ರಾಜ್ಯದಲ್ಲಿ ಅಪರಾಧಗಳ ಪ್ರಮಾಣ ಕಡಿಮೆ ಆಗಿರುವುದು ಸಮಾಧಾನದ ಸಂಗತಿಯಾದರೂ ಪೊಲೀಸರ ತನಿಖೆಯ ಗುಣಮಟ್ಟ ಕಡಿಮೆಯಾಗಿದ್ದು ಇದನ್ನು ಕೂಡ ಹೆಚ್ಚಿಸಬೇಕಿದೆ ಸಿಎಂ ಸಿದ್ದರಾಮಯ್ಯ ಹೇಳಿದರು.
ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಮತ್ತು ಪೊಲೀಸ್ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಬೀದರ್ ನಲ್ಲಿ ನಡೆದ ದರೋಡೆ ಪ್ರಕರಣದ ಆರೋಪಿ ಯಾರು ಎಂದು ಗೊತ್ತಾಗಿದ್ದರೂ 5 ತಿಂಗಳುಗಳಿಂದ ಆತನನ್ನು ಬಂಧಿಸಲು ಸಾಧ್ಯವಾಗಲಿಲ್ಲ ಎನ್ನುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದರು.
ಬಿಡಿ ಬಿಡಿ ಪ್ರಕರಣಗಳಲ್ಲಿ ತನಿಖೆಯ ಗುಣಮಟ್ಟ ಹೆಚ್ಚಿದ್ದರೂ ಒಟ್ಟಾರೆಯಾಗಿ ಗಮನಿಸಿದಾಗ ತನಿಖೆಯ ಗುಣಮಟ್ಟ ಕುಸಿದಿರುವುದು ಸ್ಪಷ್ಟವಾಗುತ್ತಿದೆ ಎಂದು ಹೇಳಿದರು.
ನಾನು 1983 ರಿಂದ ಶಾಸಕನಾಗಿ, ಸಚಿವನಾಗಿ, ಈಗ ಸಿಎಂ ಆಗಿದ್ದೀನಿ. ಬೆಂಗಳೂರಿನಲ್ಲಿ ನಡೆದ ಇಂಥಾ ಕಾಲ್ತುಳಿತ ಪ್ರಕರಣವನ್ನು ಹಿಂದೆಂದೂ ನಾನು ನೋಡಿರಲಿಲ್ಲ. ಗುಪ್ತಚರ ಇಲಾಖೆ ಇರುವುದು ಏಕೆ ? ಸರಿಯಾದ ಸಮಗ್ರ ಮಾಹಿತಿ ನೀಡಲಿಲ್ಲ. ಪರಿಣಾಮ 11 ಮಂದಿ ಮೃತಪಟ್ಟರು ಎಂದರು.
ಕಾಲ್ತುಳಿತ ಘಟನೆ ನಡೆದ ದಿನ ಮಧ್ಯಾಹ್ನ 3:50 ಕ್ಕೆ ಸಾವುಗಳು ಸಂಭವಿಸಿದ್ದವು. ಆದರೂ ಸರಿಯಾದ ಮಾಹಿತಿ ಕೊಟ್ಟಿರಲಿಲ್ಲ. ಇದು ತಪ್ಪಲ್ಲವಾ? 5:45 ಕ್ಕೆ ನಾನಾಗೇ ಕೇಳಿದಾಗಲೂ ಒಂದೇ ಸಾವು ಆಗಿದೆ ಎನ್ನುವ ಮಾಹಿತಿ ನೀಡಿದರು. ಅಷ್ಟೊತ್ತಿಗಾಗಲೇ 11 ಸಾವು ಆಗಿಬಿಟ್ಟಿತ್ತು. ಹಿರಿಯ ಅಧಿಕಾರಿ ಸರಿಯಾದ ಮಾಹಿತಿಯನ್ನು ತಕ್ಷಣ ನಮಗೆ ನೀಡಿದ್ದರೆ ಸ್ಟೇಡಿಯಂ ಕಾರ್ಯಕ್ರಮ ರದ್ದುಗೊಳಿಸಲು ಸೂಚನೆ ನೀಡಬಹುದಿತ್ತು ಎಂದು ಹೇಳಿದರು.
ಹಿರಿಯ ಅಧಿಕಾರಿಗಳ ಸಸ್ಪೆಂಡ್ ಮಾಡಬೇಕಾಗಿ ಬಂದಿದ್ದಕ್ಕೆ ನನಗೂ ಬೇಸರ ಇದೆ. ಆದರೆ ತಪ್ಪಾಗಿದ್ದು ನಿಜವಲ್ಲವೇ? ಎಂದು ಪ್ರಶ್ನಿಸಿದರು.
ಅಪರಾಧ ಪ್ರಕರಣಗಳಲ್ಲಿ ಆರೋಪ ಪಟ್ಟಿಯನ್ನು ಸೂಕ್ತವಾಗಿ, ಪರಿಣಾಮಕಾರಿಯಾಗಿ, ಸರಿಯಾದ ಸಮಯಕ್ಕೆ ಸಲ್ಲಿಸದಿರುವುದೂ ದೊಡ್ಡ ವೈಫಲ್ಯ. ಇಂಥದ್ದನ್ನು ಸಹಿಸಲು ಸಾಧ್ಯವಿಲ್ಲ ಎಂದರು.
ದ್ವೇಷ ಭಾಷಣ ಮಾಡುವವರ ವಿರುದ್ಧ, ಜನರ-ರಾಜ್ಯದ ನೆಮ್ಮದಿ ಕೆಡಿಸುವವರ ವಿರುದ್ಧ ಸ್ವಯಂಪ್ರೇರಿತ ಕ್ರಮ ಏಕೆ ತೆಗೆದುಕೊಳ್ಳುತ್ತಿಲ್ಲ? ನೀವು ಕ್ರಮ ತೆಗೆದುಕೊಳ್ಳದಿದ್ದರೆ ನಾವು ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.
ಕೋಮು ಘರ್ಷಣೆ ಮತ್ತು ಕೊಲೆಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಹೆಚ್ಚಾಗಿ ಆಗುತ್ತಿದೆ. ಇತರೆ ಜಿಲ್ಲೆಗಳಲ್ಲಿ ಈ ರೀತಿ ಆಗುತ್ತಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ನೆಮ್ಮದಿ ಕೆಡಿಸುವವರನ್ನು ಮೂಲದಿಂದಲೇ ಪತ್ತೆ ಹಚ್ಚಿ ಅವರು ಯಾರೇ ಇದ್ದರೂ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ನಾವು ವ್ಯವಸ್ಥೆಯನ್ನು ದೂಷಿಸಿಕೊಂಡು ಕೈಕಟ್ಟಿಕೊಂಡು ಕೂರೋದಲ್ಲ. ಪೊಲೀಸ್ ಠಾಣೆಗಳು ಜನಸ್ನೇಹಿ ಆಗುವ ಜೊತೆಗೆ ಅಪರಾಧ ಮನಸ್ಥಿತಿಯವರಿಗೆ ಕಾನೂನಿನ ಬಗ್ಗೆ ಭಯ ಇರುವ ವಾತಾವರಣ ಸೃಷ್ಟಿಸಬೇಕು ಎಂದರು.
ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು 2 ತಿಂಗಳ ಬಳಿಕ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.
ಪೊಲೀಸ್ ಇಲಾಖೆಯ ಬೇಡಿಕೆಗಳಲ್ಲಿ ಬಹುತೇಕ ಈಡೇರಿಸಿ ಸಾಕಷ್ಟು ಹಣ, ಅನುದಾನ ಒದಗಿಸಿದ್ದೇನೆ. ಸಮಾಜದ ನೆಮ್ಮದಿ, ಕಾನೂನು- ಸುವ್ಯವಸ್ಥೆಯನ್ನು ನಿಮ್ಮಿಂದ ನಿರೀಕ್ಷಿಸುತ್ತೇನೆ. ಶಕ್ತರಿಗೂ, ಅಶಕ್ತರಿಗೂ ನ್ಯಾಯ ಒದಗಿಸುವುದು ಪೊಲೀಸ್ ಜವಬ್ದಾರಿ. ಕಾನೂನು ಎಲ್ಲರಿಗೂ ಒಂದೇ ಎಂದು ತಿಳಿಸಿದರು.
ನಾವು ಪ್ರಜಾಪ್ರಭುತ್ವ ಒಪ್ಪಿದ್ದೀವಿ. ಸಂವಿಧಾನ ಒಪ್ಪಿಕೊಂಡಿದೀವಿ. ಸಮಾಜದ ಸ್ವಾಸ್ಥ್ಯ ಕಾಪಾಡಿ, ಸಮಾಜದ ಎಲ್ಲರಿಗೂ ನ್ಯಾಯ ಕೊಡಿಸುವ ಭರವಸೆ ನೀಡಿದ್ದೀವಿ. ಇದಕ್ಕೆ ತಕ್ಕಂತೆ ನಡೆದುಕೊಳ್ಳಬೇಕು ಎಂದರು.
ಸಮಾಜದ ನೆಮ್ಮದಿ ಕಾಪಾಡಲು ಪೊಲೀಸ್ ಕಾರ್ಯಕ್ಷಮತೆ ಬಹಳ ಮುಖ್ಯ. ಇದು ಪ್ರಜಾರಾಜ್ಯ- ಅವರ ಕಷ್ಟ ಸುಖ ಕೇಳುವುದು ಪೊಲೀಸ್ ಇಲಾಖೆಯ ಜವಾಬ್ದಾರಿ ಎಂದು ತಿಳಿಸಿದರು.
* ಕಳೆದ 2 ವರ್ಷದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ, ಕೊಲೆ-ದರೋಡೆ-ಮನೆ ಗಳ್ಳತನ ಸೇರಿ ಇತರೆ ಅಪರಾಧಗಳು ಕಡಿಮೆ ಆಗಿರುವುದನ್ನು ಇಲಾಖೆ ಕೊಟ್ಟಿರುವ ಅಂಕಿ ಅಂಶಗಳಿಂದ ಕಂಡಿದೆ. ಆದರೆ, ಆರೋಪ ಪಟ್ಟಿಯನ್ನು ಸೂಕ್ತ ಸಮಯಕ್ಕೆ ಸಲ್ಲಿಸುವ ಜೊತೆಗೆ ಎಫ್.ಐ.ಆರ್ ಅನ್ನು ತಕ್ಷಣ ದಾಖಲಿಸಬೇಕು, ತನಿಖೆಯ ಗುಣಮಟ್ಟ ಹೆಚ್ಚಿಸಬೇಕು ಎಂದು ಸೂಚಿಸಿದ್ದೇನೆ.
* ಅಪರಾಧಿಗಳನ್ನು ಕ್ಷಿಪ್ರವಾಗಿ ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು. ಸೈಬರ್ ಅಪರಾಧಗಳು ಹೆಚ್ಚುತ್ತಿದ್ದರೆ, ಇವುಗಳ ಪತ್ತೆಯ ಪ್ರಮಾಣ ಕಡಿಮೆ ಆಗುತ್ತಿದೆ. ಆದ್ದರಿಂದ ತನಿಖೆಯ ಗುಣಮಟ್ಟ ಹೆಚ್ಚಿಸುವ ಸೂಚನೆ ನೀಡಿದ್ದೇನೆ.
* ಹಿರಿಯ ಅಧಿಕಾರಿಗಳು ಪೊಲೀಸ್ ಠಾಣೆಗಳಿಗೆ ನಿಯಮಿತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಕಚೇರಿಗಳಲ್ಲೇ ಕುಳಿತಿರಬಾರದು ಎಂದು ಸೂಚಿಸಿದ್ದೇನೆ.
* ಡ್ರಗ್ಸ್ ಮುಕ್ತ ರಾಜ್ಯ ಮಾಡಲು ಅಗತ್ಯ ಎಲ್ಲಾ ಕ್ರಮ ಕೈಗೊಳ್ಳಬೇಕು. ಡ್ರಗ್ ಮಾರುವವರ ಅಂಗಡಿ, ಅಗತ್ಯ ಬಿದ್ದರೆ ವ್ಯಾಪಾರದ ಲೈಸೆನ್ಸ್ ರದ್ದುಗೊಳಿಸುವಂತೆ ಹೇಳಿದ್ದೇನೆ.
* ಪೊಲೀಸ್ ಇಲಾಖೆಯಲ್ಲಿ ಹಲವು ವರ್ಷಗಳಿಂದ ಖಾಲಿ ಇರುವ 15.64% ಹುದ್ದೆಗಳನ್ನು , ಒಳ ಮೀಸಲಾತಿ ಜಾರಿ ಬಳಿಕ ಹಂತ ಹಂತವಾಗಿ ಭರ್ತಿ ಮಾಡಲಾಗುವುದು. ಇದಕ್ಕೆ ತಕ್ಕ ಸಿದ್ಧತೆ ಮಾಡಿಕೊಳ್ಳಲು ಸೂಚಿಸಿದ್ದೇನೆ.
* ಪ್ರಚೋದನೆ, ದ್ವೇಷ ಭಾಷಣ ಮಾಡುವವರ ವಿರುದ್ಧ ಸ್ವಯಂಪ್ರೇರಿತ ಕೇಸು ಕಡ್ಡಾಯವಾಗಿ ದಾಖಲಿಸಿ. ಈ ಬಗ್ಗೆ ದೂರು ಬಂದ ತಕ್ಷಣ ಕ್ರಮಕೈಗೊಳ್ಳಬೇಕೆಂದು ತಿಳಿಸಿದ್ದೇನೆ.
* ಪೊಲೀಸ್ ಗಸ್ತು ಹೆಚ್ಚಿಸಬೇಕು. ರೈತರು, ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರ ವಿರುದ್ಧ ದೌರ್ಜನ್ಯಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಿದ್ದೇನೆ.
* ಬಾಲ್ಯವಿವಾಹ, ಪೋಕ್ಸೋ, ಅತ್ಯಾಚಾರ, ಭ್ರೂಣಹತ್ಯೆಗಳನ್ನು ನೂರಕ್ಕೆ ನೂರು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ಜೊತೆ ಸೇರಿ ಕ್ರಮಕ್ಕೆ ಸೂಚನೆ ನೀಡಿದ್ದೇನೆ.
*ಪೊಲೀಸ್ ಇಲಾಖೆಗೆ ಅಗತ್ಯವಾದ ಸವಲತ್ತುಗಳನ್ನು ಒದಗಿಸಲಾಗುವುದು ಎಂಬ ಭರವಸೆಯನ್ನು ನೀಡಲಾಗಿದ್ದು, ಯಾವುದೇ ಪ್ರಕರಣದ ತನಿಖೆಯಲ್ಲಿ ನಾನು ತಲೆ ಹಾಕುವುದಿಲ್ಲ ಎಂದು ಹೇಳಿದ್ದೇನೆ ಎಂದರು.
ಈ ವೇಳೆ ಗೃಹ ಸಚಿವ ಡಾ. ಜಿ.ಪರಮೇಶ್ವರ್, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್, ಗೃಹ ಇಲಾಖೆ ಎಸಿಎಸ್ ಗೌರವ್ ಗುಪ್ತ, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾ.ಎ.ಎಂ ಸಲೀಂ ಅವರು ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಉಪಸ್ಥಿತರಿದ್ದರು.