ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಶ್ವಾನದಳದಲ್ಲಿ ಸುದೀರ್ಘ 10 ವರ್ಷಗಳಿಗೂ ಹೆಚ್ಚು ಕಾಲ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಹಲವಾರು ಅಪರಾಧ ಪ್ರಕರಣಗಳನ್ನು ಯಶಸ್ವಿಯಾಗಿ ಬೇಧಿಸುವಲ್ಲಿ ಶ್ರಮಿಸಿದ್ದು, ಹಿರಿಯ ಅಧಿಕಾರಿಗಳಿಂದ ಪದಕ, ಪ್ರಶಂಸೆ ಹಾಗೂ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದ ಪೊಲೀಸ್ ಶ್ವಾನಕ್ಕೆ ಬೀಳ್ಕೊಡುಗೆ ಕಾರ್ಯಕ್ರಮ ನಗರದ ಡಿ.ಎ.ಆರ್. ಆವರಣದಲ್ಲಿ ಏರ್ಪಡಿಸಲಾಗಿತ್ತು.
ಈ ಶ್ವಾನವು ತನ್ನ ಸೇವಾ ಅವಧಿಯಲ್ಲಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಜರುಗಿದ ಕಳ್ಳತನ, ದರೋಡೆ ಹಾಗೂ ಕೊಲೆ ಇತ್ಯಾದಿ ಒಟ್ಟು 204 ಪ್ರಕರಣಗಳಲ್ಲಿ 35 ರಲ್ಲಿ ಅಪರಾಧ ಪ್ರಕರಣಗಳ ಕುರಿತಾದ ಸುಳಿವು ಹಾಗೂ 9 ಜನ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಪೊಲೀಸ್ ಇಲಾಖೆಗೆ ಸಹಕರಿಸಿರುತ್ತದೆ.
ಶ್ವಾನವು ವಾರ್ಷಿಕವಾಗಿ ನಡೆಸಲಾಗುವ ಪೊಲೀಸ್ ಡ್ಯೂಟಿ ಮೀಟ್ ನಲ್ಲಿ ಹಲವಾರು ಪದಕಗಳನ್ನು ಪಡೆದು ಜಿಲ್ಲೆಗೆ ಕೀರ್ತಿಯನ್ನು ತಂದುಕೊಟ್ಟಿರುತ್ತದೆ. ಶ್ವಾನದ ಹ್ಯಾಂಡ್ಲರ್ ಮಂಜುನಾಥ ಮತ್ತು ಸಹಾಯಕ ನಿರ್ವಾಹಕ ಸಿ.ಕುಮಾರ್ ರವರಿಗೆ ಜಿಲ್ಲಾಧಿಕಾರಿಗಳಾದ ಮೀನಾ ನಾಗರಾಜ್ ಸಿ.ಎನ್ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ.ವಿಕ್ರಮ್ ಅಮಟೆ ರವರು ಪ್ರಸಂಶನ ಪತ್ರ ನೀಡಿದರು.