೆಂಟ್ ವರೆಗೆ ಸಾಗುತ್ತಿರುವ ಆಧುನಿಕ ನಾಗರಿಕ ಸಮಾಜ……

ನಾವೂ ಒಂದು ಪಾತ್ರವಾಗುತ್ತಾ..... ಹಳ್ಳಿಗಳಿಂದ ಅಪಾರ್ಟ್‌ಮೆಂಟ್ ವರೆಗೆ ಸಾಗುತ್ತಿರುವ ಆಧುನಿಕ ನಾಗರಿಕ ಸಮಾಜ......... ಕೆಲ ವರುಷಗಳ ಹಿಂದೆ ಹುಲ್ಲಿನ ಗುಡಿಸಲು,…

1 day ago

ಉಪೇಂದ್ರ ಮತ್ತು ಪ್ರಜಾಕೀಯ……..

ಬದಲಾವಣೆ ಬಯಸುವ, ಪರ್ಯಾಯ ರಾಜಕೀಯ ಶಕ್ತಿಗಾಗಿ ಹಾತೊರೆಯುತ್ತಿರುವ ಕೆಲವು ಯುವಕರು ಆಸಕ್ತಿಯಿಂದ - ಆಶಾಭಾವನೆಯಿಂದ - ಕುತೂಹಲದಿಂದ ಕಣ್ಣರಳಿಸಿ ನೋಡುತ್ತಿರುವ…

2 days ago