
ಇಂದು ಸಂಜೆ 6.45ಕ್ಕೆ ಸರಿಯಾಗಿ ಶಬರಿಮಲೆಯಿಂದ 5-8 ಕಿ.ಮೀ. ದೂರದಲ್ಲಿರುವ ಪೊನ್ನಂಬಲಮೇಡು ಬೆಟ್ಟದಲ್ಲಿ ಮಕರ ಜ್ಯೋತಿಯ ದರ್ಶನವಾಗಿದೆ.
ಲಕ್ಷಾಂತರ ಭಕ್ತರು ಶಬರಿಮಲೆಯ ಪೊನ್ನಂಬಲಮೇಡು ಬೆಟ್ಟದಲ್ಲಿ ಕಾಣುವ ಪವಿತ್ರವಾದ ಮಕರ ಜ್ಯೋತಿಯನ್ನು ವೀಕ್ಷಿಸಿದರು.
ಅಯ್ಯಪ್ಪ ಸ್ವಾಮಿ ಭಕ್ತರು ಕೈಜೋಡಿಸಿ, ಸ್ವಾಮಿ ಶರಣಂ ಅಯ್ಯಪ್ಪ ಎಂದು ಪಠಿಸುತ್ತಾ ಮಕರ ಜ್ಯೋತಿಯ ದರ್ಶನ ಪಡೆದರು.

ಈ ವೇಳೆ ನಕ್ಷತ್ರವು ಆಕಾಶದಲ್ಲಿ ಬೆಳಗಿ ಭಕ್ತರಿಗೆ ಆಶೀರ್ವಾದವನ್ನು ತಂದಿತು. ಆಕಾಶದಲ್ಲಿ ಬೇರೆ ಯಾವುದೇ ನಕ್ಷತ್ರಗಳಿಲ್ಲದೆ ಉತ್ರಮ ನಕ್ಷತ್ರದ ದರ್ಶನವನ್ನು ಪಡೆದ ಭಕ್ತರು ಧನ್ಯರಾದರು…
ಮಕರ ಸಂಕ್ರಾಂತಿಯನ್ನು ಶಬರಿಮಲೆ ಸನ್ನಿಧಾನದಲ್ಲಿ ಮಕರ ಜ್ಯೋತಿ ಮತ್ತು ಮಕರ ವಿಳಕ್ಕು ಎಂದು ಆಚರಿಸಲಾಗುತ್ತದೆ. ಇದು ಅಯ್ಯಪ್ಪ ಸ್ವಾಮಿಯ ಆಶೀರ್ವಾದವನ್ನು ಸೂಚಿಸುವ ಕ್ಷಣವಾಗಿದೆ.
ಪೊನ್ನಂಬಲಮೇಡು ಬೆಟ್ಟದ ಮೇಲೆ ಕಾಣಿಸಿಕೊಳ್ಳುವ ಪವಿತ್ರ ಜ್ಯೋತಿಯನ್ನೇ ಅಯ್ಯಪ್ಪ ಭಕ್ತರು ಮಕರ ಜ್ಯೋತಿ ಎಂದು ನಂಬುತ್ತಾರೆ.

ಈ ಕ್ಷಣವನ್ನು ಕಣ್ತುಂಬಿಕೊಳ್ಳುವುದಕ್ಕಾಗಿ ಅವರು ಉಪವಾಸ, ವ್ರತ ಇತ್ಯಾದಿಗಳನ್ನು ಮಾಡುವ ಮೂಲಕ ಅಯ್ಯಪ್ಪನ ಸನ್ನಿಧಾನವನ್ನು ಪ್ರವೇಶಿಸುತ್ತಾರೆ. ಮಾಲೆಯನ್ನು ಧರಿಸಿದ ಅಯ್ಯಪ್ಪ ಮಾಲಾಧಾರಿಗಳಿಗೆ ಈ ಕ್ಷಣ ಸಾಕ್ಷಾತ್ ಅಯ್ಯಪ್ಪ ಸ್ವಾಮಿಯೇ ದರ್ಶನ ನೀಡುವ ಅದ್ಭುತ ಕ್ಷಣವಾಗಿದೆ.