
ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್. ಅಶೋಕ್ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಸೆಕ್ಷನ್ 192ರ ಅಡಿ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ (ಸುಮೋಟೋ) ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಈ ಕುರಿತು ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿದ ವಿಪಕ್ಷ ನಾಯಕ ಆರ್. ಅಶೋಕ್, ನಾಗಮಂಗಲದ ಪ್ರಕರಣ ಕುರಿತು ಒಂದು ಟ್ವೀಟ್ ಮಾಡಿದ್ದೆ, ಅದನ್ನೇ ದ್ವೇಷವಾಗಿ ತಗೆದುಕೊಂಡು ನನ್ನ ಮೇಲೆ ಹಾಗೂ ಶೋಭಾ ಕರಂದ್ಲಾಜೆ ಮೇಲೆ ಎಫ್ ಐ ಆರ್ ಮಾಡಿದ್ದಾರೆ. ಇದು ದ್ವೇಷದ ರಾಜಕೀಯ ಮಾಡಿ ನಮ್ಮ ಮೇಲೆ ಪ್ರಕರಣ ದಾಖಲಿಸಿದ್ದಾರೆ ಎಂದು ಕಿಡಿಕಾರಿದರು.
ಕೇರಳದಿಂದ ಬಂದು ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಕೂಗಿದ್ದರು. ಅದೇ ರೀತಿ ನಾಗಮಂಗದಲ್ಲಿ ಕೂಡ ಘೋಷಣೆ ಕೂಗಿದ್ದಾರೆ. ವಿಧಾನಸೌಧದಲ್ಲಿ ಕೂಗಿರುವುದನ್ನು ಆ ರೀತಿ ಕೂಗೇ ಇಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳಿದರು. ಅಂದೇ ಇಲ್ಲ ಎಂದು ಸುಳ್ಳು ಹೇಳಿದರು. ಹಾಗಾದರೆ ನಿಮ್ಮ ಮೇಲೆ ಏಕೆ ಕೇಸ್ ಹಾಕಿಲ್ಲ.
ಈಗ ನಮ್ಮ ಮೇಲೆ ಸುಮೋಟೋ ಹಾಕಿಕೊಂಡಿದ್ದಾರೆ. ಪೊಲೀಸರೇ ದೂರು ಕೊಟ್ಟು ಹಾಕಿಕೊಂಡಿದ್ದಾರೆ. ಸಾರ್ವಜನಿರು ಯಾರೂ ಕೂಡ ದೂರು ಕೊಟ್ಟಿಲ್ಲ. ಮುಂದೆ ನಮ್ಮ ಸರ್ಕಾರ ಬರುತ್ತದೆ. ಆಗ ಏನು ಅಂತ ಗೊತ್ತಾಗುತ್ತದೆ ಎಂದು ಹೇಳಿದರು.
ಪೊಲೀಸ್ ಇಲಾಖೆ ಕಾಂಗ್ರೆಸ್ ಸರ್ಕಾರದ ಕಪಿ ಮುಷ್ಟಿಯಲ್ಲಿ ಸಿಲುಕಿಕೊಂಡಿದೆ. ವಿರೋಧ ಪಕ್ಷವನ್ನು ಬಗ್ಗಿ ಬಡಿಯಬೇಕು ಎಂದು ಕೇಸ್ ಹಾಕಿದ್ದಾರೆ. ಕೋವಿಡ್ ಸಮಯದಲ್ಲಿ ಸಚಿವರಾಗಿದ್ದ ಡಾ.ಕೆ.ಸುಧಾಕರ್ ಮನೆ ಬಿಟ್ಟು ಹಗಲು ರಾತ್ರಿ ಕೆಲಸ ಮಾಡಿದರು. ಆಗ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಎಲ್ಲರೂ ಮನೆಯಲ್ಲಿ ಇದ್ದರು. ಪ್ರಾಣ ಭಯದಿಂದ ಮನೆಯಿಂದ ಈಚೆ ಬಂದಿರಲಿಲ್ಲ ಎಂದು ಡಿಕೆಶಿ ಹಾಗೂ ಸಿಎಂ ಸಿದ್ದರಾಮಯ್ಯ ವಿರುದ್ಧ ಗುಡುಗಿದರು.
ಕರ್ನಾಟಕದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಆಗಿದೆ. 1975-1977ರಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ತಂದು ದೇಶವನ್ನು ಹಾಳು ಮಾಡಿದರು. ನಮ್ಮ ಮೇಲೆ ಅಲ್ಲ, ರಾಜ್ಯಪಾಲರ ಮೇಲೂ ಕಾಂಗ್ರೆಸ್ ನವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ರಾಜ್ಯಪಾಲರು, ವಿರೋಧ ಪಕ್ಷದ ನಾಯಕರು, ಕೇಂದ್ರ ಸಚಿವ ಮೇಲೂ ಗೌರವವಿಲ್ಲ ಎಂದು ಕಿಡಿಕಾರಿದರು.
ಮುನಿರತ್ನ ನಮ್ಮ ಪಾರ್ಟಿಗೆ ಬಂದು ಐದು ವರ್ಷ ಆಗಿದೆ. ಅವರ ಬಗ್ಗೆ ಕೊತ್ವಾಲ್ ರಾಮಚಂದ್ರರ ಶಿಶ್ಯರು ಎಂದು ಮಾಧ್ಯಮದಲ್ಲಿ ಪ್ರಚಾರ ಆಗಿತ್ತು. ಮುನಿರತ್ನ 30 ವರ್ಷ ಕಾಂಗ್ರೆಸ್ ನಲ್ಲಿ ಇದ್ದರು. ಆವಾಗ ಒಳ್ಳೆಯವನಾಗಿದ್ದ, ಈಗ ಕೆಟ್ಟವನಾಗಿದ್ದಾನೆ. ರಾಯಚೂರಿನಲ್ಲಿ ಪಿಎಸ್ ಐ ಆತ್ಮಹತ್ಯೆ ಮಾಡಿಕೊಂಡ. ಅವರ ಹೆಂಡತಿ ದೂರು ನೀಡಿದರು. ಬೀದಿಯಲ್ಲಿ ಪ್ರತಿಭಟನೆ ಮಾಡಿ ಬಂಧಿಸಿ ಎಂದು ಕೂಗಿದರು. ಆದರೂ ನೀವು ಯಾಕೆ ಬಂಧಿಸಲಿಲ್ಲ ಎಂದು ಪ್ರಶ್ನೆಮಾಡಿದರು.
ನೀವು ನಿಮ್ಮ ಪಾರ್ಟಿಯ ಎಂಎಲ್ ಎ ಗೆ ಒಂದು, ಬಿಜೆಪಿ ಎಂಎಲ್ ಎ ಗೆ ಒಂದು ರೀತಿ ಮಾಡಬೇಡಿ. ಮುನಿರತ್ನ ತಪ್ಪು ಮಾಡಿದ್ದರೆ ಶಿಕ್ಷೆ ಆಗಲಿ. ನಾವು ಯಾರೂ ಕೂಡ ಬೆಂಬಲಿಸಲ್ಲ. ಕಾನೂನಿನ ಪ್ರಕಾರ ನೋಟಿಸ್ ಕೊಡಬೇಕಿತ್ತು. ಓಡಿ ಹೋಗಿದ್ದರೆ ಬಂಧಿಸಬೇಕಿತ್ತು. ತಪ್ಪು ಯಾರೇ ಮಾಡಿದ್ದರೂ ಖಂಡಿತ ಶಿಕ್ಷೆ ಆಗಲಿ. ಉಪ್ಪು ತಿಂದವರು ನೀರು ಕುಡಿಬೇಕು. ಅದು ನಮ್ಮ ಸ್ಪಷ್ಟ ನಿಲುವು. ಪೊಲೀಸ್ ಸ್ಟೇಷನ್ ಗಳನ್ನ ಕಾಂಗ್ರೆಸ್ ನ ಸ್ಟೇಷನ್ ಗಳನ್ನಾಗಿ ಮಾಡಿಕೊಂಡಿದ್ದೀರ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿ, ಸಿದ್ದರಾಮಯ್ಯ ಕ್ಲೀನ್ ಚಿಟ್ ಅಂತ ನೀವು ತೋರಿಸುತ್ತೀರಾ. 2014ರಲ್ಲಿ ಮುಖ್ಯಮಂತ್ರಿ ಅಗಿದ್ದಾಗ 65 ಕೇಸ್ ಇದ್ದವು. ಆದ್ರೂ ಕೂಡ ಕ್ಲೀನ್ ಚಿಟ್ ಎಂದು ಹೇಳಿದರು.
ರಾಹುಲ್ ಗಾಂಧಿ ವಿದೇಶಕ್ಕೆ ಹೋಗಿ ರಿಸರ್ವೇಶನ್ ಬದಲಾವಣೆ ಮಾಡಬೇಕು ಎಂದರಲ್ಲ. ನಿಮ್ಮ ರಿಯಾಕ್ಷನ್ ಏನು. ಅವರ ಹೇಳಿಕೆಗೆ ದೇಶ ವ್ಯಾಪಿ ಹೋರಾಟ ಮಾಡಿದ್ದೀರಲ್ಲಾ. ಈಗ ಏಕೆ ಹೋರಾಟವಿಲ್ಲ, ಸುಮ್ಮನೆ ಏಕೆ ಕುಳಿತ್ತಿದ್ದೀರಾ. ಇದು ಕಾಂಗ್ರೆಸ್ ನ ದಂದ್ವ ನೀತಿ ಬಯಲಾಗಿದೆ. 70 ವರ್ಷ ದೇಶವನ್ನ ಆಳಿದ್ದೀರಲ್ಲ, ಆದರೂ ಏಕೆ ನಿರುದ್ಯೋಗ ಕಡಿಮೆ ಮಾಡಲಿಲ್ಲ ಎಂದು ಹೇಳಿದರು.
*ಒಂದು ದೇಶ ಒಂದು ಚುನಾವಣೆ ಕುರಿತು ಹೇಳಿಕೆ*
ನೆಹರು ಕಾಲದಲ್ಲಿ ಒಟ್ಟಿಗೆ ಚುನಾವಣೆ ಮಾಡುತ್ತಿದ್ದರು. ಹಾಗಾದರೆ ನೆಹರು ಸರಿ ಇರಲಿಲ್ಲವಾ. ಅವರು ಮಾಡಿದ್ದು ಸರಿ ಇಲ್ಲ ಎಂದು ಸಿದ್ದರಾಮಯ್ಯ ಹೇಳಲಿ. ಅವರು ಸರಿ ಇಲ್ಲ, ನಾನೇ ಸತ್ಯ ಹರಿಶ್ಚಂದ್ರ ಎಂದು ಹೇಳಲಿ. ಒಂದೇ ಚುನಾವಣೆಯಿಂದ ಜನರ ತೆರಿಗೆ ಹಣ ಉಳಿಯುತ್ತದೆ. ಸಿದ್ದರಾಮಯ್ಯ ಕುರಿತು ಆರ್.ಅಶೋಕ್ ವಾಗ್ದಾಳಿ ನಡೆಸಿದರು.